January 14, 2026

Newsnap Kannada

The World at your finger tips!

girl child day

”ಹೆಣ್ಣು ಬೇಕು!”

Spread the love
  • ಇಂದು ರಾಷ್ಟ್ರೀಯ ಹೆಣ್ಣು ಮಗುವಿನ ದಿನ

ಕೇಳಿರಿ ಕೇಳಿರಿ ಲೋಕದ ಜನರೇ ಹೆಣ್ಣು ಭ್ರೂಣದಾ ಕಥೆಯೊಂದಾ!
ಲೋಕವ ಕಾಣುವ ಮುಂಚೆಯೆ ಗರ್ಭದೆ,
ಗೋಳಿಟ್ಟು ಕರಗಿದ
ವ್ಯಥೆಯೊಂದ

ತಾಯಿಗೆ ತಿಂಗಳು ಐದಾಗುತಲಿರೆ, ತೋರಿದ ತಂದೆಯು ವೈದ್ಯರಿಗೆ!
ಗಮನಿಸಿ ನೋಡಿದ ವೈದ್ಯರೆಂದರು,ಯೋಚನೆಯಿಲ್ಲ , ಕುಶಲವಿದೆ!

ತಂದೆಯು ಮೆತ್ತಗೆ ಕೇಳಿದ ವೈದ್ಯರ ಒಳಗಿರುವುದು ಆವ
ಲಿಂಗವೆಂದು?
ತಿಳಿಸಲು ಇಲ್ಲವು ಕಾನೂನಿನಲ್ಲಿ,ಅನುಮತಿಯೆಂದರು ವೈದ್ಯರು!

ಮೇಡಂ ನಮಗಿದು ಮೂರನೆ ಮಗುವು, ಮೊದಲೆರಡೂ ಹೆಣ್ಣುಗಳೇ!
ನೋಡಿಕೊಳ್ಳುವೆ ನಿಮ್ಮನು ಕೊಂಚ,
ತಿಳಿಸಿರಿ ಒಳಗಿರುವುದ ,ಈಗಲೇ!

ಹಣದಾಮಿಷಕೆ ಬಲಿಯಾದ ವೈದ್ಯರು,
ತಿಳಿಸಿದರು, ಇದು ಹೆಣ್ಣು ಮಗಳೇ!
ಯಾರ ಮುಂದೆಯೂ ಬಾಯ ಬಿಡದಿರಿ, ಏತಕೆ ಬೇಕು ಮುಂದೆ ರಗಳೆ?

ತಂದೆಯು ಹೇಳಿದ, ವೈದ್ಯರ ಬಳಿಯಲಿ,” ತೆಗೆದೇ ಬಿಡಿ ಬೇಡ,ಈ..ಕಳೆ!”
ಈ ಮಾತನ್ನು, ಕೇಳಿದ ತಾಯಿಯು, ಕಂಡಳು ಗಂಡನ ನೋವಿಂದಲೇ!

ಕಣ್ಣಿನ ಸನ್ನೆಯ ಮಾಡುತ ಅಪ್ಪನು ಅಮ್ಮನ ಬಾಯ ಮುಚ್ಚಿಸಿದ!
ಮುಂದೆ ಏನು ಮಾಡಲುಬೇಕೆಂದು ವೈದ್ಯರ ಬಳಿಯಲಿ ಚರ್ಚಿಸಿದ!

ದಾದಿಯು ಬಂದು ಅಮ್ಮನ ಕರೆಯುತ ಕೋಣೆಯ ಒಳಗೆ ಕೂಡಿದಳು!
ವೈದ್ಯರು ಕೊಟ್ಟ ಮದ್ದನು, ದಾದಿಯು,ಅಮ್ಮನ ಬಾಯಿಗೆ ಸುರುವಿದಳು!

ಬವಳಿಯು ಬಂದಂತೆ ಸೋತ ಅಮ್ಮನು ಮಂಚಕೆ ಹಾಗೇ
ಒರಗಿದಳು!
ಕಹಿಯ ಮದ್ದು ತಾಕಿತು ಮೂಗಿಗೆ ಒದ್ದಾದುತ ನಾ ಥರಗುಟ್ಟಿದೆ!

ಸೋಲುತ ಜಾರುತ ಗರ್ಭದಗೋಡೆಗೆ ಒರಗುತ ನಾನು ನಿಲ್ಲದಾದೆ!
ಕೆಳಗೆ ಬಿದ್ದು,ಚೀರುತ ಕೇಳಿದೆ,” ನಾ ಏನ ತಪ್ಪನು ಮಾಡಿದೆ?”

ಅಮ್ಮನ ಸಂಕಟ, ನನ್ನ ರೋಧನೆ, ಕಾಣದಾದನು ಅಪ್ಪನು!
ಗಂಡು ಸಂತಾನಕೆ ಆಸೆಯ ಪಟ್ಟು ಮಾಡಿದನೆ ಅಪರಾಧವನು!

ಒಂದವಕಾಶವ ನನಗೂ ಕೊಡು ನೀ ಅಳುತ ಬೇಡಿದೆ ಅಪ್ಪನನು!
ಪುತ್ರನ ಮೀರಿ ಸಾಧಿಸಿ ತೋರುವೆ ,
ಪುತ್ರಿಯಾದರೆ ಕೀಳೇನು?

ಮೂಕಳ ಮಾತು ಕೇಳದಾಯಿತು,
ಅಪ್ಪನ ಮನಸು ಕಿವುಡಾಯಿತು!
ಕತ್ತರಿ ಹಿಡಿದ ಕೈಯೊಂದು ಬಂದು
ನನ್ನ ಚೂ.ರುಚೂರನ್ನು
ಮಾಡಿತು!

ಬೆಳಕನು ಕಾಣುವ ಮುಂಚೆಯೆ
ಅಂತಿಮ ಸಂಸ್ಕಾರವನ್ನು ಕಂಡೆನು!
ಮಾಡದ ಪಾಪಕೆ,
ಕಾಣದ ಆಟಕೆ,
ಸಿಕ್ಕುತ ನಾ ಬಲಿಯಾದೆನು!

ಕೈಮುಗಿದು ಬೇಡುವೆ ಯಾರೇ ಆಗಲಿ ಮಾಡದಿರಿ ಭ್ರೂಣ ಹತ್ಯೆಯನ್ನ!
ತೆರೆಯಾ ಮರೆಯಲಿ ಉಸಿರಾಡುವ ಜೀವ,
ತಿಳಿಯಿರಿ ಅದರ ನೋವನ್ನ!

image 3

ರೂಪ ಮಂಜುನಾಥ
ಹೊಳೆನರಸೀಪುರ

error: Content is protected !!