ಸುದ್ದಿ ಮನೆಯಲ್ಲಿ ಪಿ.ರಾಮಯ್ಯ ಹೆಸರು ಕೇಳದವರಿಲ್ಲ. ಅಷ್ಟರ ಮಟ್ಟಿಗೆ ಹೆಸರುವಾಸಿ. ಐದು ದಶಕಗಳ ಕಾಲ ಪತ್ರಕರ್ತ ವೃತ್ತಿಯನ್ನು ಜತನದಿಂದ ಕಾಪಾಡಿಕೊಂಡು ಬಂದವರು. ಸುದ್ದಿ ಮನೆಯಲ್ಲಿ ತಮ್ಮದೇ ಧಾಟಿಯಲ್ಲಿ ಸುಧೀರ್ಘ ಕಾಲ ಸವೆಸಿ, ಹಿರಿತನದ ಘನತೆಯನ್ನು ಕಾಪಾಡಿದವರು.
1953. ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ನೆಲೆಗೊಳ್ಳುತ್ತಿದ್ದ ಕಾಲಘಟ್ಟವದು. ಆಗ
ದಿ ಹಿಂದು ಪತ್ರಿಕೆ ಸೇರಿದ ಪಿ.ರಾಮಯ್ಯ ಇನ್ನು ಹಿಂತಿರುಗಿ ನೋಡಿದ್ದೆ ಇಲ್ಲ. ಎಲ್ಲಾ ಏಳು ಬೀಳುಗಳಿಗೆ ಸಾಕ್ಷಿಯಾಗಿ, ಸುದ್ದಿಗಳಿಗೆ ಕನ್ನಡಿ ಹಿಡಿದವರು.
ಒಂದೇ ಸುದ್ದಿ ಸಂಸ್ಥೆ, ಪತ್ರಿಕೆಯಲ್ಲಿ ಸುಧೀರ್ಘ ಅವಧಿಗೆ ಕೆಲಸ ಮಾಡಿದವರು ಬಹಳ ವಿರಳ. ಇದಕ್ಕೆ ಭಿನ್ನವಾಗಿ ನಿಲ್ಲುವ ರಾಮಯ್ಯ, ಹಿಂದೂ ಪತ್ರಿಕೆಯಲ್ಲಿ ಸತತವಾಗಿ 48 ವರ್ಷ ಸೇವೆ ಸಲ್ಲಿಸಿರುವುದು ದಾಖಲೆಯ ಸಂಗತಿ.
ವಿಧಾನ ಸೌಧ ಕಟ್ಟಿದ ಸಂದರ್ಭದಿಂದ ಅಲ್ಲಿ ರಾಜಕೀಯ ಬೀಟ್ ಮಾಡಿದ ಹಿರಿಯ ಜೀವ ರಾಮಯ್ಯ. ಬಹುಶಃ ಮೊದಲ ಇಬ್ಬರು ಮುಖ್ಯಮಂತ್ರಿ ಬಿಟ್ಟರೆ, ನಿಜಲಿಂಗಪ್ಪ ಅವರಿಂದ ಮೊದಲ್ಗೊಂಡು ರಾಮಕೃಷ್ಣ ಹೆಗಡೆ, ದೇವೇಗೌಡರು, ಬೊಮ್ಮಾಯಿ, ಬಂಗಾರಪ್ಪ, ಎಸ್.ಎಂ.ಕೃಷ್ಣ, ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಎಲ್ಲರ ಜೊತೆಗೂ ತಮ್ಮದೇ ಪ್ರಭಾವದಲ್ಲಿ ಒಡನಾಟ ಇಟ್ಟುಕೊಂಡವರು. ಹಾಗಂತ ಆ ಪ್ರಭಾವವನ್ನು ಎಂದೂ ದುರುಪಯೋಗ ಪಡಿಸಿಕೊಳ್ಳುವ ಸಣ್ಣ ಮನಸ್ಸು ಮಾಡಿದವರಲ್ಲ. ಹಾಗೆ ಮಾಡಿದ್ದರೆ, ಎಲ್ಲೋ ಇರುತ್ತಿದ್ದರೇನೊ!?
ವಿಧಾನಸೌಧದ ಸುದ್ದಿಗಳನ್ನು ಹೆಕ್ಕಿ ತೆಗೆದು, ಒಪ್ಪ ಮಾಡಿ ಸರಿ ಸುಮಾರು ಐದು ದಶಕಗಳ ಕಾಲ ಉಣಬಡಿಸಿದ ರಾಮಯ್ಯ ಒಂದು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿ ಗಮನಸೆಳೆದರು. ಪತ್ರಕರ್ತರೊಬ್ಬರು ಮೇಲ್ಮನೆ ಸದಸ್ಯರಾಗಿದ್ದು ಸದಾ ಮಾಧ್ಯಮ ತುಡಿತದಲ್ಲಿ ಕಾಲಸವೆಸಿದರು. ಆಗಾಗ ಸಭಾಪತಿ ಸ್ಥಾನದಲ್ಲಿ ಕುಳಿತು ಸಮರ್ಥವಾಗಿ ಸದನ ನಡೆಸಿದ ಹೆಗ್ಗಳಿಕೆಯೂ ರಾಮಯ್ಯ ಅವರದ್ದು.
ಸಣ್ಣ ಪತ್ರಿಕೆಗಳ ಸ್ಥಿತಿ ಬಗ್ಗೆ ಅಧ್ಯಯನಕ್ಕಾಗಿ ಸರ್ಕಾರ ರಚಿಸಿದ ಸಮಿತಿ ಅಧ್ಯಕ್ಷರಾಗಿ, ಜಿಲ್ಲೆಗಳ ಪ್ರವಾಸ ಮಾಡಿ ಸಮಗ್ರವಾಗಿ ಅಧ್ಯಯನ ಮಾಡಿ ವರದಿ ನೀಡಿದ್ದು ಇತಿಹಾಸ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸೇರಿದಂತೆ ಹಲವು ರಾಜಕಾರಣಿಗಳ ಸಮಕಾಲೀನರು.
88 ವಸಂತಗಳನ್ನು ದಾಟಿರುವ ಪಿ.ರಾಮಯ್ಯ ಅವರು ಅದೆಷ್ಟು ಪತ್ರಕರ್ತರಿಗೆ ಸಹಾಯ ಮಾಡಿದ್ದಾರೊ, ಸ್ಪೂರ್ತಿ ಸೆಲೆಯಾಗಿದ್ದಾರೊ, ಮಾರ್ಗದರ್ಶಕರಾಗಿದ್ದಾರೊ ಲೆಕ್ಕವಿಲ್ಲ.
ಯಾವ ಮುಖ್ಯಮಂತ್ರಿ ಬಳಿಯಲ್ಲೂ ರಾಮಯ್ಯ ಮಾತು ಅಂದರೆ ತೆಗೆದು ಹಾಕುವಂತಿರಲಿಲ್ಲ. ಅಷ್ಟು ಎತ್ತರದ ಘನತೆ ವ್ಯಕ್ತಿತ್ವ ರೂಢಿಸಿಕೊಂಡು ಹಾಗೆ ಬದುಕಿ ಬಾಳಿದವರು. ಹಾಗಾಗಿಯೇ ಇವತ್ತಿಗೂ ರಾಮಯ್ಯ ಅಂದರೆ ಸುದ್ದಿ ಮನೆಯಲ್ಲಿ ಒಂದು ಗೌರವದ ತೂಕವಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ತಮ್ಮ ಹುಟ್ಟೂರು ಬ್ಯಾಡರಹಳ್ಳಿ ನಂಟು ಇನ್ನೂ ಬಿಟ್ಟಿಲ್ಲ.
ಸದಾ ಕಾಳಜಿ ವಹಿಸಿ ಈ ಇಳಿ ವಯಸ್ಸಿನಲ್ಲೂ ಆಗಿಂದಾಗ್ಗೆ ಪೋನ್ ಮೂಲಕ ಲವಲವಿಕೆಯಿಂದ ಮಾತನಾಡಿಸುವ ರಾಮಯ್ಯ ಅವರನ್ನು ಕೋವಿಡ್ ಸಂದರ್ಭದ ಕಾರಣ ಎರಡು ವರ್ಷದಿಂದ ಭೇಟಿಯಾಗಲು ಆಗಿರಲಿಲ್ಲ.
ವರ್ಷದ ಹಿಂದೆ, ನಾಗಮಂಗಲದ ಸಂಘದ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ರಾಮಯ್ಯ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡುವುದಾಗಿ ಘೋಷಿಸಿ ಬಂದಿದ್ದೆ. ಈಗ ಕೆಯುಡಬ್ಲ್ಯೂಜೆ ಯಲ್ಲಿ ಪಿ.ರಾಮಯ್ಯ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪನೆ ಮಾಡಲಾಗಿದ್ದು, ಪ್ರತಿ ವರ್ಷ ಒಬ್ಬರು ಪ್ರತಿಭಾನ್ವಿತ ಪತ್ರಕರ್ತರಿಗೆ ಪ್ರದಾನ ಮಾಡುವುದಕ್ಕೆ ಚಾಲನೆ ನೀಡಲಾಗಿದೆ.
ಅದೊಂದು ದಿನ ಪೋನ್ ಮಾಡಿ ನಾನು ರಾಮಯ್ಯ ಅಂದರು. ಮಾತುಗಳು ಸಂಘಟನೆ ಕಡೆಗೆ ಹೊರಳಿದವು.
ಪತ್ರಕರ್ತರ ಮಾತೃ ಸಂಘಟನೆ
ಕೆಯುಡಬ್ಲ್ಯೂಜೆ ತುಂಬಾ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಅಭಿಮಾನದಿಂದ ಹೇಳಿದಾಗ ನನಗೂ ಬಿಗುಮಾನ.
ಮೊನ್ನೆ
ರಾಮಯ್ಯ ಅವರು ಪೋನ್ ಮಾಡಿದ್ದಾಗ ಕೋವಿಡ್ ಕಾರಣ ಭೇಟಿಯಾಗಲಿಲ್ಲ.
ನಿಮ್ಮನ್ನು ಮಾತನಾಡಿಸಲು ಬರಬಹುದಾ ಎಂದು ಕೇಳಿದೆ.
ಸದಾಶಿವ ನಗರದ ಮನೆಗೆ ಊಟಕ್ಕೆ ಬನ್ನಿ ಎಂದು ಆಹ್ವಾನವಿತ್ತರು.
ಇದೇ ನೆಪ ಮಾಡಿಕೊಂಡು ಅವರ ಮನೆಗೆ ಹೋಗಿದ್ದೆ.
ಈಗಲೂ ನೆನಪುಗಳು ಮಾಸಿಲ್ಲ. ದೇಹಕ್ಕೆ ವಯಸ್ಸಾಗಿದ್ದರೂ ಮನಸ್ಸಿನ ಕ್ರಿಯಾಶೀಲತೆ ಒಂದಿಷ್ಟು ಮುಕ್ಕಾಗಿಲ್ಲ. ಪತ್ನಿ, ಮಕ್ಕಳನ್ನು ಪರಿಚಯಿಸಿದರು. ಕಾಫಿ ಕುಡಿಯುತ್ತಾ ಮಾತನಾಡುತ್ತಾ ಹೋದರು. ಅಗೆದಷ್ಟು ಆಳ, ಮೊಗೆದಷ್ಟು ನೆನಪುಗಳ ಸುರಳಿ ಬಿಚ್ಚಿಕೊಳ್ಳುತ್ತಾ ಹೋದಂತೆ ಸಮಯ ಸರಿದಿದ್ದು ಗೊತ್ತಾಗಲಿಲ್ಲ.
ಪತ್ರಕರ್ತ ಎನ್ನುವ ಹಮ್ಮು, ಬಿಮ್ಮು ಇಲ್ಲದೆ ನಮ್ಮ ಕಾಲ ಘಟ್ಟದಲ್ಲಿ ಬದುಕಿರುವ
ಸುದ್ದಿ ಮನೆಯ ಅಜ್ಜ ಪಿ.ರಾಮಯ್ಯ ಅವರನ್ನು ಸಮಸ್ತ ಪತ್ರಕರ್ತರ ಪರವಾಗಿ ಸನ್ಮಾನಿಸಿದೆ. ಆ ಕ್ಷಣದ ಸಂತೋಷದಲ್ಲಿ ಇಬ್ಬರೂ ಪಾಲುದಾರರಾಗಿದ್ದೆವು.
ಹಾಗೆ ಆಚೆಗೆ ಬರುವಾಗ ತುಂಬು ಅಭಿಮಾನದಿಂದ ಸಂಘದ ಪ್ರಶಸ್ತಿ ನಿಧಿಗೆ ಇಪ್ಪತ್ತೈದು ಸಾವಿರದ ಚೆಕ್ ನ್ನು ಕೈಗಿತ್ತರು.
ಶತಾಯುಷಿಗಳಾಗಿ ಬದುಕಲಿ ಎಂದು ಹಾರೈಸಿ ಹೊರಟಾಗಲೂ ಗೇಟ್ ತನಕ ಬಂದು ಬೀಳ್ಕೊಟ್ಟರು.
–ಶಿವಾನಂದ ತಗಡೂರು
- ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ
- ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮದುವೆ ಸಹಾಯಧನ: ₹60,000 ಪಡೆಯಲು ಅರ್ಜಿ ಆಹ್ವಾನ!
- ಮಾದಕ ವಸ್ತುಗಳ ಅಕ್ರಮ ಮಾರಾಟ: ಮೂವರು ಆರೋಪಿಗಳು ಬಂಧನ
- ಕೆನಡಾವನ್ನು ಅಮೆರಿಕಾದ 51ನೇ ರಾಜ್ಯವನ್ನಾಗಿ ಮಾಡಲು ಟ್ರಂಪ್ ಆರ್ಥಿಕ ಒತ್ತಡದ ಬೆದರಿಕೆ
- ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ: ಆದಾಯಕ್ಕಿಂತ ಅಧಿಕ ಆಸ್ತಿ ಆರೋಪ
More Stories
ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮದುವೆ ಸಹಾಯಧನ: ₹60,000 ಪಡೆಯಲು ಅರ್ಜಿ ಆಹ್ವಾನ!
BBMP ಕಚೇರಿಯಲ್ಲಿ ಇಡಿ ದಾಳಿ: 960 ಕೋಟಿ ರೂ. ಅಕ್ರಮ ತನಿಖೆ
ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ: ಈಶ್ವರ್ ಖಂಡ್ರೆ ಸ್ಪಷ್ಟನೆ