November 15, 2024

Newsnap Kannada

The World at your finger tips!

yadatore1

ಈ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮೌಲ್ಯಾಧಾರಿತ ಶಿಕ್ಷಣ: ಉಪ ಮುಖ್ಯಮಂತ್ರಿ ಪ್ರಕಟ

Spread the love

* ಶ್ರೀ ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಉತ್ತರಾಧಿಕಾರಿ ಸ್ವೀಕಾರ ಕಾರ್ಯಕ್ರಮದಲ್ಲಿ ಡಾ.ಸಿ.ಎನ್.ಅಶ್ವತ್ಥನಾರಾಯಣ.

yadatore

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಾಂಸ್ಕೃತಿಕ, ಧಾರ್ಮಿಕ ಮೌಲ್ಯಗಳ ಜತೆ ಕಲಿಯುವ ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆಯನ್ನು ಅಡಕಗೊಳಿಸಲಾಗಿದೆ. ನೂತನ ಶಿಕ್ಷಣ ನೀತಿಯೂ ಈ ವರ್ಷದಿಂದಲೇ ಜಾರಿಯಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಮೈಸೂರಿನ ಕೆ.ಆರ್.ನಗರ ತಾಲ್ಲೂಕಿನ ಶ್ರೀ ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಉತ್ತರಾಧಿಕಾರಿ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಣವನ್ನು ಉನ್ನತ ಉದ್ದೇಶಗಳನ್ನಿಟ್ಟುಕೊಂಡು ಕಲಿಯಬೇಕು ಎಂಬುದು ನಮ್ಮ ಹಿರಿಯರ ಆಪೇಕ್ಷೆ. ಅವರ ಆಶಯಕ್ಕೆ ತಕ್ಕಂತೆಯೇ ಶಿಕ್ಷಣ ನೀತಿ ರೂಪುಗೊಂಡಿದೆ. ಕಿರಿಯ ಹಂತದಿಂದಲೇ ಸಾಮಾಜಿಕ ಹೊಣೆಗಾರಿಕೆಯನ್ನು ಕಲಿಸುವಂಥ ಉತ್ತಮ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ಸಿಗಲಿದೆ. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದರು.

ಸಮಾಜಕ್ಕೆ ಸರಿಯಾದ ಚಿಕಿತ್ಸೆ ಶಿಕ್ಷಣದಿಂದ ಮಾತ್ರ ಸಿಗುತ್ತದೆ. ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ಗುಣಮಟ್ಟದ ಜೀವನವನ್ನು ಕಟ್ಟಿಕೊಳ್ಳಬಹುದು. ಇದರಲ್ಲಿ ನಮ್ಮ ಸಂಸ್ಕೃತಿ, ನಮ್ಮ ಆಚಾರ-ವಿಚಾರ ಇತ್ಯಾದಿ ಅಂಶಗಳೂ ಇರುತ್ತವೆ. ಹೀಗಾಗಿ ಶಿಕ್ಷಣ ನೀತಿಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ನಾಡಿನ ಎಲ್ಲ ಸ್ವಾಮೀಜಿಗಳ ಮಾರ್ಗದರ್ಶನ ಅಗತ್ಯವಾಗಿದೆ ಎಂದು ಡಿಸಿಎಂ ಹೇಳಿದರು.

ಸೌಂದರ್ಯ ಲಹರಿ ಪ್ರಭಾವ:

ಶ್ರೀ ಶಂಕರಭಾರತಿ ಸ್ವಾಮೀಜಿ ನೇತೃತ್ವದಲ್ಲಿ ನಡೆದ, ನಡೆಯುತ್ತಾ ಬಂದಿರುವ ಶ್ರೀ ಆದಿ ಶಂಕರರ ʼಸೌಂದರ್ಯ ಲಹರಿʼ ಪಾರಾಯಣ ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ ಎಂದ ಉಪ ಮುಖ್ಯಮಂತ್ರಿಗಳು, ನಾನು ಪ್ರತಿನಿಧಿಸುತ್ತಿರುವ ಮಲ್ಲೇಶ್ವರ ಕ್ಷೇತ್ರವು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಬಹಳ ಸಮೃದ್ಧವಾಗಿದೆ. ಪ್ರತಿ ಮನೆಯೂ ಒಂದೊಂದು ಸರಸ್ವತಿ ಮಂದಿರ. ಅಂಥ ಕ್ಷೇತ್ರದ ವ್ಯಾಪ್ತಿಯಲ್ಲಿ ಜಗತ್ತಿನ ಅತಿದೊಡ್ಡ ಹಾಗೂ ದಶಕದ ʼಸೌಂದರ್ಯ ಲಹರಿʼ ಪಾರಾಯಣ ಕಾರ್ಯಕ್ರಮವು ನಡೆದಿತ್ತು ಎಂದು ನುಡಿದರು.

ಮನಸ್ಸನ್ನು ನಿರ್ಮಲಗೊಳಿಸುವ, ಆ ಮನಸ್ಸಿಗೊಂದು ದಿವ್ಯತೆಯನ್ನು ತಂದುಕೊಡುವ ಆ ಪಾರಾಯಣವು ಪ್ರತಿಯೊಬ್ಬರ ಮನಸ್ಸನ್ನು ಸ್ವಚ್ಚಗೊಳಿಸುವ ಚಿಕಿತ್ಸಕ ಶಕ್ತಿಯನ್ನು ಹೊಂದಿದೆ. ಇಂಥ ಕಾರ್ಯಕ್ರಮಗಳು ಶ್ರೀ ಮಠದ ಕಡೆಯಿಂದ ಇನ್ನೂ ಹೆಚ್ಚಾಗಿ ನಡೆಯಲಿ ಎಂದು ಡಿಸಿಎಂ ಆಶಿಸಿದರು.

ಶಿಷ್ಯ ಸ್ವೀಕಾರ ಸಮಾರಂಭದಲ್ಲಿ ಮಠದ ಶ್ರೀ ಶಂಕರ ಭಾರತೀ ಮಹಾಸ್ವಾಮೀಜಿ ಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಉತ್ತರಾಧಿಕಾರಿಯಾಗಿ ಆಯ್ಕೆಯಾದ ಕಿರಿಯ ಶ್ರೀಗಳು ಹಾಗೂ ಮಾಜಿ ಸಚಿವ ಎಚ್.ವಿಶ್ವನಾಥ್‌, ಶಾಸಕ ಸಾ.ರಾ.ಮಹೇಶ್‌, ಹಿರಿಯ ವಕೀಲ ನಾಗಾನಂದ ಮುಂತಾದವರು ಹಾಜರಿದ್ದರು.

Copyright © All rights reserved Newsnap | Newsever by AF themes.
error: Content is protected !!