January 15, 2025

Newsnap Kannada

The World at your finger tips!

BASAVANNA1

ಇಂದಿಗೆ ವಚನ ಸಾಹಿತ್ಯದ ಪ್ರಸ್ತುತತೆ

Spread the love

“ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತೊ
ಹಳದೆಂದು ನೀನದನು ಕಳೆಯುವೆಯ ಮರುಳೆ?
ತಳಹದಿಯಲ್ತೆ ನಮ್ಮೆಲ್ಲ ಹೊಸ ತಿಳಿವಿಂಗೆ?
ಹಳೆ ಬೇರು ಹೊಸ ತಳಿರು ಮಂಕುತಿಮ್ಮ.”
. ಎನ್ನುವ ಡಿ.ವಿ.ಜಿ ಅವರ ಮಾತುಗಳು ಸಾರ್ವಕಾಲಿಕವಾದುದು. ಹೌದು ಹಳೆ ಬೇರಿಗೆ ಹೊಸ ಚಿಗುರು ಕೂಡಿರಲು ಮರ ಸೊಬಗಾಗುವುದು. ಹಾಗೆಯೆ ಹೊಸ ಯುಕ್ತಿ ಹಳೆ ತತ್ವ ಕೂಡಲು ಬಾಳು ಸೊಗಸಾಗುವುದು. ಹಾಗೆ ನೋಡಿದರೆ ವಚನ ಸಾಹಿತ್ಯ 9 ಶತಮಾನಗಳ ಹಳತು. ಆದರೂ ಅದರ ಆಶಯ ಇಂದಿಗೂ ಹಸಿರು.

ಗದ್ಯವೂ ಅಲ್ಲದ ಪದ್ಯವೂ ಅಲ್ಲದ ವಚನ ಸಾಹಿತ್ಯ ಕೇವಲ 12ನೆಯ ಶತಮಾನಕ್ಕೆ ಮಾತ್ರ ಸೀಮಿತವಾಗಿರದೆ 21ನೆಯ ಸತಮಾನದಲ್ಲೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದಕ್ಕೆ ಅದರಲ್ಲಿರುವ ಸತ್ವವೇ ಮೂಲ ಕಾರಣ. ಮಾನವ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಜೀವನ ಮೌಲ್ಯಗಳ ಅಮೂಲ್ಯ ಭಂಡಾರವನ್ನೇ ತನ್ನ ಒಡಲಿನಲ್ಲಿ ತುಂಬಿಕೊಂಡಿರುವ ವಚನ ಸಾಹಿತ್ಯ, ಪ್ರಸಕ್ತ ವಿದ್ಯಮಾನದಲ್ಲಿ ಅತ್ಯಂತ ಪ್ರಸ್ತುತವಾಗಿದೆ. ಏಕೆಂದರೆ ಯಾವುದೇ ಕಾಲಘಟ್ಟದಲ್ಲೂ ಆದರ್ಶ, ನೈತಿಕತೆ, ಮಾನವೀಯ ಮೌಲ್ಯಗಳು ಒಂದು ಸಮಾಜದಲ್ಲಿ ಮಾನದಂಡವಾಗಿ ನಿಂತು ಅದನ್ನು ಅಡ್ಡಹಾದಿಗೆ ತುಳಿಯದಂತೆ ನಿಯಂತ್ರಿಸುವಲ್ಲಿ ಸಹಕಾರಿಯಾಗುತ್ತವೆ. ಹಾಗೆ ಮೌಲ್ಯ ತುಂಬಿದ, ನೈತಿಕ ಪ್ರಜ್ನೆಯನ್ನು ಉತ್ತೇಜಿಸುವ ಸಾಹಿತ್ಯ ಸಾರ್ವಕಾಲೀನತೆಯನ್ನು ಮೈದುಂಬಿಕೊಂಡು ಕಾಲಘಟ್ಟವನ್ನೂ ಮೀರಿ ಹರಿಯತೊಡಗುತ್ತದೆ. ಸಂಸ್ಕೃತಭೂಯಿಷ್ಠವಾದ ಕಬ್ಬಿಣದ ಕಡಲೆಯಂತಿದ್ದ ವಿದ್ವಾಂಸರಿಗೆ ಮಾತ್ರವೇ ಮೀಸಲಾಗಿದ್ದ ಹಳಗನ್ನಡದ ತೆಕ್ಕೆಯಿಂದ ಹೊರಬಂದು ಜನ ಸಾಮಾನ್ಯರ ಆಡುನುಡಿಗೆ ಅತಿಸಮೀಪವಾದ ವಚನ ಸಾಹಿತ್ಯ ಸಾಮಾಜಿಕ, ಭಾಷಿಕ ಮತ್ತು ಸಾಂಸ್ಕೃತಿಕ ಕ್ರಾಂತಿಗೆ ನಾಂದಿ ಹಾಡಿತು.

ಲಕ್ಷಾಂತರ ಕೋಟಿ ರೂಪಾಯಿಗಳ ಹಗರಣಗಳನ್ನೇ ಹೊದ್ದುಕೊಂಡಿರುವ ನಮಗೆ ದಿನ ನಿತ್ಯ ಕಾಣುವುದು ಬಹುಕೋಟಿ ಬೋಪೋರ್ಸ್ ಹಗರಣ, 3ಜಿ ತರಂಗ ಹಗರಣ, ಕಲ್ಲಿದ್ದಲು, ಗಣಿ ಹಗರಣಗಳು. ಭ್ರಷ್ಟಾಚಾರ ಎಲ್ಲೆಡೆ ತನ್ನ ಕಬಂಧ ಬಾಹುವನ್ನು ಚಾಚಿ ಅಟ್ಟಹಾಸಗೈಯ್ಯುತ್ತಿರುವ ಈ ಸಂದರ್ಭದಲ್ಲಿ ಬಸವಣ್ಣನವರ
“ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ;
ತನ್ನ ಬಣ್ಣಿಸಬೇಡ; ಇದಿರ ಹಳಿಯಲು ಬೇಡ”
ಎನ್ನುವ ಅಂತರಂಗಶುದ್ಧಿಯ ಸಂದೇಶ ಹೊತ್ತ ವಚನ ಕಾದ ಸಲಾಕೆಯಂತೆ ತಿವಿದು ತಿದ್ದುವ ಅನಿವಾರ್ಯತೆ ಒದಗಿದೆ. ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತೆ ಮಾತಿಗೊಂದು ಸುಳ್ಳು ಹೇಳುತ್ತ ಕಣ್ಣೆದುರು ಕಾಮನಬಿಲ್ಲಿನ ಬಣ್ಣವನ್ನು ತೂರುತ್ತ ಭ್ರಮಾಲೋಕದಲ್ಲಿ ತೇಲುವಂತೆ ಮಾಡುವ ವಂಚಕರ ಜಾಲವನ್ನು ಕೆಡಹುವ ಕೆಚ್ಚನ್ನು ಇಂತಹ ವಚನಗಳು ತುಂಬುತ್ತವೆ.

ಇನ್ನು ಅಧಿಕಾರಶಾಹಿ ಮತ್ತು ಪುರೋಹಿತಶಾಹಿ ವ್ಯವಸ್ಥೆಗಳತ್ತ ಕಣ್ಣುಹಾಯಿಸಿದರೆ ಅವುಗಳ ನಡುವಿನ ನಂಟು ಪುರಾತನವಾದದ್ದು. ದೇವರು, ಧರ್ಮದ ಹೆಸರಿನಲ್ಲಿ ಭಯವನ್ನು ಬಿತ್ತುತ್ತ ಅಧಿಕಾರಶಾಹಿಗಳು ಜನಸಾಮಾನ್ಯರನ್ನು ಶೋಷಣೆಗೆ ಒಳಪಡಿಸುತ್ತಿದ್ದುದು ಎಲ್ಲರಿಗೂ ತಿಳಿದೇ ಇದೆ. ಇದಕ್ಕೆ ಕುಮ್ಮಕ್ಕು ಪುರೋಹಿತಶಾಹಿಗಳದ್ದೇ. ಪರಸ್ಪರ ಒಡಂಬಡಿಕೆ ಇಂಥ ಅಕಾರ್ಯಗಳಿಗೆ ನಾಂದಿಯಾಗಿತ್ತು. ಅದೇ ಪರಿಸ್ಥಿತಿಯನ್ನು ಇಂದಿಗೂ ಕಾಣಬಹುದು. ಧರ್ಮದ ಹೆಸರಿನಲ್ಲಿ ನಡೆವ ಸುಲಿಗೆಗಳ ಬಹುಪಾಲು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗವಾಗದೆ ಅಧಿಕಾರಶಾಹಿ ಮತ್ತು ಪುರೋಹಿತಶಾಹಿ ವ್ಯವಸ್ಥೆಗಳ ಪಾಲಾಗುವುದನ್ನು ಕಾಣುತ್ತೇವೆ. ಅದಕ್ಕೇ ಬಸವಣ್ಣನವರು ‘ಕರಸ್ಥಲಲಿಂಗ’ಕ್ಕೆ ಒತ್ತಾಸೆಯಾಗಿ ನಿಂತುದಲ್ಲದೆ
“ಎನ್ನ ಕಾಲೇ ಕಂಭ, ದೇಹವೇ ದೇಗುಲ,
ಶಿರವೇ ಹೊನ್ನ ಕಲಶವಯ್ಯಾ!
ಕೂಡಲಸಂಗಮದೇವ ಕೇಳಯ್ಯಾ,
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.”
ಎನ್ನುತ್ತ ಸ್ಥಾವರ ದೇಗುಲಗಳ ನಿರಾಕರಣೆಗೆ ಮುಂದಾದರು. ಅದಕ್ಕೇ ಜಿ.ಎಸ್.ಎಸ್ ಅವರು ವಚನಕಾರರು “ಮುಖ್ಯವಾಗಿ ಪ್ರತಿಪಾದಿಸುವುದು ಶಿವಾಲಯವನ್ನು ‘ಮಾಡುವ’ ಕ್ರಿ0iÉುಯನ್ನಲ್ಲ: ವ್ಯಕ್ತಿ ತಾನೇ ಶಿವಾಲಯ ‘ಆಗುವ’ ಕ್ರಿಯೆಯನ್ನು.” ಎನ್ನುವುದು. ಅಲ್ಲಮ ಕೂಡ
“ದೇಹವೇ ದೇವಾಲಯವಾಗಿದ್ದ ಮೇಲೆ
ಮತ್ತೆ ಬೇರೆ ದೇಗುಲಕ್ಕೆ ಎಡೆಮಾಡುವವರಿಗೆ
ಏನ ಹೇಳವೆನಯ್ಯ?
ಗುಹೇಶ್ವರ, ನೀ ಕಲ್ಲಾದಡೆ ನಾನೇನಪ್ಪೆನು? ಎಂದು ಪ್ರಶ್ನಿಸುತ್ತಾನೆ.

ಈ ವಚನಗಳ ಮೂಲ ಆಶಯವನ್ನು ಗಮನಿಸಿ ಅದನ್ನು ಅರ್ಥಮಾಡಿಕೊಂಡಿದ್ದೇ ಆದರೆ ಬೀದಿಗೊಂದರಂತೆ ಕಣ್ಮುಚ್ಚಿ ಕಣ್ಬಿಡುವುದರಲ್ಲಿ ಹುಟ್ಟಿಕೊಳ್ಳುವ ಗುಡಿಗಳ ‘ಗುಡಿಗಾರಿಕೆ’ಯ ಕಪಿಮುಷ್ಠಿಯಿಂದ ಬಿಡುಗಡೆ ಪಡೆಯಬಹುದು. ಕಾಯಕವೇ ಕೈಲಾಸ ಎಂಬ ವಚನದನ್ವಯ ದುಡಿಮೆಯೆಡೆಗೆ ಮನಸ್ಸು ಮಾಡಿದರೆ ಹಸಿವಿನ ಸಮಸ್ಯೆಯ ಜೊತೆಗೆ ದೇಶದ ಸರ್ವಾಂಗೀಣ ಆರ್ಥಿಕಾಭಿವೃದ್ಧಿಯತ್ತ ಮೊಗ ಮಾಡಬಹುದು.

ದಿನದಿಂದ ದಿನಕ್ಕೆ ವರ್ಗ, ವರ್ಣ, ಜಾತಿ ವ್ಯವಸ್ಥೆ ಜಟಿಲವಾಗುತ್ತಲೇ ಹೋಗುತ್ತಿವೆ. ದೇವರ ದಾಸಿಮಯ್ಯನ
“ಕಳದೊಳಗಣ ಕಳವೆಯನೊಕ್ಕುವರೊಳರೆ?
ಶಿವಲಿಂಗ-ಮುಕ್ಕಣ್ಣ ನೀನೊಲಿದ ಸದ್ಭಕ್ತನ
ಅಕ್ಕುಲಿಜನೆಂದೊಡೆ ಅಕ್ಷಯನರಕದಲ್ಲಿಕ್ಕುವ ಕಾಣಾ ರಾಮನಾಥ”
ಎನ್ನುವ ವಚನ, ದೇವರ ಭಕ್ತನಾದ ಮೇಲೆ ಸತ್ಕುಲ ಪ್ರಸೂತ ಮತ್ತು ನೀಚಕುಲ ಪ್ರಸೂತ ಎಂಬ ಭಾವವೇ ಬಾರದು ಎನ್ನುವುದನ್ನು ಸಾರುತ್ತದೆ.
ಬಸವಣ್ಣನವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ
“ಕೊಲುವವನೇ ಮಾದಿಗ, ಹೊಲಸ ತಿಂಬವನೇ ಹೊಲೆಯ
ಕುಲವೇನೋ, ಆವಂದಿರ ಕುಲವೇನೋ?”
ಎಂದು ನೇರವಾಗಿ ಭರ್ಜಿಯಿಂದ ತಿವಿಯುತ್ತಾರೆ. ಆತ್ಮಪರಿಶುದ್ಧತೆಯೇ ಜಾತಿ ಪರಿಗಣನೆಗೆ ಮುಖ್ಯ ಮಾನದಂಡ ಎನ್ನುತ್ತಾರೆ ಬಸವಣ್ಣನವರು. ಇಂತಹ ವಚನಗಳ ಅಂತರಾಳವನ್ನು ಅರ್ಥಮಾಡಿಕೊಂಡು ಅನುಸರಿಸುವುದಾದರೆ ಜಾತಿ ಕಟ್ಟಳೆಯ ಸಂಕೀರ್ಣತೆಯಿಂದಾಗಿ ನಡೆಯುತ್ತಿರುವ ಮರ್ಯಾದಾ ಹತ್ಯೆಯಂತಹ ಹೇಯ ಕೃತ್ಯಗಳು ಕಡಿಮೆಯಾಗಬಹುದು.

ಇನ್ನು ಹೆಣ್ಣು ಎರಡನೇ ದರ್ಜೆಯ ಪ್ರಜೆ ಎಂಬುದು ಪುರುಷ ಪ್ರಧಾನ ವ್ಯವಸ್ಥೆಯ ಅಂಬೋಣ. ಇದಕ್ಕೆ ಇಂಬು ಕೊಟ್ಟಂತೆ ಹೆಣ್ಣು ಭ್ರೂಣಹತ್ಯಗಳು ಎಗ್ಗಿಲ್ಲದೆ ಎಲ್ಲೆಮೀರಿ ನಡೆಯುತ್ತಿವೆ.
“ಮೊಲೆ-ಮುಡಿ ಬಂದರೆ ಹೆಣ್ಣೆಂಬರು.
ಗಡ್ಡ-ಮೀಸೆ ಬಂದರೆ ಗಂಡೆಂಬರು.
ನಡುವೆ ಸುಳಿವಾತ್ಮನು
ಗಂಡೂ ಅಲ್ಲ ಹೆಣ್ಣೂ ಅಲ್ಲ ಕಾಣಾ ರಾಮನಾಥ”
ಎನ್ನುವ ದೇವರ ದಾಸಿಮಯ್ಯನ ವಚನದ ಪ್ರಸ್ತುತತೆಯನ್ನು ಗಮನಿಸಬೇಕು. ಲಿಂಗ ಎಂಬುದು ದೈಹಿಕ ವ್ಯತ್ಯಾಸವಷ್ಟೇ ಅಲ್ಲದೆ ಸಾಮರ್ಥ್ಯ, ಪ್ರತಿಭೆ, ಬುದ್ಧಿ, ಭಾವಗಳ ಭೇದವಲ್ಲ. ಗಂಡಾಗಲೀ ಹೆಣ್ಣಾಗಲೀ ಶ್ರದ್ಧೆ, ಪ್ರಾಮಾಣಿಕತೆ, ಹೃದಯವಂತಿಕೆಯಿದ್ದರೆ ಲಿಂಗ ತಾರತಮ್ಯದ ಅಗತ್ಯವಿಲ್ಲ ಎಂಬುದು ವಚನಕಾರರ ಬಲವಾದ ಅಭಿಪ್ರಾಯ. ಅದಕ್ಕೇ ಸತಿ ಪತಿಗಳೊಂದಾದ ಭಕ್ತಿ ಶಿವನಿಗೆ ಮೆಚ್ಚು ಎಂದು ಗಂಡ ಹೆಂಡಿರು ಯಾವ ಭೇದವೂ ಇಲ್ಲದೆ ಒಮ್ಮನದಿಂದ ಒಗ್ಗೂಡಿ ಯಾವುದೇ ಕೆಲಸ ಮಾಡಬೇಕು ಎಂಬುದನ್ನು ವಚನಗಳು ಸಾರಿ ಸಾರಿ ಹೇಳುತ್ತವೆ. ಪುರುಷ ಅಹಂ ಅಥವಾ ಸೌಂದರ್ಯಮದದಿಂದ ತಮ್ಮದೇ ಸಂಸಾರವನ್ನು ಬೀದಿಗೆ ತಂದುಕೊಳ್ಳುತ್ತಿರುವ 21ನೆಯ ಶತಮಾನದ ಹೆಣ್ಣು ಗಂಡುಗಳು ಇಂತಹ ವಚನಗಳನ್ನು ಗಂಭೀರವಾಗಿ ತೆಗೆದುಕೊಂಡರೆ ಎಷ್ಟೋ ಜೀವ, ಜೀವನ ಉಳಿಯುತ್ತದೆ.

ಆಧುನಿಕ ಕಾಲದ ಮತ್ತೊಂದು ವಿರೋಧಾಭಾಸ ಎಂದರೆ ಕುರುಡು ನಂಬಿಕೆ ಅಥವಾ ಭ್ರಮೆ. ವೈಜ್ನಾನಿಕವಾಗಿ ತುಂಬ ಮುಂದುವರಿದಿದ್ದೇವೆ ಎಂದುಕೊಂಡು ಬಹುತೇಕ ಧಾರ್ಮಿಕ ಆಚರಣೆಗಳು ಮನೋದೈಹಿಕ ಆರೋಗ್ಯತತ್ವದ ತಳಹದಿಯ ಮೇಲೆ ರೂಪುಗೊಂಡಿವೆ ಎಂಬ ಅರಿವಿರದೆ ಪರಂಪರಾನುಗತವಾಗಿ ಬಂದ ಧಾರ್ಮಿಕ ಆಚರಣೆಗಳನ್ನು ಗೊಡ್ಡು ಸಂಪ್ರದಾಯ ಎಂದು ಜರೆಯುತ್ತಲೇ, ಡಂಭಾಚಾರದ ಜ್ಯೋತಿಷಿಗಳ ಮೊರೆ ಹೋಗುತ್ತಿರುವುದು ಅಚ್ಚರಿ ತರುತ್ತದೆ. ದಿನ ನಿತ್ಯ ಎಲ್ಲ ವಾಹಿನಿಗಳಲ್ಲೂ ಒಬ್ಬೊಬ್ಬ ಜ್ಯೋತಿಷಿಯ ಮುಖದರ್ಶನವಾಗುತ್ತದೆ. ಅದಕ್ಕೇ ಬಸವಣ್ಣನವರು
“ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ
ಉಂಬ ಜಂಗಮ ಬಂದರೆ ನಡೆಯೆಂಬರು,
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ”
ಎಂದು ಹಸಿದವರಿಗೆ ಇಕ್ಕದೆ ಡಾಂಭಿಕ ಜ್ಯೋತಿಷಿಗಳ, ವಾಮಾಚಾರಿಗಳ ಮಾತಿಗೆ ಮರುಳಾಗಿ ಹೋಮ, ಹವನ, ಶಾಂತಿ, ವಾಸ್ತು ಎಂಬ ಹೆಸರಿನಲ್ಲಿ ಸಹಸ್ರಾರು ರೂಪಾಯಿಗಳ ದಂಡ ತೆರುವುದನ್ನು ಕಾಣುತ್ತೇವೆ. ಜೊತೆಗೆ ದೇವಸ್ಥಾನ ಕಟ್ಟುವ ಕೆಲಸ ಎಂದರೆ ಸಾಕು ಕೈಮೀರಿ ದಾನ ಮಾಡುವ ಮಹಾದಾನಿಗಳ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದ್ದಾರೆ. ಸತ್ಯದ ಹಾದಿಯಿಂದ ದೂರ ಹೋಗಿ ವಂಚನೆಯ ಮಾರ್ಗದಲ್ಲಿ ನಡೆವ ಮಂದಿ ಪಾಪ ಪ್ರಜ್ನೆಯ ಹೊಡೆತಕ್ಕೆ ಸಿಲುಕಿ ಹೆಚ್ಚಾಗಿ ದಾನ, ಹರಕೆ,ಕಾಣಿಕೆ ನೀಡಿ ಪಾಪ ಪರಿಹಾರಕ್ಕಾಗಿ ಹಾತೊರೆಯುವುದನ್ನು ಕಾಣುತ್ತೇವೆ:
“ಕಲ್ಲು ಮನೆಯ ಮಾಡಿ ಕಲ್ಲು ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದಡೆ, ದೇವರೆತ್ತ ಹೋದರೋ?”

ಎಂದು ಅಲ್ಲಮಪ್ರಭು ನಿಜಭಕ್ತಿಗಿಂತ ತೋರ್ಪಡಿಕೆ ಭಕ್ತಿಯೇ ಹೆಚ್ಚಾಗಿರುವುದರ ಕಡೆ ಬೆಟ್ಟುಮಾಡಿ ತೋರುತ್ತಾನೆ. ಈ ವಚನಗಳು ನಮ್ಮ ಮನದ ಆಳವನ್ನು ತಟ್ಟಿ ಜಾಗೃತಿಯನ್ನು ಮೂಡಿಸಬೇಕಾಗಿದೆ. ಆದರೆ ಸಮಾಜದ ಐಕ್ಯತೆಗಾಗಿ, ಸಾಮರಸ್ಯಕ್ಕಾಗಿ ಸದಾಶಯದಿಂದ ನಿರ್ಮಿಸಲ್ಪಡುತ್ತಿದ್ದ ಗುಡಿಗಳು, ಶಾಸ್ತ್ರೋಕ್ತವಾಗಿ ಕಟ್ಟಲ್ಪಟ್ಟ ದೇಗುಲಗಳು ಪ್ರಕೃತಿಯಲ್ಲಿರುವ ಧನಾತ್ಮಕ ಶಕ್ತಿಯನ್ನು (ಕಾಸ್ಮಿಕ್ ಎನರ್ಜಿ) ಆಕರ್ಷಿಸಿ ಅಲ್ಲಿಗೆ ಬರುವ ಆಸ್ತಿಕರ ಮನಸ್ಸು ಏಕಾಗ್ರತೆಯಲ್ಲಿರಲು, ನೆಮ್ಮದಿಯಿಂದಿರಲು ಸಹಕಾರಿಯಾಗುತ್ತದೆ. ಆದರೆ ಅದನ್ನು ಕಟ್ಟುವ ರೀತಿ, ಅಲ್ಲಿ ಪೂಜೆ ಮಾಡುವ ಪುರೋಹಿತ(ಪುರದ ಹಿತ ಕಾಪಾಡುವವ)ರು ಪರಿಶುದ್ಧ ಮನಸ್ಸಿನಿಂದ ಸರ್ವೇ ಜನಾಃ ಸುಖಿನೋ ಭವಂತು ಎಂಬ ಭಾವದಿಂದ ಮಂತ್ರೋಚ್ಛಾರ ಮಾಡುತ್ತ ಪೂಜೆ ಮಾಡಿದರೆ ಅಂತಹ ಪ್ರಶಾಂತತೆ ಸಿಗಲು ಸಾಧ್ಯ. ಆದರೆ ಹಿಂದೆಲ್ಲ ದೇಗುಲಗಳೇ ದೇವದಾಸಿ ಪದ್ಧತಿಗೆ ಶ್ರೀಕಾರ ಹಾಕಿದ್ದು ಎಲ್ಲರಿಗೂ ತಿಳಿದದ್ದೇ. ಉತ್ತರ ಕರ್ನಾಟಕದಲ್ಲಿ ದೇಗುಲದಲ್ಲಿ ಪುರೋಹಿತರೇ ಮೋಡಿ ಮಾಡಿ, ಹೆದರಿಸಿ ಹೆಣ್ಣುಮಕ್ಕಳನ್ನು ತಮ್ಮ ಬಲೆಗೆ ಕೆಡವಿಕೊಂಡ ಸುದ್ದಿ ನಿನ್ನೆ ಮೊನ್ನೆಯದು. ಹಾಗಾಗಿಯೇ ಅಕ್ಕಮಹಾದೇವಿ
“ವಿಷಯಸುಖ ವಿಷವೆಂದು ತಿಳಿಯದಜ್ನಾನಿ ಬಿಡು
ವಿಷಯಸುಖ ನಿರಯವೆಂದರಿಯದರಿಮರುಳೆ ಬಿಡು”
ಎಂದು ಬುದ್ಧಿ ಹೇಳಿದ್ದು. ಅತಿಯಾದ ವಿಷಯಾಸಕ್ತಿ ಎಂದಿಗೂ ವಿಷವೇ ಹೌದು. 8 ತಿಂಗಳಿಂದ ಹಿಡಿದು 80 ವರ್ಷ ವಯಸ್ಸಿನ ಯಾವ ಹೆಣ್ಣೂ ‘ನಿರ್ಭಯ’ವಾಗಿ ಓಡಾಡಲಾರದ ಸ್ಥಿತಿಗೆ ನಮ್ಮ ಸಮಾಜ ತಲುಪಿದೆ. ಹೆಣ್ಣಿನ ಮೇಲೆ ನಿತ್ಯ ಒಂದಿಲ್ಲೊಂದುಕಡೆ ನಡೆಯುತ್ತಿರುವ ಲೈಂಗಿಕ ಶೋಷಣೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.

ಜಿಹ್ವಾಚಾಪಲ್ಯಕ್ಕೆ ಬಲಿಯಾಗಿ ಆರೋಗ್ಯ ಕೆಡಿಸಿಕೊಂಡು ಬಸವಳುದವರಿಗೆ ಮತ್ತು ಪರನಾರೀ ವ್ಯಾಮೋಹವುಳ್ಳವರಿಗೆ ಬಸವಣ್ಣನವರ
ಕೊಲ್ಲೆನಯ್ಯಾ ಪ್ರಾಣಿಗಳ, ಮೆಲ್ಲೆನಯ್ಯಾ ಬಾಯಿಚ್ಛೆಗೆ
ಒಲ್ಲೆನಯ್ಯಾ, ಪರಸತಿಯರ ಸಂಗವ”
ಎನ್ನುವ ಇಂತಹ ನೈತಿಕಪ್ರಜ್ನೆ ಮೂಡಿಸುವ ವಚನಗಳು ದಾರಿದೀಪವಾಗಬೇಕಿದೆ.

“ಹರಿವ ಹಾವಿಗಂಜೆ, ಉರಿವ ನಾಲಗೆಗಂಜೆ, ಸುರಗಿಯ ಮೊನೆಗಂಜೆ
ಒಂದಕ್ಕಂಜುವೆ, ಒಂದಕ್ಕಳುಕುವೆ
ಪರಸ್ತ್ರೀ- ಪರಧನವೆಂಬೀ ಜೂಬಿಂಗಂಜುವೆ
ಮುನ್ನಂಜದ ರಾವಣನೇವಿಧಿಯಾದ
ಅಂಜುವೆನಯ್ಯಾ ಕೂಡಲಸಂಗಮದೇವಾ”
ಎನ್ನುವ ಬಸವಣ್ಣನವರ ವಚನವು ಪರಸ್ತ್ರೀಯನ್ನು ಬಯಸಿದವರಿಗೆ ರಾವಣನಿಗೆ ಆದ ದುರ್ಗತಿಯೇ ಆಗುವುದು ಎನ್ನುವ ಸಂದೇಶವನ್ನು ರವಾನಿಸುತ್ತದೆ.

ಅನ್ನ ಮದ, ಅರ್ಥ ಮದ, ಕೀರ್ತಿ ಮದ, ಅಧಿಕಾರದ ಮದದಲ್ಲಿ ತೇಲುವ ಇಂದಿನ ಹಲವಾರು ಮಂದಿ ತಮ್ಮೆದುರಿಗೆ ಇರುವವರನ್ನು ‘ಅಯ್ಯಾ’ ಎನ್ನದೆ ‘ಎಲವೋ’ ಎನ್ನುವಂತೆ ಮಾಡಿದೆ. ಇತರರಿಗೆ ನೋವಾಗದಂತೆ ಸಂಯಮದಿಂದ ಮಾತನಾಡುವ ಸೌಜನ್ಯವನ್ನು ಕಳೆದುಕೊಂಡಿದ್ದಾರೆ. ಜೊತೆಗೆ ಭರವಸೆಗಳ ಮೂಟೆಯ ಭಾರವನ್ನು ಹೊರಿಸಿ ಯಾವುದೇ ಕೆಲಸ ಮಾಡಿಕೊಡದೆ ಕೇವಲ ಬಾಯಿಮಾತಿನಲ್ಲಿ ಬೆಣ್ಣೆ ತಿನ್ನಿಸುವವ ಇಂದಿನ ಸಹಸ್ರಾರು ಗೋಮುಖ ವ್ಯಾಘ್ರಗಳಿಗೆ
“ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯಾ”
ಎನ್ನುವ ಬಸವಣ್ಣನವರ ವಚನ ನೀತಿ ಪಾಠ ಹೇಳುವಂತಿದೆ.

ಅಹಿಂಸೆ ತಾಂಡವವಾಡುತ್ತಿರುವ ಇಂದಿನ ಸಂದರ್ಭದಲ್ಲಿ “ದಯವೇ ಧರ್ಮದ ಮೂಲವಯ್ಯ” ಎನ್ನುವ ವಚನವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಕಲ ಜೀವರಾಶಿಗಳಲ್ಲೂ ದಯೆ ತೋರುವ ಗುಣವನ್ನು ಮೈಗೂಡಿಸಿಕೊಂಡರೆ ಮಾತ್ರ ಸಮಾಜ ಸ್ವಾಸ್ಥ್ಯದಿಂದಿರಲು ಸಾಧ್ಯ.

ವಚನ ಸಾಹಿತ್ಯ ಸಮಾಜೋ-ಧಾರ್ಮಿಕ ಅಂಶಗಳನ್ನಷ್ಟೇ ಅಲ್ಲದೆ ಸಾಮಾಜಿಕ ಮೌಲ್ಯಗಳನ್ನು ಮತ್ತು ಪಾರಮಾರ್ಥಿಕ ಮೌಲ್ಯಗಳನ್ನೂ ನಮ್ಮ ಸಮಾಜಕ್ಕೆ ಧಾರೆಯೆರೆದಿವೆ. ಕಾಯಕತತ್ವ ಉತ್ಪಾದನೆಯನ್ನು ಹೇಳಿದರೆ ದಾಸೋಹತತ್ವ ವಿತರಣೆಯನ್ನು ಹೇಳುತ್ತದೆ. ಅಸಂಚಯನವನ್ನು ಪ್ರತಿಪಾದಿಸುವ ವಚನಸಾಹಿತ್ಯವು ಲಿಂಗಭೇದವಿಲ್ಲದೆ, ವರ್ಗಭೇದವಿಲ್ಲದೆ, ವರ್ಣಭೇದವಿಲ್ಲದೆ ಎಲ್ಲರನ್ನೂ ತನ್ನಲ್ಲಿ ತೊಡಗಿಸಿಕೊಂಡಿದ್ದು ವಿಶೇಷ.

ಸ್ವಾರ್ಥ, ದುರಾಸೆ, ಅನಾಚಾರ, ದುಷ್ಕೃತ್ಯ-ದುರ್ನಡತೆಗಳಿಂದ ಕಲುಷಿತಗೊಂಡಿರುವ ಸಮಾಜದಲ್ಲಿ
ನಮ್ಮ ಭವ್ಯ ಸಾಮಾಜಿಕ- ಸಾಂಸ್ಕೃತಿಕ ವ್ಯವಸ್ಥೆಯನ್ನು ಮರೆತು ಆಧುನಿಕತೆಯ, ತಂತ್ರಜ್ನಾನದ ಹಿಂದೆ ಕಣ್ಕಟ್ಟಿದ
ಕುದುರೆಯಂತೆ ನಾಗಾಲೋಟದಲ್ಲಿ ಓಡುತ್ತಿರುವ ಜನತೆಯ ಪ್ರಕ್ಷುಬ್ದಗೊಂಡ ಮನಸ್ಸುಗಳಿಗೆ ವಚನಗಳು ಸಾಂತ್ವನ ಹೇಳುವ ಮೂಲಕ ಮನಶ್ಶಾಸ್ತ್ರಜ್ನನಂತೆ ಕೆಲಸ ಮಾಡುತ್ತವೆ. ಸ್ವಸ್ಥ ಸಮಾಜ ನಿರ್ಮಾಣಕೆ ವಚನ ಸಾಹಿತ್ಯ ಪರಿಹಾರವಾಗಬಹುದೇನೋ. . ಆದರೆ ಅವುಗಳನ್ನು ಓದುವ, ಮನನ ಮಾಡುವ, ಮನೆಮನೆಗಳಿಗೆ ತಲುಪಿಸುವ ಮನಸ್ಸು ಮಾತ್ರ ನಾವೇ ಮಾಡಬೇಕಿದೆ.

IMG 20180306 WA0008 1 edited
ಡಾ.ಶುಭಶ್ರೀಪ್ರಸಾದ್, ಮಂಡ್ಯ
9483531777
Copyright © All rights reserved Newsnap | Newsever by AF themes.
error: Content is protected !!