December 22, 2024

Newsnap Kannada

The World at your finger tips!

WhatsApp Image 2024 09 29 at 7.51.53 PM

ಹಣದ ಮೌಲ್ಯ

Spread the love

ಬ್ಯಾಂಕರ‍್ಸ್ ಡೈರಿ

ಅಂದು ಬ್ಯಾಂಕಿನಲ್ಲಿ ಜನ ತುಂಬಿ ತುಳುಕುತ್ತಿದ್ದರು ೯೨ ರ‍್ಷದ ಆ ವೃದ್ದರು ಅದೇಕೆ ನನ್ನ ಬಳಿ ಬಂದರೋ ನನಗೆ ಗೊತ್ತಿಲ್ಲ. ಬಂದವರೇ ’ಅವ್ವ ನನಗೆ ಆರು ತಿಂಗಳಿಂದ ಪಿಂಚಣಿ ಬಂದಿಲ್ಲ ಏನು ಮಾಡಬೇಕು ಗೊತ್ತಿಲ್ಲ ನೋಡವ್ವ’ ಎಂದರು. ಆಧಾರ್ ಲಿಂಕ್ ಆಗದಿದ್ದರೆ ಪಿಂಚಣಿ ಸ್ಥಗಿತ ವಾಗುತ್ತದೆ ಎಂದು ಗೊತ್ತಿತ್ತು. ಅದಕ್ಕೆ ಬ್ಯಾಂಕಿನ ಅಕೌಂಟಿಗೆ ಆಧಾರನ್ನು ಲಿಂಕ್ ಮಾಡಿದರೆ ಸಾಲದು, ಹೆಬ್ಬೆರಳಿಟ್ಟು ಈ ಕೆವೈಸಿ ಮಾಡಿಸಿ ಅದನ್ನು ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಿಸಿದರೆ ರ‍್ಕಾರದಿಂದ ಹಣ ಬರುತ್ತದೆ.


ಅದೇನೋ ಅಂದು ನಮ್ಮಲ್ಲಿ ಬಯೋಮೆಟ್ರಿಕ್ ಕೆಲಸ ಮಾಡುತ್ತಿರಲಿಲ್ಲ. ಆದ ಕಾರಣ ’ಎದುರು ನಮ್ಮ ಬಿಜಿನೆಸ್ ಕರೆಸ್ಪಾಂಡೆನ್ಟ್ ಇದ್ದಾರಲ್ಲ ಅವರ ಬಳಿ ಹೋಗಿ ಈ ಕೆವೈಸಿ ಮಾಡಿಸಿ ಬನ್ನಿ” ಎಂದು ಹೇಳಿದೆ. ಆದರೆ ಆ ತಾತಪ್ಪನಿಗೆ ಹಾಗೆಂದರೆ ಏನು ಎಂಬುದೇ ತಿಳಿಯಲಿಲ್ಲ. ಸರಿ ಆ ಹೊತ್ತಿನಲ್ಲಿ ನನ್ನೆದುರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವಿದ್ಯಾವಂತ ಹುಡುಗನೊಬ್ಬ ನಿಂತಿದ್ದ. ಆತ ನನಗೆ ತೀರಾ ಪರಿಚಿತ. ಅವನಿಗೆ ’ಸಚಿನ್ ಈ ತಾತಪ್ಪನಿಗೆ ಈ ಕೆ ವೈ ಸಿ ಮಾಡಿಸಿಕೊಡಲು ಸಾಧ್ಯವೇ?’ ಎಂದು ಕೇಳಿದೆ. ಆತ ತುಂಬಾ ಪ್ರೀತಿಯಿಂದ ಆ ತಾತನನ್ನು ಅಂಗಡಿಗೆ ಕರೆದುಕೊಂಡು ಹೋಗಿ ಈ ಕೆ ವೈಸಿ ಮಾಡಿಸಿ ಅದರ ಹಣವನ್ನು ತನ್ನ ಜೇಬಿನಿಂದಲೇ ಕೊಟ್ಟು ಕರೆದುಕೊಂಡು ಬಂದ. ಅದಾದ ಮೇಲೆ ನಾವು ಆಧಾರ್ ಲಿಂಕ್ ಮಾಡಿದೆವು. ಆದರೂ ಪಿಂಚಣಿ ಬರುತ್ತಿಲ್ಲ ಎಂದು ಹದಿನೈದು ದಿನಗಳು ಕಳೆದ ಮೇಲೆ ತಾತಪ್ಪ ಬಂದರು. ಅದಾರೋ ಅವರಿಗೆ ಬಿಎಸ್ಎನ್ಎಲ್ ಕಚೇರಿಗೆ ಹೋಗಿ ನೋಡಿಸಿ ಅಂದರಂತೆ. ಅದಾವ ಕಾರಣವೋ ನನಗೆ ಗೊತ್ತಿಲ್ಲ. ನೇರವಾಗಿ ಬಿಎಸ್ಎನ್ಎಲ್ ಗೆ ಕಚೇರಿಗೆ ಹೋಗಿ ನೋಡಿಸಿ ಅಂದರಂತೆ. ಅದಾವ ಕಾರಣವೋ ನನಗೆ ಗೊತ್ತಿಲ್ಲ. ನೇರವಾಗಿ ಬಿಎಸ್ಎನ್ಎಲ್ ಗೆ ಹೋಗದೆ ನನ್ನ ಬಳಿ ಬಂದು ’ಅವ್ವಾ ಬಿಎಸ್ಎನ್ಎಲ್ ಕಚೇರಿ ಎಲ್ಲಿದೆ?’ ಎಂದು ಕೇಳಿದರು. ಅಯ್ಯೋ ಅನಿಸಿದರೂ ನನ್ನ ಕೆಲಸ ಬಿಟ್ಟು ಎದ್ದು ಹೋಗಿ ತೋರಿಸಲು ನನಗೆ ಸಾಧ್ಯ ಇರಲಿಲ್ಲ. ನಮ್ಮ ಬ್ಯಾಂಕಿಗೆ ತೀರಾ ಸಮೀಪವೇ ಇರುವ ಆಫೀಸನ್ನು ತೋರಿಸಲು ಸಾಧ್ಯವೇ ಎಂದು ನನ್ನ ಎದುರು ಕುಳಿತ ಮತ್ತೊಬ್ಬ ಯುವಕನಿಗೆ ಕೇಳಿದೆ. ಅವ ಕರೆದುಕೊಂಡು ಹೋಗಿ ಬಂದ. ಇದಾಗಿ ಮತ್ತೆ ಒಂದು ಗಂಟೆಗೆ ತಾತಪ್ಪ ಬಂದರು. “ಅವ್ವಾ ಅಲ್ಲೂ ಆಗಲ್ಲವಂತೆ. ಖಜಾನೆಗೆ ಹೋಗಬೇಕಂತೆ” ಎಂದರು. “ಸರಿ ಖಜಾನೆಗೆ ಹೋಗಿ ಬನ್ನಿ ಅಲ್ಲಿ ಸರಿಯಾಗುತ್ತದೆ ’ ಎಂದು ಹೇಳಿದೆ.


“ಖಜಾನೆ ಅಂದ್ರೆ ಏನವ್ವ” ಎಂಬ ಪ್ರಶ್ನೆ ಕೂಡಲೇ ತೂರಿ ಬಂತು, ನಂಗೆ ನಿಜಕ್ಕೂ ಗಾಬರಿಯಾಯಿತು. ಈ ತಾತಪ್ಪನಿಗೆ ಏನೂ ಗೊತ್ತಿಲ್ಲ ಇವರಿಗೆ ಪಿಂಚಣಿ ತರಿಸುವುದು ಹೇಗೆ? ಖಜಾನೆ ನಮ್ಮ ಆಫೀಸಿನಿಂದ ತುಂಬಾ ದೂರ. ಈ ವಯಸ್ಸಿನಲ್ಲಿ ಬಿಸಿಲಿನಲ್ಲಿ ಆತ ನಡೆಯಲಾರ ಎನಿಸಿತು. ಕರುಳು ಚುರ್ ಎಂದಿತು. ಅದಕ್ಕೆ ಒಂದು ನೂರು ರೂಪಾಯಿಯನ್ನು ನನ್ನ ಬ್ಯಾಗಿನಿಂದ ತೆಗೆದುಕೊಟ್ಟು “ಆಟೋದವರಿಗೆ ಹೇಳಿ, ಕರೆದುಕೊಂಡು ಹೋಗುತ್ತಾರೆ. ನಿಮ್ಮ ಕೆಲಸ ಮುಗಿದ ಮೇಲೆ ಉಳಿದ ದುಡ್ಡಿನಲ್ಲಿ ಬಸ್ಟ್ಯಾಂಡಿಗೆ ಆಟೋದಲ್ಲಿ ಹೋಗಿ ನಂತರ ನಿಮ್ಮೂರಿಗೆ ಹೋಗಿ’ ಎಂದೆ. ತಾತ ಇಸ್ಕೊಂಡರೆ ಯಾಕೆ ಹೇಳಿ

“ಅಯ್ಯೋ ಬೇಡವ್ವಾ ಬೇಡ ನಾನು ನಡೆದುಕೊಂಡೇ ಹೋಗುತ್ತೇನೆ” ಎಂದರು. ತುಂಬಾ ಪುಸಲಾಯಿಸಿ “ಈ ವಯಸ್ಸಿನಲ್ಲಿ ನಡೆಯುವುದು ಬೇಡ. ನೂರು ರೂಪಾಯಿ ಏನು ದೊಡ್ಡದಲ್ಲ. ಖಂಡಿತಾ ನೀವು ಆಟೋದಲ್ಲಿ ಹೋಗಿ” ಎಂದು ಹೇಳಿ ಕಳುಹಿಸಿದೆ. ಇದಾಗಿ ರ‍್ಧ ಗಂಟೆಯ ನಂತರ ಮತ್ತೆ ತಾತಪ್ಪ ಬಂದು ’ಅವ್ವ ನಾನು ಇನ್ನೊಂದು ದಿನ ಹೋಗುತ್ತೇನೆ ನಿನ್ನ ದುಡ್ಡು ನೀನೆ ತೊಗೋ ಎಂದು ಜೇಬಿನಿಂದ ೧೦೦ ರೂಪಾಯಿ ತೆಗೆದುಕೊಟ್ಟರು. ನಿನ್ನ ಋಣ ನನ್ನ ತಲೆಯ ಮೇಲೆ ಬೇಡ ಇದನ್ನು ನಾನು ಹೊರಲಾರೆ” ಎಂದರು.

ನನಗೆ ಹಣ ವಾಪಸ್ ಪಡೆಯಲು ಮನಸ್ಸು ಬರಲಿಲ್ಲ. ನೂರಾರು ರೂಪಾಯಿಗಳನ್ನು ಹಿಂದುಮುಂದು ಯೋಚಿಸದೆ ರ‍್ಚು ಮಾಡುವಾಗ -ಒಂದು ಚಾಟ್ಸ್ ತಿಂದರೆ ೧೫೦ ರಿಂದ ೨೦೦. ಹೋಟೆಲಿಗೆ ಹೋದರೆ ಸಲೀಸಾಗಿ ೫೦೦ ಆಗುವಾಗ ಈ ವಯಸ್ಸಾದವರಿಗೆ ಅನುಕಂಪದಿಂದ ಕೊಟ್ಟ ಈ ಹಣವನ್ನು ಹಿಂಪಡೆಯುವುದು ನನ್ನಿಂದ ಸಾಧ್ಯವಿರಲಿಲ್ಲ. “ಬೇಡ ನೀವೇ ಇಟ್ಕೊಳಿ” ಎಂದು ಹೇಳಿದೆ. ಆದರೆ ವಯಸ್ಸಿನ ಕಾರಣದಿಂದ ತಾತಪ್ಪನ ಧ್ವನಿ ತುಂಬಾ ಕಡಿಮೆ ಇತ್ತು. ಆತ ಹಣವನ್ನು ಕೊಡುತ್ತಿದ್ದಷ್ಟೇ ಕಾಣುತ್ತಿತ್ತು. ಅವರು ಹೇಳಿದ್ದು ನನಗೆ ಕೇಳಿಸಿತು ಬೇರೆಯವರಿಗೆ ಕೇಳಿಸಲಿಲ್ಲ.
ತುಸುದೂರದಲ್ಲಿ ಕುಳಿತಿದ್ದ ನಿವೃತ್ತ ರ‍್ಕಾರಿ ನೌಕರರೊಬ್ಬರು ನನ್ನನ್ನೇ ದುರುಗುಟ್ಟಿ ನೋಡುತ್ತಿದ್ದರು. ಆ ಕ್ಷಣಕ್ಕೆ ನನಗೆ ಎಚ್ಚರಿಕೆಯಾಯಿತು ನಾನೆಲ್ಲೋ ಲಂಚ ಪಡೆಯುತ್ತಿದ್ದೇನೆ ಎಂದು ಭಾವಿಸಿದರೋ ಏನು ಎಂದು.
ಆ ತಾತಪ್ಪ ಹೋದ ಮೇಲೆ ಅವರಿಗೆ “ನೋಡಿ ಕೊಟ್ಟ ಹಣವನ್ನು ವಾಪಸ್ ಕೊಡುತ್ತಿದ್ದಾರೆ ಎಂಥ ಸ್ವಾಭಿಮಾನ” ಎಂದೆ. ಆಗ ಅವರು “ಓ ಅದು ನೀವು ಕೊಟ್ಟ ದುಡ್ಡಾ” ಎಂದು ಆಶ್ರ‍್ಯದಿಂದ ಪ್ರಶ್ನಿಸಿದರು. ನಾವು ಅವರ ಹಾಗೆ ಲಂಚಕೋರರು ಎಂದು ತಿಳಿದುಕೊಂಡುಬಿಟ್ಟಿರಬೇಕು. ನಾನು ಕ್ಲಾರಿಫೈ ಮಾಡದಿದ್ದರೆ ನಾನು ಗ್ರಾಹಕರಿಂದ ಹಣ ಪಡೆಯುತ್ತೇನೆ ಎಂದು ತಿಳಿದುಕೊಂಡು ಬಿಡುತ್ತಿದ್ದರೇನೋ ಎಂದು ದಿಗಿಲು ಕೂಡ ಆಯಿತು.

ಇದಾಗಿ ಆಗಲೇ ಒಂದು ತಿಂಗಳಾಗಿದೆ. ಮೊನ್ನೆ ಅದೇ ತಾತಪ್ಪ ಮತ್ತೆ ಬಂದರು. ಈಗಲೂ ಅವರಿಗೆ ಪಿಂಚಣಿ ಬರುತ್ತಿಲ್ಲ.
ಈ ಬಾರಿ ಅವರು ಖಜಾನೆಗೆ ಹೋಗಿಯೇ ಬಂದಿದ್ದರು. ಅಲ್ಲಿಯ ಒಬ್ಬರು ಇವರ ವಯಸ್ಸನ್ನು ನೋಡಿ ಅನುಕಂಪದಿಂದ ತಮ್ಮ ಮೊಬೈಲ್ ನಂಬರನ್ನು ಕೊಟ್ಟಿದ್ದರು ಏನಾದರೂ ತೊಂದರೆ ಇದ್ದರೆ ತಿಳಿಸಿ ಎಂದು.

ಬಂದವರೇ ಒಂದು ಮುಷ್ಟಿಯಲ್ಲಿ ಸೇವಂತಿಗೆ ಹೂವು ಚೆಂಡು ಹೂವು ತಂದು ನನ್ನ ಮುಂದೆ ಕೊಟ್ಟರು. ಏನಿದು ಎಂದು ಕೇಳಿದೆ. ಮುಡ್ಕೊಳವ್ವಾ ಎಂದರು. ಸಿಟಿಯಲ್ಲಿನ ಯಾರೂ ಬಹುತೇಕ ಚೆಂಡು ಹೂವನ್ನು ಮುಡಿಯುವುದಿಲ್ಲ. ಮುಡಿದರೆ ಒಂದು ಎರಡು ಸೇವಂತಿಗೆಯನ್ನು ಫ್ಯಾಷನ್ ಎಂದು ಮುಡಿಯಬಹುದು. ಅವರೋ ರ‍್ಧ ಮೊಳ ಸೇವಂತಿಗೆ ತಂದು ಕೊಟ್ಟಿದ್ದರು. ಆದರೆ ಎಷ್ಟು ಪ್ರೀತಿಯಿಂದ ಕೊಟ್ಟಿದ್ದನ್ನು ಮುಖಕ್ಕೆ ಹೊಡೆದ ಹಾಗೆ ಬೇಡ ಎನ್ನಲು ಸಾಧ್ಯವಿಲ್ಲದೆ ತೆಗೆದುಕೊಂಡು ನನ್ನ ಕಂಪ್ಯೂರ‍್ನಲ್ಲಿ ಅಂಟಿಸಿದ್ದ ದೇವರ ಪಟದ ಮುಂದೆ ಇರಿಸಿದೆ.

“ಅವ್ವಾ ಈ ನೂರು ರೂಪಾಯಿ ವಾಪಸ್ ತೆಗೆದುಕೋ” ಎಂದು ಜೇಬಿನಿಂದ ನೂರು ರೂಪಾಯಿಯ ಒಂದು ನೋಟನ್ನು ತೆಗೆದರು. ನಾನು ಖಡಾಖಂಡಿತವಾಗಿ ಬೇಡಲೇ ಬೇಡ ಎಂದೆ. ಆ ಮುದುಕರು ಕಣ್ಣು ತುಂಬಾ ನೀರು ತುಂಬಿಕೊಂಡು “ಈ ನೂರು ರೂಪಾಯಿಯ ಋಣ ಭಾರವನ್ನು ತೀರಿಸಲು ನಾನು ಇನ್ನೊಂದು ಜನ್ಮ ಎತ್ತಬೇಕಾ? ದಯವಿಟ್ಟು ನನಗೆ ಭಾರ ಹೊರಿಸಬೇಡ. ನೀನು ಇಷ್ಟು ಓದಿ ಕೆಲಸ ಮಾಡಲು ಅದೆಷ್ಟು ನಿದ್ದೆಗೆಟ್ಟಿದ್ದೀಯೋ? ಕಂಪ್ಯೂಟರ್ ಒತ್ತಿ ಒತ್ತಿ ಹೆಬ್ಬೆರಳೆಲ್ಲಾ ಅದೆಷ್ಟು ನೋವು ಬಂದಿದೆಯೋ ಏನೋ? ಕಣ್ಣೆಲ್ಲ ಎಷ್ಟು ನೊಂದಿರಬೇಕು. ನೀನು ಇಷ್ಟು ಕಷ್ಟಪಟ್ಟು ದುಡಿದ ನೂರು ರೂಪಾಯಿಯನ್ನು ನಾನು ಹೇಗೆ ಉಪಯೋಗಿಸಲಿ?” ಎಂದು ಪ್ರಶ್ನಿಸಿದರು .

“ಇಲ್ಲ ತಾತ ಈ ದುಡ್ಡು ನನಗೆ ದೊಡ್ಡದಲ್ಲ ನೀವು ಉಪಯೋಗಿಸಿದರೆ ನನಗೆ ಅಷ್ಟೇ ಸಂತೋಷ ದಯವಿಟ್ಟು ಮತ್ತ್ತೆಂದೂ ಹಿಂದೆ ಕೊಡಬೇಡಿ” ಎಂದು ಹೇಳಿದೆ.

ಕೋಟಿಗಟ್ಟಲೆ ಹಣವನ್ನು ಲೂಟಿ ಮಾಡುವ, ಲಕ್ಷಾಂತರ ರೂಪಾಯಿ ಲಂಚವನ್ನು ಪಡೆವ ನಮ್ಮ ದೇಶದಲ್ಲಿ ಇಂತಹ ವಯೋವೃದ್ಧರು ಹಣಕ್ಕೆ ಕೊಡುವ ಬೆಲೆ ಮತ್ತು ಸತ್ಯಕ್ಕೆ ರ‍್ಮಕ್ಕೆ ಕೊಡುವ ಮಹತ್ವವನ್ನು ನೋಡಿ ನಿಜಕ್ಕೂ ಆಶ್ರ‍್ಯವೂ ಆಯಿತು ಸಂತೋಷವೂ ಆಯಿತು.ಇಂತಹ ಸಂಸ್ಕಾರವಂತರು ಇರುವುದರಿಂದಲೇ ನಾವು ಇಷ್ಟಾದರೂ ಉಸಿರಾಡಿಕೊಂಡಿರಲು ಸಾಧ್ಯವಾಗಿದೆ ಎಂದು ಅನಿಸಿತು.

ಹಣ ಎನ್ನುವುದು ನಮ್ಮ ಮಾಸ್ಟರ್ ಆದಾಗ ನಾವು ಅದರ ಗುಲಾಮರಾಗುತ್ತೇವೆ. ನಾ ವು ಮಾಸ್ಟರ್ ಆಗಿ ಹಣ ನಮ್ಮ ಗುಲಾಮ ಆಗಿದ್ದಾಗ ಮಾತ್ರ ಸತ್ಕಾರ‍್ಯ ಸಾಧ್ಯ.

ಲಕ್ಷಾಂತರ ರೂಪಾಯಿಗಳನ್ನು ನೀರಿನಂತೆ ರ‍್ಚು ಮಾಡುವ ಕಾಲದಲ್ಲಿ ಇಷ್ಟು ಪುಟ್ಟ ಮೊತ್ತಕ್ಕೆ ಎಷ್ಟು ದೊಡ್ಡ ಮೌಲ್ಯವನ್ನು ಕೊಟ್ಟ ಅವರ ದೊಡ್ಡತನಕ್ಕೆ ಒಂದು ಬಾರಿ ಮನಸ್ಸಿನಲ್ಲಿ ಶರಣೆಂದೆ.

shuba

ಡಾ.ಶುಭಶ್ರೀಪ್ರಸಾದ್, ಮಂಡ್ಯ

Copyright © All rights reserved Newsnap | Newsever by AF themes.
error: Content is protected !!