ಪ್ರತಿ ಮಾಸಗಳು ನಮ್ಮಲ್ಲೇನೋ ಹೊಸ ನೆನಪು ಬಿತ್ತಲು ಬರುವ ಬೀಜದಂತೆ .ಚೈತ್ರ ಮಾಸದಿಂದ ಆರಂಭವಾಗುವ ಈ ನೆನಪಿನ ದೋಣಿಯಲ್ಲಿ ನಾವೆಲ್ಲ ಈಗಾಗಲೇ ಪಯಣಿಸಿದ್ದೇವೆ.
ಮಕ್ಕಳಿಗೆ ಹಬ್ಬದ ನೆಪದಲ್ಲೇ ಶಾಲೆಗೆ ರಜೆ ಸಿಕ್ಕ ನೆನಪುಗಳಿವೆ. ಅಜ್ಜ ಅಜ್ಜಿಯರಿಗೆ ಮೊಮ್ಮಕ್ಕಳು ಮಕ್ಕಳು ಮನೆಗೆ ಬಂದು ಆ ಸಮಯವನ್ನು ನೆನಪಾಗಿಸಿದ ಸವಿ ನೆನಪುಗಳಿವೆ. ತಂದೆ ತಾಯಿಗೂ ಮಕ್ಕಳ ಜೊತೆ ಕಳೆದ ಸಂಭ್ರಮದ ನೆನಪಿನ ಬುತ್ತಿ ಇದೆ .ಬಹುಶಃ ಇಂತಹ ನೆನಪುಗಳ ಸರಪಳಿಯನ್ನು ಹೆಣೆಯಲೆಂದೇ ಈ ಮಾಸ ಬಂದಂತಿದೆ. ಕೆಲವರಿಗಿಂದು ರಸ ಘಳಿಗೆಯಾಗಿ, ಸುಂದರ ಕನಸುಗಳ ಹಂದರವಾಗಿದೆ.ಇನ್ನು ಕೆಲವರಿಗೆ ದುಃಸ್ವಪ್ನ ನೆನಪುಗಳನ್ನು ನೆನೆದು ಇಂದಿಗೂ ಸವೆಯಂತೆ ಮಾಡಿದೆ. ಯಾವುದೀ ಮಾಸ…..?ಅದೇ ಆಷಾಢ ಮಾಸ.
ಆಷಾಢ ಮಾಸ ಈಗಾಗಲೇ ಲಗ್ಗೆ ಇಟ್ಟಾಗಿದೆ. ಮಳೆಗಾಲದಲ್ಲಿ ಬರುವ ಆಷಾಢ ಮಾಸವನ್ನು ಶೂನ್ಯ ಮಾಸ, ಅಮಂಗಳಕರ ಮಾಸವೆಂದೂ ಕರೆಯುತ್ತಾರೆ. ಇದಕ್ಕೆ ಸಾಂಪ್ರದಾಯಿಕ ಕಾರಣ ಏನೇ ಇರಬಹುದು. ಆದರೆ ಹಿಂದೂ ಸಂಸ್ಕೃತಿಯ ಪ್ರತಿಯೊಂದು ಆಚರಣೆಯ ಹಿಂದೆಯೊಂದು ಮಹತ್ವದ ಕಾರಣವಂತೂ ಇದ್ದೇ ಇರುತ್ತದೆ.ಈ ಮಾಸಕ್ಕೆ ತನ್ನದೇ ಆದ ವೈಶಿಷ್ಟ್ಯಗಳಿವೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಆಷಾಢ ಮಾಸದಲ್ಲಿ ಗುರುವಿನ ಆರಾಧನೆಯು ಹೆಚ್ಚು ಫಲಪ್ರದವಾಗಿರುತ್ತದೆ. ಈ ತಿಂಗಳಲ್ಲಿ ಶ್ರೀ ಹರಿ ವಿಷ್ಣುವನ್ನು ಪೂಜಿಸುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ. ಈ ಮಾಸದಲ್ಲಿ ಗಂಗೆ ಪೂಜೆಯು ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಇದರಿಂದ ಸಂಪತ್ತಿನ ಹೆಚ್ಚಳವೂ ಆಗಲಿದೆ. ಆಷಾಢ ಮಾಸದಲ್ಲಿ ಸೂರ್ಯನನ್ನು ಪೂಜಿಸಲಾಗುತ್ತದೆ. ಜಗನ್ನಾಥ ರಥಯಾತ್ರೆಯು ಈ ಮಾಸದಲ್ಲೇ ಬರುತ್ತದೆ. ಈ ಮಾಸದಲ್ಲಿ ದೇವಶಯನಿ ಏಕಾದಶಿ ಆರಂಭವಾಗುತ್ತದೆ. ಈ ಮಾಸದಲ್ಲೇ ವಿಷ್ಣು ವಿಶಾಂತ್ರಿಗಾಗಿ ಕ್ಷೀರ ಸಮುದ್ರಕ್ಕೆ ಹೋಗುತ್ತಾನೆ. ಇದನ್ನು ಚಾತುರ್ಮಾಸ ಎಂದೂ ಕರೆಯುವರು.
ಆಷಾಢ ಮಾಸದಲ್ಲಿ ಸೂರ್ಯ ಪೂಜೆ ಮಾಡುವುದರಿಂದ ಆತ್ಮ ವಿಶ್ವಾಸ ಹೆಚ್ಚುತ್ತದೆ. ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಆಷಾಢ ಮಾಸದಲ್ಲಿ ಸೂರ್ಯೋದಯಕ್ಕೆ ಮುಂಚಿತವಾಗಿ ಸ್ನಾನ ಮಾಡಿ ಮತ್ತು ಉದಯಿಸುತ್ತಿರುವ ಸೂರ್ಯನಿಗೆ ನೀರನ್ನು ಅರ್ಪಿಸಿ, ಅದನ್ನು ಪೂಜಿಸುವುದರಿಂದ ರೋಗಗಳು ಗುಣವಾಗುತ್ತವೆ. ಭವಿಷ್ಯ ಪುರಾಣದಲ್ಲಿ ಶ್ರೀ ಕೃಷ್ಣನು ತನ್ನ ಮಗನಿಗೆ ಸೂರ್ಯನ ಆರಾಧನೆಯ ಮಹತ್ವವನ್ನು ತಿಳಿಸಿದ್ದಾನೆ. ಶ್ರೀ ಕೃಷ್ಣನು ಸೂರ್ಯ ಮಾತ್ರ ಕಣ್ಣಿಗೆ ಕಾಣುವ ದೇವರು ಎಂದು ಹೇಳಿದ್ದಾನೆ. ಸೂರ್ಯನನ್ನು ಪ್ರಾಮಾಣಿಕವಾಗಿ ಪೂಜಿಸುವುದರಿಂದ ಎಲ್ಲಾ ಆಸೆಗಳು ಈಡೇರುತ್ತವೆ. ಸೂರ್ಯ ಪೂಜೆಯಿಂದ ಅನೇಕ ಋಷಿ ಮುನಿಗಳು ದೈವಿಕ ಜ್ಞಾನವನ್ನು ಪಡೆದಿದ್ದಾರೆ ಎಂಬ ನಂಬಿಕೆ ಇದೆ.
ಮೈಸೂರಿನಲ್ಲಿ ಆಷಾಢದ ಶುಕ್ರವಾರಗಳಂದು ನಾಗದೇವತೆ ಬೆಟ್ಟದ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲುತ್ತದೆ. ಸಹಸ್ರಾರು ಭಕ್ತಾದಿಗಳು ಜಿಟಿಜಿಟಿ ಮಳೆ,ಚಳಿಯನ್ನು ಲೆಕ್ಕಿಸದೆ ಮೈಲುದ್ದದ ಕ್ಯೂ ನಲ್ಲಿ ನಿಂತು ದೇವಿಯ ದರ್ಶನ ಪಡೆಯುವುದೊಂದು ವಿಶೇಷ. ಆ ದಿನಗಳಲ್ಲಿ ದೇವಾಲಯದಲ್ಲಿ ವಿಶೇಷ ಅಲಂಕಾರವಿರುತ್ತದೆ. ಇನ್ನು ಸಂಪ್ರದಾಯಸ್ಥರ ಮನೆಗಳಲ್ಲಿ , ಆಷಾಢ ಶುಕ್ರವಾರದಂದು ಲಕ್ಷ್ಮಿ ಪೂಜೆ ಮಾಡಿ, ಪಾಯಸ/ತಂಬಿಟ್ಟು ನೈವೇದ್ಯ ಸಮರ್ಪಿಸಿ ಮುತ್ತೈದೆಯರಿಗೆ ಅರಶಿನ-ಕುಂಕುಮ ಕೊಡುವ ಪದ್ಧತಿಯನ್ನು ಬಹಳ ಶ್ರದ್ಧೆಯಿಂದ ಆಚರಿಸುತ್ತಾರೆ. ಸಾಮಾನ್ಯವಾಗಿ ಶುಭಕಾರ್ಯಗಳಾದ ಮದುವೆ. ಮುಂಜಿ, ಗೃಹಪ್ರವೇಶ ಇತ್ಯಾದಿಗಳನ್ನು ಆಷಾಢ ಮಾಸದಲ್ಲಿ ಹಮ್ಮಿಕೊಳ್ಳುವುದಿಲ್ಲ.
ನಮ್ಮ ಸುಪ್ರಸಿದ್ಧ ಜಾನಪದ ಒಂದು ಹಾಡಿನಂತೆ,ಆಷಾಢ ಮಾಸ ಬಂದೀತವ್ವ ಅಣ್ಣ ಬರಲಿಲ್ಲ ಯಾಕ ಕರಿಯಾಕ.. ಅಂತ ಮದುವೆ ಮಾಡಿ ಹೆಣ್ಣನ್ನು ಗಂಡನ ಮನೆಗೆ ಕಳುಹಿಸಿದ ಮೇಲೆ ಆಷಾಡ ಮಾಸದಲ್ಲಿ ತವರಿಗೆ ನವ ವಧುವನ್ನು ಕರೆದುಕೊಂಡು ಹೋಗುವ ಸಂಭ್ರಮ. ಮದುವೆಯಾದ ಹೊಸತರಲ್ಲಿ ಅತ್ತೆ ಸೊಸೆ ಹಾಗೂ ಅತ್ತೆ ಅಳಿಯ ಒಂದೇ ಬಾಗಿಲಿನಿಂದಓಡಾಡಬಾರದು ಒಂದೇ ಮನೆಯಲ್ಲಿ ಇರಬಾರದು ಎಂಬುದು ನಮ್ಮ ಹಿರಿಯರು ನಡೆಸಿಕೊಂಡು ಬಂದ ಪದ್ಧತಿ ಈಗಲೂ ನಾವು ನೋಡುತ್ತಾ ಬಂದಿದ್ದೇವೆ. ಹಾಗಾಗಿ ತನ್ನ ಮನದನ್ನೆ ತನ್ನ ತವರಿಗೆ ಕಳಿಸಿದ ಪತಿರಾಯ ತಾನು ಸಹ ಅತ್ತೆಯ ಮನೆಗೆ ಬರಲಾಗದೆ ಉಭಯ ಸಂಕಟ ಪಡುವನು..ನಮ್ಮ ಹಿರಿಯರು ಮಾಡಿದ ಶಾಸ್ತ್ರ ಸಂಪ್ರದಾಯ
ಗಳೆಲ್ಲವೂ ವೈಜ್ಞಾನಿಕ ತಳಹದಿಯ ಮೇಲೆ ನಿಂತಿರುವುದು .ಆಗತಾನೇ ಮದುವೆಯಾಗಿ ಹೋದ ಹೆಣ್ಣು ಮಗಳು ತವರನ್ನು ಪದೇಪದೇ ಜ್ಞಾಪಿಸಿಕೊಳ್ಳುತ್ತಾಳೆ ತನ್ನವರನ್ನ ನೋಡಬೇಕೆಂಬ ಹಂಬಲಿಸುತ್ತಾಳೆ ಇದನ್ನರಿತು ಹಿರಿಯರು ಈ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಅಲ್ಲದೆ ಈ ಅಗಲಿಕೆಯು ಗಂಡ ಹೆಂಡತಿಯರಲ್ಲಿ ಪ್ರೀತಿ ಮತ್ತು ಕಾತುರತೆಯಿಂದ ಮಧುರ ಬಾಂಧವ್ಯವನ್ನ ಬೆಸೆಯುವ ಕೊಂಡಿಯಾಗುತ್ತದೆ ಎಂದರೆ ತಪ್ಪಾಗಲಾರದು.
ಆಷಾಢ ಬಂತೆಂದರೆ ಮಳೆಗಾಲ ಪ್ರಾರಂಭವಾಗುತ್ತದೆ. ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣ ಬೆಳೆಸುವುದು ಕಷ್ಟ. ಕೃಷಿಯ ಕಡೆಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಆದ್ದರಿಂದ ಬೇರೆ ಕಾರ್ಯಗಳನ್ನು ಬದಿಗೊತ್ತಬೇಕಾಗುತ್ತದೆ. ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳನ್ನು ಆಷಾಢದಲ್ಲಿ ತವರಿಗೆ ಕಳಿಸುವ ಪದ್ಧತಿಯೂ ಇದೆ. ಪತಿಯು ಕೃಷಿ ಕೆಲಸ ಅಥವಾ ತನ್ನ ನಿರ್ದಿಷ್ಟ ಕಾರ್ಯದತ್ತ ಹೆಚ್ಚು ಗಮನ ಕೊಡಲಿ ಎಂಬುದು ಇದರ ಹಿಂದಿನ ಉದ್ದೇಶ. ಮುಹೂರ್ತಗಳು ನಿಷೇಧವಾಗಿವೆ ಎಂದ ಮಾತ್ರಕ್ಕೆ ಆಷಾಢ ಒಳ್ಳೆಯದಲ್ಲ ಎಂದೇನಲ್ಲ. ಪುರಿ ಜಗನ್ನಾಥನ ರಥಯಾತ್ರೆ, ಪಂಢರಾಪುರ ದೇವರ ದರ್ಶನ ನಡೆಯುವುದು ಆಷಾಢದಲ್ಲಿಯೇ. ಅಷ್ಟೇ ಅಲ್ಲ, ಯತಿಗಳು ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಯಂದು ಚಾತುರ್ವಸ್ಯ ವ್ರತ ಆರಂಭಿಸುತ್ತಾರೆ. ಈ ಸಮಯವು ಸಂಚಾರಕ್ಕೆ ಯೋಗ್ಯವಾಗಿ ರುವುದಿಲ್ಲ ಎಂಬುದು ಇದಕ್ಕೆ ಕಾರಣ.ಜಲಾಶಯಗಳ ಇಂದಿನ ನೀರಿನ ಮಟ್ಟ
ಆಷಾಢವೆಂದರೆ ಸುತ್ತಲೂ ಕಾರ್ಮೋಡ ಕವಿದು, ಸಣ್ಣನೆ ಬೀಸುವ ಕೆಲವೊಮ್ಮೆ ಜೋರಾಗಿ ಬೀಸುವ ಗಾಳಿಯ ಅರ್ಭಟ ಮಳಿಯೂ ಕೂಡ ಜೋರಾಗಿ ಅರ್ಭಟಿಸುವ ಸಂಭವ ಇದ್ದೇ ಇರುತ್ತೆ.ಆಷಾಢ ಮಾಸದಲ್ಲಿ ಭಾರೀ ಮಳೆಯಾಗುತ್ತದೆ. ಇದರೊಂದಿಗೆ ಕೃಷಿಯಾಧಾರಿತ ಚಟುವಟಿಕೆಗಳೂ ಬಿರುಸು ಪಡೆಯುತ್ತದೆ. ಹೀಗಾಗಿ ಎಲ್ಲೆಡೆಯೂ ಕೃಷಿ ಚಟುವಟಿಕೆಗಳು ನಡೆಯುತ್ತಿರುತ್ತವೆ. ಇದರಿಂದ ಮನೆಮಂದಿಗೂ ಕೈ ತುಂಬಾ ಕೆಲಸಗಳಿರುವದರಿಂದ ಮಂಗಳ ಕಾರ್ಯಗಳು ನಡೆಯುವುದು ತುಂಬಾ ವಿರಳ.ಹಿರಿಯರು ದೈವಿಕ ಕಾರಣವನ್ನು ನೀಡಿ ಶುಭ ಕಾರ್ಯಗಳಿಗೆ ನಿಷಿದ್ಧ ಹೇರಿದ್ದರೂ ಇದರ ಹಿಂದೆಯೂ ಒಂದು ಕಾರಣವಿದೆ. ಮಳೆಗಾಲವೆಂದರೆ ಯಾವುದೇ ಕೆಲಸಕ್ಕೆ ಅಡ್ಡಿ ಆತಂಕಗಳು ಉಂಟಾಗುವುದು ಸಹಜ. ಮಾತ್ರವಲ್ಲದೆ ಅತಿಥಿಗಳ ಉಪಚಾರದಲ್ಲೂ ಸಮಸ್ಯೆಗಳಾಗುತ್ತವೆ. ಹೀಗಾಗಿ ಅತಿಥಿಗಳು ಬೇಸರಗೊಳ್ಳಬಹುದು. ಈ ಕಾರಣದಲ್ಲಿ ಈ ಅವಧಿಯಲ್ಲಿ ಶುಭ ಕಾರ್ಯಗಳಿಗೆ ಮನ್ನಣೆ ನೀಡುವುದಿಲ್ಲ. ಏನಾದರೂ ಸರಿ ನಮ್ಮೆಲ್ಲ ಸಂಸ್ಕೃತಿ ಸಂಪ್ರದಾಯಕ್ಕೆ ಅದರದೇ ಆದ ಒಂದು ಹಿನ್ನೆಲೆಯಿದೆ.ಇಂತಹ ಆಚರಣೆಗಳು ನಮ್ಮೆಲ್ಲರಲ್ಲಿ ಸವಿನೆನಪುಗಳನ್ನು ಬಿತ್ತುತ್ತವೆ.ಇಂತಹ ಮಧುರ ಸಿಹಿ ನೆನಪನ್ನು ಉಳಿಸುವ ಆಷಾಢ ಮಾಸವು , ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಎಲ್ಲರಿಗೂ ಶುಭವನ್ನುಂಟುಮಾಡಲಿ.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
- ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!