ಸಂಕ್ರಾಂತಿ ನಂತರ ಮೊದಲ, ದ್ವಿತೀಯ ವರ್ಷದ ಪದವಿ ಕಾಲೇಜು ಆರಂಭ

Team Newsnap
2 Min Read
  • ವಿವಿ ಕುಲಪತಿಗಳ ಜತೆ ಡಿಸಿಎಂ ಸಮಾಲೋಚನೆ
  • ಸ್ನಾತಕೋತ್ತರ, ಡಿಪ್ಲೊಮೋ, ಎಂಜಿನಿಯರಿಂಗ್ ತರಗತಿಗಳ ಆರಂಭ

ರಾಜ್ಯದಲ್ಲಿ ಪದವಿ, ಸ್ನಾತಕೋತ್ತರ, ಡಿಪ್ಲೊಮೋ ಮತ್ತು ಎಂಜಿನಿಯರಿಂಗ್ ತರಗತಿಗಳ ಅಂತಿಮ ವರ್ಷದ/ಸೆಮಿಸ್ಟರ್ ನ ಆಫ್‍ಲೈನ್ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿರುವ ಬೆನ್ನಲ್ಲೇ ಪ್ರಥಮ- ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಆಫ್‍ಲೈನ್ ತರಗತಿಗಳನ್ನು ಸಂಕ್ರಾಂತಿ ಹಬ್ಬದ ನಂತರ ಆರಂಭಿಸಲಾಗುವುದು. ಈ ಸಂಬಂಧ ವರದಿ ನೀಡುವಂತೆ ಕುಲಪತಿಗಳಿಗೆ ಸೂಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಶುಕ್ರವಾರ ಪ್ರಕಟಿಸಿದರು.

ಬೆಂಗಳೂರಿನಲ್ಲಿ ಸರ್ಕಾರಿ- ಖಾಸಗಿ ವಲಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು, ಉನ್ನತ ಶಿಕ್ಷಣ ಸೇರಿ ಸಂಬಂಧಿತ ಎಲ್ಲ ಇಲಾಖೆಗಳ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಉಪ ಮುಖ್ಯಮಂತ್ರಿಗಳು ಈ ಮಾಹಿತಿ ನೀಡಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಕುಲಪತಿಗಳು ನೇರ ತರಗತಿಗಳನ್ನು ಆರಂಭಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದರು. ಅದಕ್ಕೆ ಸಂಬಂಧಿಸಿದ ವರದಿಯನ್ನು ಕೂಡಲೇ ಕಳಿಸುವಂತೆ ಕೋರಲಾಗಿದೆ. ನಂತರ ಮೊದಲ ಮತ್ತು ದ್ವಿತೀಯ ವರ್ಷದ ನೇರ ತರಗತಿಗಳನ್ನು ಸಂಕ್ರಾಂತಿ ಹಬ್ಬದ ನಂತರ ಯಾವ ದಿನದಿಂದ ಆರಂಭಿಸಬೇಕು ಎಂಬ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದರು

ಈಗಾಗಲೇ ಅಂತಿಮ ವರ್ಷದ ವಿದ್ಯಾರ್ಥಿಗಳ ನೇರ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಆ ಯಶಸ್ಸಿನ ಹಿನ್ನೆಲೆಯಲ್ಲಿ ಉಳಿದ ತರಗತಿಗಳನ್ನು ಶುರು ಮಾಡಲಾಗುವುದು. ಯುಜಿಸಿ ಮತ್ತು ಕೋವಿಡ್ ಮಾರ್ಗಸೂಚಿ ಪ್ರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಪರೀಕ್ಷೆ ಮತ್ತು ಮುಂದಿನ ಶೈಕ್ಷಣಿಕ ವರ್ಷ:

ಮುಖ್ಯವಾಗಿ ಈ ಸಭೆಯಲ್ಲಿ 2021-22ರ ಶೈಕ್ಷಣಿಕ ವರ್ಷವನ್ನು ಯಾವಾಗಿನಿಂದ ಆರಂಭಿಸಬೇಕು ಎಂಬ ಬಗ್ಗೆ ಮಹತ್ವದ ಚರ್ಚೆ ನಡೆಯಿತು. ಮೇ ತಿಂಗಳ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಉನ್ನತ ಶಿಕ್ಷಣದ ಶೈಕ್ಷಣಿಕ ವೇಳಾಪಟ್ಟಿಯನ್ನು ರೂಪಿಸಲಾಗುವುದು ಎಂದು ಡಿಸಿಎಂ ತಿಳಿಸಿದರು.

ಆನ್‍ಲೈನ್ ಪರೀಕ್ಷೆಗಳಿಗಿಂತ ಪೆನ್ ಮತ್ತು ಪೇಪರ್ ಆಧಾರಿತ ಆಫ್‍ಲೈನ್ ಪರೀಕ್ಷೆಯೇ ಉತ್ತಮ ಎಂದು ವಿಟಿಸಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಸೇರಿದಂತೆ ಎಲ್ಲ ಕುಲಪತಿ, ಕುಲ ಸಚಿವರು ಸಲಹೆ ಮಾಡಿದರು. ಸರ್ಕಾರ ಈ ಸಲಹೆಯನ್ನು ಗಂಭೀರವಾಗಿ ಪರಿಶೀಲಿಸಲಿದೆ. ಯುಜಿಸಿ ನಿಯಮದಂತೆ ಮಾರ್ಚ್ ನಲ್ಲಿ ಪರೀಕ್ಷೆ ಮುಗಿಯಬೇಕಾಗುತ್ತದೆ. ಆದರೆ ಇನ್ನು ಹಲವಾರು ವಿವಿಗಳ ವ್ಯಾಪ್ತಿಯಲ್ಲಿ ಪಾಠಗಳು ಮುಗಿಯದ ಕಾರಣ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಚಿಂತಿಸಲಾಗುತ್ತಿದೆ. ಶೀಘ್ರವೇ ಈ ಬಗ್ಗೆ ಅಂತಿಮ ಮಾಹಿತಿ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

Share This Article
Leave a comment