ವಿಜಯನಗರ ಸಾಮ್ರಾಜ್ಯದಿಂದ ನೇರವಾಗಿ ಶ್ರೀರಂಗಪಟ್ಟಣಕ್ಕೆ ಶಿಪ್ಟ್ ಆದ ದಸರಾ ಮಹೋತ್ಸವವನ್ನು ಈ ಬಾರಿ ಶ್ರೀರಂಗಪಟ್ಟಣ ಅದ್ದೂರಿಯಾಗಿ ಆಚರಿಸದೇ ಸರಳ, ಸಂಪ್ರದಾಯಕ ರೀತಿಯಲ್ಲಿ ನಡೆಸಲು
ರಾಜ್ಯ ಸರ್ಕಾರ ನಿರ್ಧರಿಸಿದೆ.
ದುಡ್ಡು , ಕಾಸು ಖರ್ಚಿಲ್ಲದೆ ಸಂಪ್ರದಾಯಕ ದಸರಾ ಆಚರಣೆ ಮಾಡಲು ಯಾವುದೇ ಅಡೆತಡೆ ಇಲ್ಲ. ನಿರಾಂತಕವಾಗಿ ಮಾಡುವಂತೆ ಸರ್ಕಾರವೇ ಸೂಚ್ಯವಾಗಿ ಸೂಚಿಸಿದೆ ಅಂತೆ. ಈ ಸಂಬಂಧ ಜಿಲ್ಲಾ ಮಂತ್ರಿ ನಾರಾಯಣಗೌಡ ಹಾಗೂ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ಸಭೆ ಕರೆದು, ಸಂಪ್ರದಾಯಕವಾಗಿ ಯಾವ ರೀತಿ ಮಾಡಬೇಕು ಎನ್ನುವುದರ ಬಗ್ಗೆ ಸಧ್ಯದಲ್ಲೇ ನಿರ್ಧರಿಸಲಾಗುವುದು ಎಂದು ಮೂಲಗಳು ಹೇಳಿವೆ.
ಶ್ರೀರಂಗಪಟ್ಟಣ ದಸರಾ ವೇಳೆಯಲ್ಲಿ ಯಾವುದೇ ಮೆರವಣಿಗೆ ಇಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಸಂಪ್ರದಾಯ ಬಿಡದಂತೆ ದಸರಾ ಆಚರಿಸಿರಿ.
ಏಕೆಂದರೆ ಮೈಸೂರಿನ ದಸರಾ ಕೂಡ ಈ ಬಾರಿ ಹೆಚ್ಚು ಆಡಂಬರವಿಲ್ಲದೇ ಸರಳವಾಗಿ ಮಾಡಲಾಗುತ್ತಿದೆ. ಅದರಂತೆ ಶ್ರೀರಂಗಪಟ್ಟಣದಲ್ಲೂ ಕೂಡ ಸರಳವಾಗಿ ಆಚರಿಸಲು ಸೂಚಿಸಿದ್ದಾರೆಂದು ಹೇಳಲಾಗಿದೆ. ಹೀಗಾಗಿ ಸರ್ಕಾರ ಶ್ರೀರಂಗಪಟ್ಟಣ ದಸರಾಗೆ ಇದುವರೆಗೂ ನಯಾ ಪೈಸೆ ಕೊಡುವ ಮಾತಾಡಿಲ್ಲ.
ಜಿಲ್ಲಾ ಮಂತ್ರಿ ಕೂಡ ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಶಾಸಕರು ಇರುವ ಹಿನ್ನೆಲೆಯಲ್ಲಿ ಯಾವುದೇ ಅನುದಾನ ಕೊಡಿಸುವ ಮನಸ್ಸು ಮಾಡುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
ಶಾಸಕ ರವೀಂದ್ರ ಶ್ರೀಕಂಠಯ್ಯ ಅಸಮಾಧಾನ
ರಾಜ್ಯ ಬಿಜೆಪಿ ಸರ್ಕಾರ ಶ್ರೀರಂಗಪಟ್ಟಣದ ದಸರಾ ವೈಭವವನ್ನು ಮೊಟಕು ಮಾಡಿ, ಸರಳ ಆಚರಣೆಗೆ ಮುಂದಾಗಿದೆ. ಕೋವಿಡ್ ನೆಪ ಇಟ್ಟುಕೊಂಡು ಜೆಡಿಎಸ್ ಶಾಸಕರಿರುವಕ್ಷೇತ್ರದಲ್ಲಿ ದಸರಾ ಸಂಪ್ರದಾಯ ಹಾಗೂ ವೈಭವವನ್ನು ಮುರಿಯುವ ಪ್ರಯತ್ನ ನಡೆದಿದೆ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ
ಅಸಮಾಧಾನಗೊಂಡಿದ್ದಾರೆ.
ಈ ಬಾರಿ ದಸರಾ ವೈಭವವನ್ನು ಅದ್ದೂರಿಯಾಗಿ ಮಾಡುವಂತೆ ನಾವು ಕೂಡ ಒತ್ತಾಯ ಮಾಡುವುದಿಲ್ಲ. ಆದರೆ ಈ ದಸರೆಯ ಹೆಸರಿನಲ್ಲಿ ಶ್ರೀರಂಗಪಟ್ಟಣದಲ್ಲಿ ಕೆಲವು ಅಭಿವೃದ್ಧಿ ಕೆಲಸಮಾಡಲು ಅವಕಾಶ ಆಗುತ್ತಿತ್ತು. ಅದಕ್ಕೂ ಅವಕಾಶವಿಲ್ಲ.ಮೈಸೂರು ದಸರಾಗೆ ನೀಡುವ ಅನುದಾನದಲ್ಲಿ ಶೇ. 25 ರಷ್ಟು ನೀಡುವಂತೆ ನಾನು ಮೂಡಾ ಸಭೆಯಲ್ಲಿ ಒತ್ತಾಯಮಾಡಿರುವುದು ಕೇವಲ ಅರಣ್ಯರೋಧನವಾಯಿತು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀರಂಗಪಟ್ಟಣದ ದಸರಾಗೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿ ಅಭಿವೃದ್ಧಿಗೆ ಒಂದು ಅನುದಾನ ಕೊಡಿಸಬಹುದು. ಈ ಸಂಬಂಧ ಸಭೆ ಕರೆದರೆ ನನ್ನ ಅಹವಾಲನ್ನು ಮಂಡಿಸುತ್ತೇನೆ ಎಂದು ರವೀಂದ್ರ ಹೇಳಿದರು.
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ