November 17, 2024

Newsnap Kannada

The World at your finger tips!

deepa1

ಬೊಂಡಾ ಸರೋಜಮ್ಮನ ಹೋರಾಟದ ಬದುಕು

Spread the love

ನನ್ನ ಹೆಸರು ಸರೋಜಮ್ಮ, ಎಲ್ಲರೂ ಬೊಂಡಾ ಸರೋಜಮ್ಮ ಅಂತಲೇ ಕರೆಯುತ್ತಾರೆ…..

ನನಗೆ ಈಗ 70 ವರ್ಷ.
ಸುಮಾರು 50 ವರ್ಷಗಳಿಂದ ಮೆಜೆಸ್ಟಿಕ್ ಬಳಿಯ ಗಣೇಶನ ದೇವಸ್ಥಾನದ ಹತ್ತಿರವಿರುವ ಗಲ್ಲಿಯಲ್ಲಿ ಬೊಂಡಾ,ಬಜ್ಜಿ, ವಡೆ ಮಾರಿಕೊಂಡು ಜೀವನ ಮಾಡ್ತಾ ಇದೀನಿ. ಅದಕ್ಕೆ ಎಲ್ಲರೂ ಹಾಗೆ ಕರೀತಾರೆ.

ನಮ್ದು ಮಂಡ್ಯ ಜಿಲ್ಲೆಯ ಒಂದು ಸಣ್ಣ ಹಳ್ಳಿ. ಹೆಸರು ಬೇಡ ಬಿಡಿ. ನಮ್ಮಪ್ಪ ಅಮ್ಮ ಕೂಲಿ ಮಾಡೋರು. ನನಗೆ 14 ವರ್ಷ ತುಂಬುತ್ತಾ ಇದ್ದಂಗೆ ದೊಡ್ಡೋಳಾದೆ. ಮ್ಯೆನೆರದ 3 ತಿಂಗಳಿಗೆ ನಮ್ಮಪ್ಪ ಗಂಡು ಹುಡುಕೋಕೆ ಶುರು ಮಾಡ್ದ.

ಅದ್ಯಾರೋ ಬೆಂಗಳೂರಿನಲ್ಲಿ ಒಬ್ಬ ಹುಡ್ಗ ಇದಾನೆ ಅವನಿಗೆ ಅಪ್ಪ ಅಮ್ಮ ಇಲ್ವಂತೆ ಮನೆಮನೆಗೆ ಪೇಪರ್ ಹಾಕಿ ಜೀವನ ಮಾಡ್ತಾನಂತೆ, ತುಂಬಾ ಒಳ್ಳೆಯವನು, ದೂರದ ಸಂಬಂಧಿ ಬೇರೆ ಅಂತ ಹೇಳಿದ್ರು.

ಬೆಂಗಳೂರಿನ ಹೆಸರು ಕೇಳಿದ್ದೇ ನಮ್ಮಪ್ಪನ ಕಿವಿ ನೆಟ್ಟಗಾಯ್ತು. ಬೆಂಗಳೂರಿಗೆ ನೆಂಟರ ಜೊತೆ ಹೋಗಿ ಹುಡುಗನ ಬಳಿ ಮಾತನಾಡಿಕೊಂಡು ಬಂದ. ಆ ಹುಡುಗನು ಒಂದು ಸಾರಿ ಬಂದು ನನ್ನ ನೋಡಿ ಮದ್ವೆ ಡೇಟ್ ಫಿಕ್ಸ್ ಮಾಡೇ ಬಿಟ್ರು.

ಮದ್ವೆ ಅಂದ್ರೆ ಆತರಾ ಅಲ್ಲ ಬಿಡಿ.
ನಾವು ಕೂಲಿ ಮಾಡೋರಲ್ವ. ಊರಿನ ಮಾರಿ ದೇವರ ಗುಡ್ಯಾಗೆ ಪೂಜಾರಪ್ಪ ಅರಿಶಿನ ಕೊಂಬು ತಾಳಿ ಅಂತ ಕಟ್ಟಿಸಿ ಮಾಡಿದ್ದು. ಹೆಂಗೋ ಮದ್ವೆ ಆಗಿ ಬೆಂಗಳೂರು ಸೇರಿದೆ.

ಇಲ್ಲಿ ನಮ್ಮೆಜಮಾನ್ರಿಗೆ ಮನೇನೆ ಇಲ್ಲ. ಯಾರದೋ ಮನೆ ಮಹಡಿ ಮೇಲೆ ಒಂದು ಚಿಕ್ಕ ರೂಮು. ಬಾಡಿಗೆ ಇಲ್ಲ. ಪೇಪರ್ ಹಾಕಿದ ಕೆಲಸ ಮುಗಿದಮೇಲೆ ಆ ಮನೆ ಓನರ್ ಮನೆಯಲ್ಲಿ ಊದಿನ ಕಡ್ಡಿ ( ಗಂಧದ ಕಡ್ಡಿ) ಮಾಡೋ ಕೆಲಸ. ನಾನೂ ಅದೇ ಕೆಲಸ ಮಾಡ್ತಾ ಅವರ ಮನೆ ಕೆಲಸಾನೂ ಮಾಡ್ತಿದ್ದೆ. ಇಬ್ಬರಿಗೂ ಊಟ ತಿಂಡಿ ಅವರೇ ಕೊಡ್ತಾ ಇದ್ರು.

ನನ್ನ ಗಂಡಾನು ತುಂಬಾ ಒಳ್ಳೆಯವರು. ತಿಂಗಳಿಗೆ ಒಂದ್ಸಾರಿ ಹೋಟೆಲ್ ನಲ್ಲಿ ಮಾಸಾಲು ದೋಸೆ, ಮ್ಯೆಸೂರು ಪಾಕು
ಕೊಡುಸ್ತಾ ಇದ್ರು. ಯಾವಗಲೋ ಒಂದೊಂದು ದಿನ ಪಿಕ್ಚರ್ರು ತೋರಿಸ್ತಿದ್ರು. ಚೆನ್ನಾಗೆ ಇದ್ವಿ. ಒಂದು ದಿನವೂ ಹೊಡೆಯಲಿಲ್ಲ.

ಹೀಗೆ 2/3 ವರ್ಷ ಕಳೀತು. ಒಂದು ದಿನ ಜೋರು ಮಳೆ. ದಾರಿ ಸರಿಯಾಗಿ ಕಾಣ್ತಾ ಇರಲಿಲ್ಲ. ನನ್ನನ್ನು ಹಿಂದೆ ಕೂರುಸ್ಕೊಂಡು ಸ್ಯೆಕಲ್ ನಲ್ಲಿ ಮ್ಯೆಸೂರು ಬ್ಯಾಂಕ್ ಸರ್ಕಲ್ ಹತ್ತಿರ ಜೋರಾಗಿ ಬರ್ತಾ ಇರುವಾಗ ನಮ್ಮ ಗ್ರಹಚಾರ ಕೆಟ್ಟು ಆ ಕಡೆಯಿಂದ ಮೆಟಡೋರ್ ಗಾಡಿ ಬಂದು ನಮ್ಮ ಸ್ಯೆಕಲ್ ಗೆ ಡಿಕ್ಕಿ ಹೊಡೆಯಿತು. ಅಷ್ಟೇ ಗೊತ್ತು. ಪ್ರಜ್ಞೆ ಬಂದಾಗ ವಿಕ್ಟೋರಿಯ ಆಸ್ಪತ್ರೆಯಲ್ಲಿದ್ದೆ.

ಎಚ್ಚರವಾದ ತಕ್ಷಣ ನನ್ನ ಗಂಡ ಎಲ್ಲಿ ಅಂತ ಕೇಳ್ದೆ. ಆ ನರ್ಸಮ್ಮ ” ಧೈರ್ಯ ತಂದ್ಕೋ , ಸಮಾಧಾನ ಮಾಡ್ಕೋ, ನೀನು ಉಳಿದಿದ್ದೇ ಹೆಚ್ಚು. ನಿನ್ನ ಗಂಡನನ್ನು ಉಳಿಸಿಕೊಳ್ಳೋಕೆ ಆಗಲಿಲ್ಲ ” ಅಂದ್ರು.

ಆಕಾಶ ಕಳಚಿ ತಲೆಮೇಲೆ ಬಿದ್ದಂಗಾಯ್ತು. ನೆಲದಮೇಲೆ ಬಿದ್ದು ಗೊಳೋ ಅಂತ ಒದ್ದಾಡಿಬಿಟ್ಟೆ. ನನ್ನ ಗಂಡನ ಜೊತೆ ನಾನು ಸಾಯ್ತೀನಿ ಅಂತ ಹಠ ಮಾಡ್ದೆ. ಆಗ ಲೇಡಿ ಡಾಕ್ಟರ್ ಬಂದು ಚೆನ್ನಾಗಿ ಬ್ಯೆದರು.
” ಸಾಯೋದಾದ್ರೆ ನೀನೊಬ್ಬಳೆ ಸಾಯಿ. ಆದ್ರೆ ಈಗ ನಿನ್ ಹೊಟ್ಟೇಲಿ ಇನ್ನೊಂದು ಮಗು ಇದೆ ಅದನ್ನು ಯಾಕೆ ಸಾಯಿಸ್ತೀಯ “ಅಂದ್ರು.

ಅಯ್ಯೋ ರಾಮ, ಗಂಡ ಸತ್ತೋದ, ಅದರ ಜೊತೆ ಹೊಟ್ಟೇಲಿ ಇನ್ನೊಂದು ಕೂಸು ! ಯಾಕ್ ಹೇಳ್ತೀರಿ ಅವತ್ತಿನ ಪರಿಸ್ಥಿತಿ.

ಹೆಂಗೋ ಸಮಾಧಾನ ಮಾಡಿಕೊಂಡು ನನ್ನ ಗಂಡನ ಕಾರ್ಯ ಎಲ್ಲಾ ಮುಗಿಸಿದೆ. ಅಪ್ಪ ಅಮ್ಮ ಬಂದು ಊರಿಗೆ ಹೋಗೋಣ ಅಂತ ಬಲವಂತ ಮಾಡಿದರು. ನಂತರ ಹೋಗೋ ಮನಸ್ಸಾಗಲಿಲ್ಲ. ಹಳ್ಳೀಲಿ ಗಂಡನನ್ನ ತಿಂದ್ಕೊಂಡೋಳು ಅಂತ ಆಡ್ಕೋತಾರೆ. ಅದರ ಬದಲು ಇಲ್ಲೇ ಇವರ ಮನೆ ಕೆಲಸ ಮಾಡಿಕೊಂಡು ಜೀವನ ಮಾಡೋಣ ಅಂತ ನಿರ್ಧಾರ ಮಾಡಿ ಅವರನ್ನು ವಾಪಸ್ಸು ಕಳಿಸಿದೆ.

ಗಂಡನ ನೆನಪಿನಲ್ಲೇ ಗರ್ಭಿಣಿ ಬಯಕೆಗಳನ್ನು ತೀರಿಸಿಕೊಳ್ಳುತ್ತಿದ್ದೆ. ಆದರೆ ನನಗೆ ಗಂಡು ಮಗುವೇ ಆಗಲಿ ಅಂತ ಎಲ್ಲಾ ದೇವರುಗಳನ್ನು ಬೇಡಿಕೊಳ್ಳುತ್ತಿದ್ದೆ. ಆಗಿನ ಕಾಲದಲ್ಲಿ ಬಡವರಿಗೆ ಹೆಣ್ಣು ಮಗು ಅಂದ್ರೆ ಬಹಳ ಭಯಪಡೋರು. ಒಂಟಿ ಹೆಣ್ಣಿನ ಮಗಳು ಅಂದ್ರೆ ಅಷ್ಟೆ.!

ಒಂದು ದಿನ ಹೊಟ್ಟೆ ನೋವು ಜಾಸ್ತಿಯಾದಾಗ ಗೌರ್ನಮೆಂಟ್ ಆಸ್ಪತ್ರೆಗೆ ಸೇರಿಸಿದರು. ಬೆಳಗ್ಗೆ ಹೆರಿಗೆಯಾಯ್ತು. ಮೊದಲು ಕೇಳಿದ್ದೇ ಏನು ಮಗು ಅಂತ. ಹೆಣ್ಣು, ಲಕ್ಷ್ಮೀ ಅಂದ್ರು ನರ್ಸಮ್ಮ.

ಓ, ಇನ್ನು ನನ್ನ ಕಥೆ ಮುಗೀತು ಅಂತ ದಿನವೆಲ್ಲಾ ಅತ್ತೆ. ಯಾರೇ ಸಮಾಧಾನ ಮಾಡಿದ್ರೂ ಕೇಳಲಿಲ್ಲ. ಮನಸ್ಸಿನಲ್ಲೇ ನಿರ್ಧಾರ ಮಾಡಿದ್ದೆ. ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿ ಮನೆಗೆ ಹೋಗ್ತಾ ಇದ್ದಂಗೆ ಮಗೂನು ಸಾಯಿಸಿ ನಾನೂ ಸತ್ತೋಗ್ ಬಿಡೋಣ.ಈ ಮಗು ಮುಂದೆ ಕಷ್ಟ ಪಡೋದು ಬೇಡ ಅಂತ.

ಮೂರು ದಿನ ಆದಮೇಲೆ ಮನೆಗೆ ಬಂದೆ. ಮಗೂ ಕಂಡ್ರೆ ಒಂದು ಚೂರು ಇಷ್ಟ ಇರಲಿಲ್ಲ. ಆ ಓನರಮ್ಮ ಮಾತ್ರ ಮಗು ಮುದ್ದಾಗಿದೆ ಅಂತ ಹೇಳಿ ಅವರೇ ಸ್ನಾನ ಮಾಡಿಸಿಕೊಡೋರು. ಇವತ್ತು ಸಾಯೋಣ, ನಾಳೆ ಸಾಯೋಣ ಅಂತ ಹೀಗೆ ಒಂದು ತಿಂಗಳು ಕಳೆಯಿತು.

ಅವತ್ತು ಆಕಸ್ಮಿಕವಾಗಿ ಓನರಮ್ಮ ಯಾರೋ ಹತ್ರ ಅವರ ನೆಂಟರಲ್ಲಿ ಒಬ್ಬರಿಗೆ ಮಕ್ಕಳೇ ಇಲ್ಲ ಯಾವುದಾದ್ರು ಅನಾಥ ಮಗುವನ್ನು ದತ್ತಿಗೆ ತೆಗೆದುಕೊಳ್ಳಬೇಕು ಅಂತ ನೋಡ್ತಾ ಇದಾರೆ ಅಂತ ಮಾತಾಡ್ತಾ ಇದ್ದಿದ್ದು ಕೇಳಿಸಿತು. ತಕ್ಷಣ ನನಗೆ ಒಂದು ಯೋಚನೆ ಹೊಳೆಯಿತು. ಮಗೂನ ಸಾಯಿಸೋದಕ್ಕಿಂತ ಯಾರಿಗಾದ್ರೂ ಕೊಟ್ರೆ ಹೇಗೋ ಬದುಕಿಕೊಳ್ಳುತ್ತೆ. ಆದ್ರೆ ಇದು ಹೆಣ್ಣು ಮಗು ಅದೂ ಅಲ್ಲದೆ ಅಪ್ಪ ಇಲ್ಲದೆ ಇರೋ ಬಡ ಅನಾಥ ಮಗು ತಗೋತಾರೋ ಇಲ್ವೋ ಅಂತ ಅನುಮಾನದಿಂದಲೇ ಕೇಳಿದೆ.

ಮಗೂ ಕೊಡ್ತೀನಿ ಅಂದಿದ್ದಕ್ಕೆ ಅವರು ಮೊದಲಿಗೆ ಕೋಪ ಮಾಡಿಕೊಂಡರು.ಆಮೇಲೆ ಅವರ ನೆಂಟರನ್ನು ಕೇಳಿ ಆಯಿತು ಎಂದರು. ಸ್ವಲ್ಪ ದುಡ್ಡು ಕೊಡುಸ್ತೀನಿ ಅಂದ್ರು. ನನಗೆ ದುಡ್ಡು ಬೇಡ ಮಗೂನ ಚೆನ್ನಾಗಿ ನೋಡಿಕೊಂಡರೆ ಸಾಕೆಂದೆ.

ಮಗಳು ಹುಟ್ಟಿ 45 ದಿನಗಳಾಗಿತ್ತು. ಅಂತಹ ಅಟ್ಯಾಚ್ ಮೆಂಟ್ ಬೆಳದಿರಲಿಲ್ಲ. ಆದ್ರೆ ನಾಳೆ ಮಗು ಹೊರಟೇ ಹೋಗುತ್ತೆ ಅಂತ ಮನಸ್ಸಿಗೆ ಬಂತು ನೋಡಿ ನನ್ನ ಕರುಳು ಕಿತ್ತುಕೊಂಡು ಬಂದಂಗಾಯ್ತು. ಗಂಡ ಸತ್ತಾಗಲೂ ಅಷ್ಟು ಅತ್ತಿರಲಿಲ್ಲ. ಇನ್ನೂ ತಡೆಯಲಾಗಲಿಲ್ಲ. ಆಗ ಮಧ್ಯರಾತ್ರಿ 12 ಗಂಟೆ. ಓನರ್ ಅಮ್ಮನ ಮನೆಗೆ ಬಂದು ಅವರನ್ನು ಎಬ್ಬಿಸಿ ಕಾಲು ಹಿಡಿದುಕೊಂಡು ಬಿಟ್ಟೆ.

ಅವರಿಗೆ ಗಾಬರಿ. ನಾನು “ಅಮ್ಮ, ನನ್ನನ್ನು ಕ್ಷಮಿಸಿ, ತಪ್ಪಾಯ್ತು. ಚಪ್ಪಲಿಯಲ್ಲಿ ಬೇಕಾದರೂ ಹೊಡೆಯಿರಿ. ನನ್ನ ಮಗೂನ ಮಾತ್ರ ಕೊಡಲ್ಲ. ನಿಮ್ಮ ನೆಂಟರು ಬರೋದು ಬೇಡ ಅಂತೇಳಿ ” ಎಂದು ಹಿಡಿದ ಕಾಲು ಬಿಡಲೇ ಇಲ್ಲ. ಅವರಿಗೂ ಕಸಿವಿಸಿಯಾಯಿತು.

ಒಳ್ಳೇ ಜನ.”ಆಯ್ತು ಬಿಡಮ್ಮ ನಿನ್ನ ಮಗು ನೀನು ಕೊಡಲ್ಲ ಅಂದ್ರೆ ಯಾರು ಏನು ಮಾಡೋಕಾಗುತ್ತೆ. ಅವರಿಗೆ ಏನಾದ್ರು ಸುಳ್ಳು ಹೇಳ್ತೀವಿ ಬಿಡು” ಅಂದ್ರು. ಅವತ್ತೇ ನಿರ್ಧಾರ ಮಾಡ್ದೆ. ಈ ಮಗುವಿಗಾಗಿ ಬಾಳಬೇಕು, ಬದುಕಬೇಕು ಅಂತ.

ಮೂರು ತಿಂಗಳಾಯಿತು. ಒಂದು ದಿನ ಇದ್ದಕ್ಕಿದ್ದಂತೆ ಐಡಿಯಾ ಹೊಳೆಯಿತು. ಹೇಗೂ ನನಗೆ ಬೊಂಡ, ಬಜ್ಜಿ, ವಡೆ ಮಾಡಲು ಚೆನ್ನಾಗಿ ಬರುತ್ತದೆ. ಮೆಜಸ್ಟಿಕ್ ನಲ್ಲಿ ಸಂಜೆ ಜಾಸ್ತಿ ಜನ ಸೇರ್ತಾರೆ. ಅಲ್ಲಿ ಪುಟ್ ಪಾತ್ ಮೇಲೆ ಮಾರಬಹುದು ಅಂತ ಓನರ್ ಅಮ್ಮನಿಗೆ ಕೇಳಿದೆ.

ಒಂದು ಸೀಮೆಎಣ್ಣೆ ಸ್ಟವ್, ಎರಡು ಮೂರು ಪಾತ್ರೆ, ಸ್ವಲ್ಪ ಸಾಮಾನು ಕೊಡಿಸಿ, ಸಾಯಂಕಾಲ ಬೊಂಡಾ ಮಾರುತ್ತೇನೆ ಉಳಿದ ಸಮಯ ನಿಮ್ಮ ಮನೆ ಕೆಲಸ ಮಾಡುತ್ತೇನೆ. ಮಗೂನ ಸಾಕಲಿಕ್ಕೆ ಹಣ ಬೇಕಲ್ವೇ ಎಂದೆ. ಅವರು ಒಪ್ಕೊಂಡು ಎಲ್ಲಾ ಕೊಡಿಸಿದ್ರು. ಆವೊತ್ತಿನಿಂದ ನಾನು ಬೊಂಡ ಸರೋಜಮ್ಮನಾದೆ.

ಅರೆ ಮಗಳೆಲ್ಲಿ ಅಂತೀರಾ, ಅವಳೂ ನನ್ನ ಜೊತೆಗೇ ಇರ್ತಾ ಇದ್ಲು. ಸ್ಕೂಲು ಪಾಲು ಏನೂ ಇಲ್ಲ. ಮೆಜಸ್ಟಿಕ್ ನ ಗಾಳಿ, ಬೆಳಕು ,ಧೂಳು, ಪಕ್ಕದ ಅಂಗಡಿ ಬಿಸ್ಕತು, ನನ್ನ ಬೊಂಡಾ ಇಷ್ಟೇ ಅವಳ ಆಟ, ಊಟ, ಓಟ ಎಲ್ಲಾ. ಗುಂಡು ಗುಂಡಗೆ ಚೆನ್ನಾಗಿ ಬೆಳೆದಳು. ಅವಳು ಬೆಳೆದಂತೆ ವ್ಯಾಪಾರವೂ ಚೆನ್ನಾಗಿ ನಡೆಯುತ್ತಿತ್ತು. ಅವಳ ಸಹಾಯ ನನ್ನ ಒತ್ತಡ ಕಡಿಮೆ ಮಾಡಿತು. ಮೆಜಸ್ಟಿಕ್ ನ ಎಲ್ಲಾ ಒಳ್ಳೆಯ, ಕೆಟ್ಟ ವಾತಾವರಣದ ಮಧ್ಯೆ ಆಗೂ ಹೀಗೂ 15 ವರ್ಷ ಕಳೆಯಿತು..

ಮಗಳು ಬೆಳೆದು ದೊಡ್ಡವಳಾದಳು. ಈಗೀಗ ಪುಂಡಪೋಕರಿಗಳು , ಕುಡುಕರ ಕಾಟ ಜಾಸ್ತಿಯಾಯಿತು. ನನಗೆ ಭಯವಾಯಿತು. ಇನ್ನು ಮೇಲೆ ನೀನು ಬರುವುದು ಬೇಡ ಮನೆಯಲ್ಲಿಯೇ ಇರು ಎಂದು ಅವಳನ್ನು ಮನೆಯಲ್ಲೇ ಇರಿಸಿದೆ.

ಅದೇ ನೋಡಿ ನಾನು ಮಾಡಿದ ದೊಡ್ಡ ತಪ್ಪು. ಇಷ್ಟು ದಿನ ಪ್ರತಿಕ್ಷಣವೂ ನನ್ನ ಮುಂದೆಯೇ ಇದ್ದಳು. ಈಗ ಕೆಲ ಸಮಯ ಅವಳಿಗೆ ಸ್ವತಂತ್ರ ಸಿಕ್ಕಿತು. ಓನರಮ್ಮನೂ ವಯಸ್ಸಾಗಿ ಹಾಸಿಗೆ ಹಿಡಿದಿದ್ದಳು. ಒಂದು ದಿನ ವ್ಯಾಪಾರ ಮುಗಿಸಿ ರಾತ್ರಿ 9 ಗಂಟೆಗೆ ಮನೆಗೆ ಬಂದೆ. ಅವಳು ಇರಲಿಲ್ಲ. ಸ್ವಲ್ಪ ಗಾಬರಿಯಾಗಿ ಎಲ್ಲಾ ಕಡೆ ಹುಡುಕಿದೆ. ಸಿಗಲಿಲ್ಲ.

ರಾತ್ರಿ 11-30 ಆಯ್ತು. ಎಲ್ಲರೂ ತಮಗೂ ಗೊತ್ತಿಲ್ಲ ಅಂದ್ರು. ಮನೆಗೆ ಬಂದೆ. ಯಾಕೋ ಅನುಮಾನ ಬಂತು. ಸರಿಯಾಗಿ ನೋಡಿದೆ. ಹೌದು, ಅವಳ ಬಟ್ಟೆ, ಬ್ಯಾಗು, ಸ್ವಲ್ಪ ಕೂಡಿಟ್ಟ ಹಣ ಯಾವುದೂ ಇರಲಿಲ್ಲ. ಬೆಳಗ್ಗೆ ಅನುಮಾನ ನಿಜವಾಯ್ತು. ಅವಳು ಪಕ್ಕದ ರೋಡಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಲೆಯಾಳಿ ಹುಡುಗನ ಜೊತೆ ಓಡಿ ಹೋಗಿದ್ದಳು.

ಎದೆ ಎದೆ ಬಡಿದುಕೊಂಡು ಅತ್ತೆ. ಕೆಲವರು ಇನ್ನೂ 18 ಆಗಿಲ್ಲ ಪೊಲೀಸ್ ಕಂಪ್ಲೇಂಟ್ ಕೊಡು ಅಂದ್ರು. ಮಗಳೇ ಹೋದ ಮೇಲೆ ಏನು ಕೊಟ್ಟು ಏನು ಪ್ರಯೋಜನ ಅನ್ನಿಸ್ತು. ಋಣ ಇದ್ರೆ ಯಾವತ್ತಾದರೂ ಬಂದೇ ಬರ್ತಾಳೆ ಅಂತ ಕಾಯ್ತಾ ಇದ್ದೆ.

ಇವತ್ತಿಗೆ ಸುಮಾರು 30 ವರ್ಷ ಆಯ್ತು. ಏನಾದ್ಲೋ ಏನೋ, ಸತ್ತಿದಾಳೋ ಬದುಕಿದ್ದಾಳೋ ಒಂದು ಗೊತ್ತಿಲ್ಲ. ಇವತ್ತಿಗೂ ಕಾಯ್ತಾನೇ ಇದೀನಿ.

ಈ ಮಧ್ಯೆ ಅಪ್ಪ ಅಮ್ಮನೂ ತೀರ್ಕೊಂಡ್ರು. ಹೂಂ !!! ಎಷ್ಟು ದಿನ ನಡೆಯುತ್ತೋ ನಡೀಲಿ. ಎಲ್ಲಾ ಭಗವಂತನ ಇಚ್ಛೆ.

ಏನೋ ನನ್ ಕಥೆ ನಿಮಗೆ ಹೇಳ್ಕೋಬೇಕು ಅನ್ನಿಸ್ತು ಹೇಳ್ದೆ. ಬದುಕು ಹೆಂಗೆಲ್ಲಾ ಇರ್ತದೆ ನೋಡಿ. ಎಲ್ರಿಗೂ ಒಳ್ಳೆದಾಗಲಿ.

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!