ಶೃಂಗೇರಿ ಸಂತ ಚಂದ್ರಶೇಖರ ಭಾರತೀ ತೀರ್ಥರ ಸ್ಮರಣೆ

Team Newsnap
3 Min Read

ಇಂದು ಶೃಂಗೇರಿಯ ಸಂತ ಶ್ರೇಷ್ಠ, ಅವತಾರ ಪುರುಷ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ದೇಹ ತ್ಯಜಿಸಿ ವಿಶ್ವ ವ್ಯಾಪಿಯಾದ ದಿನ ಈ ಪ್ರಯುಕ್ತ ಅವರ ನಿರ್ವಾಣದ ಕುರಿತ ಲೇಖನ

1954 ನೇ ವರ್ಷದ ಮಹಾಲಯ ಅಮಾವಾಸ್ಯೆಯ ಹಿಂದಿನ ದಿನ ಜಗದ್ಗುರು ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಮಠದ ಗ್ರಂಥಾಲಯದ ಅಧಿಕಾರಿಯನ್ನು ಕರೆಯಿಸಿಕೊಂಡು, ತಮ್ಮ ಕೋಣೆಯಲ್ಲಿ ಓದಿಗೆಂದು ಇರಿಸಿಕೊಂಡಿದ್ದ ಗ್ರಂಥಾಲಯದ ಪುಸ್ತಕಗಳನ್ನೆಲ್ಲಾ ಸಂಭಂದಪಟ್ಟ ಜಾಗಗಳಲ್ಲಿ ಜೋಪಾನವಾಗಿಟ್ಟುಕೊಳ್ಳಿರೆಂದು ಹೇಳುತ್ತಾರೆ, ಆತ ಪುಸ್ತಕಗಳನ್ನು ತೆಗೆದುಕೊಂಡು ಹೋಗುವಾಗ, ಇಷ್ಟು ವರ್ಷಗಳು ನನಗೆ ಸಹಾಯ ಮಾಡಿದ್ದಿಯ ನಿನ್ನ ಹಾಗೂ ನಿನ್ನ ಮನೆಯೋರ ಮೇಲೆ ನನ್ನ ಆಶೀರ್ವಾದ ಸದಾ ಇರುತ್ತೆ ಎಂದು ಹೇಳುತ್ತಾರೆ.

ಆ ದಿನ ಗುರುಗಳ ಸೇವೆಗೆ ಸರತಿಯಂತೆ ಭೀಮಭಟ್ಟರೆಂಬುವವರು ಬರಬೇಕಿತ್ತು ಅನಿವಾರ್ಯದಿಂದಾಗಿ ಆ ದಿನ ಮಹಾಭಲಭಟ್ಟರು ಬರುತ್ತಾರೆ, ಗುರುಗಳು ಅವರ ಮನೆಯವರನ್ನೆಲ್ಲಾ ನೆನೆಸಿಕೊಂಡು, ಅವರೆಲ್ಲರ ಕುಶಲವನ್ನು ಕೇಳುತ್ತಾರೆ, ಅದಾದ ಮೇಲೆ ಸಂಜೆ 6.00 ರಿಂದ 8.00 ಘಂಟೆಯವರೆಗೆ ತಮ್ಮ ಗುರುಗಳಾದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಮಹಾ ಸ್ವಾಮಿಗಳ ಅಧಿಷ್ಟಾನದ ಮುಂದೆ ಮೌನವಾಗಿ ನಿಂತಿದ್ದರಂತೆ.

ಅಂದು ಇಡೀ ರಾತ್ರಿ ಸ್ವಾಮಿಗಳು ಮಲಗದೆ ತಮ್ಮ ಗುರುಗಳ ಅಧಿಷ್ಟಾನಕ್ಕೆ ಮತ್ತೆ ಮತ್ತೆ ಹೋಗಿ ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಿ ಬರುತ್ತಿದ್ದರಂತೆ ಈ ನಡುವೆ ಒಮ್ಮೆ ಶ್ರೀ ಕಾಲಭೈರವನ ಗುಡ್ಡಕ್ಕೂ ಹೋಗಿ ಬರುತ್ತಾರೆ, ತಮ್ಮ ಇಷ್ಟದ ಸದಾಶಿವ ಬ್ರಹಮೆಂದ್ರರ ” ಶ್ರೀ ಆತ್ಮ ವಿದ್ಯಾವಿಲಾಸ ” ಗ್ರಂಥದ ಶ್ಲೋಕಗಳನ್ನು ಗಟ್ಟಿಯಾಗಿಯೇ ಹೇಳಿಕೊಡುತ್ತಾ ತಿರುಗಾಡುತ್ತಿರುತ್ತಾರೆ. ಆ ರಾತ್ರಿ ಕಳೆದು ಮುಂಜಾನೆ ಬೆಳಕು ಹರಿಯುವ ಮೊದಲೇ 4.00 ಘಂಟೆಯ ಸುಮಾರಿಗೆ ಕೈ ಚಪ್ಪಾಳೆ ಸದ್ದುಮಾಡಿ ಅಲ್ಲಿಯೇ ಮಲಗಿದ್ದ ಮಹಾಬಲಭಟ್ಟರನ್ನು ಎಬ್ಬಿಸಿ ಸ್ನಾನಕ್ಕೆ ಹೋಗೋಣವೇ ಎನ್ನುತ್ತಾರೆ. ಭಟ್ಟರು ಎದ್ದು ನಿಲ್ಲುವಷ್ಟರಲ್ಲಿ ಸ್ವಾಮಿಗಳು ತುಂಗಾನದಿಯಲ್ಲಿಯೇ ಸ್ನಾನಮಾಡಲು ತಯಾರಾಗಿ ತಮ್ಮ ಕುಟೀರದ ಮೆಟ್ಟಿಲ ಬಳಿ ನಿಂತಿರುತ್ತಾರೆ, ಇದನ್ನು ಕಂಡ ಭಟ್ಟರು – ಚಳಿಗಾಲ, ಮಳೆ ಬೇರೆ ಸುರಿಯುತ್ತಿದೆ ಈಗ ನದಿಯ ಸ್ನಾನ ಬೇಡವೆಂದು, ಬೀಡಿನಲ್ಲಿಯೇ ಸ್ನಾನಕ್ಕಾಗಿ ಬಿಸಿ ನೀರನ್ನು ಸಿದ್ಧಪಡಿಸಿದ್ದೇನೆಂದು ಸ್ವಾಮಿಗಳಲ್ಲಿ ಭಿನ್ನವಿಸಿಕೊಳ್ಳುತ್ತಾರೆ, ಆದರೆ ಸ್ವಾಮಿಗಳು – ಇವತ್ತು ಪುಣ್ಯದಿನವಲ್ಲವೇ…? ಬಿಸಿ ನೀರು ಬೇಡ ಇಂದು ತುಂಗಾಸ್ನಾನವಾಗಲಿ ಬಾ ಎಂದು ಹೇಳುತ್ತ ನದಿಯ ಕಡೆಗೆ ನಡೆಯ ತೊಡಗುತ್ತಾರೆ. ಸ್ವಾಮಿಗಳು ನೀರಿನಲ್ಲಿಳಿದು ಒಂದು ಮುಳುಗು ಹಾಕಿ ಎದ್ದು ಪಕ್ಕದ ಸಂಧ್ಯಾವಂದನೆ ಮಂಟಪದ ಮೇಲೆ ಪ್ರಾಣಾಯಾಮ ಮಾಡಲು ಪದ್ಮಾಸನದಲ್ಲಿ ಕುಳಿತುಕೊಳ್ಳುತ್ತಾರೆ ಮಹಾಬಲ ಭಟ್ಟರು ಸ್ವಾಮಿಗಳ ಬಟ್ಟೆಯನ್ನು ಒಗೆಯಲೆಂದು ಸ್ವಾಮಿಗಳಿಗೆ ಬೆನ್ನು ತಿರುಗಿಸಿ ನೀರಿಗಿಳಿಯುತ್ತಾರೆ.

ಅಷ್ಟರಲ್ಲಿ ನೀರಿನಲ್ಲಿ ಏನೋ ಬಿದ್ದ ಸದ್ದಾಗಿ ಭಟ್ಟರು ಹಿಂದಿರುಗಿ ನೋಡಲು ಸ್ವಾಮಿಗಳು ಪದ್ಮಾಸನದಲ್ಲಿಯೇ ನೀರಿನಲ್ಲಿ ತೇಲಿ ಹೋಗುತ್ತಿರುತ್ತಾರೆ, ಓಡನೆಯೇ ಭಟ್ಟರು ನೀರಿಗೆ ದುಮುಕಿ ಈಜುತ್ತ ಹೋಗಿ ಆಗಲೇ ಪ್ರವಾಹದಲ್ಲಿ ದೂರ ಸಾಗಿದ್ದ ಸ್ವಾಮಿಗಳ ಶರೀರವನ್ನು ಹಿಡಿದು ಪ್ರವಾಹವನ್ನು ಎದುರಿಸಿ ತಾವು ಸ್ವಾಮಿಗಳ ದೇಹವನ್ನು ಬೆನ್ನ ಮೇಲೆ ಹೊತ್ತುಕೊಂಡು ಬರಲಾಗದೆ ಸಹಾಯಕ್ಕೆ ಯಾರಾದ್ರೂ ಬನ್ನಿರೆಂದು ಕೂಗಿದಾಗ ಅಕಸ್ಮಾತಾಗಿ ನದಿಯ ಕಡೆ ಸ್ನಾನಕ್ಕಾಗಿ ಬಂದಿದ್ದ ಕೇಶವಾಚಾರಿ ಎಂಬ ಗ್ರಹಸ್ಥರು ಭಟ್ಟರ ಕೂಗನ್ನು ಕೇಳಿ ನದಿಗೆ ಧುಮುಕಿ ಭಟ್ಟರನ್ನು ಅವರ ಬೆನ್ನ ಮೇಲಿದ್ದ ಗುರುಗಳ ದೇಹವನ್ನು ದಡದವರೆಗೂ ಎಳೆದು ತರುತ್ತಾರೆ.

, ಗುರುಗಳು ದೇಹ ನೀರಿಗೆ ಬಿದ್ದು ಸುಮಾರು ಕಾಲವಾಗಿದ್ದರು ಸಹ
ಕಟ್ಟೆಯ ಮೇಲೆ ತೊಟ್ಟಿದ್ದ ಪದ್ಮಾಸನ ಹಾಗೆಯೇ ಇರುತ್ತೆ, ಮುಖದಲ್ಲಿ ಶಾಂತಿ ಕದಡಿರುವುದಿಲ್ಲ, ಶರೀರದೊಳಗೆ ನೀರು ಒಂದು ಹನಿಯೂ ಹೋಗಿರುವುದಿಲ್ಲ, ಪ್ರಾಣವನ್ನು ಬಂಧನ ಮಾಡಿಕೊಂಡು ದೇಹ ತ್ಯಜಿಸಿರುತ್ತಾರೆ. 42 ವರ್ಷಗಳು ಜ್ಞಾನಜ್ಯೋತಿಯಂತೆ ಬೆಳಗಿದ ಗುರುವರ್ಯರು ಪರಬ್ರಹ್ಮದಲ್ಲಿ ಲೀನವಾಗಿ ಹೋದರು.

ಇಲ್ಲಿ ಗುರುವಿನ ಹಾದಿಯನ್ನು ಸ್ಮರಿಸಿ ಅದರಲ್ಲಿಯೇ ತತ್ಪರನಾಗಿ ನಡೆಯುವುದೇ ಅವರ ನಿಜವಾದ ಆರಾಧನೆ ಶಿಷ್ಯ ಹ್ಯಾಗಿರಬೇಕಪ್ಪ ಅಂದ್ರೆ ಗುರು ಹುಡುಕಿಕೊಂಡು ಬರಬೇಕು, ಆ ನಡವಳಿಕೆಯಲ್ಲೇ ಗುರುವನ್ನು ಕಾಣಬೇಕು, ಸದ್ಗುರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವವರು ಮಾತ್ರವೇ ನಿಜ ಶಿಷ್ಯರಾಗುತ್ತಾರೆ, ಅದುವೇ ನಿಜವಾದ ಆರಾಧನೆ, ಚೈತನ್ಯಾರಾಧನೆ.

ಹೀಗಾದಲ್ಲಿ ಮಾತ್ರ ಗುರುದೇವರು ಭುವಿಗೆ ಬಂದ ಉದ್ದೇಶ ಸಾರ್ಥಕವಾಗುತ್ತದೆ, ಗುರುಗಳು ಉಪದೇಶ ನೀಡಿದ್ದು ತೀರಾ ಕಡಿಮೆ ಅದರಲ್ಲಿ ಆಯ್ದ ಕೆಲವೊಂದು ಗುರುವಾಣಿಗಳನ್ನು ಈ ಸುಸಂಧರ್ಭದಲ್ಲಿ ಸ್ಮರಿಸಿ ಮುನ್ನಡೆಯೋಣ

1) ಧರ್ಮದಲ್ಲಿ ಅನುಷ್ಟಾನವೂ ಅತಿಮುಖ್ಯ, ಶಾಸ್ತ್ರಗಳಿರುವುದು ಪ್ರವಚನಕ್ಕಲ್ಲ, ಅನುಷ್ಠಾನಕ್ಕೆ.ನೂರಾರು ಗ್ರಂಥಗಳಲ್ಲಿ ಪಾಂಡಿತ್ಯವನ್ನು ಪಡೆಯುವುದಕ್ಕಿಂತ ಶ್ರದ್ಧೆಯಿಂದ ಒಂದು ತತ್ವವನ್ನು ಅನುಷ್ಟಾನ ಮಾಡುವುದು ಒಳ್ಳೆಯದು.

2) ಎಲ್ಲಿಯವರೆಗೆ ಜನರಲ್ಲಿ ಧರ್ಮದ ಮೇಲೆ ಶ್ರದ್ದೆ ಇರುವುದೋ ಅಲ್ಲಿಯವರೆಗೆ ಮಾತ್ರ ಅವರು ಸುಖವಾಗಿರುತ್ತಾರೆ.

3) ಧರ್ಮಗಳನ್ನು ಅಧ್ಯಯನ ಮಾಡುವವರಿಗೆ ಸಂಶಯಗಳು ಬಂದೊದಗುವುದು ಸಹಜ ಆದರೆ ಆ ಸಂಶಯಗಳನ್ನು ಬಗೆಹರಿಸಿಕೊಳ್ಳಲು ಸುಮ್ಮನೆ ಪಾಂಡಿತ್ಯವನ್ನು ಪಡೆದವರಲ್ಲಿ ಹೋದರೆ ಉಪಯೋಗವಿಲ್ಲ, ತಮ್ಮ ಮತಧರ್ಮವನ್ನು ತಮ್ಮ ಬಾಳಿನ ಸರ್ವಸ್ವವೆಂದು ನಂಬಿ ಅದನ್ನು ನಿತ್ಯ ಜೀವನಕ್ಕೆ ಅಳವಡಿಸಿಕೊಂಡಿರುವವರು ಮಾತ್ರ ಸಂಶಯಗಳನ್ನು ಪರಿಹರಿಸಬಹುದು.

image 5

ನಿಖಿಲ್ ✍️

Share This Article
Leave a comment