December 29, 2024

Newsnap Kannada

The World at your finger tips!

punith gover

ಪವರ್ ಸ್ಟಾರ್ ಪುನೀತ್​ಗೆ ಕಣ್ಣೀರಿನ ವಿದಾಯ – ಭೂತಾಯಿ ಮಡಿಲು ಸೇರಿದ ‘ ಬೆಟ್ಟದ ಹೂ’ಯುವರತ್ನ

Spread the love

ಪವರ್ ಸ್ಟಾರ್ ಪುನೀತ್​ ಗೆ ಕಣ್ಣೀರಿನ ವಿದಾಯ ಹೇಳಿದ ಪತ್ನಿ, ಮಕ್ಕಳು ಕುಟುಂಬಸ್ಥರು, ಲಕ್ಷಾಂತರ ಅಭಿಮಾನಿಗಳು ಆಕ್ರಂದನದ ನಡುವೆಯೇ ಭೂತಾಯಿಯ ಮಡಿಲು ಸೇರಿದ ‘ ಬೆಟ್ಟದ ಹೂ’ಯುವರತ್ನನ ಯುಗಾಂತ್ಯ ಕಂಡಂತಾಯಿತು.

ಕುಶಾಲತೋಪು ಸಿಡಿಸಿ, ರಾಷ್ಟ್ರಗೀತೆ ಮೂಲಕ ಪುನೀತ್​ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ಇನ್ನು ಈಡಿಗ ಸಮುದಾಯದ ಸಂಪ್ರದಾಯದಂತೆ ಪುನೀತ್​​ ಅಂತ್ಯಕ್ರಿಯೆ ನಡೆದಿದ್ದು ರಾಘವೇಂದ್ರ ರಾಜ್​ಕುಮಾರ್ ಹಿರಿಯ ಪುತ್ರ ವಿನಯ್​​ ರಾಜ್​ಕುಮಾರ್ ಅಂತಿಮ ವಿಧಿವಿಧಾನ ಕಾರ್ಯವನ್ನು ರಾಣೆಬೆನ್ನೂರಿನ ಶರಣಬಸವೇಶ್ವರ ಮಠದ ಡಾ. ಪರಮಾನಂದ ಸ್ವಾಮೀ ನೇತೃತ್ವದಲ್ಲಿ ನೆರವೇರಿಸಿದರು.

ಹೂವಿನ ಪಲ್ಲಕ್ಕಿಯಲ್ಲಿ ಇಡಲಾಗಿದ್ದ ಪಾರ್ಥಿವ ಶರೀರವನ್ನು ಮೂರು ಪ್ರದಕ್ಷಿಣೆ ಹಾಕಿಸಿ ಅಂತಿಮ ಯಾತ್ರೆ ನಡೆಸಿದರು, ವಿನಯ್ ರಾಜ್‌ಕುಮಾರ್ ಪಾರ್ಥಿವ ಶರೀರದ ಅಂತಿಮ ವಿಧಿಗಳನ್ನು ನೆರವೇರಿಸಿದರು. ಮೊದಲು ಉಪ್ಪನ್ನು ಗುಂಡಿಯೊಳಗೆ ಸುರಿದು, ಬಳಿಕ ಪಾರ್ಥಿವ ಶರೀರವನ್ನಿಟ್ಟು, ಅದರ ಮೇಲೆ ಬಾಳೆ ಎಲೆಗಳಿಂದ ಮುಚ್ಚಿ ಬಳಿಕ ಕಸ್ತೂರಿ, ತುಳಸಿ ಕಾಷ್ಠ ಹಾಗೂ ಉಪ್ಪನ್ನು ಹಾಕಿದರು. ಸ್ಟುಡಿಯೋ ಒಳಗೆ ಅಂತ್ಯ ಸಂಸ್ಕಾರ ಕಾರ್ಯ ನಡೆಯುತ್ತಿದ್ದರೇ, ಹೊರ ಭಾಗದಲ್ಲಿ ಅಭಿಮಾನಿಗಳು ಅಪ್ಪು ಮತ್ತೆ ಹುಟ್ಟಿ ಬಾ ಎಂಬ ಘೋಷಣೆಗಳನ್ನು ಮೊಳಗಿಸಿದರು.

ಪುನೀತ್​ ಗೆ ಸಕಾ೯ರಿ ಗೌರವದಿಂದ ಅಂತಿಮ ನಮನ :

punith g

ಪಾರ್ಥಿವ ಶರೀರ ಮೆರವಣಿಗೆ ಕಂಠೀರವ ಸ್ಟುಡಿಯೋ ತಲುಪಿದ ನಂತರ ಕುಶಾಲತೋಪು ಸಿಡಿಸುವ ಮೂಲಕ ಅಪ್ಪು ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಸಚಿವ ಮುನಿರತ್ನ, ಶಾಸಕ ಕುಮಾರ್ ಬಂಗಾರಪ್ಪ ಮತ್ತು ಅವರ ಪುತ್ರ ಗೌರವ ಸಮರ್ಪಣೆ ಮಾಡಿದ್ದಾರೆ.

ನಟ ರವಿಚಂದ್ರನ್‌ , ಯಶ್‌, ಶಾಸಕ ಎಸ್.ಆರ್.ವಿಶ್ವನಾಥ್‌, ಶಾಸಕ ರಾಜೂಗೌಡ, ಬಿಬಿಎಂಪಿ ಆಯುಕ್ತ ಗೌರವ್‌ ಗುಪ್ತ, ನಟ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌, ಸಹೋದರ ರಾಘವೇಂದ್ರ ರಾಜ್‌ಕುಮಾರ್‌,ಜಗ್ಗೇಶ್ ಹಾಗೂ ಗಣೇಶ್‌ ಅನೇಕ ಸ್ಟಾರ್​ಗಳು ಅಂತಿಮ ಗೌರವ ಸಲ್ಲಿಸಿದರು.

ಈ ವೇಳೆ ಭಾವುಕರಾದ ಶಿವರಾಜ್​ ಕುಮಾರ್​ರನ್ನು ಉಪೇಂದ್ರ ಪಕ್ಕದಲ್ಲಿ ನಿಂತು ಸಂತೈಸಿದರು.ಪುನೀತ್ ರಾಜ್ ಕುಮಾರ್ ಕುಟುಂಬದವರ ಇಚ್ಛೆಯಂತೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆಗೆ ಕುಟುಂಬದ ಸದಸ್ಯರು ಹಾಗೂ ಕೆಲವು ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಹೊರಭಾಗದಲ್ಲಿ ಸೇರಿದ್ದರುತಮ್ಮ ನೆಚ್ಚಿನ ನಟನನ್ನು ಕೊನೆಯ ಬಾರಿಗೆ ನೋಡಲು ಆಗಲಿಲ್ಲ ಎಂದು ಕೆಲ ಅಭಿಮಾನಿಗಳು ನಿರಾಶರಾದರು.

Copyright © All rights reserved Newsnap | Newsever by AF themes.
error: Content is protected !!