ಕಲಬುರ್ಗಿ ಜಿಲ್ಲೆಯಲ್ಲಿ ವಠಾರ ಶಾಲೆಯ ಶಿಕ್ಷಕರು ಮತ್ತು ನಾಲ್ಕು ಮಕ್ಕಳಿಗೆ ಕೊರೋನಾ ಸೋಂಕು ತಗುಲಿರುವ ಸಂಗತಿ ಈಗ ಸರ್ಕಾರದ ವಿದ್ಯಾಗಮ ಯೋಜನೆಯ ಮೇಲೆ ಕರಿನೆರಳು ಬಿದ್ದಿದೆ. ಆದರೆ, ವಿದ್ಯಾಗಮ ಯೋಜನೆ ಮುಂದುವರಿಯುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿದ್ಯಾಗಮ ಯೋಜನೆಯ ತರಗತಿಗಳಿಂದ ಮಕ್ಕಳಿಗೆ ಕೊರೋನಾ ಸೋಂಕು ತಗುಲಿಲ್ಲ. ಜನರು ವಿದ್ಯಾಗಮ ಯೋಜನೆಯನ್ನೇ ವೈಫಲ್ಯ ಎಂದು ಬಿಂಬಿಸಿರುವುದುವ ವಿಷಾದನೀಯ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯಾದ್ಯಂತ 49.34 ಲಕ್ಷ ಮಕ್ಕಳು ವಿದ್ಯಾಗಮ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಇದರಲ್ಲಿ 2 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಕರು ತಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ವಿದ್ಯಾಗಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ಕೊರೋನಾ ಸೋಂಕು ತಗುಲಿರುವುದು ಎಲ್ಲಿಯೂ ವರದಿಯಾಗಿಲ್ಲ. ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಿಗೆ ಒಂದು ತಿಂಗಳ ಹಿಂದೆ ಕೊರೋನಾ ಸೋಂಕು ತಗುಲಿತ್ತು. ಅವರೀಗ ಸೋಂಕಿನಿಂದ ಪೂರ್ಣ ಗುಣಮುಖರಾಗಿ ಆರೋಗ್ಯದಿಂದಿದ್ದಾರೆ. ಈ ಅವಧಿಯಲ್ಲಿ ಶಾಲೆಯ ಬೇರೆ ಯಾವುದೇ ಶಿಕ್ಷಕರಿಗೆ ಯಾವುದೇ ರೀತಿಯ ಸೋಂಕು ತಗುಲಿರುವುದಿಲ್ಲ ಎಂದಿದ್ದಾರೆ.
ಸೆಪ್ಟೆಂಬರ್ 22ರಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ರ್ಯಾಂಡಮ್ ಆಗಿ ಸುಮಾರು 200 ವಿದ್ಯಾರ್ಥಿಗಳನ್ನು ತಪಾಸಣೆಗೊಳಪಡಿಸಲಾಗಿದೆ. ಅದರಲ್ಲಿ 4 ಮಕ್ಕಳಿಗೆ ಸೋಂಕು ಇರುವುದು ದೃಢಪಟ್ಟಿದೆ. ಶಾಲೆಯ ಆವರಣದಲ್ಲಿ ಈ ವಿದ್ಯಾರ್ಥಿಗಳಿಗೆ ಸೋಂಕು ತಗುಲಿಲ್ಲ ಎಂದು ಸ್ಥಳೀಯ ಜಿಲ್ಲಾ ಉಪನಿರ್ದೇಶಕರು ಖಚಿತಪಡಿಸಿದ್ದಾರೆ.
ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿದ್ಯಾಗಮ ಯೋಜನೆಯ ಕಾರಣಕ್ಕೆ ಶಿಕ್ಷಕರಿಗೆ ಕೊರೋನಾ ಸೋಂಕು ಹೊಂದಿರುವ ರೀತಿಯಲ್ಲಿ ಬಿಂಬಿಸುವುದು ನಾವು ವಿದ್ಯಾರ್ಥಿ ಸಮೂಹಕ್ಕೆ ಎಸಗುವ ಅನ್ಯಾಯವಾಗಿದೆ. ಈಗಾಗಲೇ ಸಾಮಾಜಿಕ ಪಿಡುಗುಗಳು ಹೆಚ್ಚುತ್ತಿವೆ. ಈ ನಡುವೆ ವಿದ್ಯಾರ್ಥಿಗಳನ್ನ ಸುರಕ್ಷಿತ ವಾತಾವರಣದಲ್ಲಿ ಕಲಿಕೆಗೆ ತೊಡಗಿಸಿಕೊಳ್ಳದೇ ಹೋದಲ್ಲಿಲ ಮಕ್ಕಳ ಭವಿಷ್ಯಕ್ಕೆ ಅಪಚಾರವಾದಂತಾಗುತ್ತದೆ. ಎಲ್ಲಾ ಸುರಕ್ಷಿತ ಕ್ರಮಗಳೊಂದಿಗೆ ಶಾಲೆಗಳಲ್ಲಿ ಕಲಿಕೆ ಮುಂದುವರಿದಿದೆ. ನಿಗದಿತ ಕನಿಷ್ಠ ಸಂಖ್ಯೆಯ ವಿದ್ಯಾರ್ಥಿಗಳು ಸೂಚಿತ ಶಿಕ್ಷಕರ ಮಾರ್ಗದರ್ಶನದಡಿ ಕಲಿಕೆ ಮುಂದುವರಿಸುತ್ತಾರೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.
ರಾಜ್ಯದ ಯಾವುದೇ ಶಾಲೆಯಲ್ಲಿಯೂ ವಿದ್ಯಾಗಮ ಯೋಜನೆಯ ದುರುಪಯೋಗ ಆಗುತ್ತಿಲ್ಲ. ಕಲಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರು ತರಬೇತಿ ಹೊಂದಿದ ವೃತ್ತಿಪರರಾಗಿದ್ದಾರೆ. ಹಾಗೆಯೇ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಹಾಗೂ ಸೂಕ್ತ ಅರ್ಹತೆ ಹೊಂದಿದವರಾಗಿದ್ದಾರೆ. ಈ ವಿದ್ಯಾಗಮದಂತಹ ಮಹತ್ವದ ಕಾರ್ಯಕ್ರಮದ ಬಗ್ಗೆ ಅಪಪ್ರಚಾರ ಸಲ್ಲದು ಎಂದು ಸುರೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
More Stories
ಮಂಡ್ಯ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ – ಬಂಧನ
ಸಮ್ಮೇಳನಾಧ್ಯಕ್ಷ ನಾಡೋಜ ಗೊ.ರು.ಚನ್ನಬಸಪ್ಪರವರಿಗೆ ಅದ್ಧೂರಿ ಸ್ವಾಗತ