Main News

ನಾಗರ ಪಂಚಮಿ ( Nagara panchmi )

ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ನಾಗರ ಪಂಚಮಿಯ ಸಂಭ್ರಮದ ದಿನ. ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿ ಹಬ್ಬಗಳ ಸಾಲು ಆರಂಭವಾಗುವುದಕ್ಕೆ ನಾಂದಿ ಹಾಡುತ್ತದೆ.

ಹಿಂದೂ ಸಂಪ್ರದಾಯಗಳಲ್ಲಿ ಪ್ರತಿಯೊಂದು ಹಬ್ಬವೂ ಪ್ರಕೃತಿ- ಪ್ರಾಣಿಗಳೆಡೆಗೆ ಮಾನವನಿಗಿರುವ ಅತ್ಯಂತ ಶ್ರದ್ಧಾ ಭಕ್ತಿಗಳನ್ನು ಹೊಂದಿರುವಂತೆ ನಾಗರ ಪಂಚಮಿ ಹಬ್ಬವೂ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುತ್ತದೆ.

ನಮ್ಮ ಭೂಮಿಯಲ್ಲಿ ಹಾವುಗಳ ಪರಂಪರೆ ಕುರಿತು ಅನೇಕ ಪುರಾಣದ ಉಲ್ಲೇಖಗಳಿವೆ. ಫಲವನ್ನು ನೀಡುವ ದೇವರು ನಾಗರ ಎಂಬುದು ಬಹಳ ಹಿಂದಿನಿಂದ ನಡೆದುಕೊಂಡು ಬಂದ ನಂಬಿಕೆ. ಸಂತಾನ ಪ್ರಾಪ್ತಿಗಾಗಿ ನಾಗ ದೇವರ ಆರಾಧನೆ ನಮ್ಮಲ್ಲಿ ಬಹಳ ಜನಪ್ರಿಯ. ನಮ್ಮ ಭೂಮಿಯನ್ನು ಆದಿಶೇಷ ತನ್ನ ಹೆಡೆಯಲ್ಲಿ ಧರಿಸಿದ್ದಾನೆ ಎಂದು ಪುರಾಣಗಳು ಹೇಳುತ್ತವೆ.

ನಾಗರ ಪಂಚಮಿ ಹಿಂದಿರುವ ಪ್ರಧಾನ ಕಾರಣ

ನಾಗರ ಪಂಚಮಿ ಸಂಬಂಧಿಸಿದಂತೆ ಜನಪದ ಮತ್ತು ಪುರಾಣದಲ್ಲಿ ಹಲವು ಕಥೆಗಳಿವೆ. ಜನಪದ ಕಥೆಯ ಪ್ರಕಾರ ನಾಗರ ಪಂಚಮಿ ಬರುವುದು ಮುಂಗಾರಿನ ರಭಸದ ದಿನಗಳ ಮಧ್ಯೆ. ಈ ಕಾಲದ ಕೃಷಿ ಚಟುವಟಿಕೆಗಳು ಒಂದು ಹಂತ ತಲುಪಿರುತ್ತವೆ. ಈ ಕಾಲದಲ್ಲಿ ಕೀಟ, ಮಿಡತೆಗಳ ಹಾವಳಿ ಅಧಿಕ. ಅಷ್ಟೇ ಅಲ್ಲದೆ ಫಸಲು ತಿನ್ನಲು ಬರುವ ಇಲಿಗಳಿಗೂ ಕೊರತೆಯಿಲ್ಲ. ಇವೆಲ್ಲದರಿಂದ ರೈತನ ಫಸಲನ್ನು ಕಾಪಾಡುವುದು ಹಾವುಗಳು. ಇಲಿ, ಕಪ್ಪೆಗಳ ಅತಿಯಾದ ಹಾವಳಿಯನ್ನು ನಿಯಂತ್ರಿಸುವ ನಾಗರನಿಗೆ ಪುಟ್ಟದೊಂದು ಧನ್ಯವಾದ ಹೇಳಲು ನಡೆಸುವ ಪೂಜೆಯೇ ನಾಗರ ಪಂಚಮಿ.

ಮಳೆಗಾಲದಲ್ಲಿ ಹಾವುಗಳು ಜನರಿಗೆ ಭಯಭೀತಿಯನ್ನುಂಟು ಮಾಡುತ್ತವೆ. ಮಳೆಯ ಕಾರಣದಿಂದ ಬಿಲಗಳಲ್ಲಿ ನೀರು ತುಂಬಿಕೊಂಡಾಗ ಹೊರ ಬರುವ ಹಾವುಗಳು ಜನರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಹಾವುಗಳಿಗೆ ಹಾಲೆರೆದು ಪೂಜಿಸಲಾಗುತ್ತದೆ.

ಸ್ಕಂದ ಪುರಾಣದಲ್ಲಿ ನಾಗರ ಪಂಚಮಿಯ ಬಗ್ಗೆ ಮಾಹಿತಿ

ಹಿಂದೆ ದೇವಶರ್ಮ ಎಂಬ ಬ್ರಾಹ್ಮಣನೊಬ್ಬನಿದ್ದನು. ಆತನಿಗೆ 8 ಗಂಡು ಮಕ್ಕಳು ಹಾಗೂ ಒಬ್ಬಾಕೆ ಹೆಣ್ಣು ಮಗಳಿದ್ದಳು. ಒಂದು ದಿನ ಗರುಡನಿಂದ ಹೆದರಿಸಲ್ಪಟ್ಟ ನಾಗರವೊಂದು ಈ ಕನ್ನಿಕೆಯ ಬಳಿ ಬಂದು ಆಶ್ರಯವನ್ನು ಕೇಳುತ್ತದೆ. ಭಕ್ತಿಯಿಂದ ಕನ್ನಿಕೆ ಆ ನಾಗನಿಗೆ ಹಾಲು, ಫಲಗಳನ್ನು ಇಟ್ಟು ಭಕ್ತಿಯಿಂದ ಸಾಕುತ್ತಾಳೆ. ಇದಕ್ಕೆ ಪ್ರತಿಯಾಗಿ ಆ ನಾಗವು ದಿನಂಪ್ರತಿ ಆಕೆಗೆ ಒಂದು ತೊಲೆ ಚಿನ್ನವನ್ನು ನೀಡುತ್ತಿರುತ್ತದೆ. ಹೀಗಿರಲು ಒಂದು ದಿನ ಎಂಟು ಗಂಡು ಮಕ್ಕಳಲ್ಲಿ ಒಬ್ಬನು ತುಂಬಾ ಬಂಗಾರ ಬೇಕೆಂದು ನಾಗನನ್ನು ಪೀಡಿಸಿ, ಕಾಲಿನಿಂದ ಒದೆಯುತ್ತಾನೆ. ಕೋಪಗೊಂಡ ನಾಗರ ಹಾವು ಅವನ್ನು ಸೇರಿದಂತೆ ಇತರ ಏಳು ಜನರನ್ನು ಕೊಂದು ಹೊರಟು ಹೋಗುತ್ತದೆ. ತನ್ನ ಅಣ್ಣಂದಿರ ಸಾವಿಗೆ ತಾನೇ ಕಾರಣನಾದೇ ಎಂದು ಆ ಕನ್ನಿಕೆ, ದೇವರ ಇದಿರಿನಲ್ಲಿ ಶಿರಚ್ಛೇದನಕ್ಕೆ ಮುಂದಾದಾಗ, ನಾರಾಯಣನು ವಾಸುಕಿಗೆ ಆ ಸತ್ತ ಹುಡುಗರನ್ನು ಬದುಕಿಸಲು ಹೇಳುತ್ತಾನೆ. ಈ ರೀತಿ ಪುನಃ ಅಣ್ಣಂದಿರ ಜೀವವನ್ನು ಮರಳಿ ಪಡೆದುಕೊಳ್ಳುವಲ್ಲಿ ಆ ಕನ್ನಿಕೆ ಯಶಸ್ವಿಯಾದ ದಿನವೇ ನಾಗರ ಪಂಚಮಿ.

ಹಾವನ್ನು ಭಕ್ತಿಭಾವದಿಂದ ಪೂಜಿಸಿ ತನ್ನ ಅಣ್ಣನನ್ನು ತಂಗಿ ಬದುಕಿಸಿಕೊಂಡ ದಿನವಾಗಿದ್ದರಿಂದ ಈ ದಿನವನ್ನು ಭ್ರಾತೃತ್ವದ ಸಂಕೇತವಾಗಿಯೂ ಕೆಲವೆಡೆ ಆಚರಿಸಲಾಗುತ್ತದೆ.

ನಾಗರಪಂಚಮಿ ಹೆಚ್ಚಾಗಿ ಹೆಣ್ಣು ಮಕ್ಕಳ ಹಬ್ಬ. ನಾಗರಪಂಚಮಿಯ ಹಿಂದಿನ ದಿನ ಸಹೋದರಿ ನಾಗದೇವತೆಗೆ ಬೇಡಿಕೊಂಡರೆ ಸಹೋದರನಿಗೆ ಲಾಭ ಹಾಗೂ ರಕ್ಷಣೆ ಸಿಗುತ್ತದೆ. ನಾಗರಪಂಚಮಿ ಮಾಂಗಲ್ಯಪ್ರದ ಹಾಗೂ ಸಂತಾನಪ್ರದ ಎಂಬ ನಂಬಿಕೆ. ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ವಿಶೇಷತೆಗಳಿಂದ ಕೂಡಿರುತ್ತದೆ. `

ಸರ್ಪಯಜ್ಞವನ್ನು ನಿಲ್ಲಿಸಿದ ದಿನ:

ಜನಮೇಜಯ ಎಂಬ ರಾಜ ತನ್ನ ತಂದೆ ಪರೀಕ್ಷಿತನ ಸಾವಿಗೆ ಹಾವು ಕಾರಣ ಎಂದು ತಿಳಿದು ಭೂಲೋಕದಲ್ಲಿರುವ ಸರ್ಪಸಂಕುಲವನ್ನೆಲ್ಲ ನಾಶ ಮಾಡುವ ಶಪಥ ಮಾಡಿ, ಸರ್ಪಯಜ್ಞ ಮಾಡಲು ಹೊರಡುತ್ತಾನೆ. ಆದರೆ ಪ್ರಾಣಿ ಹಿಂಸೆ ಮಹಾಪಾಪ ಎಂಬುದನ್ನು ಸಂತರೊಬ್ಬರ ಹಿತವಚನದಿಂದ ಅರಿತ ಜನಮೇಜಯ ಸರ್ಪಯಜ್ಞವನ್ನು ಹಿಂದೆಗೆದುಕೊಳ್ಳುತ್ತಾನೆ. ಹೀಗೆ ಜನಮೇಜಯ ಸರ್ಪಯಜ್ಞವನ್ನು ನಿಲ್ಲಿಸಲು ನಿರ್ಧರಿಸಿದ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ಆದ್ದರಿಂದ ಈ ದಿನವನ್ನು ನಾಗರ ಪಂಚಮಿ ಎಂದು ಆಚರಿಸಲಾಗುತ್ತದೆ ಎಂಬ ಪ್ರತೀತಿಯೂ ಇದೆ.

ಶಿವನ ಆಭರಣ, ವಿಷ್ಣುವಿನ ಹಾಸಿಗೆ, ಗಣಪತಿಯ ಹೊಟ್ಟೆಯ ಪಟ್ಟಿ, ಸಮುದ್ರಮಂಥನ ಕಾಲದಲ್ಲಿ ಮಂದರ ಪರ್ವತವೆಂಬ ಕಡಗೋಲಿಗೆ ಹಗ್ಗವಾಗಿ, ದುರ್ಯೋಧನನ ಧ್ವಜದ ಚಿಹ್ನೆಯಾಗಿ ನಾಗ ಕಾಣಿಸಿಕೊಳ್ಳುತ್ತಾನೆ.

ಪೂಜಾ ಸಂದರ್ಭದಲ್ಲಿ ಹಾಲು ತುಪ್ಪ ಎರೆಯುವಾಗ ಹೇಳಬೇಕಾದ ಶ್ಲೋಕ :

ಅನಂತಂ ವಾಸುಕಿಂ ಶೇಷಂ ಪದ್ಮಕಂಬಲಕೌ ತಥಾ |
ತಥಾ ಕಾರ್ಕೋಟಕಂ ನಾಗಂ ಭುಜಂಗಶ್ವತರೌ ತಥಾ ||
ಧೃತರಾಷ್ಟ್ರಂ ಶಂಖಪಾಲಂ ಕಾಲೀಯಂ ತಕ್ಷಕಂ ತಥಾ |
ಪಿಂಗಲಂ ಚ ಮಹಾನಾಗಂ ಸಪತ್ನೀಕಾನ್ ಪ್ರಪೂಜಯೇತ್ ||

ಅನಾದಿಕಾಲದಿಂದಲೂ ಸರ್ವೋತ್ತಮನಾದ ಶ್ರೀ ಹರಿಗೆ ಶಯನನಾದ, ದೇವಶ್ರೇಷ್ಟನಾದ, ಸರ್ವಶೋಕವನ್ನೂ ನಿವಾರಿಸುವ ವಾರುಣೀಪತಿಯಾದ ಶೇಷದೇವರಿಗೆ ಭಕ್ತಿಯಿಂದ ನಮಿಸುವೆನು.

ಬೆನ್ನು ತೊಳೆಯುವುದು :

ನಾಗರಪಂಚಮಿ ದಿನದಂದು ಅಕ್ಕತಂಗಿಯರು ಅಣ್ಣತಮ್ಮಂದಿರ ಬೆನ್ನು ತೊಳೆಯುವುದು ಸಂಪ್ರದಾಯ. ಹಿಂದೆ ಸರ್ಪಗಳು ವರ ನೀಡಿದ್ದವು. ” ಈದಿನ ಸರ್ಪದಂತಿರುವ ಯಾವುದೇ ವಸ್ತುಗಳಿಗೆ ಹಾಲೆರೆದರೂ ನಾವು ಸಂತುಷ್ಟರಾಗುವೆವು” ಎಂದು. ಅದರಂತೆ ಬೆಳಿಗ್ಗೆ ನಾಗಪ್ಪನಿಗೆ ಅಭಿಷೇಕ ಮಾಡಿದ ಹಾಲನ್ನು ತೆಗೆದುಕೊಂಡು ಅಣ್ಣ ತಮ್ಮಂದಿರ ಸರ್ಪಾಕಾರದಲ್ಲಿರುವ ಬೆನ್ನಿನ ಹುರಿಗೆ ಹಚ್ಚಿ ತೊಳೆಯುವುದರಿಂದ , ಸರ್ಪಗಳು ಸಂತುಷ್ಟರಾಗಿ ಹಚ್ಚಿದವರಿಗೂ, ಹಚ್ಚಿಸಿಕೊಂಡವರಿಗೂ ಅನುಗ್ರಹ ಮಾಡುವುವು. ಅದಕ್ಕೇ ಈ ಸಂಪ್ರದಾಯ. ಹೀಗೆ ಸಹೋದರಿಯಿಂದ ಬೆನ್ನು ತೊಳೆಸಿಕೊಂಡ ಸಹೋದರ, ಸಹೋದರಿಗೆ ಉಡುಗೊರೆ / ಕಾಣಿಕೆ ನೀಡುವುದು ವಾಡಿಕೆ.

ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿ ಆಚರಣೆ

 ಸಾಮಾನ್ಯವಾಗಿ ನಾಗರ ಪಂಚಮಿ ಆರಂಭವಾಗುವುದೇ ನಾಗರ ಅಮವಾಸ್ಯೆಯಿಂದ ಅಮವಾಸ್ಯೆಯ ನಂತರ ಮೂರನೆಯ ದಿನ ರೊಟ್ಟಿ ಹಬ್ಬ, ನಾಲ್ಕನೆಯ ದಿನ ಚತುರ್ಥಿ, ಐದನೆಯ ದಿನ ಪಂಚಮಿ ಆಚರಿಸುತ್ತರೆ. ರೊಟ್ಟಿ ಹಬ್ಬದಂದು ಮನೆ ಮನೆಯಲ್ಲಿ ಬಗೆ ಬಗೆಯ ಪಲ್ಯೆ, ಚಟ್ನಿ ತಯಾರಿಸಿ ರೊಟ್ಟಿ, ಚಪಾತಿಯನ್ನು ತಯಾರಿಸಿ ತಮ್ಮ ಅಕ್ಕ ಪಕ್ಕದ ಮನೆಯವರೊಂದಿಗೆ ಪರಸ್ಪರ ಹಂಚಿಕೊಳ್ಳುತ್ತಾರೆ. ಇದಕ್ಕೆ ಕಾರಣ ನಾಗರ ಪಂಚಮಿ ಹಬ್ಬದ ನಾಲ್ಕೈದು ದಿನ ಉಂಡಿ, ಹೋಳಿಗೆ ಮಾಡುವುದರಿಂದ ನಾಲ್ಕೈದು ದಿನಕ್ಕೆ ಬೇಕಾಗುವಷ್ಟು ಸಜ್ಜಿ, ಜೋಳದ ರೊಟ್ಟಿ ತಯಾರಿಸುತ್ತಾರೆ. ಅದನ್ನೇ ಬಾಂಧವ್ಯ ರೂಪದಲ್ಲಿ ಹಂಚಿಕೊಳ್ಳುತ್ತಾರೆ‌.

ರೊಟ್ಟಿ ಹಬ್ಬದ ನಂತರ ಶೇಂಗಾ ಉಂಡಿ, ಅಳ್ಳಿಟ್ಟು ಉಂಡಿ, ಎಳ್ಳುಂಡಿ, ಚಕ್ಕುಲಿ ಸೇರಿ ಬಗೆ ಬಗೆಯ ಉಂಡಿಗಳನ್ನು ತಯಾರಿಸುತ್ತಾರೆ. ಈ ಉಂಡಿಗಳನ್ನು ಶ್ರಾವಣ ಮಾಸ ಪೂರ್ತಿ ತಿನ್ನುವುದು ವಾಡಿಕೆ. ಇನ್ನೂ ಬೇರೆ ಬೇರೆ ಊರುಗಳಲ್ಲಿರುವ ತಮ್ಮ ಸಂಬಂಧಿಕರಿಗೆ ಉಂಡಿ ಕೊಟ್ಟು ತರುವ ಸಂಪ್ರದಾಯವಿದೆ. ಅದರಲ್ಲಿಯೂ ತವರ ಮನೆಯಿಂದ ಉಂಡಿ ಬರಲೇಬೇಕು. ಇದು ಸಹೋದರ ಸಹೋದರರ ಮಧ್ಯೆ ಬಾಂಧವ್ಯಕ್ಕೆ ಸಾಕ್ಷಿಯಾಗುತ್ತದೆ.

Team Newsnap
Leave a Comment

Recent Posts

ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಸರ್ಕಾರಿ ನೌಕರರು ಸಾವು

ಬೆಂಗಳೂರು : ಸೋಮವಾರ ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಹಾಯಕ… Read More

May 7, 2024

Lok Sabha Election 2024 : ಕರ್ನಾಟಕದಲ್ಲಿ ಶೇ. 9.45% ರಷ್ಟು ಮತದಾನ

ನವದೆಹಲಿ : ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಶೇ. 9.45% ರಷ್ಟು ಮತದಾನವಾಗಿದೆ ಎಂದು ಎಂದು ಚುನಾವಣಾ… Read More

May 7, 2024

ಪ್ರಜ್ವಲ್‌ ಮಾತ್ರವಲ್ಲ , ತುಂಬ ರಾಜಕಾರಣಿಗಳ ವಿಡಿಯೋಗಳು ಸದ್ಯದಲ್ಲೇ ಹೊರಬರಲಿದೆ : ಕೆ ಎಸ್‌ ಈಶ್ವರಪ್ಪ

ಶಿವಮೊಗ್ಗ : ರಾಷ್ಟ್ರ ಮಟ್ಟದಲ್ಲಿ ಹಾಸನದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ ಡ್ರೈ ಪ್ರಕರಣ ಸದ್ದು ಮಾಡುತ್ತಿದ್ದು, ಪ್ರಜ್ವಲ್‌… Read More

May 7, 2024

ರಾಜ್ಯ ಸರ್ಕಾರವೇ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹಾರಲು ಹೊಣೆ : ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೊದಲ ಬಾರಿಗೆ ಪ್ರಜ್ವಲ್ ರೇವಣ್ಣ (Prajwal Revanna) ವಿಡಿಯೋ ಪ್ರಕರಣಕ್ಕೆ… Read More

May 7, 2024

ಮಂಡ್ಯ : ಭಾರಿ ಮಳೆಗೆ ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ದುರ್ಮರಣ

ಮಂಡ್ಯ :ನೆನ್ನೆ ಮಳೆಯಿಂದಾಗಿ ಮರವೊಂದು ಕಾರಿನ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ನಗರದ ಜನರಲ್… Read More

May 7, 2024

ಕರ್ತವ್ಯಕ್ಕೆ ತೆರಳುತ್ತಿದ್ದ ಚುನಾವಣಾ ಸಿಬ್ಬಂದಿ ಹೃದಯಾಘಾತದಿಂದ ಸಾವು

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಗೋವಿಂದಪ್ಪ ಸಿದ್ದಾಪುರ ಎಂಬುವರು… Read More

May 6, 2024