ಬದಲಾದ ಜೀವನ ಶೈಲಿಯಿಂದಾಗಿ ಇಂದು ಪ್ರತೀಯೊಬ್ಬರೂ ನಿತ್ಯ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಯಾವುದೇ ಆರೋಗ್ಯ ಸಮಸ್ಯೆಯಾದರೂ ನಿಸರ್ಗದಲ್ಲಿ ಇದಕ್ಕೆ ಪರಿಹಾರವಿದ್ದು, ಸರಿಯಾದ ಮಾರ್ಗದಲ್ಲಿ ನಾವು ಈ ಮಾರ್ಗವನ್ನು ಅನುಸರಿಸದರೆ ಖಂಡಿತಾ ನಮ್ಮ ಎಲ್ಲ ಆರೋಗ್ಯ ಸಮಸ್ಯೆಗಳಿಂದ ಹೊರಬರಬಹುದು. ಹೀಗೆ ನಿಸರ್ಗದಲ್ಲಿ ಸಿಗುವ ಆರೋಗ್ಯ ಸಮಸ್ಯೆಗಳನ್ನು ದೂರಮಾಡುವ ನೈಸರ್ಗಿಕ ಔಷಧಿಗಳಲ್ಲಿ ತ್ರಿಫಲಾ ಚೂರ್ಣ ಕೂಡ ಒಂದು. ತ್ರಿಫಲ ಚೂರ್ಣ ಪಿತ್ತ ,ಕಫ ಹೀಗೆ ಅನೇಕ ಸಮಸ್ಯೆಗಳನ್ನು ನಿರ್ಮೂಲನೆ ಮಾಡುತ್ತದೆ. ಹಾಗಾದರೆ ಏನಿದು ತ್ರಿಫಲ? ಯಾವುದನ್ನು ತ್ರಿಫಲ ಎಂದು ಕರೆಯಲಾಗುತ್ತದೆ? ಇದರಿಂದಾಗುವ ಆರೋಗ್ಯಕರ ಪ್ರಯೋಜನಗಳು ಏನು? ಎನ್ನುವುದನ್ನು ನಾವಿಂದು ನೋಡೋಣ.
ಸಂಸ್ಕೃತದಲ್ಲಿ “ತ್ರಿ” ಎಂದರೆ “ಮೂರು” ಮತ್ತು “ಫಲ” ಎಂದರೆ “ಹಣ್ಣುಗಳು” ಎಂದರ್ಥ. ಅಳಲೆ ಕಾಯಿಯ ಜೊತೆಗೆ ತಾರೇಕಾಯಿ ಮತ್ತು ನೆಲ್ಲಿಕಾಯಿಗಳನ್ನು ಬಳಸಿ ಮಾಡುವ ಒಂದು ಔಷಧೀಯ ಪುಡಿ. ಇದನ್ನು ಬೆಟ್ಟದ ನೆಲ್ಲಿಕಾಯಿ, ಕರಕ ಕಾಯಿ (ಹರೀತಕಿ) ಮತ್ತು ತಾರೆಕಾಯಿ ಅಥವಾ ತಂದ್ರಿ ಕಾಯಿ (ಬಿಭಿತಕಿ) ಎಂಬ ಮೂರು ವಸ್ತುಗಳಿಂದ ತಯಾರಿಸಲಾಗುತ್ತದೆ. ಈ ಪುಡಿಯನ್ನುಆಯುರ್ವೇದದಲ್ಲಿ ತ್ರಿಫಲ ಚೂರ್ಣವೆನ್ನುವರು, ಇದನ್ನು “ತ್ರಿದೋಶಿಕ್ ರಸಾಯನ” ಎಂದೂ ಸಹ ಕರೆಯಲಾಗುತ್ತದೆ. ಮಾನವ ಜೀವನವನ್ನು ನಿಯಂತ್ರಿಸುವ ಮೂರು ದೋಷಗಳನ್ನು (ವಾತ, ಪಿತ್ತ ಮತ್ತು ಕಫ). ಸಮತೋಲನಗೊಳಿಸುವ ಮತ್ತು ಪುನರುಜ್ಜೀವನಗೊಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. .
ತ್ರಿಫಲಗಳ ವಿಶೇಷ ಗುಣಗಳು
ಬೆಟ್ಟದ ನೆಲ್ಲಿಕಾಯಿ: ಬೆಟ್ಟದ ನೆಲ್ಲಿಕಾಯಿಯಲ್ಲಿ ಗ್ಲುಕೋಸ್, ವಿಟಮಿನ್ ಮತ್ತು ಪ್ರೋಟೀನ್ ಅಂಶಗಳು ಯಥೇಚ್ಛವಾಗಿರುತ್ತದೆ. ಬೆಟ್ಟದ ನೆಲ್ಲಿಕಾಯಿ ಪಿತ್ತ ದೋಷವನ್ನು ಸರಿಪಡಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ದೇಹವನ್ನು ತಂಪಾಗಿಡುತ್ತದೆ. ಅಲ್ಲದೆ ರಕ್ತ ಸಂಚಾರವನ್ನು ಸರಾಗ ಮಾಡುತ್ತದೆ ಅಂತೆಯೇ ಜ್ವರವನ್ನು ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ನೀಡುತ್ತದೆ.
ತಾರೆಕಾಯಿ: ತಾರೆಕಾಯಿ ಘಾಟು ರುಚಿಯನ್ನು ಹೊಂದಿರುತ್ತದೆ. ಇದರಲ್ಲಿ ವಿಟಮಿನ್ ಎ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆಯನ್ನು ಸರಿಪಡಿಸುತ್ತದೆ. ಅಲರ್ಜಿಯಂತಹ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ. ಕರುಳಿನಲ್ಲಿ ಇರುವಂತಹ ಕಲ್ಮಶವನ್ನು ನಾಶ ಮಾಡುತ್ತದೆ. ಅಲ್ಲದೆ ಗಂಟಲಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಕಫ ಕಡಿಮೆ ಮಾಡುವುದಲ್ಲದೆ ಉಬ್ಬಸವನ್ನು ಕಡಿಮೆ ಮಾಡುತ್ತದೆ.
ಕರಕ ಕಾಯಿ: ತ್ರಿಫಲ ಚೂರ್ಣ ಗಳಲ್ಲಿ ಮುಖ್ಯವಾದ ಫಲ ಈ ಕರಕ ಕಾಯಿ. ಇದರಲ್ಲಿ ಟೆರ್ಪೆನ್ಸ್, ಪಾಲಿಫಿನಾಲ್ಸ್, ಆಂಥೋಸಯಾನಿನ್ ಮತ್ತು ಫ್ಲೇವೊನೈಡ್ ಗಳಂತಹ ಫೈಟೊಕೆಮಿಕಲ್ (ರೋಗ ನಿರೋಧ ಅಂಶ) ಗಳಿವೆ. ಭೇದಿಯನ್ನು ತಡೆಗಟ್ಟುತ್ತದೆ. ಎದೆಯ ಉರಿಯನ್ನು ಕಡಿಮೆ ಮಾಡುತ್ತದೆ, ನಾಡಿಗೆ ಸಂಬಂಧ ಸಮಸ್ಯೆಯನ್ನು ತೊಲಗಿಸುತ್ತದೆ,ಶಾರೀರಿಕ ಬಲಹೀನತೆ ಯನ್ನು ಸರಿಪಡಿಸುತ್ತದೆ ಮತ್ತು ವಾತ ಸಂಬಂದಿಸಿದ ಕಾಯಿಲೆಯನ್ನು ಹತ್ತಿರ ಬರಲು ಬಿಡುವುದಿಲ್ಲ .
ತ್ರಿಫಲ ಚೂರ್ಣ ಮಾಡುವ ಬಗೆ : 3 ಬೆಟ್ಟದ ನೆಲ್ಲಿಕಾಯಿ, 2 ತಾರೆಕಾಯಿ ಮತ್ತು 1 ಕರಕ ಕಾಯಿಯನ್ನು ಚೆನ್ನಾಗಿ ಒಣಗಿಸಿ ನಂತರ ಬೀಜಗಳನ್ನು ಹೊರತೆಗೆದು ಮೇಲಿನ ಭಾಗವನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ತ್ರಿಫಲ ಚೂರ್ಣ ಎನ್ನುತ್ತಾರೆ.
ತ್ರಿಫಲ ಚೂರ್ಣ ಬಳಸುವ ಬಗೆ : ಪ್ರತಿದಿನ 1 ರಿಂದ 5 ಗ್ರಾಂ ತ್ರಿಫಲ ಚೂರ್ಣವನ್ನು ಪ್ರತಿಯೊಬ್ಬರು ತೆಗೆದುಕೊಳ್ಳಬಹುದು. ರಾತ್ರಿ ಹೊತ್ತು ಹಾಲು ಅಥವಾ ಜೇನು ತುಪ್ಪದ ಜೊತೆ ಇದನ್ನು ತೆಗೆದುಕೊಳ್ಳಬಹುದು.
ತ್ರಿಫಲದ ಪ್ರಯೋಜನಗಳು
- ತ್ರಿಫಲಾ ವಿವಿಧ ಸೂಕ್ಷ್ಮಾಣುಜೀವಿಗಳ ವಿರುದ್ಧ ಹೋರಾಡುತ್ತದೆ. ಜೊತೆಗೆ ಇದು ಹೆಚ್‌ಐವಿ ವಿರುದ್ಧ ಹೋರಾಡಿ ಗುಣಪಡಿಸುವ ಪೋಷಕಾಂಶಗಳನ್ನು ಹೊಂದಿದೆ.
- ದಂತ ಆರೈಕೆಗಾಗಿ ತ್ರಿಫಲವನ್ನು ಉಪಯೋಗಿಸುತ್ತಾರೆ
ತ್ರಿಫಲಾ ಮೌತ್‌ವಾಶ್ ಆಗಿ ಬಳಕೆ ಮಾಡಲಾಗುತ್ತದೆ. - ತ್ರಿಫಲವನ್ನು ಆಯಾಸ, ಒತ್ತಡ, ಕ್ಷಯರೋಗ, ನ್ಯುಮೋನಿಯಾ, ಏಡ್ಸ್ ನಂತರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
- ಮಲಬದ್ದತೆ ಆಗುವ ಸಂದರ್ಭದಲ್ಲಿ 5 ಗ್ರಾಂ ತ್ರಿಫಲ ಚೂರ್ಣವನ್ನು ಜೇನು ತುಪ್ಪದಲ್ಲಿ ಉಂಡೆಯ ರೀತಿ ಮಾಡಿ ಅರ್ಧ ಲೋಟ ಹಾಲಿನ ಜೊತೆ ಕುಡಿದರೆ ಮಲಬದ್ದತೆ ಸಮಸ್ಯೆ ಪರಿಹಾರ ವಾಗುತ್ತದೆ.
- ಚಮಚ ತ್ರಿಫಲ ಚೂರ್ಣವನ್ನು 2 ಚಮಚ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಶೋಧಿಸಿ ತಲೆಗೆ ಹಚ್ಚಿಕೊಂಡರೆ ತಲೆಯ ಕೂದಲು ತುಂಬಾ ಚೆನ್ನಾಗಿ ಬೆಳೆಯುತ್ತದೆ. ಚರ್ಮದ ಸಮಸ್ಯೆ, ಮುಟ್ಟಿನ ಸಮಸ್ಯೆ ಮತ್ತು ತೂಕ ನಿಯಂತ್ರಣಕ್ಕೂ ತ್ರಿಫಲ ಚೂರ್ಣ ರಾಮಬಾಣ.
- ತ್ರಿಫಲ ಚೂರ್ಣ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅದರ ಮುಖಾಂತರ ವಿವಿಧ ತರಹದ ಜ್ವರಗಳೊಡನೆ ಹೋರಾಡಲು ಸಹಾಯ ಮಾಡುತ್ತದೆ.
- ತ್ರಿಫಲ ಚೂರ್ಣವು ನಮ್ಮ ದೇಹದ ಪಚನ ಕ್ರಿಯೆಯನ್ನು ಹೆಚ್ಚಿಸುವ ಮುಖಾಂತರ ಆಹಾರ ಉತ್ತಮವಾಗಿ ಜೀರ್ಣವಾಗುವಂತೆ ಮಾಡುತ್ತದೆ ಅಲ್ಲದೆ ದೇಹದಲ್ಲಿ ಕೊಬ್ಬಿನ ಅನಾವಶ್ಯಕ ಶೇಖರಣೆಯನ್ನು ತಡೆಗಟ್ಟುತ್ತದೆ.
- ತ್ರಿಫಲ ಚೂರ್ಣ ರಕ್ತ ಶುದ್ದಿ ಮಾಡಲು ಸಹಾಯಕಾರಿ ರಕ್ತದ ಸಂಚಾರವನ್ನು ಸುಗಮಗೊಳಿಸುತ್ತದೆ. ಹೀಗೆ ಶ್ವಾಸಕೋಶ ಹಾಗು ಯಕೃತ್ತ ಶುದ್ಧ ಮಾಡಲು ಸಹಾಯ ಮಾಡುತ್ತದೆ. ಶ್ವಾಸಕೋಶ ಹಾಗು ಯಕೃತ್ ಸಂಬಂಧಿಸಿದ ಹಲವಾರು ಕಾಯಿಲೆಗಳನ್ನು ದೂರಮಾಡುತ್ತದೆ.
- ತ್ರಿಫಲ ಎಣ್ಣೆ : ಇದನ್ನು ಎಣ್ಣೆಯೊಂದಿಗೆ ತ್ರಿಫಲ ಪುಡಿಯನ್ನು ಕುದಿಸಿ ತಯಾರಿಸಲಾಗುತ್ತದೆ. ಬೊಜ್ಜು ಮತ್ತು ತುರಿಕೆಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.
- ತ್ರಿಫಲ ಒಂದು ನೈಸರ್ಗಿಕವಾಗಿ ದೇಹವನ್ನು ಸ್ವಚ್ಛ ಮಾಡುವ ಪದಾರ್ಥವಾಗಿದ್ದು ದೇಹದಲ್ಲಿ ಬೇಡದ ತ್ಯಾಜ್ಯ ಗಳನ್ನು ಮತ್ತು ವಿಷಕಾರಿ ಅಂಶಗಳನ್ನು ದೂರ ಮಾಡುತ್ತದೆ.
- ಲಿವರ್ ಭಾಗದ ಸ್ವಚ್ಛತೆಯಲ್ಲಿ ಇದು ನೆರವಾಗುತ್ತದೆ.
- ತ್ರಿಫಲ ಸೇವನೆ ಮಾಡುವುದರಿಂದ ದೇಹದ ತೂಕವನ್ನು ಆರೋಗ್ಯಕರವಾಗಿ ನಿರ್ವಹಣೆ ಮಾಡಿಕೊಳ್ಳಬಹುದು.
ಇದು ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸಿ, ಜೀರ್ಣಾಂಗ ವ್ಯವಸ್ಥೆಯನ್ನು ವೃದ್ಧಿಸಿ ದೇಹದಲ್ಲಿರುವ ಅಧಿಕವಾಗಿರುವ ಕೊಬ್ಬಿನಂಶವನ್ನು ಹೊರಗೆ ಹಾಕುತ್ತದೆ. ಇದರಿಂದ ದೇಹದ ತೂಕ ಸುಲಭ ವಾಗಿ ನಿಯಂತ್ರಣವಾಗುತ್ತದೆ. - ತ್ರಿಫಲದ ನಿಯಮಿತ ಸೇವನೆಯು ಕಣ್ಣುಗಳಿಗೆ ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಗ್ಲುಕೋಮಾ, ಕಾಂಜಂಕ್ಟಿವಿಟಿಸ್, ಕಣ್ಣಿನ ಪೊರೆ ಮತ್ತು ಕಳಪೆ ದೃಷ್ಟಿಯಂತಹ ಕಣ್ಣಿನ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ನೆನಪಿನಲ್ಲಿಡಬೇಕಾದ ಅಂಶಗಳು :
ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ತ್ರಿಫಲ ಚೂರ್ಣ ಆರೋಗ್ಯಕರ ಅಂಶಗಳನ್ನು ಹೊಂದಿದೆಯಾದರೂ ಇದರ ಅತಿಯಾದ ಬಳಕೆ ಹಲವರಲ್ಲಿ ಅಡ್ಡ ಪರಿಣಾಮಗಳನ್ನು ಮಾಡಬಹುದು. ಮಾರುಕಟ್ಟೆಯಲ್ಲಿ ಇದು ಪೌಡರ್, ಟ್ಯಾಬ್ಲೆಟ್ ಮತ್ತು ಕ್ಯಾಪ್ಸುಲ್ ರೂಪದಲ್ಲಿ ಸಿಗುತ್ತದೆ. ವೈದ್ಯರು ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ಡೋಸ್ ಹೇಳುತ್ತಾರೆ. ಹೀಗಾಗಿ ಆಯುರ್ವೇದಿಕ್ ವೈದ್ಯರನ್ನು ಸಂಪರ್ಕಿಸಿ ಅವರಿಂದ ಮಾಹಿತಿ ಪಡೆದು ಕೊಳ್ಳುವುದು ಉತ್ತಮ. ಗರ್ಭಿಣಿಯರು ಅಥವಾ ಬಾಣಂತಿಯರು ಅಥವಾ ಬೇರೆ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಇದನ್ನು ತೆಗೆದುಕೊಳ್ಳುವ ಮುಂಚೆ ಆಯುರ್ವೇದ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು.
ಸೌಮ್ಯ ಸನತ್ ✍️
More Stories
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ