ನೇತ್ರದಾನ ಜೀವನದ ಮಹಾದಾನ! ಏಕೆಂದರೆ ಭರವಸೆಯನ್ನೇ ಕಳೆದುಕೊಂಡು ಕತ್ತಲೆಯಲ್ಲಿ ಜೀವಿಸುತ್ತಿರುವ ವ್ಯಕ್ತಿಗೆ ಜಗತ್ತನ್ನು ನಮ್ಮ ಕಣ್ಣಿಂದ ನೋಡುವ ಭಾಗ್ಯ ಸಿಕ್ಕರೆ ಅದಕ್ಕಿಂತ ದೊಡ್ಡ ಭಾಗ್ಯವು ನಮಗೆ ಬೇರೆ ಉಂಟೇ ಹೇಳಿ!
ಕಣ್ಣು ಮನುಷ್ಯನ ಅಂಗಗಳಲ್ಲಿ ಅತಿ ಮುಖ್ಯವಾದ ಭಾಗ! ದೇಹದ ಪ್ರತಿಯೊಂದು ಭಾಗವನ್ನು ನಿಯಂತ್ರಿಸುವುದು ಮೆದುಳಾದರೆ ಎಷ್ಟಕ್ಕೆ ಪ್ರಾರಂಭಿಸಬೇಕು, ಎಲ್ಲಿಗೆ ನಿಲ್ಲಿಸಬೇಕು, ಎಂದು ಮೆದುಳಿಗೆ ಸದಾ ಸಲಹೆ ಕೊಡುವ ಸೂತ್ರಧಾರಿ ಈ ನಮ್ಮ ಚಿಕ್ಕ ಚೊಕ್ಕ ಕಣ್ಣುಗಳು!
ಕಣ್ಣುಗಳೇ ನಮ್ಮ ಜೀವನಕ್ಕೆ ಬಣ್ಣ ತರುವುದು,ಕತ್ತಲು ಬೆಳಕಿನ ಮಹತ್ವ ತಿಳಿಸುವುದು! ನಾವು ಜಗತ್ತಿನಲ್ಲಿ ಜೀವಿಸುತಿದ್ದೇವೆ ಎನ್ನುವುದನ್ನು ಸ್ಪಷ್ಟವಾಗಿ ನಮಗೆ ಅರಿವು ಮೂಡಿಸುವುದು ಕಣ್ಣು! ಮನುಷ್ಯನ ಆಕಾರ ಹೇಗಿದೆ,ಪ್ರಾಣಿ,ಪಕ್ಷಿಗಳು ಹೇಗಿವೆ, ಜಗತ್ತು ಹೇಗಿದೆ, ನಿಸರ್ಗದಲ್ಲಿ ನಡೆಯುವ ಕಾರ್ಯಾಚರಣೆ ಪ್ರತಿಯೊಂದನ್ನೂ ಅರಿವು ಮೂಡಿಸುವುದು ಕಣ್ಣು! ಅಂತಹ ಈ ಎರೆಡು ಜೋಡಿ ಸುಂದರ ಕಣ್ಣುಗಳು ನಮ್ಮ ಮುಖಕ್ಕೆ ನಕ್ಷತ್ರಗಳಂತೆ!
ಮುಖದಲ್ಲಿ ಪುಟ್ಟ ಆಕಾರವನ್ನು ಹೊಂದಿದ ಈ ಕಣ್ಣು ಬ್ರಹ್ಮಾಂಡವನ್ನೇ ತೋರಿಸುತ್ತಿದೆ ವ್ಯಕ್ತಿಗೆ ತನ್ನ ದೃಷ್ಟಿಯಿಂದ!
ಅಂದ ಮೇಲೆ ಇಂತಹ ಬೆಲೆಬಾಳುವ ಕಣ್ಣುಗಳನ್ನು ಹೊಂದಿದ ನಾವೆಷ್ಟು ಪುಣ್ಯವಂತರು!
ಎಲ್ಲಾ ಅಂಗಗಳನ್ನು ಸರಿಯಾಗಿ ಹೊಂದಿ ಕಣ್ಣನ್ನು ಮಾತ್ರ ಕಳೆದುಕೊಂಡು ಬೆಳಕನ್ನು ನೋಡದ ಕುರುಡರಿಗೆ ನಾವು ನಮ್ಮ ಕಾಲಾವಧಿಯ ನಂತರ ನಮ್ಮ ಅಕ್ಷಿಪಟಲದಿಂದ ಬೆಳಕನ್ನು ಕೊಟ್ಟರೆ ಅವರ ಜೀವನಕ್ಕೆ ನಾವು ಬಣ್ಣ ತುಂಬಿದ ಹಾಗೆ! ನಮ್ಮ ಕಣ್ಣಿನಿಂದ ಅವರು ಬೆಳಕನ್ನು ನೋಡುತ್ತಾರೆ ಎಂದರೆ ನಮ್ಮ ಸಾವು ಎಂಥಾ ಸಾರ್ಥಕತೆಯನ್ನು ಪಡೆಯುತ್ತದೆ ನೀವೇ ಊಹಿಸಿ!
ನಮ್ಮ ಕಣ್ಣುಗಳು ಒಂದು ಸುಂದರತೆಯ ಪ್ರತೀಕವೂ ಹೌದು! ಕಣ್ಣುಗಳಿಲ್ಲದ ವ್ಯಕ್ತಿ ಎಷ್ಟೇ ಚೆಂದವಿದ್ದರೂ ಸುಂದರವಾಗಿ ಕಾಣುವುದಿಲ್ಲ, ಏಕೆಂದರೆ ಕಣ್ಣುಗಳೇ ಮುಖದಲ್ಲಿ ಆಕರ್ಷಣೀಯ, ಚಿಕ್ಕ ಕಣ್ಣುಗಳಾಗಿರಲಿ , ದೊಡ್ಡ ಕಣ್ಣುಗಳಾಗಲಿ ನಮ್ಮ ಹಾವಭಾವವನ್ನು ನಿಯಂತ್ರಿಸುವುದು ಕಣ್ಣುಗಳು ಮಾತ್ರ , ಹೀಗಾಗಿ ಅಂಧರಿಗೆ ತಮ್ಮ ಹಾವಭಾವಗಳ ಬಗ್ಗೆ ಅರಿವು ಇರುವುದಿಲ್ಲ! ಏಕೆಂದರೆ ತಮ್ಮ ಯಾವ ಹಾವಭಾವ ಹೇಗೆ ಕಾಣುತ್ತದೆ ಎಂದು ಅವರಿಗೆ ಗೊತ್ತಿರುವುದೇ ಇಲ್ಲ! ಇದರಿಂದ ಅವರ ಸೌಂದರ್ಯವು ಕಣ್ಣುಗಳಿಲ್ಲದೆ ಕುಂದಿರುತ್ತದೆ! ಪ್ರತಿಯೊಂದು ಭಾವನೆಗಳನ್ನು ಹೊರಹಾಕುವ ಕಣ್ಣು ತನ್ನ ಸೌಂದರ್ಯತೆ ಕಳೆದುಕೊಂಡು ಬಿಟ್ಟಿರುತ್ತದೆ ಕುರುಡರಲ್ಲಿ!
ಮನುಷ್ಯನ ವ್ಯಕ್ತಿತ್ವದಲ್ಲಿ ಅಹಂ ಬರಲು ಕಣ್ಣುಗಳು ಕೂಡ ಮುಖ್ಯ ಕಾರಣ! ಏಕೆಂದರೆ ಸೌಂದರ್ಯ, ಶ್ರೀಮಂತಿಕೆ, ಎಲ್ಲವೂ ತಲೆಗೇರುವುದು ಈ ಕಣ್ಣುಗಳಿಂದಲೇ! ತಮ್ಮ ಬಗ್ಗೆ ತಾವೇ ಅತಿಯಾದ ಮೋಹವಿಟ್ಟು ಅಹಂಕಾರ ಪಡಲು ಕಣ್ಣುಗಳು ಇರಲೇ ಬೇಕಲ್ಲವೇ,ತಾವು ಹೇಗೆ ಕಾಣುತ್ತೇವೆ ಎನ್ನುವ ಅರಿವೇ ಇಲ್ಲ ಕಣ್ಣಿಲ್ಲದ ಕುರುಡರ ವ್ಯಕ್ತಿತ್ವದಲ್ಲಿ ಅಹಂಕಾರ, ಸೊಕ್ಕು ಈ ಪದಗಳಿಗೆ ಅರ್ಥವೇ ಇರುವುದಿಲ್ಲ!ಅವರು ಹಸುವಿನಂತಹ ಮನಸ್ಸುಳ್ಳವರು,ಹಸುವಿನ ಹಾಲಿನಂತೆ ಪರಿಶುದ್ಧ ಮನದವರು!
ವ್ಯಕ್ತಿ ಪ್ರತಿಯೊಂದು ಆಕಾರವನ್ನು ಹೊಂದಿ , ಸಧೃಡ ದೇಹವನ್ನು ಹೊಂದಿದರೂ ಅದರ ಅಂದವನ್ನು ಕಾಣದೆ , ತನ್ನ ತಂದೆ ತಾಯಿ, ಅಣ್ಣ ತಮ್ಮಂದಿರು, ಬಂದು ಬಾಂಧವರು , ಸ್ನೇಹಿತರನ್ನು ನೋಡದೇ ಇರುವುದು ಅಂಧರ ದುರದೃಷ್ಟವೇ ಸರಿ! ಕಣ್ಣಿನ ಕುರುಡುತನವು ಪ್ರತಿಯೊಂದು ಇಂಚಿಂಚು ಸಂಭ್ರಮಕ್ಕೂ ಕತ್ತಲೆಯ ತೆರೆ ಎಳೆದು ಬಿಡುತ್ತದೆ ಶಾಶ್ವತವಾಗಿ!
ಹೀಗಿದ್ದಾಗ ನಾವು ಜೀವಂತವಾಗಿರುವ ತನಕ ದೃಷ್ಟಿ ಪಡೆದು ಜಗತ್ತಿನ ಪ್ರತಿಯೊಂದು ಸಂತೋಷವನ್ನು ಬೆಳಕಿನೊಂದಿಗೆ ಆನಂದಿಸಿದ ನಾವು ಮುಂದೆ ನಮ್ಮ ಕಣ್ಣುಗಳಿಂದ ಬೇರೆಯವರು ಜಗತ್ತನ್ನು ಕಾಣಲಿ ಎಂದು ಕೊಂಡರೆ ನಾವು ಸಾರ್ಥಕ ಬದುಕು ಬದುಕಿದಂತೆ!
ನಾವು ಜೀವಿಸುವುದಿಲ್ಲ ಎಂದು ಒಂದು ಸಮಯಕ್ಕೆ ಖಚಿತವಾಗಿ ತಿಳಿದಾಗ ನಾವು ನಮ್ಮವರಿಗೆ ನಮ್ಮ ಕಣ್ಣು ದಾನ ಮಾಡಲು ನೆನಪಿಸಬಹುದು! ಜೊತೆಗೆ ಮೊದಲೇ ನೇತ್ರದಾನ ಸಂಸ್ಥೆಗಳಲ್ಲಿ ದಾಖಲಿಸುವುದು ಕೂಡ ಇನ್ನೂ ಒಳ್ಳೆಯದು!
ನಾವು ಈ ಭೂಮಿಯ ಋಣ ಕಳೆದುಕೊಂಡಾಗ ನಮ್ಮ ಕಣ್ಣು ಇನ್ನೂ ಜೀವಿತವಾಗಿರುತ್ತವೆ ಸ್ವಲ್ಪ ಸಮಯದ ತನಕ ಅಷ್ಟೇ! ಆ ಕ್ಷಣದಲ್ಲಿ ನಮ್ಮ ಮನೆಯವರು ದುಃಖವನ್ನು ಸ್ವಲ್ಪ ಮಟ್ಟಿಗೆ ಮರೆತು ನಮ್ಮ ಕಣ್ಣನ್ನು ಅವಶ್ಯಕತೆ ಇದ್ದವರಿಗೆ ಕೊಡುವ ಕಾರ್ಯದಲ್ಲಿ ತೊಡಗಿದರೆ ನಮ್ಮ ಕಣ್ಣಿಂದ ಇನ್ನೊಬ್ಬ ಮನುಷ್ಯ ಬೆಳಕು ಕಾಣುತ್ತಾನೆ ! ಹೀಗಾಗಿ ನಮ್ಮ ಜೀವ ದೇಹ ಬಿಟ್ಟ ಕ್ಷಣದಿಂದಲೇ ನಮ್ಮವರು ನಮ್ಮ ಕಣ್ಣನ್ನು ನಿಷ್ಫಲವಾಗಿ ಹೋಗದಂತೆ ಇರಲು ಪ್ರಯತ್ನಪಟ್ಟರೆ, ಮಣ್ಣಿಗೆ ಸೇರದೆ , ಬೆಂಕಿಯಲ್ಲಿ ಸುಡದೆ ನಕ್ಷತ್ರಗಳಂತೆ ಹೊಳೆಯುತ್ತವೆ ಇನ್ನೊಬ್ಬರ ಕಣ್ಣುಗಳಲ್ಲಿ ಈ ನಮ್ಮ ಸುಂದರ ನಯನಗಳ ಬೆಳಕು !
“ನೀನ್ಯಾರಿಗಾದೆಯೋ ಎಲೆ ಮಾನವ ” ಎಂದು ಜರಿಯುವ ಮನುಷ್ಯನ ಹುಟ್ಟನ್ನು ಸಾರ್ಥಕ ಪಡಿಸಿಕೊಳ್ಳಬಹುದಲ್ಲವೆ ನಾವೆಲ್ಲರೂ ನೇತ್ರದಾನದ ಮಹಾದಾನದಿಂದ!
ನಾವು ಭೂಮಿಯ ಮೇಲೆ ಜನಿಸಿದ ನಂತರ ಸಾಯುವುದು ಖಂಡಿತಾ ಒಂದಲ್ಲ ಒಂದು ದಿನ! ಅಂದ ಮೇಲೆ ವಿಧಿ ಲಿಖಿತವಾದ ನಮ್ಮ ಸಾವು ಬೇರೆಯವರ ಜೀವನದಲ್ಲಿ ನಲಿವು ತಂದರೆ ಅದಕ್ಕಿಂತ ಮಹಾದಾನ ಯಾವುದಿದೆ!
ಜೀವಿಸಿದಾಗಲಂತೂ ನಮ್ಮ ಜೀವನ ಸ್ವಾರ್ಥವೇ ಬದುಕಾಗಿ ಹೋಗಿರುತ್ತದೆ ! ಸತ್ತ ಮೇಲೂ ಅದೇ ಸ್ವಾರ್ಥವನ್ನಿಟ್ಟುಕೊಂಡು ಹೋದರೆ ಉಪಯೋಗವೇನು ನಮ್ಮ ಜನುಮಕ್ಕೆ ಹೌದಲ್ಲವೇ! ಭಗವಂತನ ಅನುಗ್ರಹದಿಂದ ಜಗತ್ತನ್ನು ನಮ್ಮ ಕಣ್ಣುಗಳಿಂದ ನೋಡಿದ ನಾವು ಆತನಿಗೆ ಮನಃಪೂರ್ವಕವಾಗಿ ಕೃತಜ್ಞತೆಯನ್ನು ಅರ್ಪಿಸಲು ತೋರಿದ ದಾರಿಯೇ ಈ ನೇತ್ರದಾನ ಎನ್ನಬಹುದು!
“ಇವನ ಜನ್ಮಕ್ಕಿಷ್ಟು ಬೆಂಕಿ ಹಾಕ” ಅನ್ನುವ ಹಾಗೆ ಬದುಕಿದ ನಮ್ಮ ಸ್ವಾರ್ಥತೆಯಲ್ಲಿ ಸ್ವಲ್ಪವಾದರೂ ನಿಸ್ವಾರ್ಥತೆ ತೋರಿಸಬೇಕೆಂದುಕೊಂಡರೆ ಅದು ನಾವು ಸತ್ತ ಮೇಲೆ ನಮಗೆ ಉಪಯೋಗವಿಲ್ಲದ ನಮ್ಮ ಕಣ್ಣನ್ನು ದಾನ ಮಾಡುವುದರಿಂದ ಮಾತ್ರ!
ಹೀಗಾಗಿ ನಾವು ಮರಣ ಹೊಂದಿದ ನಿರ್ದಿಷ್ಟ ಸಮಯದಲ್ಲಿ ಸರಿಯಾಗಿ ನಾವು ಕಣ್ಣನ್ನು ದಾನ ಮಾಡಬೇಕು! ಇಂತಿಷ್ಟು ಗಂಟೆಯೊಳಗೆ, ಸಮಯದ ಮಿತಿಯಲ್ಲಿ ಸರಿಯಾಗಿ ನಮ್ಮ ಕಣ್ಣುಗಳನ್ನು ದಾನಮಾಡಿದರೆ ನಮ್ಮ ಕಣ್ಣಿನ ದೃಷ್ಟಿ ಬೆಂಕಿಯಲ್ಲಿ ಬೇಯದೇ, ಮಣ್ಣಲ್ಲಿ ಸೇರದೆ ಒಬ್ಬ ಅಂಧನ ಕಣ್ಣಲಿ ಅಂದವಾಗಿ ನಲಿದಾಡುತ್ತವೆ! ಇದು ನಮ್ಮ ಕಣ್ಣುಗಳಿಗೆ ಮರು ಸೃಷ್ಟಿಯೇ ಸರಿ !
ನೇತ್ರದಾನವು ಮಹಾದಾನ!🙏
ಅದರ ಅರಿವೆ ಒಂದು ಪೂರ್ಣ ಪರಿಜ್ಞಾನ!
ಸಿಕ್ಕರೆ ನಿಮ್ಮ ಕಣ್ಣುಗಳ ಸಂಪ್ರೀತಿ !
ಅಂಧನ ಕಣ್ಣಗೆ ಜೀವನ ಜ್ಯೋತಿ!
ದೇವನ ಕೃಪೆಗೆ ಪಾತ್ರರಾಗುವ ರೀತಿ!
ಅದುವೇ ಜೀವನದ ರೀತಿ ನೀತಿ!
ಬನ್ನಿ ಎಲ್ಲರೂ ಕೈ ಜೋಡಿಸೋಣ!
ಅಂಧರ ಕಣ್ಣಿಗೆ ಬೆಳಕಾಗೋಣ!
ಕೊನೆಯ ಕ್ಷಣಗಳಲಿ ಸಾರ್ಥಕತೆಯ ಬಾಳೋಣ!
ಮುಂದಿನ ಜನುಮಕೆ ಪುಣ್ಯವದು ಗಳಿಸೋಣ!
ಅಗೋ ಹಾರಿತದು ನಮ್ಮ ಪ್ರಾಣಪಕ್ಷಿ!
ಇತ್ತ ಬಂದಿತು ನೋಡು ನಮ್ಮಿಂದ ಅಂಧನಿಗೆ ದೃಷ್ಟಿ!
ಸಾರ್ಥಕವಾಯಿತು ಈ ಜನುಮ!
ನಮ್ಮ ಕಣ್ಣುಗಳಿಗದು ಪುನರ್ಜನ್ಮ!
ಸ್ನೇಹಾ ಆನಂದ್ 🌻
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ