ಯುಗಾದಿ – ಎರಡು ಹಾದಿ

Team Newsnap
2 Min Read

ತಲೆಗೆ ಎಣ್ಣೆ ಹಚ್ಚುವವರು,
ಮೈಗೆ ಎಣ್ಣೆ ತೀಡುವವರು,
ಹೊಟ್ಟೆಗೆ ಎಣ್ಣೆ ಹಾಕುವವರು,
ಹೋಳಿಗೆ ತುಪ್ಪ ಸವಿಯುವವರು,
ಕೋಳಿ ಕುರಿ ಮಾಂಸ ಭಕ್ಷಿಸುವವರು,
ಇಸ್ಪೀಟ್ ಆಟ ಆಡುವವರು,
ಹೊಸ ಬಟ್ಟೆ ಹಾಕಿ ನಲಿಯುವವರು,
ಹೊಸ ವರ್ಷ ಸಂಭ್ರಮಿಸುವವರು,
ನವ ಜೋಡಿಗಳು,
ಹಳೆ ಬೇರುಗಳು,
ಬಡತನದ ನೋವುಗಳು,
ಸಿರಿತನದ ಖುಷಿಗಳು,
ಅಗಲಿದವರ ನೆನಪುಗಳು,
ಹುಟ್ಟಿದವರ ನಲಿವುಗಳು,

ಯುಗಾದಿ ಎಂದರೆ ಅದೊಂದು ನೆನಪಿನಾ ಹಬ್ಬ.
ಸಿಹಿಯೂ ಇದೆ – ಕಹಿಯೂ ಇದೆ.
ಕಾಲನ ಪಯಣದಲಿ ಸಿಹಿ ಕಹಿಯಾಗಿ – ಕಹಿ ಸಿಹಿಯಾದ ಅನುಭವ ಒಂದು ವಿಸ್ಮಯ.

ಆಗ ಮಾವಂದಿರು ತಮ್ಮ ಒರಟು ಕೈಗಳಲ್ಲಿ ಪುಟ್ಟ ಬೆತ್ತಲೆ ಮೈಗೆ ಸುಡುವ ಎಣ್ಣೆ ತಿಕ್ಕುತ್ತಿದ್ದರೆ ಅಲ್ಲೇ ನರಕ ದರ್ಶನ.
ಈಗ Massage parlor ನಲ್ಲಿ ಬಾಡಿ ಮಸಾಜ್ ಮಾಡುತ್ತಾ ಎಷ್ಟೇ ಒತ್ತಿದರೂ ಅದೊಂದು ಸ್ವರ್ಗ ಸುಖ.

ಆಗ ಕಲ್ಲಿನಲಿ ಮೈ ಉಜ್ಜಿ ಬೀದಿಯ ಸುಡು ಬಿಸಿಲಿನಲ್ಲಿ ಬಿಸಿ ನೀರಿನಲ್ಲಿ ಅಮ್ಮ ಸ್ನಾನ ಮಾಡಿಸುತ್ತಿದ್ದರೆ ಅದೊಂದು ಯಾತನಾಮಯ ಸಮಯ.
ಈಗ ಹದ ಬೆರೆತ ಬಿಸಿ ನೀರಿನ ಬಾತ್ ಟಬ್ಬಿನಲಿ ಕುಳಿತು shower ನಲ್ಲಿ ಸ್ನಾನ ಮಾಡುತ್ತಿದ್ದರೆ ಸಮಯದ ಪರಿವೇ ಇರುವುದಿಲ್ಲ.

ಅಂದು ಹೊಸ ಬಟ್ಟೆಗಾಗಿ ತಿಂಗಳ ಮೊದಲೇ ರೋಮಾಂಚನದ ಕನಸಿನ ಅನುಭವವಾಗುತಿತ್ತು.
ಇಂದು ಈ ಸುಡು ಬೇಸಿಗೆಯಲಿ ಬಟ್ಟೆ ತೊಡಲೇ ಉತ್ಸಾಹವಿಲ್ಲ. ಕಪಾಟಿನೊಳಗಿಂದ ಇನ್ನೂ ಧರಿಸದ ಹೊಸ ಬಟ್ಟೆಗಳು ಗಹಗಹಿಸಿ ನಗುತ್ತಿವೆ.

ಅಂದು ಹೋಳಿಗೆಯ ಹೂರಣ ಕದ್ದು ತಿನ್ನಲು ನಾನಾ ಯೋಚನೆ – ನಾನಾ ಯೋಜನೆ.
ಇಂದು ತಟ್ಟೆಯ ಮುಂದೆ ಭಕ್ಷ್ಯಭೋಜನ. ತಿನ್ನಲು ಮಾತ್ರ ನಾನಾ ಭಯ.

ಅಂದು ನೆಂಟರು ಬಂದರೆ ಸಂಭ್ರಮವೋ ಸಂಭ್ರಮ. ಜನ ಹೆಚ್ಚಾದಷ್ಟೂ ಖುಷಿಯೋ ಖುಷಿ.
ಇಂದು ಅತಿಥಿಗಳು ಬಂದರೆ ಏನೋ ಕಸಿವಿಸಿ. ಅದಕ್ಕಿಂತ ಟಿವಿಯೇ ವಾಸಿ ಎನಿಸುತ್ತದೆ.

ಅಂದು ಶಿಸ್ತಿನ ಅಪ್ಪ ದೆವ್ವದಂತೆ ಕಾಣುತ್ತಿದ್ದರು.
ಇಂದು ಫೋಟೋ ಆಗಿರುವ ಅಪ್ಪನೇ ದೇವರು.

ಅಂದು ಬಸವ ಗಾಂಧಿ ಸುಭಾಷ್ ಅಂಬೇಡ್ಕರ್ ಆಜಾದ್ ಗಳೇ ಆದರ್ಶ.
ಇಂದು ಬಿಲ್ ಗೇಟ್ಸ್ ಅಂಭಾನಿ ಮಿತ್ತಲ್ ಹಿಂದೂಜಾಗಳೇ ಆದರ್ಶ.

ಅಂದು ಸತ್ಯ ಸರಳತೆ ಸ್ವಾಭಿಮಾನ ಮಾನವೀಯ ಮೌಲ್ಯಗಳೇ ಜೀವನ ಧ್ಯೇಯ.
ಇಂದು ಕಾರು ಬಂಗಲೇ ಒಡವೆ ಶ್ರೀಮಂತಿಕೆಗಳೇ ಬದುಕಿನ ಧ್ಯೇಯ.

ಆದರೂ,
ನಿರಾಸೆ ಏನಿಲ್ಲ.
ಅಂದಿಲ್ಲದ ಎಷ್ಟೋ ಸೌಲಭ್ಯಗಳು ಇಂದಿವೆ.
ಅಂದಿಲ್ಲದ ಅರಿವು ಜ್ಞಾನ ಇಂದಿದೆ. ಅಂದಿಲ್ಲದ ಅನುಭವ ಇಂದಿದೆ.
ಅರಿತು ಬಾಳಿದರೆ ಅಂದಿಗೂ ಇಂದಿಗೂ ವ್ಯತ್ಯಾಸವೇನಿಲ್ಲ…….

ಏನೂ ಇಲ್ಲದಿದ್ದಾಗ ಎಲ್ಲವನ್ನೂ ಗಳಿಸಿದೆ.
ಎಲ್ಲವೂ ಇರುವಾಗ ಏನನ್ನಾದರೂ ಸಾಧಿಸುವಾಸೆ.
ಕಾಲಾಯ ತಸ್ಮೈ ನಮ:.

  • ಎಚ್ ಕೆ ವಿವೇಕಾನಂದ
Share This Article
Leave a comment