December 18, 2024

Newsnap Kannada

The World at your finger tips!

WhatsApp Image 2024 12 07 at 11.02.14 AM

ಸುಬ್ರಹ್ಮಣ್ಯ ಷಷ್ಠಿ

Spread the love

ಮಾರ್ಗಶಿರ ಮಾಸದ ಶುದ್ಧ ಷಷ್ಠಿಯೇ ಸುಬ್ರಹ್ಮಣ್ಯ ಷಷ್ಠಿ, ಕರಾವಳಿಗರಿಗೆ ಇದೊಂದು ವಿಶೇಷ ಹಬ್ಬವೂ ಹೌದು. ಶಿವ ಹಾಗೂ ಪಾರ್ವತಿಯರ ಮಗನಾದ ಕಾರ್ತಿಕೇಯನು ಕುಮಾರಧಾರಾ ತಟದಲ್ಲಿ ನೆಲೆಯಾದ ಸ್ಥಳ ಕುಕ್ಕೆ ಸುಬ್ರಹ್ಮಣ್ಯ. ಈ ಸುಬ್ರಹ್ಮಣ್ಯ ಷಷ್ಠಿಯ ಹಿಂದೆಯೂ ಒಂದು ಪೌರಾಣಿಕ ಹಿನ್ನಲೆ ಇದೆ.

ಸ್ಕಂದ ಷಷ್ಠಿ ಅಥವಾ ಸುಬ್ರಹ್ಮಣ್ಯ ಷಷ್ಠಿ. ಮಾರ್ಗಶಿರ ಮಾಸದಲ್ಲಿ ಬರುವ ಈ ಷಷ್ಠಿ ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ಎಂದೂ ಪ್ರಸಿದ್ಧಿಯನ್ನು ಪಡೆದಿದೆ. ಶುಕ್ಲಪಕ್ಷದ ಆರನೇ ದಿನ ಆಚರಿಸಲ್ಪಡುವ ಷಷ್ಠಿ ಹಿಂದೂಗಳ ಪ್ರಮುಖ ಹಬ್ಬ. ತುಳುನಾಡಿಗೆ ಇದು ಪ್ರಮುಖ ಹಬ್ಬವೂ ಹೌದು.


ಕಾರ್ತಿಕೇಯ, ಮುರುಗನ್‌, ಸ್ಕಂದ, ವೇಲನ್‌, ಕುಮಾರ ಸ್ವಾಮಿ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಸುಬ್ರಹ್ಮಣ್ಯ ಶಿವ ಹಾಗೂ ಪಾರ್ವತಿಯರ ಪುತ್ರ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಚರಿಸಲ್ಪಡುವ ಪ್ರಸಿದ್ಧ ಚಂಪಾಷಷ್ಠಿಯ ಹಿಂದೆ ಪುರಾಣ ಕಥೆಯೊಂದಿದೆ. ಆ ಕಥೆಯ ಹಿನ್ನೆಲೆ ಇಲ್ಲಿದೆ ನೋಡಿ.

ಋಷಿ ಕಶ್ಯಪ ಮಹಾಮುನಿಗೆ ಹದಿಮೂರು ಜನ ಪತ್ನಿಯರು. ಇವರೆಲ್ಲ ದಕ್ಷನ ಮಕ್ಕಳು ಅಂದರೆ ಅಕ್ಕ ತಂಗಿಯರು. ಅದರಲ್ಲಿ ಕದ್ರು ಮತ್ತು ವಿನುತಾ ಕೂಡಾ ಇಬ್ಬರು. ಒಂದು ದಿನ ಕದ್ರು ತನ್ನ ಸಹೋದರಿ ವಿನುತಾಳೊಂದಿಗೆ ಮೋಸದ ಪಂಥ ಕಟ್ಟಿ ತನ್ನ ಚರಣದಾಸಿಯನ್ನಾಗಿ ಮಾಡಿಕೊಳ್ಳುತ್ತಾಳೆ. ಇದಕ್ಕೆ ತನ್ನ ಮಕ್ಕಳಾದ ಸರ್ಪಗಳ ಸಹಾಯವನ್ನು ಪಡೆಯುತ್ತಾಳೆ. ಅವರು ಒಪ್ಪದಾಗ ಅವರಿಂದ ವಚನವನ್ನು ಪಡೆದು ಗೆಲುವು ಪಡೆದುಕೊಳ್ಳುತ್ತಾಳೆ. ಇದು ವಿನುತಾಳ ಮಗನಾದ ಗರುಡನಿಗೆ ತಿಳಿದು ಹೋಗುತ್ತದೆ. ಆದರೆ ಕದ್ರು ತನ್ನ ತಾಯಿಗೆ ಸಮಾನಳಾಗಿದ್ದುದರಿಂದ ಅವಳಿಗೆ ಏನೂ ಮಾಡಲಾಗದ ಕಾರಣದಿಂದ ದ್ವೇಷ ಸರ್ಪಗಳ ಮೇಲೆ ತಿರುಗುತ್ತದೆ. ದ್ವೇಷದಿಂದ ಸಹಸ್ರ ಸಹಸ್ರ ಹಾವುಗಳನ್ನು ಕುಕ್ಕಿ ಮುಕ್ಕ ತೊಡಗುತ್ತಾನೆ.

ಗರುಡನಿಂದಾಗಿ ಪ್ರಾಣ ಭಯದಿಂದ ಶೇಷ ಪಾತಾಳವನ್ನು ಸೇರಿಕೊಳ್ಳುತ್ತಾನೆ. ಅನಂತನು ವೈಕುಂಠದಲ್ಲಿ ಹರಿಗೆ ತಲ್ಪವಾಗುತ್ತಾನೆ. ನಾಗಗಳು ಶಿವನ ಕೊರಳು ಕೈ ಕಾಲುಗಳನ್ನು ಸುತ್ತಿಕೊಳ್ಳುತ್ತವೆ. ಕಾಳಿಯ ಅನ್ನುವ ಹಾವು ನಂದ ಗೋಕುಲದ ಯಮುನೆಯಲ್ಲಿ ಅಡಗಿಕೊಳ್ಳುತ್ತದೆ. ಹಾಗೆಯ ಶಂಕಪಾಲ, ಭೂಧರ, ಅನಘಾದಿ ಸರ್ಪಗಳು ಒಂದೊಂದು ಕಡೆಯಲ್ಲಿ ಅಡಗಿಕೊಳ್ಳುತ್ತವೆ.ವಾಸುಕಿ ಅನ್ನುವ ಮಹಾಸರ್ಪವೊಂದು ಗರುಡ ಭಯದಿಂದ ತುಳುನಾಡಿಗೆ ಓಡಿಬರುತ್ತದೆ.

ತುಳುನಾಡಿನ ತಪ್ಪಲಿನ ಸಹ್ಯಾದ್ರಿ ಮಡಿಲಿನ, ಧಾರಾ ನದಿಯ ಪಕ್ಕದಲ್ಲಿ ಇರುವ ಬಿಲದ್ವಾರ ಅನ್ನುವ ಗುಹೆಯಲ್ಲಿ ಅಡಗಿಕೊಳ್ಳುತ್ತದೆ. ಇದು ಹೇಗೋ ಗರುಡನಿಗೆ ತಿಳಿದು ಹೋಗುತ್ತದೆ. ಘನಘೋರ ಯುದ್ಧವಾಗುತ್ತದೆ. ವಿಷಯ ತಿಳಿದ ಇವರೀರ್ವರ ಅಪ್ಪನಾದ ಕಶ್ಯಪ ಓಡೋಡಿ ಬಂದು ಯುದ್ಧವನ್ನು ತಡೆಯುತ್ತಾನೆ.ಮಹಾ ಶಿವ ಭಕ್ತನಾದ ವಾಸುಕಿಯಿಂದ ಹಲವು ಲೋಕ ಕಲ್ಯಾಣ ಕೆಲಸವೂ ನಡೆಯಬೇಕಿರುವುದನ್ನು ಗರುಡನಿಗೆ ಹೇಳುತ್ತಾನೆ. ಗರುಡ ತನ್ನ ಹಸಿವನ್ನು ಇಂಗಿಸುವಂತೆ ಕೇಳಿಕೊಂಡಾಗ ಮನಿಲಾ ದ್ವೀಪದಲ್ಲಿ ದುಷ್ಟ ಬೇಡರು ಮತ್ತು ಹಾವುಗಳನ್ನು ತಿಂದು ಹಸಿವನ್ನು ಇಂಗಿಸಿಕೊಳ್ಳುವಂತೆ ಹೇಳುತ್ತಾನೆ.


ವಾಸುಕಿಯು ತನ್ನ ಪ್ರಾಣ ಭಯವನ್ನು ಹೋಗಲಾಡಿಸಲು ಅಪ್ಪನನ್ನು ಮೊರೆಯಿಡುತ್ತಾನೆ. ಅಪ್ಪ ಶಿವನನ್ನು ಕುರಿತು ತಪಸ್ಸನ್ನು ಆಚರಿಸಲು ಹೇಳುತ್ತಾನೆ. ವಾಸುಕಿಯು ತಪಸ್ಸಿನ ಮೂಲಕ ಶಿವನನ್ನು ಒಲಿಸಿಕೊಂಡು ತನ್ನ ಪ್ರಾಣ ಭಯವನ್ನು ಹೋಗಲಾಡಿಸಲು ಹೇಳುತ್ತಾನೆ. ಅದಕ್ಕೆ ಶಿವನು ” ವಾಸುಕಿ ಚಿಂತಿಸಬೇಡ ಮುಂದಿನ ಕಲ್ಪದಲ್ಲಿ ಸರ್ಪ ಕುಲದ ರಕ್ಷಣೆಗಾಗಿ ಸುಬ್ರಮಣ್ಯ ಸ್ವಾಮಿಯು ನನ್ನ ಮಗನಾಗಿ ಜನಿಸುತ್ತಾನೆ. ಆ ದಿನವು ಬೇಗ ಸನ್ನಿಹಿತವಾಗುವಂತೆ ಇಲ್ಲೇ ಇದ್ದುಕೊಂಡು ತಪಸ್ಸನ್ನು ಆಚರಿಸು’ ಎಂದು ಹೇಳುತ್ತಾನೆ

ಹೀಗೆ ಹಲವು ವರ್ಷಗಳು ಕಳೆಯಲು ಸುಬ್ರಮಣ್ಯ ಸ್ವಾಮಿಯು ತಾರಕಾಸುರನನ್ನು ಕೊಂದು ತನ್ನ ರಕ್ತ ಸಿಕ್ತ ಆಯುಧವನ್ನು ಧಾರಾ ನದಿಗೆ ಬಂದು ತೊಳೆಯುತ್ತಾನೆ. ಅಂದಿನಿಂದ ಆ ನದಿಯು ಕುಮಾರಧಾರ ಅನ್ನುವ ಹೊಸ ನಾಮಧೇಯದಿಂದ ಕರೆಯಲ್ಪಡುತ್ತದೆ

ಇಂದ್ರ ತನ್ನ ಮಗಳಾದ ದೇವಸೇನೆಯೊಂದಿಗೆ ಓಡೋಡಿ ಬಂದು ವಿವಾಹವಾಗುವಂತೆ ಪ್ರಾರ್ಥಿಸಿಕೊಳ್ಳುತಾನೆ. ಷಣ್ಮುಖನ ಒಪ್ಪಿಗೆಯನ್ನು ಪಡೆದು ಸಕಲ ದೇವತೆಗಳ ಮುಂದೆ ಕುಮಾರಧಾರಾ ತಟದಲ್ಲಿ ಚಂಪಾ ಷಷ್ಟಿಯ ದಿನದ ಸುಘಳಿಗೆಯಲ್ಲಿ ಮದುವೆ ನಡೆಯುತ್ತದೆ . ಮುಂದೆ ವಾಸುಕಿಯ ಇಚ್ಚೆಯಂತೆ ತನ್ನ ಪತ್ನಿಯಾದ ದೇವಸೇನೆ ಮತ್ತು ವಾಸುಕಿಯ ಜೊತೆಯಲ್ಲಿ ಕುಕ್ಕೆಯಲ್ಲಿ ನೆಲೆಸಲು ಸುಬ್ರಹ್ಮಣ್ಯನು ಇಚ್ಛಿಸಿದಾಗ, ವಿಶ್ವಕರ್ಮನು ಮೂರ್ತಿಯನ್ನು ಮಾಡಿಕೊಡುತ್ತಾನೆ. ಬ್ರಹ್ಮ ಅದನ್ನು ಎಲ್ಲ ದೇವರ ಸಮ್ಮುಖದಲ್ಲಿ ಪ್ರತಿಷ್ಠಾಪಿಸುತ್ತಾನೆ.

ಸುಬ್ರಮಣ್ಯ ದೇವರನ್ನು ಧರೆಗೆ ಇಳಿಸಿದ ವಾಸುಕಿಯನ್ನು ತುಳುನಾಡಿನ ಮನೆ ಮನೆಗಳಲ್ಲಿ ನಾಗಬ್ರಹ್ಮ ಅನ್ನುವ ನಾಮಧೇಯದಿಂದ ಪೂಜಿಸಲಿ ಎಂದು ಸಕಲ ದೇವತೆಗಳು ವಾಸುಕಿಯನ್ನು ಹರಸುತ್ತಾರೆ. ಹಾಗಾಗಿ ಸುಬ್ರಮಣ್ಯ ನೆಲೆಸಲು ಕಾರಣನಾದ ಗರುಡ ಬರದೆ ಕೆಲವು ಕಡೆ ಚಂಪಾ ಷಷ್ಟಿಯ ರಥವನ್ನು ಎಳೆಯುವ ಕ್ರಮ ಇಲ್ಲ. ಇದೊಂದು ಸಂಪ್ರದಾಯವಾಗಿ, ಹಬ್ಬವಾಗಿ ಇಂದಿಗೂ ವೈಭವದಿಂದ ಆಚರಿಸಲ್ಪಡುತ್ತದೆ.

image 8

ಪ್ರಶಾಂತ ಭಟ್ ಕೋಟೇಶ್ವರ
9886600332

Copyright © All rights reserved Newsnap | Newsever by AF themes.
error: Content is protected !!