April 4, 2025

Newsnap Kannada

The World at your finger tips!

love trust

ನಲ್ಲನ ಓಲೆಯ ಓಲೈಕೆ

Spread the love

ಪ್ರೀತಿಯ ಪಾರಿವಾಳವೆ ನಿನ್ನ ಕಂಡ ಕ್ಷಣದಿಂದ ಮನದಲಿ ಭಾವಗಳ ಹೊಯ್ದಾಟ.ಮೊಗದಲಿ ಕಿರು ನಗೆಯ ಚೆಲ್ಲಾಟ.ಸಮಯದ ಪರಿವಿಲ್ಲದೆ ಅನುದಿನ ನಿನ್ನದೆ ನೆನಪಲಿ ಕಾಲ ಕಳೆಯುತಲಿರುವೆ.ಗೆಜ್ಜೆಯ ನಾದಕೆ ಮರುಳಾಗಿ ನೀ ಬರುವ ಹಾದಿಯಲ್ಲಿ ಹೂಗಳ ಹಾಸಿ ಭರವಸೆಯಲಿ ಕಾದು ಕುಳಿತಿರುವೆ.ನೀನು ಯಾಕೆ ಇಷ್ಟು ಮನಕೆ ಹತ್ತಿರವಾದೆಯೋ ಗೊತ್ತಾಗುತ್ತಿಲ್ಲ.ಯಾರಿಗೂ ಜಗ್ಗದ ಈ ಜೀವ ನಿನ್ನನೇಕೆ ಇಷ್ಟ ಪಟ್ಟಿತೋ ತಿಳಿಯದಾಗಿದೆ.ಅಂದು ನಕ್ಕು ತೆರಳಿದೆ ಲಗುಬಗೆಯಿಂದ ಎನ್ನ ಹೃದಯವನು ಕದ್ದು ತಿರು ತಿರುಗಿ ನೋಡಿ ನಾಚಿ ನಗೆ ಬೀರುತ ಸಾಗಿದೆ ಒಲವ ಗುಂಗಲಿ.

ಕಂಡ ಘಳಿಗೆ ಕರಗಿದ ಮನ
ಸೆಳೆಯಿತು ನಿನ್ನತ್ತ ಗಮನ
ಕಿರುನಗೆಯ ಬಿರಿ ಒಲವಲಿ
ಕಾಡಿದೆಯೆಲ್ಲ ನಿತ್ಯ ಕನಸಿನಲಿ

ನಿನ್ನ ದಂತಗಳು ದಾಳಿಂಬೆಯನ್ನೇ ಮೀರಿಸುವಂತಿವೆ.ಕೋಮಲ ಕಂಗಳು ನಾಚಿಸುವಂತಿವೆ.ನಗುವು ನೂರಾರು ನೋವುಗಳಿಗೆ ಔಷಧಿಯಂತಿದೆ.ನಿನಗಿಲ್ಲ ಸರಿಸಾಟಿ ಜಗದಲಿ ಚೆಲುವಿನ ಗಣಿಯೇ ಪ್ರೀತಿಯನ್ನೇ ಅರಿಯದ ಮುಗ್ದ ಮನಸಿಗೆ ಪ್ರೀತಿಯ ಗುಂಗು ಹಿಡಿಸಿ ನಗೆಯಲ್ಲೇ ಎನ್ನ ಆವರಿಸಿದೆ..ಇನ್ನೆಷ್ಟು ಕಾಡಿಸುವೆ,ಸತಾಯಿಸುವೆ. ಒಲವೇ ನೀನಿರದೆ ಹೇಗಿರಲಿ ಹೇಗೆ ಕಾಲ ಕಳೆಯಲಿ.

ತುಂಟ ನಗೆಯಲ್ಲೇ ಹೃದಯದ ಬಾಗಿಲು ತಟ್ಟಿದವಳೇ ಎಲ್ಲಿರುವೆ.ನೀನಾಡಿದ ಮಾತುಗಳು ನೆನಪಾಗಿ ನನ್ನೆದೆಯ ಅಂಗಳದಲಿ ಮುಷ್ಕರ ಹೂಡಿವೆ. ಕಾಣುವ ತವಕದಿ ಕಂಗಳು ವಿಶ್ರಾಂತಿ ಮರೆತಿದೆ.ಮೌನದಲ್ಲೇ ಅದೆಷ್ಟೋ ವಿಷಯಗಳ ಅರ್ಥೈಸುವ ನೀನು ಎಲ್ಲಿರುವೆ ನಿನ್ನಯ ವಿಳಾಸ ತಿಳಿಸು. ಚೆಲುವಿಗೆ ಮನಸೋತವನು ನಾನಲ್ಲ ಕಣೆ.ನೀನು ಅಂದು ತೋರಿದ ನಿಷ್ಕಲ್ಮಶ ಕಾಳಜಿ .ಮಾನವೀಯತೆ,ಸರಳತೆ ಗುಣಗಳಿಗೆ ಶರಣಾದ ಮುಗ್ದ ಮನದವನು.ಎಲ್ಲರ ಜೊತೆ ಬೆರೆಯುತ ಸಾಂತ್ವನ ಹೇಳುವ ನಿನ್ನ ಮಮತೆಗೆ ಕರಗಿದವನು ನನ್ನೊಲವೆ.

ಮನಸಿನಲ್ಲಿ ಹುದುಗಿದ ಭಾವನೆಗಳನ್ನು ಎಳೆ ಎಳೆಯಾಗಿ ಅರ್ಥೈಸಲು ಈ ಓಲೆಯೇ ಸಾಕೆನಿಸುತ್ತದೆ.ಎದುರು ನಿಂತು ಮಾತನಾಡಲು ಆರಂಭಿಸಿದರೆ ಮಾತೇ ಮುಗಿಯವು.ನಗುವು ನಳ ನಳಿಸುವುದು.ಬಾ ಗೆಳತಿ ಇನ್ನೆಷ್ಟು ಕಾಯಲಿ ನಿನಗಾಗಿ ಎಲ್ಲರಂತೆ ನಾನಲ್ಲ ಆಗರ್ಭ ಶ್ರೀಮಂತನಲ್ಲ ನಿನ್ನ ಸಾಕದಷ್ಟು ಬಡವನು ಅಲ್ಲ ನಿನ್ನ ಕಣ್ಣಾಗಿ ಸದಾ ಸ್ನೇಹಿತನಂತೆ ಕಾಳಜಿ ತೋರುತ ತಾಯಿಯಂತೆ ವಾತ್ಸಲ್ಯ ತೋರುತ ಅಪ್ಪನಂತೆ ಮಮತೆ ತೋರುತ ಸದಾ ಹೂವಿನಂತೆ ಜೋಪಾನ ಮಾಡುವೆ.

ಗೆಳತಿ ಎಲ್ಲ ಮನದ ಮಾತನು ಈ ಕಿರು ಪತ್ರದ ಮೂಲಕ ತಿಳಿಸಿರುವೆ.ನೀನು ಅರಿತು ಬಳಿ ಬಂದರೆ ಜಗವನೆ ಗೆದ್ದಷ್ಟೇ ಖುಷಿ ಪಡುವೆ.ಇಲ್ಲದಿರೆ ಇರುಳ ಕನಸೆಂದು ಸುಮ್ಮನಾಗುವೆ.ಒಲವೇ ನಿನಗೆ ಬರೆದಿರುವ ಈ ಒಲವಿನ ಓಲೆ ಎನ್ನ ಬಾಳಿಗೆ ನೀಡಬಹುದು ನೆಲೆ.ಈ ಓಲೆ ಸ್ವೀಕರಿಸು ಇಲ್ಲವೇ ಕನಸಿನಲ್ಲಿ ಬಂದು ನಿನ್ನ ಮನದ ಇಂಗಿತ ವ್ಯಕಪಡಿಸು ಪ್ರೀತಿಯ ಹುಚ್ಚು ಹಿಡಿಸಿದ ಪ್ರಿಯೇ.

ಇಂತಿ ನಿನಗಾಗಿ ಕಾದಿರುವ ಹುಚ್ಚು ಜೀವ

image 7

ಅವಿನಾಶ ಸೆರೆಮನಿ
ಬೈಲಹೊಂಗಲ

Copyright © All rights reserved Newsnap | Newsever by AF themes.
error: Content is protected !!