ಕನ್ನಡದಲ್ಲಿ ನವ್ಯ ಪಂಥವನ್ನು ಸೃಜಿಸಿದ ಶ್ರೀ ಗೋಪಾಲಕೃಷ್ಣ ಅಡಿಗರು ಈ ನೆಲ ಕಂಡ ಒಂದು ಅದ್ಭುತ ಪ್ರತಿಭೆ. ಕನ್ನಡ ಸಾಹಿತ್ಯದಲ್ಲಿ ಹೊಸ ಹಾದಿ ಕೊರೆದ ಶಿಲ್ಪಿ ಎಂದರೆ ಅತಿಶಯೋಕ್ತಿಯೇನಲ್ಲ. ‘ಯಾವ ಮೋಹನ ಮುರಳಿ ಕರೆಯಿತೋ’ವಿನಂತಹ ಆಧ್ಯಾತ್ಮದ ಹೊರಳಿನ ಸವಿಗೀತೆಯನ್ನು ಕೊಟ್ಟ ಕವಿಯೇ ಪ್ರಾರ್ಥನೆ ಕವಿತೆಯನ್ನೂ ಕೊಟ್ಟದ್ದು. ಇಂಥ ಅಡಿಗರ ಶ್ರೀರಾಮನವಮಿಯ ದಿವಸ ಕವಿತೆಯ ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋೂೀತ್ತಮನ ಆ ಅಂಥ ರೂಪ – ರೇಖೆ? ಎಂಬ ಎರಡು ಸಾಲುಗಳು ಅತ್ಯಂತ ಸುಪ್ರಸಿದ್ಧವಾದವು. ಶ್ರೀರಾಮನ ಹುಟ್ಟುಹಬ್ಬಕ್ಕೆಂದು ಬರೆದ ಈ ಕವನ ಅನೇಕ ಹೊಸ ರೂಪಕಗಳನ್ನು, ಹೊಸ ಆಲೋಚನೆಗಳನ್ನು, ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿವೆ. ಈ ಕವನದ ಬಗ್ಗೆ ಈಗಾಗಲೇ ಅನೇಕ ವ್ಯಾಖ್ಯಾನ ಮತ್ತು ಚರ್ಚೆಗಳಾಗಿವೆ.
ಪ್ರತಿ ಸಾಲೂ ಓದಿದಷ್ಟು ಸಾರಿಯೂ ಹೊಸಹೊಸತರತ್ತ ನಮ್ಮನ್ನು ಕೊಂಡ್ಯೊಯ್ಯುತ್ತದೆ. ‘ಶ್ರೀರಾಮನವಮಿಯ ದಿವಸ’ ಕವನ ಇದಕ್ಕೊಂದು ಉದಾಹರಣೆ:
ಶ್ರೀರಾಮನವಮಿಯ ದಿವಸ ರಾಮನಾಮಾಮೃತವೆ
ಪಾನಕ, ಪನಿವಾರ, ಕೋಸಂಬರಿ;
ಕರಬೂಜ ಸಿದ್ದೋಟುಗಳ ಹೋಳು, ಸೀಕರಣೆ;
ವ್ಯಕ್ತ ಮಧ್ಯಕ್ಕೆ ಬಂದುರಿವ ಶಬರಿ.
ಕಾದು ಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿ –
ಕುಳಿತ ಮೂಲಾಧಾರ ಜೀವಧಾತು
ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು:
ಮಣ್ಣೊಡೆದ ಹಸರು ಹೂ ಹುಲ್ಲು ಮುಳ್ಳು.
ಮಣ್ಣುಟ್ಟ ಪುಟ್ಟ ಬಿತ್ತಕ್ಕೆ ಮಳೆಹನಿಸೇಕ:
ಅಶ್ವತ್ಥದ ವಿವರ್ತ ನಿತ್ಯ ಘಟನೆ;
ಗುಮ್ಮಟಗಿರಿಯ ನೆತ್ತಿಯಲ್ಲಿ ಕಲ್ಲರಳಿದ್ದು
ಕಾರ್ಯಕಾರಣದೊಂದಪೂರ್ವ ನಟನೆ.
ನೆಲಕ್ಕಂಟಿ ಬಿದ್ದ ಆಕಾಶಯಾನದ ಕನಸು
ಜೆಟ್ ವಿಮಾನವೇರಿ ಕೊಂಚ ದೂರ
ತೇಲಿ ಮಣ್ಣಿಗೆ ಮರಳಿ, ರಾಕೆಟ್ಟು ಜಗಿದುಗುಳಿ
ತಿಂಗಳಿಗೆ ಬಡಿವಾಧುನಿಕ ವಿಕಾರ.
ವೇದೋಪನಿಷದಗಳ ಭೂತಗನ್ನಡಿಯೊಳಗೆ
ಪಡಿಮೂಡಿದಾಕೃತಿಗೆ ತಾನೆ ಮುಗ್ಧ
ಮತ್ಸ್ಯ ಕೂರ್ಮವರಾಹಮೆಟ್ಟಲುಗಳೇರುತ್ತ
ಹುತ್ತಗಟ್ಟಿದ್ದ ಕೈ ಕಡೆದ ನೋಟ:
ಕೌಸಲ್ಯೆ ದಶರಥರ ಪುತ್ರಕಾಮೇಷ್ಟಿ ಗೆರೆ
ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ,
ಆಸ್ಫೋಟಿಸಿತ್ತು ಸಿಡಿತಲೆ: ಗರಿಷ್ಠ ತೇಜದ ಮೊನೆ
ಕೆಳಪಟ್ಟು ಮಣ್ಣುಟ್ಟು ನಿಂತ ಘಟನೆ:
ಬೆಳ್ಳಂಬೆಳಕಿನಲ್ಲಿ ಬಿಳಿಹಾಯಿಗಳ ಪರದಾಟ,
ಹಾಲ್ಗಡಲ ಬಗೆದೊಲೆವ ರಾಜಹಂಸ;
ಅಂತರಂಗದ ಸುರುಳಿ ಬಿಚ್ಚಿ ಸಚ್ರ್ಲೈಟಲ್ಲಿ
ಹೆದ್ದಾರಿ ಹಾಸಿದ್ದ ರಾಮಚರಿತ.
ಸಂಕಲ್ಪಬಲದ ಜಾಗರಣೆ; ಕತ್ತಲಿನೆಡೆಗೆ
ಕಣೆ, ದಂಡಕಾರಣ್ಯಕ್ಕೆ ಹಗಲ ದೊಣ್ಣೆ;
ಮಣ್ಣಿನಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ;
ಸುಟ್ಟಲ್ಲದೇ ಮುಟ್ಟಿನಂಬುಡಾಫೆ.
ವಿಜೃಂಭಿಸಿತು ರಾಮಬಾಣ; ನಿಜ. ಕತ್ತಲಿಗೆ
ಹತ್ತೆ ತಲೆ? ನೂರಾರೆ? ಅದು ಅಸಂಖ್ಯ:
ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ
ಅನಾದಿ; ಕೋದಂಡ ದಂಡವೂ ಹೀಗೆ ದಂಡ;
ಅಥವಾ ಚಕ್ರಾರಪಂಕ್ತಿ: ಚಕಮಕಿ ಕಲ್ಲ ನುಜ್ಜುತ್ತ
ಕೂತುಕೊಂಡಿದ್ದೇನೆ ಕತ್ತಲೊಳಗೆ,
ಪನಿವಾರ ತಿಂದು ಪಾನಕ ಕುಡಿದು ನೋನುತ್ತ
ಸ್ಪೋಟಕ್ಕೆ ಕಾದು ಕಿವಿ ಕಂಪಿಸುತ್ತ.
ಷಟ್ಚಕ್ರ ರಾಕೆಟ್ಟುಗಳ ಹಂತಹಂತಕ್ಕೆ
ಅಂಚೆ ತಲುಪೀತೇ ಸಹಸ್ರಾರಕೆ?
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪ – ರೇಖೆ?
ಅಡಿಗರ ಈ ಶ್ರೀರಾಮನವಮಿಯ ದಿವಸ ಕವನದ ಮೊದಲ ಸಾಲುಗಳು ಹೀಗಿವೆ “ಶ್ರೀರಾಮನವಮಿಯ ದಿವಸ ರಾಮನಾಮಾಮೃತವೆ ಪಾನಕ, ಪನಿವಾರ, ಕೋಸಂಬರಿ; ಕರಬೂಜ ಸಿದ್ದೋಟುಗಳ ಹೋಳು, ಸೀಕರಣೆ; ವ್ಯಕ್ತ ಮಧ್ಯಕ್ಕೆ ಬಂದುರಿವ ಶಬರಿ.”
ಶ್ರೀರಾಮನನ್ನು ಮೂರು ಬಗೆಯನ್ನು ನೋಡಬಹುದು.
- ದೇವರಾಗಿ – ಪೌರಾಣಿಕ ನೆಲೆ, ಧಾರ್ಮಿಕ ನೆಲೆ
- ರಾಜಮನೆತನದವನಾಗಿ – ರಾಜಪ್ರಭುತ್ವದ ನೆಲೆ
- ಸಾಮಾನ್ಯ ಮನುಷ್ಯನಾಗಿ ಹುಟ್ಟಿ ಪುರುಷೋತ್ತಮನಾದವನಾಗಿ- ಸಮಾಜ ವಿಜ್ಞಾನ
-ದೇವರಾಗಿ ನೋಡಿದರೆ ಎತ್ತರದಲ್ಲಿಟ್ಟು ಭಕ್ತಿಯಿಂದ ದೂರನಿಂತು ಬಿಡುತ್ತೇವೆ.
-ರಾಜನಾಗಿ ನೋಡಿದರೆ ಭಯದಿಂದಲೂ ಭಕ್ತಿಯಿಂದಲೂ ಆಜ್ನೆಯನ್ನು ಮಾತ್ರ ಪಾಲಿಸುತ್ತೇವೆ
-ಆದರೆ ಸಾಮಾನ್ಯ ಮನುಷ್ಯನಾಗಿ ಹುಟ್ಟಿ ಪುರುಷೋತ್ತಮನಾದವನಾಗಿ ನೋಡಿದರೆ ನಮಗೊಂದು ಆದರ್ಶದ ರೂಪ ಕಣ್ಮುಂದೆ ಕಾಣುತ್ತದೆ. ನಾವೂ ಅವನಂತಾಗಬಹುದೆಂಬ ಆಶಾಭಾವನೆಯುಕ್ಕುತ್ತದೆ. ಹಾಗೆ ಉತ್ತಮರಾಗಲು ಒಂದು ರೋಲ್ ಮಾಡೆಲ್ ರೀತಿ ರಾಮ ಬೃಹತ್ ಕಟೌಟ್ ಆಗಿಬಿಡುತ್ತಾನೆ. ಅನೇಕರ ಬದುಕಿನ ಮಾರ್ಗದರ್ಶಿಯೂ ಆಗಿಬಿಡುತ್ತಾನೆ. ಹಾಗೆ ಒಬ್ಬರು ರೋಲ್ ಮಾಡೆಲ್ ಆಗಿ ಮನಃ ಪರಿವರ್ತನೆ ಮಾಡುವುದು ಒಬ್ಬ ಚಿಕಿತ್ಸಕನ ಕೆಲಸವೂ.
ದೇವರಾಗಿ ರಾಮನನ್ನು ನೋಡುವಾಗ ಶ್ರೀರಾಮಚಂದ್ರಪ್ರಭು ಹುಟ್ಟಿದ ಶ್ರೀರಾಮನವಮಿಯ ದಿನ ಪಾನಕ, ಕೋಸಂಬರಿ, ಸೀಕರಣೆ ಹಣ್ಣುಗಳೇ ಪ್ರಧಾನ ಆಹಾರವಾಗಿ ದೇವರ ನೈವೇದ್ಯ. ಆದರೆ ಆರೋಗ್ಯದ ದೃಷ್ಟಿಯಿಂದ ಆಹಾರ ಪದ್ಧತಿಯಿದೆ. ಹಾಗೆ ನೋಡುವುದಾದರೆ ಬೇಸಿಗೆಯಲ್ಲಿನ ಉಷ್ಣ ಹವಾಮಾನದ ಸಂದರ್ಭದಲ್ಲಿ ತಂಪೆರೆವ ಆಹಾರಗಳು ಉತ್ತಮವೆಂದೂ ತೋರುತ್ತದೆ. ಜೊತೆಗೆ ತಾಪಗೊಂಡ ಮನಕ್ಕೆ ರಾಮನಾಮಾಮೃತವೇ ತಂಪೆರೆಯುವ ಪಾನಕವೂ ಕೋಸಂಬರಿಯೂ ಎಂದಾಗುತ್ತದೆ.
ಕೊನೆಯಲ್ಲಿ ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ ಎನ್ನುವುದು ಓದುಗರಿಗೆ ಸುಲಭವಾಗಿ ದಕ್ಕುವುದಿಲ್ಲ. ಅಡಿಗರ ಕಾವ್ಯ ಮಲ್ಲಿಗೆ, ಜಾಜಿ, ಪಾರಿಜಾತಗಳಂತೆ ತನ್ನನ್ನು ಸುಲಭಕ್ಕೆ ತೆರೆದು ಪರಿಮಳ ಹಂಚುವುದಿಲ್ಲ. ಅದು ತಾಳೆಹೂವಿನಂತೆ. ಒಂದೊಂದೇ ಪಕಳೆಯನ್ನು ತೆರೆಯುತ್ತಾ ಒಳಹೊಕ್ಕಬೇಕು. ವ್ಯಕ್ತಮಧ್ಯ ಎನ್ನುವುದು ಭಗವದ್ಗೀತೆಯಲ್ಲಿ ಕೃಷ್ಣ ಒಂದೆಡೆ ಹೇಳುವ ಮಾತು. ಅದರರ್ಥ ಇಷ್ಟೇ – ಹುಟ್ಟು ಸಾವುಗಳ ಮಧ್ಯೆ ಅಂತ. ಈ ಹುಟ್ಟು ಸಾವುಗಳು ನಮ್ಮ ಕೈಯ್ಯಲ್ಲಿಲ್ಲ. ಆದರೆ ಮಧ್ಯದ ಬಾಳನ್ನು ಸಾರ್ಥಕ ಮಾಡಿಕೊಳ್ಳುವುದು ನಮ್ಮ ಕೈಯ್ಯಲ್ಲೇ ಇದೆ. ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ ಎಂಬುದು ಕಾಡುತ್ತದೆ. ಶಬರಿ ಕಾಯುವಿಕೆಯ ಸಂಕೇತ. ಹುಟ್ಟು ಸಾವಿನ ಮಧ್ಯೆ ಒಂದು ಕಾಯುವಿಕೆ ಇದೆಯಲ್ಲಾ ಅದು ಇಲ್ಲಿ ಬಹು ಮುಖ್ಯವಾಗುತ್ತದೆ. ಅದು ಒಳಿತಿನ ಕಾಯುವಿಕೆ, ಸಾಧನೆಯ ಕಾಯುವಿಕೆ, ಯಶಸ್ಸಿನ ಕಾಯುವಿಕೆಯೂ. ಕೊನೆಗೆ ಸಾವಿನ ಅಥವಾ ಮುಕ್ತಿಯ ಕಾಯುವಿಕೆಯೂ ಆದೀತು. ಪರಿಪಕ್ವ ಕಾಲಕೆ ಕಾಯದೆ ಯಾವುದೂ ಫಲಿತವಲ್ಲ. ಏಕೆಂದರೆ ಕಾಯುವಿಕೆಯೊಂದು ತಪನೆ. ತಪನೆಯಿಲ್ಲದೆ ಕಾವ್ಯವೂ, ಕಲೆಯೂ, ಬದುಕೂ ಸುಸಂಪನ್ನವಲ್ಲ. ಮೆಡಿಟೇಷನ್ ನಮ್ಮ ನೆಲದ ಸೊಗಡೂ, ವಿಜ್ಞಾನವೂ ಹೌದು.
ಅದಕ್ಕೇ ಅಡಿಗರು “ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ – ರೇಖೆ?”
ರೇಖೆ ಎಂದು ಓದಿದ ತಕ್ಷಣ ಒಂದು ಔಟ್ ಲೈನ್, ಸ್ಕೆಚ್ ಎಂಬ ಎರಡು ಪದಗಳು ಕಣ್ಮುಂದೆ ಬಂದೀತು. ಬಾಲ್ಯದಿ ಕಲಿತ ರೇಖಾಗಣಿತವೂ ನೆನಪಿಗೆ ಬಂದೀತು. ರೇಖಾ ಗಣಿತ ಮನವನಿಗೆ ಗೊತ್ತಿರುವ ಅತ್ಯಂತ ಹಳೆಯ ಶಾಸ್ತ್ರಗಳಲ್ಲಿ ಒಂದು. ಇದು ವಸ್ತುಗಳ ಆಕಾರ ಮತ್ತು ಅಳತೆಗೆ ಸಂಬಂಧಪಟ್ಟ ಶಾಸ್ತ್ರ. ಶ್ರೀರಾಮಚಂದ್ರನಂತಹ ಶ್ರೀರಾಮನ ಆಕೃತಿಯನ್ನು ಮನದೊಳಗೆ ರೂಪಿಸಿಕೊಳ್ಳಲು ವಾಲ್ಮೀಕಿಗಳಿಗೆ ರೇಖಾಶಾಸ್ತ್ರವೂ ಗೊತ್ತಿರಬೇಕಿತ್ತು, ಅಂಥ ಆಕೃತಿಯನ್ನು ಕೆತ್ತಿಕೊಳ್ಳಲು ಶಿಲ್ಪಕಲೆಯೂ ತಿಳಿದಿರಬೇಕಿತ್ತು, ಚಂದಗಾಣಿಸಲು ಬಣ್ಣತುಂಬುವ ಕುಂಚಕಲೆಯ ಅರಿವೂ ಇರಬೇಕಿತ್ತು; ಅಂಥ ಮೂರ್ತಿಗೆ ಜೀವತುಂಬಲು ತಪಸ್ಸೂ ಬೇಕಿತ್ತು. ವಾಲ್ಮೀಕಿ ಋಷಿಗಳ ಮೂಲ ಹೆಸರು ರತ್ನಾಕರ. ಭಗವಂತನನ್ನು ಕುರಿತು ತಪಸ್ಸು ಮಾಡುವಾಗ ಅವರ ಸುತ್ತ ಹುತ್ತ ಬೆಳೆಯಿತು, ಹುತ್ತ ಎಂಬುದಕ್ಕೆ ಸಂಸ್ಕೃತದಲ್ಲಿ ವಲ್ಮೀಕ ಎಂದು. ಅದರಿಂದ ಹೊರಬಂದದ್ದರಿಂದ ವಾಲ್ಮೀಕಿ ಎಂದಾಯಿತೆನ್ನುವುದು ಪ್ರತೀತಿ. ಹಾಗೆ ಧ್ಯಾನಾಸಕ್ತರಾಗಿದ್ದುದರಿಂದಲೇ ಕ್ರೌಂಚ ಪಕ್ಷಿಗಳ ಸಾವನ್ನು ನೋಡಿ ಅವರ ಬಾಯಲ್ಲಿ
‘ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ |
ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||
ಎನ್ನುವ ಶ್ಲೋಕ ಹುಟ್ಟಿದ್ದು. ತಪಸ್ಸಿಲ್ಲದೆ ಉತ್ತಮ ಕವಿಯಾಗಲಾರ ಎಂಬುದಕ್ಕೆ ವಾಲ್ಮೀಕಿಗಳು ಉದಾಹರಣೆಯಾಗಿಬಿಟ್ಟಿದ್ದಾರೆ. ವಾಲ್ಮೀಕಿಗಳನ್ನು ಸುತ್ತುವರೆದದ್ದು ಹೊರಗಿನ ಹುತ್ತ. ಆದರೆ ಚಿತ್ತ ಹುತ್ತಗಟ್ಟದೆ ಗಟ್ಟಿ ಕಾವ್ಯ ಬರಲು ಸಾಧ್ಯವೇ? ಎಂಬುದನ್ನು ಅಡಿಗರು ಪ್ರಶ್ನಿಸುತ್ತಾರೆ. ಇಲ್ಲಿ ಶ್ರೀರಾಮಚಂದ್ರ ಕಾವ್ಯದ ಮೂಲ ಆಕರ. ಶ್ರೀರಾಮಾಯಣ ಕಾವ್ಯ ಈ ಭಾರತದಂತಹ ಸುಸಂಸ್ಕೃತಿಯ ತಾಯ್ನೆಲದಲ್ಲಿ ಬೇರೂರಬೇಕಾದರೆ ಕಾವ್ಯದ ಉದ್ದೇಶ, ಹರಹು ಮಹತ್ವವಾದುದನ್ನೇ ಹೇಳಬೇಕಿತ್ತು. ವಿಕಾಸವಾದ ಎಂದು ವಿಜ್ಞಾನ ಹೇಳುವ ಮೊದಲೇ ನಮ್ಮಲ್ಲಿ ದಶಾವತಾರದ ಪರಿಕಲ್ಪನೆಯಿತ್ತು. ನೀರಿನಲ್ಲಿ ಮಾತ್ರ ವಾಸಿಸುವ ಮತ್ಸ್ಯಾವತಾರ, ಉಭಯವಾಸಿ ಕೂರ್ಮಾವತಾರ. ಭುವಿಯ ಮೇಲಿರುವ ವರಹಾವತಾರ, ಅರೆಪ್ರಾಣಿ ಅರೆಮಾನವನಾದ ನರಸಿಂಹಾವತಾರ, ಮಾನವನಾಗಿಯೂ ಅಭಿವೃದ್ಧಿಯಾಗದ ವಾಮನಾವತಾರ, ದೈಹಿಕವಾಗಿ ಪೂರ್ಣವಾಗಿ ಬೆಳೆದರೂ ಮಾನಸಿಕ ಸಮತೋಲನ ಸಾಧಿಸರ ಪರಶುರಾಮಾವತಾರವಾಗಲೇ ಆಗಿತ್ತು. ಪರಿಪೂರ್ಣ ಮಾನವನಾದ ಶ್ರೀರಾಮನನ್ನು ಚಿತ್ರಿಸುವುದು ವಾಲ್ಮೀಕಿಗಳಿಗೆ ಸುಲಭವೇನಾಗಿರಲಿಲ್ಲ.
ಈಗ ಅಂಥ ಒಬ್ಬ ಪುರುಷೋತ್ತಮನನ್ನು ಲೋಕಕ್ಕೆ ಪರಿಚಯಿಸಬೇಕಿತ್ತು. ಅದಕ್ಕೇ ‘ಆ ಅಂಥ’ ಎನ್ನುವ ವಿಶೇಷಾರ್ಥಕವಾದ ಪದಪುಂಜವನ್ನು ಬರೆದು ಆ ಅಂಥ ಪುರುಷೋತ್ತಮನ ರೂಪು ರೇಖೆಯನ್ನು ಚಿತ್ರಿಸಲು ಕವಿ ಹುತ್ತದಿಂದೆದ್ದು ಬಂದ ತಾಪಸಿಯೂ ಆಗಬೇಕಿತ್ತು ಮತ್ತು ಉತ್ತಮೋತ್ತಮ ಆದರ್ಶ ಪುರುಷನನ್ನು ಕೆತ್ತಲು ಅವರ ಚಿತ್ತವೂ ಕಾವ್ಯತಪನೆಯಲ್ಲಿ ಹುತ್ತಗಟ್ಟಬೇಕಿತ್ತು. ಅಡಿಗರ ಈ ಎರಡು ಸಾಲುಗಳು ಕಟ್ಟಿಕೊಡುವ ಚಿತ್ರ ಬಹು ದೊಡ್ಡ ಕ್ಯಾನ್ವಾಸಿನದ್ದು.
ನಾವು ಕಣ್ತೆರೆಯೆ ವಿಶ್ವದರ್ಶನ; ಕಲ್ಪನೆ ಕಣ್ತೆರೆಯೆ ವಿರಾಟ್ ದರ್ಶನ; ಆದರೆ ಕಲ್ಪನೆ ಗರಿಗೆದರೆ ಅಣುವಣುವಿನ ದರ್ಶನ. ಹಾಗೆ ಕಲ್ಪನೆ ಕಣ್ತೆರೆದು ಗರಿಗೆದರಲಾಗಿಯೇ ವಾಲ್ಮೀಕಿಗಳ ಶ್ರೀರಾಮ ಪುರುಷೋತ್ತಮನಾದದ್ದು. ಹುತ್ತಗಟ್ಟದೆ ಚಿತ್ತ ಆದರ್ಶ ರಾಮನ ಪರಿಕಲ್ಪನೆ ಸಾಧ್ಯವಾಗುತ್ತೇ?
ಅಡಿಗರ ಈ ಕವನದ ಮುಂದಿನ ಸಾಲುಗಳನ್ನು ನೋಡೋಣ: “ಕಾದು ಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿ –
ಕುಳಿತ ಮೂಲಾಧಾರ ಜೀವಧಾತು ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು”
ನಮ್ಮ ದೇಹದಲ್ಲಿ ಏಳು ಚಕ್ರಗಳಿವೆ. ಸಹಸ್ರಾರ ಚಕ್ರ, ಆಜ್ನಾ ಚಕ್ರ, ವಿಶುದ್ಧ ಚಕ್ರ, ಅನಾಹತ ಚಕ್ರ, ಮಣಿಪೂರ ಚಕ್ರ, ಸ್ವಾಧಿಷ್ಟಾನ ಚಕ್ರ ಮತ್ತು ಮೂಲಾಧಾರ ಚಕ್ರ.
ಮೂಲಾಧಾರ ಚಕ್ರವನ್ನು ಮೂಲ ಚಕ್ರ ಎನ್ನುತ್ತಾರೆ. ಅದು ಬೆನ್ನುಹುರಿಯ ಬುಡದಲ್ಲಿರುತ್ತದೆ. ಕಾದು ಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿ – ಕುಳಿತ ಮೂಲಾಧಾರ ಜೀವಧಾತು……. ಇಲ್ಲಿ ಜೀವಧಾತು ಬದುಕಿನ ಮೂಲ ಮತ್ತು ಮೂಲ ಆಧಾರ. ನೇರವಾಗಿ ನೋಡಿದರೆ ಮಣ್ಣೊಳಗೆ ಅವಿತ ಬೀಜ ಮೋಡಕ್ಕೆ ಕಾಯುತ್ತದೆ ಎಂದಷ್ಟೇ. ಅದು ಸಹಜ ಪ್ರಕೃತಿ- ಸಸ್ಯ ವಿಜ್ನಾನ. ಆದರೆ ಶ್ರೀರಾಮನವಮಿಯ ದಿವಸ ಎನ್ನುವ ಶೀರ್ಷಿಕೆಯೊಡನೆ ನೋಡಿದರೆ ಶಿಷ್ಟ ರಕ್ಷಣೆ ದುಷ್ಟ ಶಿಕ್ಷೆಗಾಗಿ ಒಂದು ಹಪಹಪಿಕೆಯ ಬೀಜ ರಾಮನಿಗಾಗಿ ಕಾದಿತ್ತೆಂದು ಸೂಚಿತವಾಗುತ್ತದೆ. ಸಹಸ್ರಾರ ತಲೆಯ ಮೇಲಿನ ಚಕ್ರ. ಮೋಡವೆಂದಿಗೂ ಮೇಲೆಯೇ. ಪುರಾಣದ ಪರಿಕಲ್ಪನೆಯಲ್ಲಿ ಸ್ವರ್ಗವಿರುವುದು, ದೇವತೆಗಳಿರುವುದು ಮೇಲಿನ ಸ್ವರ್ಗದಲ್ಲಿಯೇ. ಶಿಷ್ಟ ರಕ್ಷಣೆಗೆ ಮೇಲಿನ ಸಹಕಾರವೂ ಬೇಕೆನುವ ಧ್ವನಿಯೂ ಇದೆ, ಜೊತೆಗೆ ನೆಲವನ್ನು ಸೀಳಿ ಮೇಲೆ ಬಾಂದು ಬಾನಿನ ಸೂರ್ಯನ ಬೆಳಕನ್ನು ಕುಡಿದು ಮೇಲೆ ಗಿಡ ಮರವಾಗಿ ಬೆಳೆಯುವ ಬೀಜದ ಊರ್ಧ್ವಮುಖೀ ಅಭಿವೃದ್ಧಿಯತ್ತಲೂ ಈ ಸಾಲುಗಳು ಬೆಳಕನ್ನು ಚೆಲ್ಲುತ್ತವೆ. ಕೇವಲ ದುಷ್ಟ ಶಿಕ್ಷೆಗಾಗಿ ಒಂದು ಅವತಾರಕ್ಕಾಗಿ ಕಾದ ಋಷಿಗಳು ಮಾತ್ರವಲ್ಲದೇ ಕಲ್ಲಾಗಿ ಕುಳಿತ ಅಹಲ್ಯೆಯಂತಹ ಮುಗ್ಧರ ಉದ್ಧಾರಕ್ಕೂ ಅಂಥ ಮನಸ್ಸುಗಳು ಶ್ರೀರಾಮನಂಥ ಪುರುಷೋತ್ತಮನಿಗಾಗಿ ಕಾಯುತ್ತಿದ್ದವು ಎಂದು ಧ್ವನಿಸುತ್ತದೆ.
ಮುಂದಿನ ಸಾಲುಗಳು “ಗುಮ್ಮಟಗಿರಿಯ ನೆತ್ತಿಯಲ್ಲಿ ಕಲ್ಲರಳಿದ್ದು ಕಾರ್ಯಕಾರಣದೊಂದಪೂರ್ವ ನಟನೆ ” ಯಾವುದೇ ಶಿಲೆ ಒಂದು ಶಿಲ್ಪವಾಗಲು ಸಹಸ್ರಾರು ಉಳಿಪೆಟ್ಟು ಬೇಕು. ದೊಡ್ಡ ಉಳಿಪೆಟ್ಟಷ್ಟೇ ಅಲ್ಲದೆ ಪುಟ್ಟ ಉಳಿಯ ಸೂಕ್ಷ್ಮವಾದ ಪೆಟ್ಟುಗಳೂ ಬೇಕು. ಇದು ಬದುಕಿನ ಶಿಲ್ಪಕ್ಕೂ ಅಗತ್ಯವಾಗಿ ಬೇಕಾದದ್ದು. ಗುಮ್ಮಟಗಿರಿಯ ನೆತ್ತಿಯಲ್ಲಿ ಕಲ್ಲು ಅರಳಿ ನಗೆಮೊಗದ ಸರ್ವಸಂಗ ಪರಿತ್ಯಾಗಿಯಾಗಿ ಮಾರ್ಪಾಟಾಗಿದ್ದು ಕಾರ್ಯ ಕಾರಣವೆಂದು ಒಂದು ಅಪೂರ್ವ ನಟನೆ ಎನ್ನುತ್ತಾರೆ ಅಡಿಗರು. ಎಲ್ಲ ಕಲ್ಲುಗಳಿಗೂ ಇಂಥ ಯೋಗ ಬರುವುದಿಲ್ಲ. ಒಂದೇ ಬೆಟ್ಟದ ಒಂದು ಕಲ್ಲುಭಾಗ ದೇವರ ಮೂರ್ತಿಯಾದರೆ ಪಕ್ಕದ್ದೇ ಕಲ್ಲು ಆ ದೇಗುಲದ ಕಲ್ಲುಹಾಸು ಆಗಬಹುದು. ಅದು ಯೋಗ. ಅದು ಘಟನೆಯಲ್ಲ ವಿಧಿಯ ನಟನೆ. ಕಾರ್ಯಕಾರಣ ಸಂಬಂಧವನ್ನು ಕೆದಕಿದರೆ ಚಿನ್ನದ ಜಿಂಕೆಯೇ ಕಾರಣವಾಗಿ ಸೀತಾಪಹರಣವಾಗಿ ರಾಮನು ರಾವಣನನ್ನು ವಧಿಸಿದ್ದು. ಇವೆಲ್ಲ ಒಂದಕ್ಕೊಂದು ಥಳುಕು.
ಸರಿ ಗುಮ್ಮಟಗಿರಿಯಲ್ಲಿ ಅರಳಿದ ಗೊಮ್ಮಟನಿಗೂ ಚೈತ್ರಶುದ್ಧ ನವಮಿಯ ದಿನ ಹುಟ್ಟಿದ ಶ್ರೀರಾಮನಿಗೂ ಅಡಿಗರು ಏನು ಸಂಬಂಧ ಕಲ್ಪಿಸಹೊರಟಿದ್ದಾರೆ ಎಂಬುದು ಮೊದಲು ಓದಿದಾಗ ಚೋದ್ಯವೆನಿಸುತ್ತದೆ. ಆದರೆ ಮತ್ತೆ ಮತ್ತೆ ಓದಿದಾಗ ಶ್ರೀವಿಷ್ಣುವಿನ ಏಳನೆಯ ಅವತಾರ ಶ್ರೀರಾಮ. ಶ್ರೀರಾಮ ಪರಿಪೂರ್ಣ ಮಾನವ. ಹಾಗಾಗಲು ಅವರು ಹಿಂದೆ ಎತ್ತಿದ್ದ ಆರು ಅವತಾರದ ಉಳಿಪೆಟ್ಟು ತಿಂದಿರಬೇಕೆನ್ನುವುದೂ ಅಡಿಗರ ಮನದಾಳದ ಭಾವವಿರಬಹುದು. ಆಗಲೇ ಹೇಳಿದಂತೆ ಒಂದಕ್ಕಿಂತ ಮತ್ತೊಂದು ಅವತಾರ ಉನ್ನತವಾಗುತ್ತಾ ಹೋಗಿದೆ – ವಿಕಾಸವಾಗುತ್ತಾ. ಹಾಗೆ ವಿಕಾಸವಾಗಲು ಅನೇಕ ಉಳಿಪೆಟ್ಟು ತಿನ್ನಲೇಬೇಕು. ಜೊತೆಗೆ ಶ್ರೀರಾಮಾಯಣದ ಕಾವ್ಯ ರಚನಾ ಕೌಶಲ್ಯವೂ ಉಳಿಪೆಟ್ಟುತಿಂದ ಶಿಲ್ಪವೇ.
ಮುಂದಿನ ಸಾಲುಗಳು: “ವಿಜೃಂಭಿಸಿತು ರಾಮಬಾಣ; ನಿಜ. ಕತ್ತಲಿಗೆ ಹತ್ತೆ ತಲೆ? ನೂರಾರೆ? ಅದು ಅಸಂಖ್ಯ: ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ ಅನಾದಿ; ಕೋದಂಡ ದಂಡವೂ ಹೀಗೆ ದಂಡ; ಅಥವಾ ಚಕ್ರಾರಪಂಕ್ತಿ: ಚಕಮಕಿ ಕಲ್ಲ ನುಜ್ಜುತ್ತ ಕೂತುಕೊಂಡಿದ್ದೇನೆ ಕತ್ತಲೊಳಗೆ, ಪನಿವಾರ ತಿಂದು ಪಾನಕ ಕುಡಿದು ನೋನುತ್ತ ಸ್ಪೋಟಕ್ಕೆ ಕಾದು ಕಿವಿ ಕಂಪಿಸುತ್ತ.”
ರಾಮಬಾಣ ಎಂದರೆ ಸೋಲಿಲ್ಲ ಎಂದು. ರಾಮಾಯಣದ ರಾಮಬಾಣಕ್ಕೆ ಸೋಲಿರಲಿಲ್ಲ. ರಾವಣ ಸತ್ತ ಸರಿ. ಆದರೆ ಈಗಿರುವ ಕತ್ತಲು ಎಂಬ ರಾವಣನಿಗೆ ಹತ್ತು ತಲೆಯಲ್ಲ ಅಸಂಖ್ಯ ತಲೆ. ಕತ್ತರಿಸಿದರೆ ಮತ್ತೆ ಬೆಳೆವ ರಕ್ತಬೀಜಾಸುರನ ಸಂತತಿಯ ಈ ಅನಾಚಾರ ಅವ್ಯವಹಾರ, ಅಕ್ರಮಗಳೆಂಬ ಕತ್ತಲಿಗೆ ಕೋದಂಡವೂ ಏನೂ ಮಾಡಲಾಗದೆ ದಂಡವಾಗಿದೆ ಎಂಬ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ. ಕೊನೆಯಲ್ಲಿ ಸ್ಪೋಟಕ್ಕೆ ಕಾದು ಕಿವಿ ಕಂಪಿಸುತ್ತ ಎನ್ನುವುದು ಇನ್ನು ಮುಂದೆ ಇನ್ನೂ ದೊಡ್ಡ ಕಷ್ಟಗಳು ಕಾದಿವೆ ಎಂಬುದರ ಮುನ್ಸೂಚನೆಯನ್ನೂ ರವಾನಿಸುತ್ತಾರೆ. ಆಗಲೇ ಹೇಳಿದ “ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುμÉೂೀತ್ತಮನ ಆ ಅಂಥ ರೂಪ – ರೇಖೆ?” ಈ ಕವನದ ಕಟ್ಟ ಕಡೆಯ ಸಾಲುಗಳು. ನಮ್ಮ ಚಿತ್ತ ಹುತ್ತಗಟ್ಟಿ ಅಂಥ ಪುರುಷೋತ್ತಮ ನಮ್ಮ ಹೃದಯದಲ್ಲಿ ಜನಿಸದಿದ್ದರೆ ಕತ್ತಲೆಯನ್ನೂ ಯಾವ ಸಾಧನವೂ ಅಳಿಸಲಾರದು.
-ದೇವರಾಗಿ ದೂರನಿಂತು ನೋಡಬೇಕಾದಂಥ, -ರಾಜನಾಗಿ ಭಯದಿಂದಲೂ ಭಕ್ತಿಯಿಂದಲೂ ಆಜ್ಞೆಯನ್ನು ಮಾತ್ರ ಪಾಲಿಸಬೇಕಾದ ರಾಮ ನಮ್ಮೊಳಗೆ ಹುಟ್ಟಬೇಕಿಲ್ಲ. ಸಾಮಾನ್ಯನಾಗಿ ಹುಟ್ಟಿ ಅಸಾಮಾನ್ಯನಾಗಿ ಆಗಾಧವಾಗಿ ಬೆಳೆದ ಆದರ್ಶದ ಮೂರ್ತಿಯಾಗಿ ರಾಮ ಹುಟ್ಟಿ ಒಳಕತ್ತಲನ್ನು ಅಳಿಸಲಿ ಎಂಬ ಮಹದಾಸೆಯನ್ನು ಹೊತ್ತ ಕವನವಿದು.
ಅಡಿಗರ ಕವನಗಳ ಶ್ರೇಷ್ಠತೆಯಿರುವುದೇ ಇಂಥ ಹೊಸ ಆಲೋಚನೆಗಳನ್ನು ಬಿತ್ತುವಲ್ಲಿ.
ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಟಾಪನೆಯ ಶುಭಸಂದರ್ಭದಲ್ಲಿ ಶ್ರೀರಾಮನ ಸವಿನೆನಹುಗಳು ಸಮಾಜದ ಎಲ್ಲರಿಗೂ ನೆಮ್ಮದಿಯಿತ್ತು ಸಾಮರಸ್ಯವನ್ನು ಹೆಚ್ಚಿಸಲಿ ಎಂಬ ಸದಾಶಯ.
-ಡಾ.ಶುಭಶ್ರೀಪ್ರಸಾದ್, ಲೇಖಕರು ಮಂಡ್ಯ
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
- ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – ಯುವತಿ ಸಜೀವ ದಹನ
- 100 ಕೋಟಿ ವಂಚನೆ ಪ್ರಕರಣ: ದೆಹಲಿಯಲ್ಲಿ ಚೀನಾ ಪ್ರಜೆ ಬಂಧನ
- ರೈತರ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ : ಸಚಿವ ಜಾರ್ಜ್ ಪ್ರಕಟ
More Stories
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ