“ಹೆಣ್ಣಾಗಿ ಹುಟ್ಟುವುದಕ್ಕಿಂತ
ಹುಟ್ಟಿದರೇ ಮಣ್ಣಿನ ಮೇಲೊಂದು
ಮರವಾಗಿ ಹುಟ್ಟಿದರೆ
ಪುಣ್ಯವಂತರಿಗೆ ನೆರಳಾದೆ”
ಎನ್ನುವ ಈ ಜನಪದ ಹಾಡು ಅಂದಿನಿಂದ ಇಂದಿನವರೆಗೂ ಎಲ್ಲಾ ಕಾಲಘಟ್ಟದಲ್ಲೂ ಹೆಣ್ಣು ಸವೆಸಿದ ಸಂಕಷ್ಟದ ಹಾದಿಯಲ್ಲಿದ್ದ ಕಷ್ಟಗಳ ಸರಮಾಲೆಯನ್ನು ಬಿಂಬಿಸುತ್ತದೆ.
“ಹೆಣ್ಣು” ಅನ್ನುವ ಹೆಸರಿನಲ್ಲಿ ಎಲ್ಲಾ ಭಾವಗಳು ತುಂಬಿವೆ. ಪ್ರೀತಿ , ಮಾರ್ದವತೆ, ಮಮತೆ, ತ್ಯಾಗ, ಸಹನೆ,ಕರುಣೆ, ಕಷ್ಟ ಸಹಿಷ್ಣುತೆ,ಕೋಪ, ಮತ್ಸರ ,ಸೇಡು ಎಲ್ಲವೂ ಇದೆ, ನಮಗೆ ರಾಮಾಯಣವನ್ನಾಗಲಿ, ಮಹಾಭಾರತವನ್ನಾಗಲಿ, ತೆಗೆದುಕೊಂಡಾಗ ಇದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತವೆ. ರಾಮಾಯಣದಲ್ಲಿ ಬರುವ ಸೀತೆ, ಊರ್ಮಿಳೆ, ಕೈಕೇಯಿ,ಮಂಥರೆ, ಶೂರ್ಪನಖಿ, ಮಂಡೋದರಿ, ಎಲ್ಲರೂ ಒಂದೊಂದು ರೀತಿಯ ಶೋಷಣೆಗೆ ಉದಾಹರಣೆಗಳಾಗಿ ನಿಲ್ಲುತ್ತಾರೆ. ಇನ್ನು ಮಹಾಭಾರತದಲ್ಲಂತೂ ಶೋಷಿತ ಮಹಿಳೆಯರ ಬಹು ದೊಡ್ಡ ಗುಂಪೇ ಇದೆ ಎನ್ನಬಹುದು.
ಮಹಿಳಾ ಮುನ್ನಡೆ, ಸ್ತ್ರೀ ಸಬಲೀಕರಣ, ಸ್ತ್ರೀ ಸ್ವಾತಂತ್ರ್ಯ, ಸ್ತ್ರೀ ಶಕ್ತಿ ಹೀಗೆ ತುಂಬಾ ರಸವತ್ತಾಗಿ, ಬರಹಗಳಲ್ಲಿ, ಮಾಧ್ಯಮಗಳಲ್ಲಿ ಸ್ತ್ರೀ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಾರೆ ಹೊರತು ವಾಸ್ತವವಾಗಿ ಪುರುಷ ಪಾರಮ್ಯವನ್ನು ಬಿಟ್ಟುಕೊಡಲಾಗದೆ ಇಂದಿನ ಸ್ತ್ರೀಯರಲ್ಲೂ ಸೀತೆಯ ಪ್ರತಿಬಿಂಬವನ್ನೆ ಕಾಣಲು ಪುರುಷರು ಬಯಸುತ್ತಾರೆ.
ಸೀತೆಯಷ್ಟೆ ನಿಷ್ಠಾವಂತೆ ಆಗಿರುವ,ಬಗಲಲ್ಲಿ ಕುಳಿತುಕೋ ಅಂದಾಗ ಕುಳಿತುಕೊಳ್ಳುವ,ಮನೆ ಬಿಟ್ಟು ಹೋಗೆಂದಾಗ ಹೋಗುವ,ಬಾ ಎಂದಾಗ ಬರುವ,ಸಂಶಯ ಪರಿಹರಿಸಲು ಬೆಂಕಿಗೆ ಹಾರೆಂದರೆ ಹಾರುವ ರೀತಿಯ ಹೆಣ್ಣುಗಳನ್ನೇ ತಮ್ಮ ಜೀವನ ಸಂಗಾತಿಯನ್ನಾಗಿಸುವ ಕನಸು ಇವತ್ತಿನ ಪುರುಷರಲ್ಲೂ ಇನ್ನೂ ಜೀವಂತವಾಗಿದೆ . ಇದು ಎಷ್ಟು ಸಮಂಜಸ..? ರಾಮನ ಗುಣಗಳನ್ನು ಉಳಿಸಿಕೊಳ್ಳದವರಿಗೆ ಎಲ್ಲಾ ಹೆಣ್ಣಿನಲ್ಲೂ ಸೀತೆಯನ್ನು ಹುಡುಕುವ ಹಕ್ಕಿದೆಯೇ..? ಇಂದಿನ ಕಾಲದಲ್ಲಿ ಸೀತೆ ಹಾಗೆ ಇದ್ದರೆ ಹೆಣ್ಣು ಬದುಕಲು ಸಾಧ್ಯವೇ.?
ತಗ್ಗಿ ಬಗ್ಗಿ ನಡೆಯಬೇಕು ಎಂದರೆ ಮಹಿಳೆ ಅವಳ ಆಯ್ಕೆ ಯಾರನ್ನು ಬಿಟ್ಟು ಬದುಕಬೇಕು, ಆದರೆ ಇಂದು ಹೆಣ್ಣು ಮಕ್ಕಳಿಗೆ ದೊರೆಯುತ್ತಿರುವ ವಿದ್ಯೆ, ಆರ್ಥಿಕ ಸ್ವಾವಲಂಬನೆ ಅವರಲ್ಲಿ ಆತ್ಮವಿಶ್ವಾಸ ತುಂಬಿಸಿದೆ. ಗಂಡನಿಲ್ಲದೆಯೂ ಬದುಕುವ ಧೈರ್ಯ ಕೊಟ್ಟಿದೆ. ಆದರೆ ಎಲ್ಲಾ ಹೆಣ್ಮಕ್ಕಳಲ್ಲಿ ಈ ಧೈರ್ಯವಿದೆಯಾ…? ಖಂಡಿತ ಇಲ್ಲ , ಹೆಣ್ಣು ಆರ್ಥಿಕವಾಗಿ ಶೈಕ್ಷಣಿಕವಾಗಿ ಔದ್ಯೋಗಿಕವಾಗಿ ಎಷ್ಟೇ ಮುಂದುವರಿದರೂ ಸಂಸಾರದಲ್ಲಿ ಸುಖ ಕಾಣದೆ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಾ ದಿನ ನಿತ್ಯ ಸತ್ತು ಬದುಕುತ್ತಿದ್ದಾಳೆ.
ಜಾಗತೀಕರಣದಂತಹ ಮಹಾ ಬದಲಾವಣೆಯ ಕಾಲಘಟ್ಟದಲ್ಲಿರುವ ನಾವು ಲಿಂಗ ತಾರತಮ್ಯವನ್ನು ಮರೆತು ಬುದ್ಧಿವಂತಿಕೆಗೆ ಮಾತ್ರ ಬೆಲೆ, ಗೌರವ ಸಿಗುವ ಕಾಲದಲ್ಲಿ ನಾವು ನಿಂತಿದ್ದೇವೆ. ಈ ಕಾಲದಲ್ಲೂ ಮಹಿಳೆಯರ ಸ್ಥಿತಿ ಗತಿಯ ಬಗ್ಗೆ ಯೋಚಿಸುವಾಗ ಮೈ ಮನ ಕ್ಷಣಕಾಲ ನಡುಗುತ್ತದೆ. ಸೀತೆಯನ್ನು ಬೆಂಕಿಗೆ ಹಾರಿಸಿದಂತೆ ಹೆಣ್ಣು ಮಕ್ಕಳನ್ನು ಬೆಂಕಿ ಹಚ್ಚಿ ಸುಡುತ್ತಾರೆ, ಕೊಂದು ಇನ್ನೆಲ್ಲೋ ಎಸೆದು ಬರುತ್ತಾರೆ, ಹುಟ್ಟುವ ಮೊದಲೇ ಸಾಯಿಸುತ್ತಾರೆ, ಮನೆ ಬಿಟ್ಟು ಓಡಿಸುತ್ತಾರೆ, ಪ್ರೀತಿ ಪ್ರೇಮದ ಹೆಸರಲ್ಲಿ ನಂಬಿಸಿ ಮನೆ ಬಿಟ್ಟು ಬರುವಂತೆ ಮಾಡುತ್ತಾರೆ, ಹೆಂಡತಿ ಇದ್ದು ಪರಸ್ತ್ರೀ ಸಂಗ ಬಯಸುತ್ತಾರೆ , ಸವತಿ ತಂದು ನೀ ಒಪ್ಪಿಕೊ..ಇಲ್ಲ ಇಲ್ಲಿಂದ ಹೊರಡು ಅನ್ನುತ್ತಾರೆ, ಬಾಹುಬಂಧನ ಬಯಸಿದವಳನ್ನು ಗೃಹ ಬಂಧನದಲ್ಲಿಡುತ್ತಾರೆ, ವರದಕ್ಷಣೆ ತರಲಿಲ್ಲ, ಗಂಡು ಹೆರಲಿಲ್ಲ ಎಂಬ ಕಾರಣಕ್ಕೆ ನಿಕೃಷ್ಟವಾಗಿ ಕಾಣುತ್ತಾರೆ, ಹಿಂಸಿಸುತ್ತಾರೆ,ಆತ್ಮಹತ್ಯೆ ಗೆ ಪ್ರಚೋದಿಸುತ್ತಾರೆ, ಬಲಾತ್ಕಾರ,ಅತ್ಯಾಚಾರ, ಆಸಿಡ್ ದಾಳಿ ಸಾಲದೆ ಅವನ್ ನಲ್ಲಿಟ್ಟು ರೊಸ್ಟ್ ಮಾಡುತ್ತಾರೆ, ಮರ್ಯಾದೆ ಹೆಸರಲ್ಲೆ ಹೆಸರಿಲ್ಲದಂತೆ ಮಾಡುತ್ತಾರೆ, ತುಂಡು ತುಂಡಾಗಿ ಕತ್ತರಿಸಿ ಕವರಿನಲ್ಲಿ ಸುತ್ತಿ ಫ್ರೀಡ್ಜ್ ನಲ್ಲಿಟ್ಟು ನಾಪತ್ತೆ ಆಗುತ್ತಾರೆ!!
ಇದೆಲ್ಲದರ ನಡುವೆಯೂ ಇಂದು ಮಹಿಳೆಯರು ಸ್ವಲ್ಪ ಮಟ್ಟಿಗೆ ಗಟ್ಟಿಯಾಗುತ್ತಾ ಇದ್ದಾರೆ . ಅನ್ಯಾಯ ಕಂಡಲ್ಲಿ ಧೈರ್ಯದಿಂದ ಎದುರಿಸುವ ಶಕ್ತಿಯನ್ನು ಹೊಂದಿದ್ದಾರೆ.. ನವದುರ್ಗೆಯರಂತೆ ಸಿಡಿದು ತಮ್ಮ ತಮ್ಮ ಬದುಕನ್ನು ಸರಿ ಮಾಡಿಕೊಂಡವರು ಇದ್ದಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ ಮಹಿಳೆ ಸಮಾಜದಲ್ಲಿ ತಾನು ಅನುಭವಿಸುತ್ತಿರುವ ಅವಮಾನ, ನೋವು ಹಿಂಸೆಗಳಿಂದ ಜರ್ಜರಿತಳಾಗಿ ಯಾಕಾದರೂ ಹೆಣ್ಣಾಗಿ ಹುಟ್ಟಿದೆನೊ
ಮನೋಭಾವನೆ ಅವರನ್ನು ಸದಾ ಕಾಡುತ್ತಿರುತ್ತದೆ.
ಹಾಗೆ ನೋಡಿದರೆ ನಮ್ಮ ನಿಮ್ಮ ನಡುವೆ ನವದುರ್ಗೆಯರಾಗಿ ಮಾತ್ರವಲ್ಲ ಅನೇಕ ರೂಪಗಳಲ್ಲಿ ಹೆಣ್ಣಮನಗಳು ನೋಡಲು ಕಾಣಸಿಗುತ್ತಾರೆ… ಸುಧಾ ಆಡುಕಳ ಎನ್ನುವ ಲೇಖಕಿ ಬರೆದಿರುವ ” ಬಕುಲದ ಬಾಗಿಲಿನಿಂದ” ಎಂಬ ಕೃತಿಯ ಪರಿಚಯವನ್ನು ಮಾಡುವಾಗ ಸಾಹಿತಿ ,ಪರ್ತಕರ್ತ ಜೀ.ಎನ್ ಮೋಹನ್ ರವರು ಹೆಣ್ಣಿನ ಅಂತರಂಗವನ್ನು ಒಳಹೊಕ್ಕು ನೋಡಿದಾಗ ಅಲ್ಲಿ ನಿಟ್ಟುಸಿರಿದೆ,ನಿಲೆಹಾಕಿ ಕೇಳುವ ಧೈರ್ಯವಿದೆ , ಬದುಕಿನ ಬಗ್ಗೆ ಹುಮ್ಮಸ್ಸಿದೆ, ಪ್ರಶ್ನಿಸುವ ಮನಸ್ಸಿದೆ.ರಾಧೆ,ಕುಂತಿ ಮಾದ್ರಿ,ಅಂಬೆ ಅವದೇಶ್ವರಿಯರಿದ್ದಾರೆ, ಜೊತೆಗೆ ಮಾಧವಿ,ಕುಬ್ಜೆಮಾಲಿನಿ, ಮಣಿಪುರದ ಚಿತ್ರಾಂಗದಾ ಸಹ ಇದ್ದಾರೆ. ಸೀತೆಯೂ ಇದ್ದಾಳೆ, ಕಾಯುತ್ತಲೇ ಇರುವ ಉರ್ಮಿಳೆಯೂ ಇದ್ದಾಳೆ, ಕಾಣೆಯಾಗುತ್ತಿರುವ ಶಾಂತಲೆ, ಗೊರವನ ಬೆನ್ನಟ್ಟಿದ ಅಕ್ಕ, ಕಲ್ಲಾದ ಅಹಲ್ಯೆ, ಮಧ್ಯರಾತ್ರಿ ಎದ್ದು ಹೋದ ಸಿದ್ಧಾರ್ಥರನ್ನು ನೋಡಿದ ಯಶೋಧರೆ, ಉಂಗುರ ಕಳೆದುಕೊಂಡ ನೆಪದ ನೆನಪಿನಿಂದ ಮರೆಯಾದ ಶಕುಂತಳೆಯರು ಇದ್ದಾರೆ, ಬುದ್ದಿವಂತ, ಬಲಶಾಲಿ, ಸ್ಫುರದ್ರೂಪಿ ಆದ ಐವರ ಪತ್ನಿಯಾಗಿ ಆತ್ಮಸಂಗಾತಕ್ಕೆ ಹಲುಬಿದ ದ್ರೌಪದಿಯರಿದ್ದಾರೆ, ಕತ್ತಲೆಯನ್ನು ಜೀವನದುದ್ದಕ್ಕೂ ಹಾಸಿಕೊಂಡು ಬದುಕುತ್ತಿರುವ ಗಾಂಧಾರಿಯರಿದ್ದಾರೆ, ಯೋನಿ ಛೇಧನದ ವಿರುದ್ಧ ಆಂದೋಲನ ಮಾಡಿದ ವಾರಿಯರ್ಸ್ ಗಳಿದ್ದಾರೆ, ವೇಶ್ಯೆ ಆಗಿದ್ದರೂ ನಿಷ್ಕಲ್ಮಶ ಮನದಿಂದ ಪ್ರೀತಿಸುವ ಆಮ್ರಪಾಲಿಯರಲ್ಲದೆ, ಹೊಸ ಋತುಮಾನಕ್ಕೆ ನಾಂದಿ ಹಾಡಿರುವ ನಂದಿನಿಯರು ಇದ್ದಾರೆ ಎಂದಿದ್ದಾರೆ… ಎಷ್ಟು ಸತ್ಯ ಅಲ್ವಾ.. ಇವರೊಂದಿಗೆ ನಮ್ಮ ನಿಮ್ಮ ನಡುವೆ ಕಿತ್ತೂರು ರಾಣಿ ಚೆನ್ನಮ್ಮ, ಓಬವ್ವ, ಕಿರಣ್ ಬೇಡಿ, ಪೂಲನ್ ದೇವಿ, ಪಿ ಟಿ ಉಷಾ,ಘ ಮೇರಿಕೋಮ್ನಂತಹ ಗಟ್ಟಿಗಿತ್ತಿಯರು ಇದ್ದಾರೆ.ಇಂತಹ ಹತ್ತು ಹಲವು ವ್ಯಕ್ತಿತ್ವಗಳ ಮನಸ್ಸುಗಳನ್ನು ತೆರೆದಿಡುವ ಅನೇಕ ಕೃತಿಗಳು ನಮ್ಮ ನಿಮ್ಮ ನಡುವೆ ಇವೆ .ಇದರ ಜೊತೆಗೆ ಮದ್ಯ ವಯಸ್ಸಿನ ಹೆಂಗಸರ ಮೆನೋಪಾಸ್ ಸಮಯದಲ್ಲಿ ಹಾರ್ಮೋನ್ ಪ್ರಭಾವದಿಂದ ಉಂಟಾಗುವ ಖಿನ್ನತೆ, ತಳೆಯುವ ಮೃದು ಭಾವನೆಗಳು… ಅವರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ವ್ಯತಿರಿಕ್ತವಾಗಿ ಪ್ರೀತಿ ಪ್ರೇಮದ ಹೆಸರಿನಲ್ಲಿ ಹುಟ್ಟಿಕೊಳ್ಳುವ ಅಸಹಜ ಲೈಂಗಿಕ ಆಸಕ್ತಿ, ಅಕ್ರಮ ಸಂಬಂಧಗಳು, ಲೋಲುಪ್ತತೆಗೆ ಒಳಗಾಗಿ ಸಾಂಸಾರಿಕ ಬದುಕನ್ನೆ ತ್ಯಜಿಸುವ ಸಂದರ್ಭಗಳು, ಪಿಸುಮಾತು ಆಲಿಸಲು ಕಿವಿಯಾಗದೆ ಹೋದ ಸಂಗಾತಿಯೊಂದಿಗೆ ಸಮರ , ಹೀಗೆ ಹತ್ತು ಹಲವು ಬಗ್ಗೆಯ ಕೃತಿಗಳು ಮಹಿಳೆಯರ ಅಂತರಾಳದ ಮಾನಸಿಕ ತೋಳಲಾಟವನ್ನು ಬಿಂಬಿಸಿವೆ.
ಹೆಣ್ಣು ಪ್ರತಿ ಮನೆಯ ಸರ್ವಸ್ವ.ಪ್ರತಿ ರಂಗದಲ್ಲಿ ತನ್ನದೆಯಾದ ಛಾಪು ಮೂಡಿಸಿ ಮನೆತನವನ್ನು ದೇಶವನ್ನು ಪ್ರಗತಿಯತ್ತ ಮುನ್ನಡೆಸುತ್ತಿದ್ದಾಳೆ.ಪ್ರತಿಯೊಂದರಲ್ಲಿ ಸೆಣಸುತ್ತಲ್ಲೇ ಬದುಕನು ಕಟ್ಟಿಕೊಳ್ಳುತ ಬಾಳುತ್ತಿರುವಳು. ಹೆಣ್ಣನ್ನು ಆದರದಿಂದ ಗೌರವಿಸಿ.ಆಗ ಅವಳಿಗೂ ಹೆಮ್ಮೆ ಮಣ್ಣಿಗೂ ಗರಿಮೆ.ಹೆತ್ತವರಿಗೂ ಸಾರ್ಥಕತೆ.
ಪವಿತ್ರಾ ಹೆತ್ತೂರ್
ವಕೀಲರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು