ಶಾಂತಿ , ಶಾಲಿನಿ ಇಬ್ಬರೂ ಅಕ್ಕತಂಗಿಯರು. ತುಂಬಾ ಅನ್ಯೋನ್ಯವಾಗಿದ್ದರು. ಇಬ್ಬರಿಗೂ ಮದುವೆಯಾಗಿ ಶಾಂತಳಿಗೆ ಎರಡು ಹೆಣ್ಣು ಮಕ್ಕಳು. ಶಾಲಿನಿಗೆ ಒಂದು ಗಂಡು, ಒಂದು ಹೆಣ್ಣು. ತುಂಬಾ ಅನುಕೂಲಸ್ಥರಲ್ಲದಿದ್ದರೂ ಹೊಟ್ಟೆಬಟ್ಟೆಗೆ ಯಾವುದೇ ಕೊರತೆ ಇರಲಿಲ್ಲ. ಇಬ್ಬರೂ ದಿನ ಪೋನಿನಲ್ಲಿ ತಮ್ಮ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಎಲ್ಲವೂ ಸರಿ ಇತ್ತು. ಆ ಒಂದು ಘಟನೆ ನಡೆಯದಿದ್ದರೆ……
ಹೋದ ವಾರ ತನ್ನ ಕಿವಿಯಾರೆ ಕೇಳಿದ ತಂಗಿಯ ಮಾತುಗಳಿಂದ ಶಾಂತಾಳ ಮನಸ್ಸು ಕದಡಿ ರಾಡಿಯಾಗಿತ್ತು.
ಶಾಲಿನಿಯನ್ನು ತಮ್ಮ ಮನೆಗೆ ಬಾ ಎಂದಾಗ ನಿಮ್ಮ ಮನೆಗೆ ಬರಲು ತನಗೆ ತುಂಬಾ ಭಯವಾಗುತ್ತದೆ ಎಂದಾಗ ಶಾಂತಳು ಯಾಕೆ ಏನಾಯ್ತು? ಎಂದಾಗ ಒಂದು ತಿಂಗಳ ಹಿಂದೆ ನಿಮ್ಮ ಮನೆಗೆ ಬಂದಾಗ ಭಾವ ನೀನಿಲ್ಲದ ಸಮಯದಲ್ಲಿ ನನ್ನನ್ನು ತಬ್ಬಿಕೊಂಡು ಹಣೆಗೆ ಮುತ್ತಿಟ್ಟರು. ನನ್ನ ಮನಸ್ಸಿಗೆ ತುಂಬಾ ಕಸಿವಿಸಿ ಆಯಿತು. ನಾನು ನಿಮ್ಮ ಮನೆಗೆ ಬರಲು ತುಂಬಾ ಆಸೆ.
ಆದರೆ ಅವತ್ತಿನ ಭಯ ಇನ್ನೂ ಹೋಗಿಲ್ಲ. ಏನು ಮಾಡಲಿ? ಎಂದಾಗ ಶಾಂತಾಳಿಗೆ ಇಲ್ಲೇ ಭೂಮಿ ಬಾಯಿ ಬಡಬಾರದೇ? ಎನ್ನಿಸಿತು. ತಾನು ತುಂಬಾ ನಂಬಿಕೆ ಇಟ್ಟಿದ್ದ , ತನ್ನ ಮಾಂಗಲ್ಯಕ್ಕೆ ಒಡೆಯನಾಗಿರುವ ತನ್ನ ಯಜಮಾನನು ಯಾಕೆ ಹೀಗೆ ಮಾಡಿದ ಎಂಬುದು ಅರಿವಾಗದೆ ತನ್ನ ಕಣ್ಣುಗಳನ್ನು ತಾನೇ ನಂಬಲಾಗಲಿಲ್ಲ. ಏನೂ ಮಾಡಲು ತೋಚುತ್ತಿಲ್ಲ. ತಮ್ಮ ಮದುವೆ ಆಗಿ ಈ ಹದಿನೈದು ವರ್ಷದಲ್ಲಿ ಇದೆ ಮೊದಲ ಬಾರಿಗೆ ತನ್ನ ಗಂಡನ ಮೇಲೆ ಬಂದಿರುವ ಆರೋಪ. ಬಾಲ್ಯದಿಂದಲೂ ಒಟ್ಟಿಗೆ ಬೆಳೆದ ತನ್ನ ತಂಗಿ ಸುಳ್ಳು ಹೇಳುವುದಿಲ್ಲ ಎಂಬ ನಂಬಿಕೆ ಅವಳ ಮನದಲ್ಲಿ ಧೃಡವಾಗಿತ್ತು. ತಾನೇನು ಕಮ್ಮಿ ಮಾಡಿದ್ದೇ? ತಾನು ಯಾವುದರಲ್ಲಿ ಕಡಿಮೆ ಇದ್ದೇನೆ. ರೂಪವತಿ ಅಲ್ಲದೇ ಇದ್ದರೂ ಮತ್ತೊಮ್ಮೆ ತಿರುಗಿ ನೋಡಬಹುದಾದ ಸೌಂದರ್ಯ ತನ್ಧದು. ಅತ್ತು ಅತ್ತು ಸಾಕಾಗಿ ಕಣ್ಣುಗಳು ಕೆಂಪಾಗಿ ತಲೆನೋವು ಶುರುವಾಯಿತು. ಮಕ್ಕಳು ಬರುವ ಹೊತ್ತಿಗೆ ತಾನು ದುಃಖ ತಡೆಯಲಾಗಲಿಲ್ಲ. ಹಾಗಂತ ಮಕ್ಕಳ ಮುಂದೆ ಹೇಳಿ ಅವರ ಕಣ್ಣಲ್ಲಿ ತನ್ನ ಯಜಮಾನರನ್ನು ಸಣ್ಣವರಾಗಿ ಮಾಡುವುದು ಅವಳಿಗೆ ಇಷ್ಟವಿಲ್ಲ. ಮಕ್ಕಳು ಏನೆಂದರೂ ಕೇಳಲು ಎನೋ ಒಂದು ಹೇಳಿ ಸುಮ್ಮನಾದಳು. ಆದರೂ ಮಕ್ಕಳಿಗೆ ಅವಳ ಮಾತಿನಲ್ಲಿ ನಂಬಿಕೆ ಬರಲಿಲ್ಲ. ಆದರೆ ಮತ್ತೆ ಮತ್ತೆ ಕೇಳಲು ಭಯದಿಂದ ಸುಮ್ಮನಾದರು.
ಈಗ ತನ್ನ ಗಂಡನನ್ನು ಕೇಳಲು ಅವನು ತಾನು ಯಾವುದೇ ಕಾಮದ ಆಸೆಯಿಂದ ಹಾಗೆ ಮಾಡಲಿಲ್ಲ . ಅವಳು ನನ್ನ ಮಗಳಂತೆ ಎಂದುಕೊಂಡು ಹಾಗೆ ನಡೆದುಕೊಂಡೆ ಎಂದು ಜಾರಿಕೊಂಡನು. ಏನೂ ಮಾಡಲು ತೋಚುತ್ತಿಲ್ಲ. ಹೇಗೆ ಈ ಸಮಸ್ಯೆಯು ಬಗೆಹರಿಯುವುದೋ ದೇವರೆ ಬಲ್ಲ. ಈಗ ಇದ್ದ ಒಬ್ಬಳು ತಂಗಿಯು ಮಾತಾಡುತ್ತಿಲ್ಲ . ಈ ವಿಷಯವೇನಾದರೂ ತನ್ನ ತವರುಮನೆಗೆ ತಲುಪಿದರೆ ಅವರೆಲ್ಲಾ ತನ್ನ ಬಗ್ಗೆ ತನ್ನ ಗಂಡನ ಬಗ್ಗೆ ಏನೂ ತಿಳಿದುಕೊಳ್ಳುವುದಿಲ್ಲ ಎಂದು ಯೋಚಿಸುತ್ತಾ ತಾನು ಮಕ್ಕಳನ್ನು ಕರೆದುಕೊಂಡು ಹೋಗಿ ತನ್ನ ಜೀವನವನ್ನು ರೂಪಿಸಿಕೊಳ್ಳಲು ತನಗೆ ಧೈರ್ಯವೇ ಇಲ್ಲವಾಗಿದೆ. ಗಂಡನೊಂದಿಗೆ ಸಂಸಾರ ಮಾಡುವುದೋ? ಬಿಡುವುದೋ ತಿಳಿಯದೇ ಏಕಾಂತವನ್ನು ಬಯಸಿ ಸಮುದ್ರದ ದಡದಲ್ಲಿ ದೀಪದ ಕೆಳಗೆ ಕುಳಿತು ಯೋಚನೆ ಮಾಡುತ್ತಾ ಅಶಾಂತತೆಯಿಂದ ಕುಳಿತಿದ್ದಳು ಶಾಂತ.
ಮೇಘ ಮುರಳಿ ಕಶ್ಯಪ್
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು