December 21, 2024

Newsnap Kannada

The World at your finger tips!

deepa1

ಭಿನ್ನತೆಯಲ್ಲೂ ಐಕ್ಯತೆ, ಅದುವೇ,ಭಾರತೀಯ ಗಣರಾಜ್ಯ

Spread the love

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ……..

74 ರ ಯೌವ್ವನದ ಸೃಷ್ಟಿಯ ಅತ್ಯದ್ಭುತ ಅತ್ಯಾಕರ್ಷಕ ಭರತ ಖಂಡವೇ,…….

ನಿನ್ನೊಂದಿಗೆ ಈ ಕ್ಷಣ ನಾನಿರುವುದೇ ಒಂದು ಸೌಭಾಗ್ಯ.
ಅದಕ್ಕೆ ಕೃತಜ್ಞತೆ ಸಲ್ಲಿಸುತ್ತಾ…..

ಸ್ವಾತಂತ್ರ್ಯ ಪಡೆದ 74 ವರ್ಷಗಳು ……

ಆದರೆ,
ನಿನ್ನ ಅಸ್ತಿತ್ವ ಸಹಸ್ರಾರು ವರ್ಷಗಳ ನಿರಂತರ ಚಲನೆಯಿಂದ ಕೂಡಿದೆ……

ನನ್ನ ಭರತ ಖಂಡವೇ ಏನೆಂದು ವರ್ಣಿಸಲಿ – ಎಷ್ಟೆಂದು ವರ್ಣಿಸಲಿ ನಿನ್ನನ್ನು ……

ಪದಗಳು – ಭಾವಗಳು – ಕಲ್ಪನೆಗಳಿಗೂ ನಿಲುಕದ ನಿನ್ನನ್ನು ಹೇಗೆಂದು ಹಿಡಿದಿಡಲಿ ಈ ಪುಟ್ಟ ಹೃದಯದಲಿ….

ರಾಮಾಯಣ – ಮಹಾಭಾರತ – ಭಗವದ್ಗೀತೆಗಳೆಂಬ – ಅಸಾಮಾನ್ಯ ಬೃಹತ್ ಗ್ರಂಥಗಳು ನಿನ್ನಲ್ಲೇ ಸೃಷ್ಟಿಯಾದವು……..

ಗೌತಮ ಬುದ್ಧ – ಮಹಾವೀರರೆಂಬ ಚಿಂತನ ಚಿಲುಮೆಗಳಿಗೆ ಜನ್ಮ ನೀಡಿದ್ದು ನೀನೇ…….

ಹಿಮಗಿರಿಯ ಸೌಂದರ್ಯ – ನಿತ್ಯ ಹರಿದ್ವರ್ಣದ ಕಾಡುಗಳು – ತುಂಬಿ ತುಳುಕುವ ನದಿಗಳು – ಕೌತುಕದ ಬೆಟ್ಟ ಗುಡ್ಡಗಳು – ಆಕರ್ಷಕ ಮರುಭೂಮಿ – ವಿಸ್ತಾರವಾದ ಬಯಲುಗಳು ಅಡಗಿರುವುದೂ ನಿನ್ನಲ್ಲೇ….

ಹಿಂದೂ – ಮುಸ್ಲಿಂ – ಕ್ರಿಶ್ಚಿಯನ್ – ಸಿಖ್ – ಬುದ್ಧ – ಜೈನ – ಪಾರ್ಸಿಗಳೆಲ್ಲರ ಆಶ್ರಯದಾತ ನೀನೇ…..

ಋಷಿ ಮುನಿಗಳ – ದಾಸ ಆಚಾರ್ಯರ – ಪಂಡಿತ ಪಾಮರರ ನೆಲೆವೀಡು ನಿನ್ನದೇ……‌

ಸಮಾನತೆಯ ಹರಿಕಾರ – ಪ್ರಜಾ ಕ್ರಾಂತಿಯ ಧೀಮಂತ ಬಸವಣ್ಣ ಜನಿಸಿದ್ದು ಈ ಮಣ್ಣಿನಲ್ಲಿಯೇ…..

ವಿಶ್ವ ದಾರ್ಶನಿಕ – ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರು ಹುಟ್ಟಿದ್ದು ಈ ನೆಲದಲ್ಲೇ…..

ಹಿಂದೆಂದೂ ಹುಟ್ಟಿರದ ಮುಂದೆಂದೂ ಹುಟ್ಟಲಸಾಧ್ಯವಾದ ಅಂಬೇಡ್ಕರ್ ಎಂಬ ಜ್ಞಾನದ ಬೆಳಕಿನ ಕಿಡಿ ಬೆಳಗಿದ್ದು ನಿನ್ನ ತೋಳಿನಲ್ಲೇ….

ಮಾನವ ಜನಾಂಗದ ಕೌತುಕ ಗಾಂಧಿ ಎಂಬ ಮಹಾತ್ಮ ಬದುಕಿದ್ದುದು ನಿನ್ನ ಮಡಿಲಲ್ಲೇ….

ಹೆಣ್ಣೆಂಬುದು ದೇವತೆಯಾದದ್ದು ನಿನ್ನೀ ಮನದ ಭಾವನೆಗಳಲ್ಲೇ…..

ತಂದೆ – ತಾಯಿಗಳೇ ದೇವರಾದದ್ದು ನಿನ್ನೀ ನೆಲದ ಮಹಿಮೆಯಿಂದಲೇ….

ಸತ್ಯ – ಅಹಿಂಸೆ – ಆಧ್ಯಾತ್ಮ – ವೈಚಾರಿಕತೆ – ಸ್ವಾತಂತ್ರ್ಯ ಬೆಳೆದದ್ದು ನಿನ್ನೀ ಗುಣದಿಂದಲೇ…..

ಪ್ರೀತಿ – ತ್ಯಾಗ – ನಿಸ್ವಾರ್ಥ – ಮಾನವೀಯತೆ ತವರೂರು ನಿನ್ನಲ್ಲೇ ಅಡಗಿದೆ……

ಬಲಪಂಥ – ಎಡಪಂಥ – ಭಕ್ತಿಪಂಥ – ಕಾಯಕಪಂಥ – ಜ್ಞಾನಪಂಥ,
ಆ ವಾದ ಈ ವಾದಗಳ ಪ್ರಯೋಗ ನಡೆಯುತ್ತಿರುವುದು ನಿನ್ನ ಒಡಲಾಳದಲ್ಲೇ…‌…

ಇಷ್ಟೊಂದು ಭಿನ್ನತೆಗಳು ಈ ಸೃಷ್ಟಿಯಲ್ಲಡಗಿರುವುದು ನಿನ್ನಲ್ಲಿ ಮಾತ್ರ………

ಶಾಂತಿ – ಸಹೋದರತೆ – ಭಾತೃತ್ವಗಳ ಈ ನಿನ್ನ ಮಡಿಲಲ್ಲಿ ಬೆಳೆಯುತ್ತಿರುವ ಅದೃಷ್ಟವಂತ ನಾನು…

ಮೇಲೆ ನೋಡಿದರೆ ಹಿಮರಾಶಿಯ ಕಾಶ್ಮೀರ,

ಕೆಳಗೆ ನೋಡಿದರೆ ನೀಲಿ ಸಾಗರದ ಕನ್ಯಾಕುಮಾರಿ,

ಪೂರ್ವಕ್ಕೆ ಸಪ್ತ ಸೋದರಿಯರ ಸುಂದರ ನಾಡು,

ಪಶ್ಚಿಮದಲ್ಲಿ ವಾಣಿಜ್ಯ ನಗರಿಯ ಬೀಡು,
ಮಧ್ಯದಲ್ಲಿ ವಿಂಧ್ಯ ಗಿರಿ,

ಅಗೋ ಅಲ್ಲಿ ನೋಡು ಹರಿಯುತ್ತಿದ್ದಾಳೆ ಗಂಗೆ,

ಇಗೋ ಇಲ್ಲಿ ನೋಡು ನಲಿಯುತ್ತಿದ್ದಾಳೆ ಕಾವೇರಿ,

ಅಲ್ಲಲ್ಲಿ ಮುದುನೀಡುವ ಮನೋಹರ ನದಿ ಕಾಡುಗಳು,
ಅಲ್ಲಿಯೇ ಹುಲಿಯ ಘರ್ಜನೆ,
ನವಿಲ ನರ್ತನ, ಕುಹೂ ಕುಹೂ ಗಾನ,

ಹಾಡಲೊಂದು ಶಾಸ್ತ್ರೀಯ ಸಂಗೀತ,
ಕೇಳಲೊಂದು ಕರ್ನಾಟಕ ಸಂಗೀತ,

ಅಲ್ಲೊಂದಿಷ್ಟು ಮರುಭೂಮಿ, ಇಲ್ಲೊಂದಿಷ್ಟು ಪಶ್ಚಿಮ ಘಟ್ಟಗಳು,

ಓದಲು ರಾಮಾಯಣ, ಮಹಾಭಾರತ,
ಕಲಿಯಲು ಬೃಹತ್ ಸಂವಿಧಾನ,

ಅರಿಯಲೊಬ್ಬ ಬುದ್ದ, ಅಳವಡಿಸಿಕೊಳ್ಳಲೊಬ್ಬ ಬಸವ,

ಬುದ್ಧಿ ಹೇಳಲೊಬ್ಬ ವಿವೇಕಾನಂದ,
ತಿಳಿವಳಿಕೆ ಮೂಡಿಸಲೊಬ್ಬ ಅಂಬೇಡ್ಕರ್,
ಎಲ್ಲರೊಳಗೊಬ್ಬ ಗಾಂಧಿ,

ಒಬ್ಬಳೇ ಹೆಂಡತಿ, ಒಬ್ಬನೇ ಗಂಡ,
ಗುರುಹಿರಿಯರೆಂಬ ಗೌರವ,
ಮಕ್ಕಳೇ ಮಾಣಿಕ್ಯವೆಂಬ ಸಂಸ್ಕಾರ,

ಆಡಲು ಹಾಕಿ, ನೋಡಲು ಕ್ರಿಕೆಟ್,
ಕಾಯಲೊಬ್ಬ ಪ್ರಧಾನಮಂತ್ರಿ,
ಕರುಣಿಸಲೊಬ್ಬ ಮುಖ್ಯಮಂತ್ರಿ,

ಸಂಭ್ರಮಿಸಲು ಸಂಕ್ರಾಂತಿ,
ಸ್ವಾಗತಿಸಲು ಯುಗಾದಿ,
ಕುಣಿದು ಕುಪ್ಪಳಿಸಲು ಗಣೇಶ,
ಮನರಂಜಿಸಲು ದೀಪಾವಳಿ,

ವಿಜೃಂಬಿಸಲು ದಸರಾ,
ಭಾವೈಕ್ಯತೆಯ ರಂಜಾನ್,
ರಂಗುರಂಗಿನ ಕ್ರಿಸ್ ಮಸ್,

ಸತ್ಯ, ಅಹಿಂಸೆ, ಮಾನವೀಯತೆ ಎಂಬ ಸಂಪ್ರದಾಯ,
ದಯವೇ ಧರ್ಮದ ಮೂಲವಯ್ಯ ಎಂಬ ಸಂಸ್ಕೃತಿ,

ಧನ್ಯ ಈ ನೆಲವೇ ಧನ್ಯ ಧನ್ಯ,
ನನ್ನುಸಿರಾಗಿರುವ ಭಾರತ ದೇಶವೇ,
ನಿನಗೆ ನನ್ನ ಶುಭಾಶಯದ ಹಂಗೇಕೆ,
ನೀನಿರುವುದೇ ನನಗಾಗಿ,
ನನ್ನ ಜೀವವಿರುವುದೇ ನಿನಗಾಗಿ,

ಭಿನ್ನತೆಯಲ್ಲೂ ಐಕ್ಯತೆ, ಅದುವೇ,
ನಮ್ಮ ಭಾರತೀಯ ಗಣರಾಜ್ಯ.

ಈ ನನ್ನ ಜೀವ ನಿನಗಾಗಿ….ಎಂದೆಂದಿಗೂ ‌…

ಸ್ವಾತಂತ್ಯೋತ್ಸವದ ಶುಭಾಶಯಗಳೊಂದಿಗೆ
ಭವ್ಯ ಭವಿಷ್ಯದ ಕನಸುಗಳನ್ನು ಕಾಣುತ್ತಾ….ನಿಮ್ಮೊಂದಿಗೆ……

  • ವಿವೇಕಾನಂದ ಹೆಚ್ ಕೆ
Copyright © All rights reserved Newsnap | Newsever by AF themes.
error: Content is protected !!