ಒಂದೂರಲ್ಲಿ ಒಂದು ಬಡ ಕುಟುಂಬವಿತ್ತು.ಆ ಬಡವನಿಗೆ ಮೂವರು ಜನ ಮಕ್ಕಳಿದ್ದರು. ಕಿತ್ತು ತಿನ್ನುವ ಬಡತನವಿದ್ದರೂ ಮಕ್ಕಳಿಗೆ ಶಾಲೆ ಕಲಿಸುವ ಬಯಕೆ ಬಡವನಿಗಿತ್ತು.ಮೊದಲ ಮಗ ರಾಮ ಬುದ್ದಿವಂತನಾಗಿದ್ದ.ಉಳಿದ ಇಬ್ಬರು ಹೆಣ್ಣು ಮಕ್ಕಳ ಹೆಸರು ಗೀತಾ ಮತ್ತು ವನಿತಾ .ಗೀತಾ ಎರಡನೆಯವಳು ವನಿತಾ ಮೂರನೆಯವಳು.ಅಣ್ಣ ಶಾಲೆಗೆ ಹೋಗುತ್ತಿದ್ದ ಇವರಿಬ್ಬರು ಮನೆಯಲ್ಲಿಯೆ ಅಮ್ಮನ ಹತ್ತಿರ ಇರುತ್ತಿದ್ದರು.ಅಪ್ಪ ದಿನಾ ಕಟ್ಟಿಗೆ ಮಾರಲು ಕತ್ತೆಯ ಮೇಲೆ ಹೊತ್ತುಕೊಂಡು ಊರೆಲ್ಲ ತಿರುಗಿ ಕಟ್ಟಿಗೆ ಮಾರಿ ಮನೆಯನ್ನು ನಡೆಸುತ್ತಿದ್ದ.ಆ ಊರಲ್ಲಿ ಏಳನೇ ತರಗತಿಯ ವರೆಗೆ ಮಾತ್ರ ಸರಕಾರಿ ಶಾಲೆ ಇತ್ತು.ಜಾಣ ಹುಡುಗ ಏಳನೇ ತರಗತಿ ಪಾಸ್ ಮಾಡಿದ .ಹೆಚ್ಚಿನ ವಿದ್ಯಾಭ್ಯಾಸಕ್ಕೆ ನಗರಕ್ಕೆ ಹೋಗಬೇಕಿತ್ತು. ಬಡ ತಂದೆ ತಾಯಿಗೆ ಹೆಚ್ಚಿನ ಫೀಸ್ ಕೊಟ್ಟು ನಗರಕ್ಕೆ ಶಾಲೆಗೆ ಕಳಿಸುವ ಶಕ್ತಿ ಇರಲಿಲ್ಲ.
ಮಗನು ವಿದ್ಯಾವಂತನಾಗಿ ದೊಡ್ಡ ಸಾಹೇಬ ನಾಗಲಿ ಎಂಬ ಬಯಕೆ ತಂದೆ ತಾಯಿಯದಾಗಿತ್ತು.ಬಡತನ ಅವರ ಆಸೆಯನ್ನು ಮೊಟಕುಗೊಳಿಸುತ್ತಿತ್ತು.ಹೀಗೆ ಮಗನ ವಿದ್ಯಾಭ್ಯಾಸದ ಚಿಂತೆಯಲ್ಲಿ ತಂದೆ ತಾಯಿ ಕುಳಿತಿದ್ದರು.ಅದೇ ಸಮಯದಲ್ಲಿ ಊರಿಗೆ ಇಬ್ಬರು ವಿದೇಶಿ ಅಧಿಕಾರಿಗಳು ಬಂದು ಊರ ಸಾಹುಕಾರನ ಮನೆಯಲ್ಲಿ ಬಾಡಿಗೆ ಇದ್ದರು .ಅವರಿಗೆ ಮಕ್ಕಳಿಲ್ಲದ ಕಾರಣ ಮಕ್ಕಳನ್ನು ದತ್ತು ಕೊಳ್ಳಲು ಬಂದಿದ್ದರಂತೆ.ಇದನ್ನು ತಿಳಿದ ಬಡ ದಂಪತಿಗಳಿಗೆ ಒಂದು ವಿಚಾರ ಹೊಳೆಯಿತು .ಆ ಸಿರಿವಂತರಿಗೆ ಮಗನನ್ನು ದತ್ತು ನೀಡಿದರೆ ಅವರಾದರೂ ಶಾಲೆ ಕಲಿಸಿ ಅವನನ್ನು ದೊಡ್ಡ ಅಧಿಕಾರಿಯಾಗಿ ಮಾಡಬಹುದು ಎಂದುಕೊಂಡರು.
ಒಂದು ದಿನ ಆ ಸಿರಿವಂತ ವಿದೇಶಿಯರ ಹತ್ತಿರ ಹೋಗಿ ಬಡವ ಕೇಳಿದ” ನಮ್ಮ ಮಗನನ್ನು ನೀವು ದತ್ತು ತೆಗೆದುಕೊಂಡು ಓದಿಸಿ ದೊಡ್ಡ ಸಾಹೇಬನನ್ನಾಗಿ ಮಾಡುವಿರೊ ?”.ಇದನ್ನ ಕೇಳಿದ ಸಿರಿವಂತ ಸಂತೋಷದಿಂದ ಒಪ್ಪಿದ .ಮಗನ ಜೀವನಕ್ಕೆ ಒಳ್ಳೆದಾಗಲಿ ಎಂದು ದತ್ತು ನೀಡಲು ಒಪ್ಪಿದರು.ತಂದೆ ತಾಯಿಗಳಿಬ್ಬರ ಒಳ ಮನಸು ಮಾತ್ರ ಕರುಳ ಕುಡಿಯನ್ನು ಕತ್ತರಿಸಿಕೊಳ್ಳಲು ಒಪ್ಪದೆ ಕಂಬನಿ ಹನಿಸುತ್ತಿತ್ತು. ಇತ್ತ ಒಡ ಹುಟ್ಟಿದ ಎರಡು ಹೆಣ್ಣು ಮಕ್ಕಳಿಂದ ಮಗನನ್ನು ಬೇರ್ಪಡಿಸುವ ಅನಿವಾರ್ಯತೆ ಬಂತಲ್ಲ ಎಂಬ ದುಃಖ.ಚಿಕ್ಕ ವಯಸ್ಸಿನ ಕಂದಮ್ಮಗಳಿಗೆ “ನಮ್ಮ ಅಣ್ಣ ಎಲ್ಲಿ “ಎಂದು ಕೇಳಿದರೆ ಏನು ಹೇಳಬೇಕು ಎಂಬ ಪ್ರಶ್ನೆ ಬಡ ತಂದೆ ತಾಯಿಯನ್ನು ಕಾಡುತ್ತಿತ್ತು.ಆ ದಿನ ರಾತ್ರಿ ಕಳೆದರೆ ಬೆಳಗ್ಗೆ ಸಿರಿವಂತ ಹುಡುಗನ ಕರೆದೊಯ್ಯಲು ಬರುತ್ತಾನೆ.
ಇಡೀ ರಾತ್ರಿ ಹೆತ್ತ ತಾಯಿಗೆ ಉಸಿರು ಗಟ್ಡಿದ ಅನುಭವ .ಮನಸಲ್ಲೆ ಅತ್ತು ಅತ್ತು ಕಣ್ಣಲ್ಲಿನ ನೀರು ಖಾಲಿಯಾಗಿತ್ತು ದುಃಖ ಮಾತ್ರ ಹೆಚ್ಚುತ್ತಲೆ ಇತ್ತು.ಕೊನೆಗೂ ಕತ್ತಲೆಯ ಕರಾಳ ರಾತ್ರಿ ಕಳೆದು ಬೆಳಗಾಯಿತು .ದತ್ತು ಮಗನ ಕರೆದೊಯ್ಯಲು ಸಿರಿವಂತ ಮನೆಗೆ ಬಂದ.ಮಗನನ್ನು ಕರೆದು ತೋರಿಸಿದರು.ಮಗ ಅಪ್ಪ ಅಮ್ಮನನ್ನು ಕುತೂಹಲದಿಂದ ಇವರು ಯಾರೆಂದು ಕೇಳಿದ .ಆಗ ಅಪ್ಪ ಹೇಳಿದ ಇವರು ನಿನಗೆ ಶಾಲೆ ಕಲಿಸಲು ಬಂದಿದ್ದಾರೆ ಅವರ ಮನೆಗೆ ಕೊಂಡೊಯ್ದು ಅಲ್ಲಿಯೆ ಇರಿಸಿಕೊಂಡು ದೊಡ್ಡ ಸಾಹೇಬನನ್ನಾಗಿ ಮಾಡುತ್ತಾರೆ.ಇನ್ನು ಮುಂದೆ ಇವರೆ ನಿನ್ನ ಪಾಲಿಗೆ ತಂದೆ ಎಂದರು.ಆಗ ಶಾಲೆ ಕಲಿಯುವ ಹಂಬಲ ಹೊತ್ತ ಮಗನಿಗೆ ತಂದೆ ತಾಯಿಯ ಪ್ರೀತಿ ವಾತ್ಸಲ್ಯ ದಿಂದ ದೂರವಾಗಲು ಮನಸಾಗದೆ ಕಣ್ಣೀರು ಹಾಕತೊಡಗಿದನು.ಆಗ ಆತನಿಗೆ ತಂದೆ ತಾಯಿ ಸಮಾಧಾನ ಪಡಿಸಿ ತಮ್ಮ ಆಸೆಯಂತೆ ಕಲಿತು ಕೀರ್ತಿ ಪಡೆಯಲು ಮಗನಿಗೆ ಅವರೊಂದಿಗೆ ಹೋಗಲು ಒಪ್ಪಿಸಿದರು.
ಆಟ ಆಡಿಕೊಳ್ಳುತ್ತಿದ್ದ ತಂಗಿಯರನ್ನು ಮುತ್ತಿಟ್ಟು ರಾಮು ಸಿರಿವಂತನ ಜೊತೆಗೆ ನಡೆದ.ಆಗ ತಂದೆ ತಾಯಿಗೆ ಎರಡು ಚಿಕ್ಕ ಮಕ್ಕಳು ಅಮ್ಮನನ್ನು ಕೇಳುತ “ಅಮ್ಮ ಅಣ್ಣ ಎಲ್ಲಿಗೆ ಹೊರಟಿದ್ದಾನೆ ” ಎಂದರು.ಆಗ ಅಮ್ಮ ಹೇಳಿದಳು ನಿಮ್ಮಣ್ಣ ಶಾಲೆಗೆ ಹೋಗುತ್ತಾನೆ ಅವರೊಂದಿಗೆ ಇನ್ನು ಮುಂದೆ ಸಾಹೇಬನಾಗುವ ವರೆಗೆ ಅಲ್ಲಿಯೇ ಇರುತ್ತಾನೆ ಎಂದಳು.ಚಿಕ್ಕ ಮಕ್ಕಳು ಸ್ವಲ್ಪ ಹೊತ್ತು ಭಾವುಕರಾಗಿ ಸಪ್ಪಗೆ ಮುಖದಿಂದಲೇ ಅಣ್ಣನನ್ನು ಕಳಿಸಿಕೊಟ್ಟರು.ಹೋಗುವಾಗ ಆ ಸಿರಿವಂತ ಒಂದಿಷ್ಟು ಹಣ ನೀಡಲು ಮುಂದಾದ.ಆಗ ದಂಪತಿಗಳು ನುಡಿದರು “ಸಿರಿವಂತರೆ ನಾವು ಮಗನ ಉತ್ತಮ ಭವಿಷ್ಯಕ್ಕಾಗಿ ನಿಮ್ಮ ಜೊತೆಗೆ ಕಳಿಸುತ್ತಿದ್ದೇವೆ ವಿನಃ ಮಗನನ್ನು ಮಾರಾಟ ಮಾಡುತ್ತಿಲ್ಲ “ಎಂದು ನುಡಿದರು. ಅವರ ಮಾತು ಸಿರಿವಂತನ ಮನದಲ್ಲಿ ಸಂಚಲನ ಮೂಡಿಸುವಂತಿತ್ತು .ಇತ್ತ ವಿದೇಶಿ ಸಿರಿವಂತ ದತ್ತು ಮಗನ ಜೊತೆಗೆ ತನ್ನ ದೇಶಕ್ಕೆ ರೈಲು ಪ್ರಯಾಣ ಮಾಡಲು ಸಜ್ಜು ಗೊಂಡ.ಅತ್ತ ರಾಮ ಊಟ ತಿಂಡಿ ಮರೆತು ಗಿಡವೊಂದರ ಕೆಳಗೆ ತಂದೆ ,ತಾಯಿ,ತಂಗಿಯರ ನೆನೆಸಿಕೊಂಡು ದೂರದ ತನ್ನ ಮನೆಯತ್ತ ನೋಡುತ್ತ ನದಿ ದಂಡೆಯಲ್ಲಿ ಕುಳಿತು ಕಣ್ಣೀರು ಹಾಕುತ್ತಿದ್ದ.ಕೂಡಲೆ “ಅಣ್ಣ ಎಂದು ಯಾರೊ ಇವನನ್ನು ಕೂಗಿದಂತಾಯಿತು.ಯಾರೆಂದು ರಾಮ ಹಿಂದಿರುಗಿ ನೋಡಿದ .ಕಣ್ಣು ನಂಬದ ಆಶ್ಚರ್ಯ ಕಾದಿತ್ತು.ತನ್ನ ತಂಗಿ ಗೀತಾ ಕತ್ತೆಯೊಂದಿಗೆ ಕತ್ತೆಯ ಮೇಲೆ ತನ್ನ ಚಿಕ್ಕ ತಂಗಿ ವನಿತಾಳನ್ನು ಕೂಡಿಸಿಕೊಂಡು ಇತ್ತ ಕಡೆಗೆ ಬರುತ್ತಿದ್ದಳು.ಆತನಿಗೆ ಆಶ್ಚರ್ಯದೊಂದಿಗೆ ಕನಸೋ ನನಸೋ ಗೊತ್ತಾಗಲಿಲ್ಲ ಅದು ನಿಜವೇ ಆಗಿತ್ತು .ಆ ದೃಶ್ಯದಿಂದ ಆತನಿಗೆ ಸಂತೋಷವೆ ಸಂತೋಷ .
ಅವರ ಹಿಂದೆ ತನ್ನ ತಂದೆ ತಾಯಿ ಸಹ ಬರುತ್ತಿದ್ದುದನ್ನು ನೋಡಿ ಆತನಿಗೆ ಇನ್ನಷ್ಟು ಸಂತೋಷ.ಜೊತೆಗೆ ಸಿರಿವಂತನೂ ಇದ್ದ.ಸಿರಿವಂತ ಇದೆಲ್ಲವನ್ನು ನೋಡಿ ಕಣ್ಣೀರಿನ ಆನಂದ ಬಾಷ್ಪ ಹರಿಸಿದ.ಆಗ ಆ ವಿದೇಶಿ ಸಿರಿವಂತ ಹೇಳಿದ ನಿಮ್ಮ ಬಡತನ ಹೃದಯ ಸಿರಿವಂತಿಕೆ ,ಮಗನ ಮತ್ತು ಹೆತ್ತ ತಾಯಿಯ ವಾತ್ಸಲ್ಯವನ್ನು ಅರಿತುಕೊಂಡು ಇಂತಹ ಪವಿತ್ರ ಸಂಬಂಧಗಳನ್ನು ಒಡೆಯಲು ನನಗಿಷ್ಟವಿಲ್ಲ.ನಾನು ಒಂದು ತೀರ್ಮಾನಕ್ಕೆ ಬಂದಿರುವೆ.ತಾವು ನನಗೆ ಮಗನನ್ನು ದತ್ತು ನೀಡುವುದು ಬೇಕಿಲ್ಲ.ನನಗೆ ಮಕ್ಕಳಿಲ್ಲ ನಿಮ್ಮ ಮಗನ ವಿದ್ಯಾಭ್ಯಾಸವನ್ನು ಮುಂದುವರಿಸಲು ಬೇಕಾದ ಸಹಾಯ ಮಾಡುವೆ.ಭಾರತದಲ್ಲಿಯೆ ನನ್ನ ಕಂಪನಿಯಲ್ಲಿ ನಿಮಗೊಂದು ಕೆಲಸ ಕೊಡುವೆ ಚನ್ನಾಗಿ ದುಡಿದು ನೆಮ್ಮದಿಯಿಂದ ಬದುಕು ನಡೆಸಿ ಎಂದು ಹೇಳಿದ.ಆಗ ಬಡವನಿಗೆ ತಿರುಕನ ಕನಸು ನನಸಾದಷ್ಟು ಆನಂದವಾಗಿತ್ತು.
✍️ಸತೀಶ್ ಹಿರೇಮಠ್
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ