- On the birth anniversary of Vikram Sarabhai, father of Indian Space Research Program
ವಿಕ್ರಮ್ ಸಾರಾಭಾಯಿ ಅವರು ‘ಭಾರತೀಯ ಅಂತರಿಕ್ಷ ಕಾರ್ಯಗಳ ಜನಕ’ರೆಂದು ಪ್ರಸಿದ್ಧರಾಗಿದ್ದಾರೆ. ಜೊತೆಗೆ ಇಂದು ಪ್ರಸಿದ್ಧಿ ಹೊಂದಿರುವ ಹಲವಾರು ವೈಜ್ಞಾನಿಕ, ಸಂಶೋಧನಾತ್ಮಕ, ಆಡಳಿತಾತ್ಮಕ ಹಾಗೂ ಪರಿಸರ ಕಾಳಜಿಯುಳ್ಳ ಸಂಸ್ಥೆಗಳನ್ನು ಹುಟ್ಟುಹಾಕಿದವರೂ ಆಗಿದ್ದಾರೆ.
ಭಾರತದ ಪ್ರಪ್ರಥಮ ಉಪಗ್ರಹ ‘ಆರ್ಯಭಟ’ದ ಉಡಾವಣೆಯ ಹಿಂದೆ ಇದ್ದ ಪ್ರಮುಖ ಶಕ್ತಿ ವಿಕ್ರಮ್ ಸಾರಾಭಾಯಿ. ಅದು ಕಕ್ಷೆ ಸೇರಿದ್ದು 1975ರಲ್ಲಿ, ಆದರೆ ಸಾರಾಭಾಯಿಯವರು 1971 ರಲ್ಲೇ ದೇಹತ್ಯಾಗ ಮಾಡಿದ್ದರು. ಆ ಸಮಯಕ್ಕಾಗಲೇ ಅವರು ಮಾಡಿದ್ದ ಕೆಲಸಗಳು, ಬೆಳೆಸಿದ್ದ ಸಂಸ್ಥೆಗಳು ಹಾಗೂ ಕಂಡಿದ್ದ ಕನಸುಗಳು ಅನೇಕ.
ವಿಕ್ರಮ್ ಸಾರಾಭಾಯಿ 1919ರ ಆಗಸ್ಟ್ 12ರಂದು ಜನಿಸಿದರು. ವಿಕ್ರಮ್ ಜನಿಸಿದ ಸಮಯದಲ್ಲಿ, ಸಾರಾಭಾಯಿ ಕುಟುಂಬ ಗುಜರಾತಿನ ಪ್ರತಿಷ್ಠಿತ ವರ್ತಕ ಸಮುದಾಯದಲ್ಲಿ ಒಂದಾಗಿತ್ತು. ವಿಕ್ರಮ್ ಅಂಬಾಲಾಲ್ ಸಾರಾಭಾಯಿಯವರು ಅಂಬಾಲಾಲ್ ಸಾರಾಭಾಯಿ ಮತ್ತು ಸರಳಾದೇವಿ ದಂಪತಿಗಳ ಎಂಟನೇ ಪುತ್ರರು. ಅವರ ತಂದೆ ಅಂಬಾಲಾಲರು ಗುಜರಾತಿನ ಅನೇಕ ಗಿರಣಿಗಳ ಸ್ವಾಮ್ಯವನ್ನು ಹೊಂದಿದ್ದರು. ತಾಯಿ ಸರಳಾದೇವಿ ಅಂದಿನ ದಿನಗಳಲ್ಲಿ ಪ್ರವರ್ಧಮಾನದಲ್ಲಿದ್ದ ಮಾಂಟೆಸ್ಸರಿ ಶಾಲೆಯನ್ನು ಸ್ಥಾಪಿಸಿದ್ದರು. ಸ್ವಾತಂತ್ರ್ಯ ಚಳವಳಿಗೆ ಕಟ್ಟಾ ಬೆಂಬಲಿಗರಾಗಿದ್ದ ಇವರ ಮನೆಗೆ ಮಹಾತ್ಮ ಗಾಂಧೀಜಿ, ವಲ್ಲಭಭಾಯಿ ಪಟೇಲ್, ರಬೀಂದ್ರನಾಥ್ ಠಾಗೂರ್ ಮುಂತಾದ ಮಹನೀಯರ ಭೇಟಿ ದಿನನಿತ್ಯದ ಘಟನೆಗಳಂತೆ ಜರುಗುತ್ತಿತ್ತು.
ಕೇಂಬ್ರಿಡ್ಜಿನಲ್ಲಿ ಕಾಲೇಜು ಶಿಕ್ಷಣವನ್ನು ಪಡೆದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕೆಂದ್ರದಲ್ಲಿ ಸರ್ ಸಿ. ವಿ. ರಾಮನ್ ಅವರ ಬಳಿ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿದ ವಿಕ್ರಮ್ ಸಾರಾಭಾಯಿ, ಕಾಸ್ಮಿಕ್ ಕಿರಣಗಳ ಬಗೆಗೆ ವ್ಯಾಪಕ ಅಧ್ಯಯನ ಕೈಗೊಂಡರು. ಹೀಗೆ ಭಾರತೀಯ ವಿಜ್ಞಾನ ಪರಂಪರೆಗೆ ದಾಪುಗಾಲಿಟ್ಟ ವಿಕ್ರಮ್ ಸಾರಾಭಾಯಿ, ಸಂಶೋಧನೆಗಳ ತೊಟ್ಟಿಲು ಎಂದೇ ಪ್ರಸಿದ್ಧವಾಗಿರುವ ‘ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ’ ಅನ್ನು 1947ರಲ್ಲಿ ಸ್ಥಾಪಿಸಿದರು. ಇದು ‘ಪಿ ಆರ್ ಎಲ್’ ಎಂಬ ಸಂಕ್ಷಿಪ್ತ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ಸಂಸ್ಥೆಯು ಮೊದಲಿಗೆ ಕಾಸ್ಮಿಕ್ ಕಿರಣಗಳು ಹಾಗೂ ಮೇಲ್ಮಟ್ಟದ ವಾಯುಮಂಡಲ ಗುಣವಿಶೇಷಗಳ ಕುರಿತಾಗಿ ಅಧ್ಯಯನಗಳನ್ನು ಪ್ರಾರಂಭಿಸಿತು. ಮುಂದಿನ ದಿನಗಳಲ್ಲಿ ಪರಮಾಣು ಶಕ್ತಿ ಆಯೋಗವಾದ ‘ಅಟೋಮಿಕ್ ಎನರ್ಜಿ ಕಮಿಷನ್’ ಒದಗಿಸಿದ ಅನುದಾನದ ಬೆಂಬಲದೊಂದಿಗೆ ಭೌತಶಾಸ್ತ್ರದ ಹಲವಾರು ಶಾಖೆಗಳಾದ ತಿಯೋರೆಟಿಕಲ್ ಫಿಸಿಕ್ಸ್ , ರೇಡಿಯೋ ಫಿಸಿಕ್ಸ್ ಮುಂತಾದ ಕ್ಷೇತ್ರಗಳೆಡೆಗೂ ತನ್ನ ಅಧ್ಯಯನಗಳನ್ನು ವಿಸ್ತರಿಸಿತು. ಇಂದು ‘ಪಿಆರ್ಎಲ್’ ವಿಜ್ಞಾನದ ಐದು ಪ್ರಮುಖ ಕ್ಷೇತ್ರಗಳಲ್ಲಿ ತನ್ನ ಸಂಶೋಧನಾ ಕಾರ್ಯವನ್ನು ನಡೆಸುತ್ತಿದೆ. ಬಾಹ್ಯಾಕಾಶ ವಿಜ್ಞಾನದ ಅಭಿವೃದ್ಧಿಯಲ್ಲಿ ಪ್ರಮುಖವಾದ ‘ಪ್ಲಾನೆಕ್ಸ್ (PLANEX)’ ಎಂಬ ‘ಪ್ಲಾನಿಟರಿ ಸೈನ್ಸ್ ಅಂಡ್ ಎಕ್ಸ್ಪ್ಲೋರೇಶನ್ ಪ್ರೋಗ್ರಾಮ್’ ಯೋಜನೆಯಲ್ಲೂ ‘ಪಿಆರ್ಎಲ್’ ಪ್ರಧಾನ ಪಾತ್ರ ನಿರ್ವಹಿಸಿದೆ.
ಇಂದು ‘ವಿಕ್ರಮ್ ಎ. ಸಾರಾಭಾಯಿ ಕಮ್ಮ್ಯೂನಿಟಿ ಸೈನ್ಸ್ ಸೆಂಟರ್’ ಎಂದು ಪ್ರಸಿದ್ಧವಾಗಿರುವ ವಿಜ್ಞಾನ ಕೇಂದ್ರವನ್ನು ವಿಕ್ರಮ್ ಸಾರಾಭಾಯಿ ಅವರು 1960ರ ವರ್ಷದಲ್ಲಿ ಸ್ಥಾಪಿಸಿದರು. ಇದು ವಿಜ್ಞಾನ ಮತ್ತು ಗಣಿತವನ್ನು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಮಾತ್ರವಲ್ಲದೆ ಜನಸಾಮಾನ್ಯರಲ್ಲೂ ಆಪ್ತವಾಗುವಂತೆ ಜನಪ್ರಿಯಗೊಳಿಸುವ ಮಹದುದ್ದೇಶದಿಂದ ನಿರ್ಮಾಣಗೊಂಡ ಸಂಸ್ಥೆ.
ಹೋಮಿ ಬಾಬಾ ಅವರ ಉತ್ತರಾಧಿಕಾರಿಯಾಗಿ ಇಸ್ರೋ ಸಂಸ್ಥೆಯ ಎರಡನೇ ಅಧ್ಯಕ್ಷರಾಗಿ ವಿಕ್ರಮ್ ಸಾರಾಭಾಯಿ ಅವರು ಕಾರ್ಯ ನಿರ್ವಹಿಸಿದ ಪರಿ ಬೆರಗು ಹುಟ್ಟಿಸುವಂತದ್ದು. ಸಾರಾಭಾಯಿ ಅವರು ಹೋಮಿ ಜಹಂಗೀರ್ ಬಾಬಾ ಅವರ ಬೆಂಬಲದೊಂದಿಗೆ, ‘ತುಂಭಾ’ ಹಾಗೂ ‘ಶ್ರೀಹರಿಕೋಟಾ’ ಕೇಂದ್ರಗಳಲ್ಲಿ ಮೊದಲ ಬಾರಿಗೆ ರಾಕೆಟ್ಟುಗಳ ಉಡಾವಣಾ ಕೇಂದ್ರವನ್ನು ನಿರ್ಮಿಸಿಸಿದುದು ದೇಶದ ಮಟ್ಟಿಗೆ ಒಂದು ಹೊಸ ಮೈಲುಗಲ್ಲು. ಇದು ಈಗಿನ ಇಸ್ರೋದ ಸಾಧನೆಗಳಿಗೆ ಇವರು ಹಾಕಿದ ಭದ್ರ ಬುನಾದಿ ಎಂದರೆ ತಪ್ಪಾಗಲಾರದು.
ವಿಕ್ರಮ್ ಸಾರಾಭಾಯಿ ಅವರು 1966ರ ವರ್ಷದಲ್ಲಿ ‘ನಾಸಾ’ದೊಂದಿಗೆ ನಡೆಸಿದ ಫಲಪ್ರದ ಮಾತುಕತೆಗಳ ದೆಸೆಯಿಂದ ಅವರ ಮರಣಾನಂತರ ಜುಲೈ 1975ರ ವರ್ಷದಲ್ಲಿ ಕಾರ್ಯೋನ್ಮುಖವಾದ ‘ಸ್ಯಾಟಲೈಟ್ ಇನ್ಸ್ಟ್ರಕ್ಷನಲ್ ಟೆಲಿವಿಷನ್ ಏಕ್ಸ್ಪೆರಿಮೆಂಟ್ (ಸೈಟ್)’ ಅಸ್ತಿತ್ವಕ್ಕೆ ಬರುವಂತಾಯಿತು. ಭಾರತದ್ದೇ ಆದ ಕೃತಕ ಉಪಗ್ರಹ ನಿರ್ಮಾಣ ಮತ್ತು ಉಡಾವಣೆಗಾಗಿ ಅವರು ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯ ಫಲವಾಗಿ, 1975ರ ವರ್ಷದಲ್ಲಿ ಭಾರತದ ಪ್ರಥಮ ಕೃತಕ ಉಪಗ್ರಹವಾದ ‘ಆರ್ಯಭಟ’ದ ಉಡಾವಣೆ, ರಷ್ಯಾದ ಉಡಾವಣಾ ಕೇಂದ್ರವೊಂದರ ಮೂಲಕ ನೆರವೇರಿತು.
ಸಾರಾಭಾಯಿ ಅವರು ವಿಜ್ಞಾನ ಕ್ಷೇತ್ರದಲ್ಲಿನ ಕಾರ್ಯದ ಜೊತೆ ಜೊತೆಗೆ ತಮ್ಮ ಕೌಟುಂಬಿಕ ಉದ್ಯಮವಾದ ಉಡುಪಿನ ತಂತ್ರಜ್ಞಾನವನ್ನೂ ಬೆಳೆಸುತ್ತಿದ್ದರು. ಆದ ಕಾರಣ ಅಹಮದಾಬಾದಿನಲ್ಲಿ ವಿಕ್ರಮ್ ಸಾರಾಭಾಯಿ ಅವರು ಸ್ಥಾಪಿಸಿದ ‘ಟೆಕ್ಸ್ಟೈಲ್ ಇಂಡಸ್ಟ್ರಿಯಲ್ ರಿಸರ್ಚ್ ಆಸೋಸಿಯೇಷನ್’ ಬಟ್ಟೆ ಉದ್ಯಮಗಳ ಅಪಾರ ಬೆಳವಣಿಗೆಗೆ ನಾಂದಿ ಹಾಡಿತು.
ವಿಕ್ರಮ್ ಸಾರಾಭಾಯಿಯವರ ಮತ್ತೊಂದು ಬಹುದೊಡ್ಡ ಕೊಡುಗೆಯೆಂದರೆ, ಸಾಂಸ್ಥಿಕ ನಿರ್ವಹಣೆ ಕುರಿತಂತೆ ಹೆಚ್ಚಿನ ಶಿಕ್ಷಣ ನೀಡಲು ಅನುವಾಗುವ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್’ ಅನ್ನು ಅಹಮದಾಬಾದಿನಲ್ಲಿ ತೆರೆದದ್ದು. ಈ ಸಂಸ್ಥೆ ದೇಶದಾದ್ಯಂತ ಹಲವೆಡೆಗಳಲ್ಲಿ ಸ್ಥಾಪನೆಗೊಂಡು ಜಗದ್ವಿಖ್ಯಾತವಾಗಿದೆ.
ವೈಜ್ಞಾನಿಕ ಶಿಕ್ಷಣದಲ್ಲಿ ಅಪಾರ ಆಸಕ್ತಿ ಹೊಂದಿದ್ದ ವಿಕ್ರಮ್ ಸಾರಾಭಾಯಿಯವರು ಅಹಮದಾಬಾದಿನಲ್ಲಿ ‘ಕಮ್ಯೂನಿಟಿ ಸೈನ್ಸ್ ಸೆಂಟರ್’ ಆರಂಭಿಸಿದರು. ಪರಿಸರದ ಬಗೆಗೆ ಅಪಾರ ಕಾಳಜಿ ಹೊಂದಿದ್ದ ವಿಕ್ರಮ್ ಸಾರಾಭಾಯಿ ‘ಸೆಂಟರ್ ಫಾರ್ ಎನ್ವಿರಾನ್ಮೆಂಟಲ್ ಪ್ಲಾನಿಂಗ್ ಅಂಡ್ ಟೆಕ್ನಾಲಜಿ’ ಸ್ಥಾಪಿಸಿದರು. ಇದಲ್ಲದೆ ಅಂಧರ ಬದುಕಿನಲ್ಲಿನ ಏಳಿಗೆಗಾಗಿ ‘ಬ್ಲೈಂಡ್ ಮೆನ್ ಅಸೋಸಿಯೇಷನ್’ ಸ್ಥಾಪಿಸಿದರು.
ಕಲಾವಿಚಾರಗಳಲ್ಲಿ ವಿಕ್ರಮ್ ಸಾರಾಭಾಯಿ ಶ್ರೇಷ್ಠ ಅಭಿರುಚಿ ಹೊಂದಿದವರಾಗಿದ್ದರು. ಅವರು ಪ್ರಸಿದ್ಧ ನೃತ್ಯ ಕಲಾವಿದರಾದ ಮೃಣಾಲಿನಿ ಅವರನ್ನು ವಿವಾಹವಾಗಿದ್ದರು. ಈ ದಂಪತಿಗಳು 1949ರ ವರ್ಷದಲ್ಲಿ ಅಹಮದಾಬಾದ್ ನಗರದಲ್ಲಿ ‘ದರ್ಪಣ್ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್’ ಸಂಸ್ಥೆಯನ್ನು ಸ್ಥಾಪಿಸಿದರು. ಪ್ರಸಿದ್ಧ ಅಭಿನೇತ್ರಿ ಹಾಗೂ ನೃತ್ಯ ಕಲಾವಿದೆ ಮಲ್ಲಿಕಾ ಸಾರಾಭಾಯಿ ಈ ದಂಪತಿಗಳ ಪುತ್ರಿ.
ವಿಕ್ರಮ್ ಸಾರಾಭಾಯಿ ಅವರು ಪ್ರಾರಂಭಿಸಿದ ಇತರ ಪ್ರಮುಖ ಸಂಸ್ಥೆಗಳೆಂದರೆ ಕಲ್ಪಾಕಂನಲ್ಲಿರುವ ‘ಫಾಸ್ಟರ್ ಬ್ರೀಡರ್ ಟೆಸ್ಟ್ ರಿಯಾಕ್ಟರ್ (ಎಫ್.ಬಿ.ಟಿ.ಆರ್)’, ಕೊಲ್ಕೋತ್ತಾದಲ್ಲಿ ‘ವೇರಿಯಬಲ್ ಎನರ್ಜಿ ಸೈಕ್ಲೋಟ್ರಾನ್ ಪ್ರಾಜೆಕ್ಟ್’, ಹೈದರಾಬಾದಿನಲ್ಲಿ ‘ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಇ.ಸಿ.ಐ.ಎಲ್)’ ಹಾಗೂ ಈಗಿನ ಜಾರ್ಖಂಡ್ ರಾಜ್ಯಕ್ಕೆ ಸೇರಿದ ಜದುಗುಡದಲ್ಲಿ ‘ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಯು.ಸಿ.ಐ.ಎಲ್)’.
“ಅಂತರಿಕ್ಷ ವಿಜ್ಞಾನವೆಂಬುದು ನಮಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಜೊತೆ ನಡೆಸುವ ಶೋಕಿಯ ಪೈಪೋಟಿಯಲ್ಲ. ಜನಜೀವನದಲ್ಲಿ ಕಾಣಬರುವ ನಮ್ಮದೇ ಆದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ವಿಜ್ಞಾನವನ್ನು ಬಳಸಿಕೊಳ್ಳುವುದಕ್ಕೆ ಬೇಕಾದ ಸಾಮರ್ಥ್ಯದಲ್ಲಿ ನಾವು ವಿಶ್ವದಲ್ಲಿ ಯಾರಿಗೂ ಕಡಿಮೆಯಲ್ಲ ಎಂಬ ಆತ್ಮ ವಿಶ್ವಾಸ ನಮ್ಮಲ್ಲಿದೆ. ಇದು ನಮ್ಮ ಎಲ್ಲಾ ವೈಜ್ಞಾನಿಕ ಕಾಯಕಗಳ ಮೂಲದೃಷ್ಟಿ” ಎಂಬುದು ವಿಕ್ರಮ್ ಸಾರಾಭಾಯಿ ಅವರ ಸ್ಪಷ್ಟ ನಿಲುವಾಗಿತ್ತು. ಇದು ಭಾರತದಂತಹ ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ರಾಷ್ಟದಲ್ಲಿ ಉತ್ಸಾಹ ಚಿಮ್ಮುವಂತೆ ಮಾಡಿತು. ವೈಜ್ಞಾನಿಕ ಅಭಿವೃದ್ಧಿಯಲ್ಲಿ ದೇಶಕ್ಕೆ ಅಪಾರ ಹೆಸರು ತಂದುಕೊಟ್ಟ ಮಹನೀಯರಾದ ವಿಕ್ರಮ್ ಸಾರಾಭಾಯಿ ಅವರ ಈ ಮಾತುಗಳು, ಅವರಲ್ಲಿ ತುಂಬಿ ತುಳುಕುತ್ತಿದ್ದ ಶ್ರದ್ಧೆ, ಕಾಳಜಿ, ಸ್ಪಷ್ಟತೆ, ಆತ್ಮವಿಶ್ವಾಸ, ದೇಶಭಕ್ತಿ ಎಲ್ಲವನ್ನೂ ಬಿಂಬಿಸುವಂತಿದೆ.
ವಿಕ್ರಮ್ ಸಾರಾಭಾಯಿ ಅವರಿಗೆ ಪದ್ಮಭೂಷಣ, ಮರಣೋತ್ತರವಾಗಿ ಪದ್ಮವಿಭೂಷಣ, ಭಾಟ್ನಾಗರ್ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಸಂದವು.
ವಿಕ್ರಮ್ ಸಾರಾಭಾಯಿ ಅವರಿಗೆ 1962ರಲ್ಲಿ ಜರುಗಿದ ‘ಇಂಡಿಯನ್ ಸೈನ್ಸ್ ಕಾಂಗ್ರೆಸ್’ ಅಧ್ಯಕ್ಷತೆ, 1970ರ ವರ್ಷದಲ್ಲಿ ವಿಯೆನ್ನಾದಲ್ಲಿ ಜರುಗಿದ ‘ಐ.ಎ.ಇ.ಎ ಜನರಲ್ ಕಾನ್ಫೆರನ್ಸ್’ ಅಧ್ಯಕ್ಷತೆ ಮತ್ತು 1971ರ ವರ್ಷದಲ್ಲಿ ಜರುಗಿದ ವಿಶ್ವಸಂಸ್ಥೆಯ ‘ಪರಮಾಣು ಶಕ್ತಿಯ ಶಾಂತಿಯುತ ಬಳಕೆಯ ಉಪಯುಕ್ತತೆ’ಗಳ ಕುರಿತಾದ ನಾಲ್ಕನೆಯ ಅಧಿವೇಶನದ ಉಪಾಧ್ಯಕ್ಷತೆಗಳಂತಹ ಅಂತರರಾಷ್ಟ್ರೀಯ ವಿಜ್ಞಾನ ಲೋಕದ ಮನ್ನಣೆಗಳೂ ಸಂದಿದ್ದವು.
ವಿಕ್ರಮ್ ಸಾರಾಭಾಯಿ 1971ರ ಡಿಸೆಂಬರ್ 31ರಂದು ನಿಧನರಾದರು. ತಿರುವನಂತಪುರದಲ್ಲಿರುವ ಬಾಹ್ಯಾಕಾಶ ವಾಹನಗಳ ಪ್ರಧಾನ ಉಡಾವಣಾ ಕೇಂದ್ರಕ್ಕೆ ‘ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್’ ಎಂದು ಹೆಸರಿಸಲಾಗಿದೆ. 1973ರಲ್ಲಿ ‘ಇಂಟರ್ ನ್ಯಾಷನಲ್ ಅಸ್ಟ್ರಾನಾಮಿಕಲ್ ಯೂನಿಯನ್’ ಸಂಘಟನೆಯು ಚಂದ್ರನ ಮೇಲಿನ ‘ಸೀ ಆಫ್ ಸೆರೆನಿಟಿ’ ಎಂದು ಕರೆಯುವ ಮಟ್ಟಸ ಪ್ರದೇಶಲ್ಲಿರುವ ‘ಬೆಸೆಲ್ ಎ’ ಎಂಬ ‘ಲೂನಾರ್ ಕ್ರೇಟರ್’ ಎಂಬ ಗುಳಿಗೆ ‘ಸಾರಾಭಾಯಿ ಕ್ರೇಟರ್’ ಎಂದು ಹೆಸರಿಟ್ಟಿದೆ.
ವಿಕ್ರಮ್ ಸಾರಾಭಾಯಿ ಅವರು ತಮ್ಮ ಇಡೀ ಜೀವನವನ್ನೂ, ಜೊತೆಗೆ ಜೀವಮಾನದ ಹಣ, ಆಸ್ತಿ ಎಲ್ಲವನ್ನೂ ದೇಶದ ವಿಜ್ಞಾನದ ಬೆಳವಣಿಗೆಗಳಿಗಾಗಿ ಮೀಸಲಿರಿಸಿದ್ದರು. ಇವರ ಜೀವನ ಕ್ರಮವೇ ನಮಗೊಂದು ಪಾಠದಂತಿದೆ.
ತಿರು ಶ್ರೀಧರ್
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ