November 15, 2024

Newsnap Kannada

The World at your finger tips!

deepa1

ಸವಕಲಾಗಿದೆ ಧನ್ಯವಾದಗಳು ಎಂಬ ಪದ ಪ್ರೀತಿಯ ಭಾವದ ಮುಂದೆ………..

Spread the love

ಗೆಳೆತನದ ಶುಭಾಶಯಗಳ ವಿನಿಮಯದೊಂದಿಗೆ ದಿನಾಚರಣೆ ಮುಗಿಸಿದ್ದೇವೆ.

” ದಾರಿಯಲ್ಲಿ ಒಬ್ಬನೇ ನಡೆಯುವಾಗ ಈ ದಾರಿ ಬೇಗನೆ ಕೊನೆಯಾಗಬಾರದೆ ಎಂದು ಯೋಚಿಸುತ್ತಿದ್ದೆ. ಆದರೆ ಅದೇ ದಾರಿಯಲ್ಲಿ ಇಂದು ನೀವು ಜೊತೆಯಾಗಿರುವಾಗ ದಾರಿ ಎಂದಿಗೂ ಕೊನೆಯಾಗದಿರಲಿ ಎಂದೆನಿಸುತ್ತಿದೆ. “

” ನನ್ನ ಪ್ರೀತಿಯ ಸ್ನೇಹಿತರೆ, ನೀವು ಇಲ್ಲಿಯವರೆಗೆ ತೋರಿದ ಪ್ರೀತಿ ಗೌರವ ಅಭಿಮಾನಕ್ಕೆ ಅಕ್ಷರಗಳಿಂದ ಉತ್ತರಿಸಿದರೆ ಅದು ನನಗೆ ತೃಪ್ತಿಯಾಗುವುದಿಲ್ಲ…….

ಒಂದು ವೇಳೆ ನಾನು ಸರ್ವಶಕ್ತ ದೇವರಾಗಿದ್ದಿದ್ದರೆ…..

ಈ ದೇಶದ ಒಬ್ಬರನ್ನೂ ಹಸಿವಿನಿಂದ ಸಾಯಲು ಬಿಡುತ್ತಿರಲಿಲ್ಲ….

ಒಂದೇ ಒಂದು ಹೆಣ್ಣನ್ನು ಆಕೆಯ ಮನಸ್ಸಿಗೆ ವಿರುದ್ದವಾಗಿ ಬಲವಂತ ಮಾಡದಂತೆ ತಡೆಯುತ್ತಿದ್ದೆ…..

ಮನುಷ್ಯನನ್ನು ಸೇರಿ ಒಂದು ಜೀವಿಯೂ ಅಪಘಾತ – ಅನಾರೋಗ್ಯದಿಂದ ಸಾಯದಂತೆ ನೋಡಿಕೊಳ್ಳುತ್ತಿದ್ದೆ…..

ಪ್ರಕೃತಿಯ ವಿರುದ್ದವಾಗಿ ಹೋಗದೆ ಸಹಜ ಸಾವುಗಳನ್ನು ತಡೆಯದೆ ಅವುಗಳನ್ನು ಸಂಭ್ರಮಿಸುವ ಮಾನಸಿಕ ಸ್ಥಿತಿಯನ್ನು ಉಂಟುಮಾಡುತ್ತಿದ್ದೆ…….

ಎಲ್ಲಾ ಪ್ರೇಮಿಗಳು ಅವರು ಇಷ್ಟಪಡುವ ಸಂಗಾತಿಯೊಂದಿಗೆ ಬಾಳು ನಡೆಸುವಂತೆ ಮೇಲ್ವಿಚಾರಣೆ ನಡೆಸುತ್ತಿದ್ದೆ‌……

ರೈತರು – ಸೈನಿಕರನ್ನು ಅವರ ಕೆಲಸಗಳಿಂದ ಮುಕ್ತಗೊಳಿಸಿ ಅವರ ಇಷ್ಟದ ಕೆಲಸ ಕೊಡುತ್ತಿದ್ದೆ. ಆಹಾರ ಮತ್ತು ರಕ್ಷಣೆಯ ಜವಾಬ್ದಾರಿ ನಾನೇ ಹೊರುತ್ತಿದ್ದೆ….,..

ಕೊಲೆ – ದರೋಡೆ – ಅನ್ಯಾಯ – ಭ್ರಷ್ಟಾಚಾರಗಳೆಂಬ ಪದಗಳೇ ಇರದಂತೆ ಆಡಳಿತ ನಡೆಸುತ್ತಿದ್ದೆ…….

ಮನುಷ್ಯನ ರೂಪ – ಬಣ್ಣ – ಗುಣ – ಆಹಾರಗಳಲ್ಲಿ ಭಿನ್ನತೆ ಕಾಪಾಡಿದರೂ ಶ್ರೇಷ್ಠ ಮತ್ತು ಕನಿಷ್ಠ ತಾರತಮ್ಯ ಇಲ್ಲದಂತೆ ಸೃಷ್ಟಿಸುತ್ತಿದ್ದೆ…….

ವೇಷ ಭೂಷಣಗಳ ಹಂಗಿಲ್ಲದೆ ಹುಟ್ಟಿನಿಂದ ಸಾಯುವವರೆಗೂ ಚರ್ಮದ ಹೊದಿಕೆಯನ್ನೇ ಶಾಶ್ವತ ಮಾಡುತ್ತಿದ್ದೆ……..

ಇನ್ನೂ ಇನ್ನೂ ಇನ್ನೂ……..

ಅತಿಮುಖ್ಯವಾಗಿ,…….

ನನ್ನ ಈ ಸ್ನೇಹಿತರ ಕಣ್ಗಳಲ್ಲಿ ಒಂದೇ ಒಂದು ನೋವಿನ ಹನಿಯೂ ಜಿನುಗದಂತೆ ನೋಡಿಕೊಂಡು ಅವರುಗಳು ಸದಾ ತಾವು ಬಯಸಿದ ರೀತಿಯಲ್ಲಿ ನಗುನಗುತ್ತಾ ಬದುಕು ಸಾಗಿಸುವ ಕಲೆಯನ್ನು ಕಲಿಸಿಕೊಡುತ್ತಿದ್ದೆ……..

ಏನು ಮಾಡಲಿ. ನಾನೊಬ್ಬ ನರಮಾನವ.
ನಿಮ್ಮ ನಲಿವಿಗೆ ಜೊತೆಯಾಗದಿದ್ದರೂ ನಿಮ್ಮ ನೋವಿಗೆ ಜೊತೆಯಾಗುವಾಸೆ…….

ಈಗಲೂ ಕಾಲ ಮಿಂಚಿಲ್ಲ. ಅಷ್ಟಲ್ಲದಿದ್ದರೂ ಇಷ್ಟಾದರೂ ಮಾಡುವಾಸೆ………

ನಿರಾಶರಾಗದಿರಿ. ಎಲ್ಲರೂ ಒಟ್ಟಾಗಿ ನಮ್ಮ ಜೀವತಾವಧಿಯಲ್ಲೇ ಒಂದಷ್ಟು ಸುಂದರ ಬದುಕಿನ ಕ್ಷಣಗಳಿಗೆ ಸಾಕ್ಷಿಯಾಗೋಣ……….

++++++++++++++++++++++++++++++++++

ನನ್ನ ತಾಯಿ ಭಾಷೆಯೇ…….

ಎರವಲು ಕೊಡು ಕೆಲವು ಪದಗಳನ್ನು ನಾನು ಗೆಳೆಯರಿಗೆ ಕೃತಜ್ಞತೆಗಳನ್ನು ಅರ್ಪಿಸಬೇಕಿದೆ…….

ಸವಕಲಾಗಿದೆ ಧನ್ಯವಾದಗಳು ಎಂಬ ಪದ ಪ್ರೀತಿಯ ಭಾವದ ಮುಂದೆ………..

ಕನ್ನಡ ತಾಯಿಯೇ ಸೃಷ್ಟಿಸು ಇನ್ನೊಂದಿಷ್ಟು ಪದಗಳನ್ನು ನಾನವರಿಗೆ ಪ್ರತಿ ನಮಸ್ಕಾರ ಹೇಳಬೇಕಿದೆ…………..

ಗೆಳೆಯಗೆಳತಿರೆಲ್ಲರೆದೆಯ ಪ್ರೀತಿಗೊಂದು ಮುದ್ದಿನ ಗುದ್ದು ನೀಡಬೇಕಿದೆ……..

ಎಂದೆಂದೂ ಮರೆಯದ ಅಮರವಾಣಿಯನ್ನು ಅವರೊಳಗೆ ಬಿತ್ತಬೇಕಿದೆ…..

ಮರೆಯಲಾಗದ, ಅಳಿಸಲಾಗದ,
ಸವಕಲಾಗದ ಪದಗಳನ್ನು………

ನನ್ನದೆಯೊಳಗಿನ ಭಾವ ತುಂಬಿ, ದೇಹದೊಳಗಿನ ಕಸವು ಹಿಂಡಿ, ಮನಸ್ಸಿನ ಆದ್ರತೆಯನ್ನು ಹೊರಹೊಮ್ಮಿಸುವ ಪದವ ನೀಡು……..

ಆ ಪದವು ,
ಗೆಳೆತನವನ್ನು ನಿರಂತರವಾಗಿಸಬೇಕು,
ಶಾಶ್ವತವಾಗಿಸಬೇಕು,
ಅಮರವಾಗಿಸಬೇಕು,
ಅವರೆದೆಯೊಳಗೆ ಅಚ್ಚಳಿಯದೆ ನೆಲೆ ನಿಲ್ಲುವಂತಿರಬೇಕು………

ಆ ಪದವೇ ಗೆಳೆತನದ ಭಾವನೆಗಳ ಸಮ್ಮಿಲನದಂತಿರಬೇಕು,
ಎಲ್ಲಾ ಅರ್ಥಗಳನ್ನು ಒಟ್ಟಿಗೇ ಹೇಳುವಂತಿರಬೇಕು.
ಸ್ನೇಹದ ಭಾಂದವ್ಯಕ್ಕೆ ಸಂಕೇತವಾಗಿರಬೇಕು……

ಆ ಪದ ಸಿಗುವವರೆಗೆ,
ಗೆಳೆಯಗೆಳತಿಯರೆಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು….. ‌…..

ನುಡಿದಂತೆ ನಡೆಯುವ,
ನಡೆದಂತೆ ನುಡಿಯುವ,
ಮಾತು – ಕೃತಿಗಳ ನಡುವಿನ ಅಂತರ ಪ್ರಜ್ಞಾಪೂರ್ವಕವಾಗಿ ಕಡಿಮೆಯಾಗಿ ನಾಗರಿಕ ಸಮಾಜ ಮತ್ತಷ್ಟು ಉತ್ತಮವಾಗಲಿ ಎಂದು ಹಂಬಲಿಸುತ್ತಾ………..

ಇರುವವರೆದೆಯಲ್ಲಿ‌ ಇಲ್ಲದವರು,
ನೋವಿರುವವರ ಜೊತೆಯಲ್ಲಿ ನಲಿವಿರುವವರು,
ಕಳೆದುಕೊಂಡವರ ಬದುಕಲ್ಲಿ ಪಡೆದುಕೊಂಡವರು,
ಒಂದಾಗಿ ಸಾಗುವ ದಿನಗಳು ಮರಳಲಿ,
ಎಂದು ಆಶಿಸುತ್ತಾ…….

ಬತ್ತಿದೆದೆಯಲ್ಲಿ ಭರವಸೆಯ ಕಿರಣ ಮೂಡಿಸಿದ,
ಅನಾಥ ಪ್ರಜ್ಞೆಯ ಬಡಿದೋಡಿಸಿ ಜೀವನೋತ್ಸಾಹ ಚಿಮ್ಮಿಸಿದ, ಏನನ್ನಾದರೂ ಸಾಧಿಸುವ ಛಲ ಹುಟ್ಟಿಸಿದ ನಿಮ್ಮೆಲ್ಲರಿಗೂ ಮತ್ತೊಮ್ಮೆ ಪ್ರೀತಿಪೂರ್ವಕ ನಮನಗಳು…….

ಗಾಳಿಯಲ್ಲಿ ಅಪ್ಪುಗೆಯ ಮುತ್ತುಗಳು………

Happy friendship day……..

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!