ಬೆಂಗಳೂರು
ರಾಜ್ಯಗಳ “ನವೋದ್ಯಮ ರಾಂಕಿಂಗ್ 2019” ರಲ್ಲಿ ಕರ್ನಾಟಕದ ಎಲೆಕ್ಟ್ರಾನಿಕ್, ಐಟಿ/ ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕಾ ಹಾಗೂ ದೇಶೀಯ ವಹಿವಾಟು ಉತ್ತೇಜನಾ ಇಲಾಖೆ (DPIIT)ಯಿಂದ “ಅಗ್ರಗಣ್ಯ ಸಾಧಕ” ಗೌರವಕ್ಕೆ ಪಾತ್ರವಾಗಿದೆ. ಈ ಇಲಾಖೆಯು ಸತತ ಎರಡನೇ ಸಲ ಈ ಗೌರವಕ್ಕೆ ಪಾತ್ರವಾಗಿದೆ.
ಈ ರಾಂಕಿಂಗ್ ಅನ್ನು 7 ಮೂಲಭೂತ ಅಂಶಗಳು ಹಾಗೂ 30 ಕ್ರಿಯಾ ಅಂಶಗಳ ರೂಪುರೇಷೆ ಆಧಾರದ ಮೇಲೆ ನಿರ್ಧರಿಸಲಾಗಿದೆ.ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ನೀಡುವ ಸಾಂಸ್ಥಿಕ ಬೆಂಬಲ, ನಿಬಂಧನೆಗಳ ಸರಳೀಕರಣ, ಪ್ರೋತ್ಸಾಯಕ ಕ್ರಮಗಳು, ಪರಿಪೋಷಕ ಬೆಂಬಲ, ಬೀಜ ಧನ ನೆರವು, ಶೋಧನಾ ನಿಧಿ ನೆರವು, ಜಾಗೃತಿ ಮತ್ತು ಜನಸಂಪರ್ಕ ಕಾರ್ಯಕ್ರಮಗಳು ಮೂಲಭೂತ ಅಂಶಗಳಲ್ಲಿ ಸೇರಿವೆ.
2018ರ ಮೇ 1ರಿಂದ 2019ರ ಸೆಪ್ಟೆಂಬರ್ 30ರ ಅವಧಿಯ ನಡುವೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡ ಕ್ರಮಗಳನ್ನು ಪರಿಗಣನೆಗೆ ತೆಗೆದುಕೊಂಡು ರಾಂಕಿಂಗ್ ಪ್ರಕಟಿಸಲಾಗಿದೆ.ಇದೊಂದು ಹೆಮ್ಮೆಯ ವಿಷಯ ಎಂದು ತಿಳಿಸಿದ ಉಪ ಮುಖ್ಯಮಂತ್ರಿ ಹಾಗೂ ಐಟಿ/ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ನವೋದ್ಯಮಗಳ ಪರ್ಯಾವರಣವನ್ನು ಬಲಗೊಳಿಸುವ ದಿಸೆಯಲ್ಲಿ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರೋತ್ಸಾಹಿಸುವುದು ಈ ರಾಂಕಿಂಗ್ ನ ಉದ್ದೇಶವಾಗಿದೆ ಎಂದರು.
ಕರ್ನಾಟಕ ರಾಜ್ಯವು ಸಾಂಸ್ಥಿಕ ನಾಯಕತ್ವ, ಪ್ರೋತ್ಸಾಹಕ ಕ್ರಮಗಳು, ನಿಯಂತ್ರಕ ಕ್ರಮಗಳ ಬದಲಾವಣೆ ಹಾಗೂ ಪರಿಪೋಷಕ ವಲಯ (ಇನ್ ಕ್ಯುಬೇಷನ್ ಹಬ್) ನಿರ್ಮಾಣದಲ್ಲಿ ಮುಂಚೂಣಿಯಲ್ಲಿದೆ ಎಂಬುದನ್ನು ಸೂಚಿಸುತ್ತದೆ ಎಂದರು.ನವೋದ್ಯಮಗಳಿಗೆ ಒತ್ತಾಸೆ ನೀಡಲು ರಾಜ್ಯ ಸರ್ಕಾರವು ರಚನಾತ್ಮಕ ಕ್ರಮಗಳನ್ನು ಕೈಗೊಂಡಿದೆ. ಹೊಸ ಹಾಗೂ ಪ್ರಭಾವಿ ತಾಂತ್ರಿಕತೆಗಳಿಗೆ ನೆರವು ನೀಡಲು ಅನ್ವೇಷಣಾ ಪೂರಕ ನೀತಿಗಳನ್ನು ಜಾರಿಗೊಳಿಸಲಾಗಿದೆ. ಹೊಸ ತಲೆಮಾರಿನ ತಾಂತ್ರಿಕತೆಗಳಿಗೆ ಸಂಬಂಧಪಟ್ಟಂತೆ ನವೋದ್ಯಮಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪರಿಶೀಲಿಸಲು ನಿಯಂತ್ರಕ ಸಮಿತಿ ರಚಿಸಲಾಗಿದೆ ನವೋದ್ಯಮಗಳಿಗಾಗಿ ಸಮಗ್ರ ಉದ್ಯಮಶೀಲತಾ ವೇದಿಕೆ ಕಲ್ಪಿಸುವ ಸಲುವಾಗಿ “ಎಲಿವೇಟ್” ಎಂಬ ವಿಶಿಷ್ಟ ಪರಿಕಲ್ಪನೆಯನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದರು.
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ