- ಇಂದು ಶ್ರೀರಾಮಕೃಷ್ಣ ಪರಮಹಂಸರ ಪುಣ್ಯತಿಥಿ.
ನಾನು ದೇವರನ್ನು ಕಂಡಿದ್ದೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದ ಅಪೂರ್ವವ್ಯಕ್ತಿಯಾದ ಪರಮಹಂಸರನ್ನು, ನಾಸ್ತಿಕ – ಆಸ್ತಿಕರೆಂಬ ಭೇದವಿಲ್ಲದೆ ಪ್ರಾಜ್ಞರೆಲ್ಲರೂ ಮನುಕುಲದ ಶ್ರೇಷ್ಠರೆಂದು ಭಾವಿಸಿದ್ದಾರೆ. ಕಾರಣ ಅವರು ತಮ್ಮ ಜೀವನವನ್ನು ವ್ಯರ್ಥ ಭೋಧನೆಗಳಲ್ಲಿ ಕಳೆದವರಲ್ಲ. ತಮ್ಮ ಅಂತರಾಳದಲ್ಲಿನ ಶ್ರೇಷ್ಠತೆಯನ್ನು ಮೊದಲು ಕಂಡು ಅದನ್ನು ಯಾವುದೇ ಬಣ್ಣ ಬಣ್ಣಗಳಿಲ್ಲದೆ ಸ್ಪಷ್ಟವಾಗಿ ತಮ್ಮ ಬಳಿ ಬಂದವರಿಗೆ ಮಗುವಿನ ಪ್ರೀತಿಯಿಂದ ಉಣಬಡಿಸಿದವರು.
ಶ್ರೀ ರಾಮಕೃಷ್ಣ ಪರಮಹಂಸರು 1836ರ ಫೆಬ್ರವರಿ 18ರಂದು ಜನಿಸಿದರು.
“ಶ್ರೀ ರಾಮಕೃಷ್ಣ ಪರಮಹಂಸರ ಕಥೆಯೆಂದರೆ – ಜೀವಂತ ಧರ್ಮವೇನೆಂಬುದರ ಕಥೆಯಾಗಿದೆ. ಅವರ ಜೀವನ ಚರಿತ್ರೆ- ದೇವರನ್ನು ಬದುಕಿನಲ್ಲಿ ಮುಖಾಮುಖಿ ನೋಡಲು ಸಹಾಯಮಾಡುತ್ತದೆ. ಅವರ ಚರಿತ್ರೆಯನ್ನೋದಿದವರಲ್ಲಿ – ದೇವನೊಬ್ಬನೇ ಸತ್ಯ, ಉಳಿದುದೆಲ್ಲವೂ ಮಾಯೆ ಎಂಬ ಅಭಿಪ್ರಾಯ ಖಂಡಿತಕ್ಕೂ ಮೂಡದಿರದು. ಅವರ ಮಾತುಗಳು ವಿದ್ವಾಂಸರ ಉಪನ್ಯಾಸಗಳಿಂತಿರದೆ ಜೀವನದ ಹಾಳೆಗಳೇ ಆಗಿವೆ. ಆದುದರಿಂದ ಅವುಗಳ ಪರಿಣಾಮ ಅಚ್ಚೊತ್ತಿದಂತೆ. ಇಂದಿನ ಸಂಶಯಗ್ರಸ್ತ ಆವರಣದಲ್ಲಿ, ಅನೇಕರು ಯಾವ ಧಾರ್ಮಿಕ ಆದರ್ಶವೂ ಇಲ್ಲದೆ ಅಲೆಯುತ್ತಿರುವ ಪರಿಸ್ಥಿತಿಯನ್ನು ತಪ್ಪಿಸಿ, ಅವರ ಬದುಕಿಗೆ ಬೆಳಕನ್ನು ತೋರಿ, ಶಾಂತಿ ಭರವಸೆಗಳನ್ನು ನೀಡಿದವರು ಅವರು. ಅವರ ಜೀವನವು ಅಹಿಂಸೆಯ ಪಾಠವೂ ಆಗಿದೆ. ಅವರ ಪ್ರೇಮವೂ – ಯಾವುದರಿಂದಲೂ ಸೀಮಿತವಾಗದ ಅನಂತ ಪ್ರವಾಹವಾಗಿತ್ತು” ಇದು ರಾಮಕೃಷ್ಣ ಪರಮಹಂಸರ ಬಗ್ಗೆ ಮಹಾತ್ಮಾ ಗಾಂಧೀಜಿಯವರ ಮಾತು.
ರಾಮಕೃಷ್ಣರ ಬಳಿ ಒಮ್ಮೆ ಒಬ್ಬ ತನ್ನ ಮಗನನ್ನು ಕರೆದುಕೊಂಡು ಬಂದು, ಪೂಜ್ಯರೇ ನನ್ನ ಮಗನಿಗೆ ಬೆಲ್ಲ ತಿನ್ನುವ ಅಭ್ಯಾಸವಿದೆ. ತಾವು ದಯವಿಟ್ಟು ನನ್ನ ಮಗನಿಗೆ ಒಂದಿಷ್ಟು ಬುದ್ಧಿ ಹೇಳಬೇಕೆಂದು ಪ್ರಾರ್ಥಿಸಿದರಂತೆ. ತಂದೆ ಮಗ ಇಬ್ಬರನ್ನೂ ಅತ್ಯಂತ ಪ್ರೀತಿಯಿಂದ ಕಂಡ ಶ್ರೀರಾಮಕೃಷ್ಣರು ಹಾಗೆಯೇ ಆಗಲಿ ಇದಕ್ಕಾಗಿ ದಯವಿಟ್ಟು ನಾಳೆ ಬನ್ನಿ ಅಂದರು. ಮಾರನೆಯ ದಿನ ತಂದೆ ಮಕ್ಕಳನ್ನು ಕಂಡ ಶ್ರೀರಾಮಕೃಷ್ಣರು ಆ ಹುಡುಗನನ್ನು ಕುರಿತು, “ಮಗು ಬೆಲ್ಲ ತಿನ್ನುವುದನ್ನು ಬಿಟ್ಟು ಬಿಡು” ಎಂದರು. ಹುಡುಗ ಭಕ್ತಿಯಿಂದ ಹೇಳಿದ, “ತಮ್ಮ ಅಪ್ಪಣೆ ಪೂಜ್ಯರೆ.”
ವಿಸ್ಮಿತ ಭಕ್ತಿಭಾವದಲ್ಲಿ ಪುಳಕಿತನಾದ ಆ ಹುಡುಗನ ತಂದೆ, ಪೂಜ್ಯರೇ, ನನ್ನಲ್ಲಿ ಒಂದು ಸಣ್ಣ ಸಂದೇಹ. ತಾವು ಈ ಮಾತನ್ನು ನೆನ್ನೆಯೇ ಏಕೆ ಹೇಳಲಿಲ್ಲ ಎಂದು ಕುತೂಹಲವಾಯಿತು ಎಂದ. ಪರಮಹಂಸರು, ಮುಗುಳ್ನಕ್ಕು ಹೇಳಿದರು, “ನಾನೂ ಬೆಲ್ಲ ತಿನ್ನುವ ಅಭ್ಯಾಸ ಬೆಳೆಸಿಕೊಂಡು ಬಿಟ್ಟಿದ್ದೆ. ಅದನ್ನು ಬಿಡುವುದಕ್ಕೆ ಒಂದು ದಿನ ಬೇಕಾಯಿತು!”. ತಾವು ಮಾಡದಿದ್ದುದನ್ನು ಪೂಜ್ಯರು ಎಂದೂ ಬೋಧಿಸಲಿಲ್ಲ.
ಒಮ್ಮೆ ಓಶೋ ಅವರ ಬರಹವನ್ನು ಓದಿದಾಗ ಅದರಲ್ಲೊಂದು ಹೃದಯ ಸಂವೇದನೆ (compassion) ಕುರಿತಾದ ಘಟನೆಯ ವಿವರಣೆ ಇತ್ತು. “ಶ್ರೀ ರಾಮಕೃಷ್ಣ ಪರಮಹಂಸರು ಒಮ್ಮೆ ದೋಣಿಯಲ್ಲಿ ಪಯಣಿಸುತ್ತಿದ್ದರು. ಇದ್ದಕ್ಕಿದ್ದಂತೆ ಪೂಜ್ಯರು ನನ್ನನ್ನು ಹೊಡೆಯಬೇಡಿ, ನನಗೆ ನೋವಾಗುತ್ತಿದೆ ಎಂದು ಚೀರಲಾರಂಭಿಸಿದರು. ದೋಣಿಯಲ್ಲಿದ್ದವರು, ಗಾಬರಿಯಿಂದ ಜೊತೆಗೆ ಒಂದಿಷ್ಟು ಅಸಹನೆಯಿಂದ ಕೇಳಿದರು. ನಿಮ್ಮನ್ನು ಇಲ್ಲಿ ಯಾರು ಹೊಡೆಯುತ್ತಿದ್ದಾರೆ? “ಇಲ್ಲಿ ಅಲ್ಲ. ಆಚೆಯ ದಡದಲ್ಲಿ ನನ್ನನ್ನು ಕೆಲವರು ತುಂಬಾ ಹೊಡೆಯುತ್ತಿದ್ದಾರೆ” ಪರಮಹಂಸರು ನುಡಿದರು. ಹಲವು ಸಮಯದ ನಂತರ ದೋಣಿ ದಡ ಸೇರಿದಾಗ ಅಲ್ಲಿ ಒಬ್ಬಾತನನ್ನು ಹಣ್ಣಾಗುವಂತೆ ಹೊಡೆಯುತ್ತಿದ್ದ ಘಟನೆ ಪಯಣಿಗರನ್ನು ಮೂಕರನ್ನಾಗಿಸಿತು.
ಒಬ್ಬರು ಅವರನ್ನು ಕೇಳಿದರು, “ಪಾಪವೆಂಬುದು ಸತ್ಯವೇ, ಸುಳ್ಳೇ?, ಅದು ದೇವರ ಅಸ್ತಿತ್ವದಲ್ಲಿದೆಯೇ?” ರಾಮಕೃಷ್ಣರು ಉತ್ತರಿಸಿದರು, “ಒಂದು ಸರ್ಪದಲ್ಲಿ ವಿಷವಿರುವಂತೆ ಅದು ದೇವರಲ್ಲೂ ಇದೆ. ಅದು ವಿಷ. ಅದು ನಮಗೆ ಹಾನಿ ಮಾಡುತ್ತದೆ, ದೇವರಿಗಲ್ಲ” .
ಧಾರ್ಮಿಕ ಪುಸ್ತಕಗಳು, ಚರ್ಚೆ ಮತ್ತು ಪ್ರವಚನಗಳು ಒಬ್ಬ ವ್ಯಕ್ತಿ ದೇವರನ್ನು ಅರಿತುಕೊಳ್ಳುವವರೆಗೆ ಅವಶ್ಯಕ, ಮತ್ತು ದೈವಸಾಕ್ಷಾತ್ಕಾರದ ನಂತರ ಅವು ಮೌನವಾಗುತ್ತವೆ. ಅದಕ್ಕೆ ಅವರು ಒಂದು ಸಾದೃಶವನ್ನು ನೀಡಿದರು. ಒಂದು ಪುಷ್ಪದಿಂದ ಮಧುವನ್ನು ಹೀರಲು ಪ್ರಾರಂಭಿಸುವವರೆಗೆ ದುಂಬಿ ಸುಂಯ್ ಗುಡುತ್ತಿರುತ್ತದೆ. ಹೀರುವಿಕೆ ಪ್ರಾರಂಭಿಸಿದನಂತರ ಅದರ ಸದ್ದಡಗುತ್ತದೆ.
ಒಂದು ಸಮಾಜದಲ್ಲಿ ಜೀವಿಸುವ ವ್ಯಕ್ತಿಯು ಕೆಡುಕನ್ನು ವಿರೋಧಿಸಬೇಕೆಂದು ಮತ್ತು ತನ್ನನ್ನು ರಕ್ಷಿಸಿಕೊಳ್ಳಬೇಕೆಂದು ಒಮ್ಮೆ ವಿವರಣೆ ಕೊಟ್ಟರು. ಒಳ್ಳೆಯತನವೆಂದರೆ ಕೆಡುಕನ್ನು ಮೌನವಾಗಿ ಅನುಭವಿಸುವುದು ಎಂದಲ್ಲ. ಇದರ ಕುರಿತು ಹುಡುಗರು ತಮ್ಮ ದನಗಳನ್ನು ಮೇಯಿಸುತ್ತಿದ್ದ ಒಂದು ಮೈದಾನದಲ್ಲಿನ ಭಯಂಕರ ವಿಷ ಸರ್ಪದ ಕತೆಯನ್ನು ಹೇಳಿದರು. ಆ ದನ ಕಾಯುವ ಹುಡುಗರಿಗೆ ಆ ಹಾವನ್ನು ಕಂಡರೆ ಹೆದರಿಕೆ. ಒಂದು ದಿನ ಒಬ್ಬ ಸಂನ್ಯಾಸಿ ಆ ದಾರಿಯಲ್ಲಿ ಹಾದುಹೊಗುತ್ತಿದ್ದರು. ಆ ಹುಡುಗರು ಆ ವಿಷಸರ್ಪದ ಬಗ್ಗೆ ಆತನಿಗೆ ಎಚ್ಚರಿಕೆ ನೀಡಿದರು. ತಾನು ಆ ಸರ್ಪವನ್ನು ತನ್ನ ಮಂತ್ರದಿಂದ ಸೌಮ್ಯಗೊಳಿಸುವುದಾಗಿ ಆತ ಹೇಳಿದರು. ಆ ಸರ್ಪವು ಹೆಡೆಯೆತ್ತಿಕೊಂಡು ಆತನನ್ನು ಸಮೀಪಿಸಿದಾಗ, ಆತ ಮಂತ್ರಪಠನ ಮಾಡಿದರು, ಸರ್ಪವು ಸೌಮ್ಯವಾಗಿ ಅವರ ಕಾಲಬಳಿಯಲ್ಲಿ ಬಿದ್ದಿತು. ಅವರು ಯಾರಿಗೂ ತೊಂದರೆ ನೀಡಬಾರದು ಮತ್ತು ದೇವರನ್ನು ಧ್ಯಾನಿಸಬೇಕು ಎಂದು ಅದಕ್ಕೆ ಉಪದೇಶಿಸಿದರು. ಅಂದಿನಿಂದ ಆ ಸರ್ಪವು ತುಂಬಾ ಸೌಮ್ಯ ವರ್ತನೆ ತೋರಲಾರಂಭಿಸಿತು. ದನಕಾಯುವ ಹುಡುಗರು ಅದು ಸೌಮ್ಯವಾದುದನ್ನು ಕಂಡು ಅದರೆಡೆ ಕಲ್ಲುಗಳನ್ನು ತೂರಿ ಹಿಂಸಿಸಲಾರಂಭಿಸಿದರು. ತಾನು ವಾಪಸಾಗುವಾಗ ಆ ಸಂನ್ಯಾಸಿ ಆ ಸರ್ಪವನ್ನು ಕಂಡರು. ಅವರು ಅದನ್ನು ಏಕೆ ಇಷ್ಟು ನಿಶ್ಯಕ್ತನಾಗಿದ್ದೀಯೇ ಎಂದು ಪ್ರಶ್ನಿಸಿದರು. ಅದು ತಾನು ಹೇಗೆ ಸೌಮ್ಯವಾದೆ, ಅದರಿಂದ ಹೇಗೆ ತೊಂದರೆಗೆ ಒಳಗಾದೆ ಎಂದು ವಿವರಿಸಿತು. ಆಗ ಸಂನ್ಯಾಸಿ ಹೇಳಿದರು. “ದೇವರ ಸೃಷ್ಟಿಯ ಜೀವಿಗಳನ್ನು ಕಚ್ಚಬೇಡ ಎಂದು ನಿನಗೆ ನಾನು ಹೇಳಿದೆನೆ ಹೊರತು, ನಿನ್ನನ್ನು ಜನರು ಹಿಂಸಿಸುವಾಗ ಹೆಡೆಯನ್ನು ಎತ್ತಿ ಬುಸುಗುಟ್ಟಬೇಡವೆಂದು ಹೇಳಲಿಲ್ಲವಲ್ಲ?”
ಒಂದು ದಿನ ಹಲವು ಬೆಸ್ತರು ಮೀನುಗಳನ್ನು ಹಿಡಿಯುತ್ತಿದ್ದರು. ಒಂದು ಹದ್ದು ಕೆಳಕ್ಕೆ ಹಾರಿ ಬಂದು ಒಂದು ಮೀನನ್ನು ಎತ್ತಿಕೊಂಡು ಹಾರಿಹೋಯಿತು. ಸುತ್ತಲೂ ಅನೇಕ ಕಾಗೆಗಳು ಹಾರಾಡುತ್ತಿದ್ದವು. ಅವು ಮೀನಿಗಾಗಿ ಹದ್ದನ್ನು ಅಟ್ಟಿಸಿಕೊಂಡು ಹೋದವು. ಹದ್ದು ದಕ್ಷಿಣ ದಿಕ್ಕಿನೆಡೆಗೆ ಹಾರಿತು. ಕಾಗೆಗಳೂ ಅದನ್ನು ಹಿಂಬಾಲಿಸಿದವು. ಅದು ಉತ್ತರ, ಪೂರ್ವ ಮತ್ತು ಪಶ್ಚಿಮಗಳೆಡೆಗೆ ಹಾರಿತು, ಕಾಗೆಗಳು ಅದನ್ನು ಅಟ್ಟಿಸಿಕೊಂಡು ಬಂದವು. ಗಾಬರಿಯಿಂದ, ಅದು ಆ ಕಡೆ, ಈ ಕಡೆ ಹಾರುವುದರಲ್ಲಿ, ಅದು ಬಾಯಲ್ಲಿ ಹಿಡಿದಿದ್ದ ಮೀನನ್ನು ಕೆಳಕ್ಕೆ ಬಿಟ್ಟುಬಿಟ್ಟಿತು. ಕಾಗೆಗಳು ಹದ್ದನ್ನು ಹಿಂಬಾಲಿಸುವುದನ್ನು ಬಿಟ್ಟು ಮೀನಿನೆಡೆಗೆ ಹೊರಟವು. ‘ಈ ಹಾಳು ಮೀನಿನಿಂದ ನಾನು ಇಷ್ಟು ಹಿಂಸೆ ಪಡಬೇಕಾಯಿತು. ಅದು ತಪ್ಪಿ ಹೋಗಿದ್ದು, ನನಗೆ ಈಗ ಸಂತೋಷವಾಗಿದೆ’ ಎಂದುಕೊಂಡಿತು ಹದ್ದು. ಶ್ರೀ ರಾಮಕೃಷ್ಣರು “ಎಲ್ಲ ಸಂಕಟಗಳಿಗೂ ಆಸೆಯೇ ಮೂಲ. ಮನುಷ್ಯನು ಅಧಿಕಾರ, ಹಣ, ಇದು, ಅದು, ಎಲ್ಲವನ್ನೂ ಬಯಸುತ್ತಾನೆ. ಅಸೆಯನ್ನು ಬಿಟ್ಟರೆ ಸಂತೋಷ ತಾನಾಗಿಯೇ ಬರುತ್ತದೆ. ಆಸೆಯನ್ನು ತೊರೆಯಿರಿ ಮತ್ತು ಅನುಕಂಪ ತೋರಿಸಿ” ಎಂದು ಉಪದೇಶಿಸಿದರು.
ರಾಮಕೃಷ್ಣ ಪರಮಹಂಸರಿಗೆ ಯಾವುದೇ ಬಾಹ್ಯ ತೋರ್ಪಡಿಕೆಗಳಲ್ಲಿ ಆಸ್ಥೆ ಇರಲಿಲ್ಲ. ಯಾವುದು ಹೃದಯಾಂತರಾಳವನ್ನು ತಲುಪುವುದಿಲ್ಲವೋ ಅದರಿಂದ ಯಾವ ಪ್ರಯೋಜನವೂ ಇಲ್ಲ ಎಂಬುದು ಅವರ ನಿಶ್ಚಿತ ಅಭಿಪ್ರಾಯ. ಇದಕ್ಕೆ ಅವರು ಹೇಳುವ ಇಬ್ಬರು ಗೆಳೆಯರ ಕಥೆ ಸಾರ್ವಕಾಲಿಕವಾಗಿ ಶ್ರೇಷ್ಠ ನಿರೂಪಣೆಯಾಗಿದೆ. ಇಬ್ಬರು ಗೆಳೆಯರಲ್ಲಿ ಒಬ್ಬ ಸ್ತ್ರೀಸಹವಾಸದ ವಿನೋದಕ್ಕೆ ಹೊರಟನಂತೆ. “ಮತ್ತೊಬ್ಬ ಹೇಳಿದ ನಾನು ಬರುವುದಿಲ್ಲಪ್ಪ. ದೇವಸ್ಥಾನಕ್ಕೆ ಹೋಗಿ ಪುರಾಣ ಕೇಳುತ್ತೇನೆ”. ಪುರಾಣ ಕೇಳಲಿಕ್ಕೆ ಹೋದವ “ಅಯ್ಯೋ ನಾನು ಎಂಥ ವಿನೋದಮಯ ಅವಕಾಶ ಕಳೆದುಕೊಂಡೆ” ಎಂದು ಕಳವಳಕ್ಕೀಡಾದ. ವಿನೋದಕ್ಕೆ ಹೋದವನಿಗೆ ವಿನೋದದಲ್ಲಿದ್ದರೂ “ಅಯ್ಯೋ ನಾನು ಪುರಾಣ ಕೇಳುವುದಕ್ಕೆ ಹೋಗದೆ ಭಗವಂತನ ಸಾಕ್ಷಾತ್ಕಾರದಿಂದ ವಂಚಿತನಾದೆನೆಲ್ಲಾ ಎಂಬ ಪರಮಾತ್ಮನ ಕುರಿತಾದ ವ್ಯಾಕುಲತೆ ತುಂಬಿಹೋಗಿತ್ತು”. ಪರಮಹಂಸರು ಸುಂದರವಾಗಿ ಹೇಳುತ್ತಾರೆ. ನಮ್ಮ ಆಂತರ್ಯ ಏನು ಬಯಸುತ್ತಿದೆ ಎಂಬುದು ಮುಖ್ಯ. ಬಾಹ್ಯ ಚಟುವಟಿಕೆಯಲ್ಲ.
ನಮ್ಮ ದೇಶದಲ್ಲಿ ಅಧ್ಯಾತ್ಮವನ್ನು ಕ್ಲಿಷ್ಟತೆಯ ಪರಮಾವಧಿಗೆ ತೆಗೆದುಕೊಂಡು ಹೋಗಿ ಕ್ಲಿಷ್ಟ ಕಾನೂನು ಸೃಷ್ಟಿಸಿ ಬುದ್ಧಿವಂತ ಕಾನೂನು ತಜ್ಞರನ್ನು ನಿರ್ಮಿಸಿರುವಂತೆ ಪುರೋಹಿತಶಾಹಿಯನ್ನೇ ನಾವು ನಿರ್ಮಿಸಿಬಿಟ್ಟಿದ್ದೇವೆ ಎನಿಸದಿರದು. ರಾಮಕೃಷ್ಣ ಪರಮಹಂಸರು ಹೇಳಬೇಕಾದದ್ದನ್ನು ನೇರವಾಗಿ ಸುಲಭವಾಗಿ ನಾಟುವಂತೆ ಹೇಳುತ್ತಾರೆ. ಉದಾಹರಣೆಗೆ ವೈರಾಗ್ಯ ಎಂಬುದಕ್ಕೆ ಅವರು ಕೊಡುವ ಕಥಾನಕ ಮನಮುಟ್ಟುವಂತದ್ದು. ಅವರು ಹೇಳುತ್ತಾರೆ “ತೀವ್ರ ವೈರಾಗ್ಯದ ಸಂಬಂಧವಾಗಿ ಒಂದು ಕತೆ ಕೇಳು. ಒಂದು ದೇಶದಲ್ಲಿ ಅನಾವೃಷ್ಟಿಯಾಗಿತ್ತು. ರೈತರು ಬಹಳ ದೂರದಿಂದ ನೀರು ತರಲು ಕಾಲುವೆ ತೋಡಲಾರಂಭಿಸಿದ. ಒಬ್ಬ ಒಳ್ಳೇ ದೃಢಸಂಕಲ್ಪಶಾಲಿ. ಒಂದು ದಿನ ಪ್ರತಿಜ್ಞೆಮಾಡಿಕೊಂಡ. ನದಿಯಿಂದ ಜಮೀನಿನವರೆಗೆ ಕಾಲುವೆ ತೋಡಿ ನೀರು ತರುವವರೆಗೆ ಹಿಡಿದ ಗುದ್ದಲಿಯನ್ನು ಬಿಡುವುದೇ ಇಲ್ಲ ಎಂಬುದಾಗಿ. ಅಗೆಯಲು ಶುರುಮಾಡಿದ. ಸ್ನಾನಕ್ಕೆ ಸಮಯ ಆಯಿತು. ಹೆಂಡತಿ ಮಕ್ಕಳ ಕೈಯಲ್ಲಿ ಎಣ್ಣೆ ಇಟ್ಟು ಕಳುಹಿಸಿದಳು. ಮಗಳು ಬಂದು ಹೇಳಿದಳು: ‘ಅಪ್ಪ ಸ್ನಾನಕ್ಕೆ ಸಮಯವಾಗಿದೆ. ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡು.’. ಆತ ಗುಡುಗಿದ: ‘ಹೋಗು ಇಲ್ಲಿಂದ! ನನ್ನ ಕೆಲಸ ಇನ್ನೂ ಮುಗಿದಿಲ್ಲ.’ ಆಗಲೇ ಸಮಯ ಅಪರಾಹ್ನ ಒಂದು. ಇನ್ನೂ ಕೆಲಸ ಮಾಡುತ್ತಲೇ ಇದ್ದಾನೆ. ಸ್ನಾನದ ಯೋಚನೆಯೇ ಇಲ್ಲ. ಬಳಿಕ ಹೆಂಡತಿ ಬಂದು ಹೇಳಿದಳು: ‘ಇನ್ನೂ ನೀವು ಸ್ನಾನವನ್ನೇ ಮುಗಿಸಿಲ್ಲವಲ್ಲ? ಅಡಿಗೆಯೆಲ್ಲಾ ಆರಿಹೋಗಿಬಿಡುತ್ತಾ ಇದೇ. ಯಾವಾಗ ನೋಡಿದರೂ ನಿಮ್ಮದು ಹಿಡಿದದ್ದೇ ಹಠ. ಉಳಿದುದನ್ನು ನಾಳೆ ಮಾಡಿದರಾಯಿತು. ಈಗ ಊಟ ಮುಗಿಸಿ ಮಾಡಿದರಾಯಿತು.’ ಆಕೆಯನ್ನು ಚೆನ್ನಾಗಿ ಬಯ್ದು ಗುದ್ದಲಿ ಹಿಡಿದು ಅಟ್ಟಿಸಿಕೊಂಡು ಹೋಗುತ್ತಾ ಕಿರಿಚಲಾರಂಭಿಸಿದ: ‘ನಿನಗೇನು ಬುದ್ಧಿ ಎಂಬುದು ಎಳ್ಳಷ್ಟೂ ಇಲ್ಲವೆ? ಮಳೆ ಬರಲಿಲ್ಲ. ಬೆಳೆಯೆಲ್ಲಾ ಒಣಗಿಹೋಗುತ್ತಿದೆ. ಮಕ್ಕಳು ಮರಿ ಏನು ತಿನ್ನಬೇಕು? ನೀವೆಲ್ಲಾ ಹೊಟ್ಟೆಗಿಲ್ಲದೆ ಸತ್ತುಹೋಗಿಬಿಡುವಿರಿ. ಜಮೀನಿಗೆ ಇಂದು ನೀರು ತರುವುದಕ್ಕಿಂತ ಮುಂಚೆ ಸ್ನಾನ, ಊಟ ಯಾವುದರ ಯೋಚನೆಯನ್ನೂ ಮಾಡುವುದೇ ಇಲ್ಲ ಎಂದು ಪ್ರತಿಜ್ಞೆ ಮಾಡಿಕೊಂಡುಬಿಟ್ಟಿದ್ದೇನೆ.’ ಹೆಂಡತಿ ಆತನ ಸ್ವರೂಪ ನೋಡಿ ಹೆದರಿ ಸುಮ್ಮನೆ ಓಡಿದ್ದೂ ಓಡಿದ್ದೆ. ರೈತ ಬೆನ್ನು ಮುರಿಯುವ ಹಾಗೆ ಇಡೀ ದಿನವೆಲ್ಲ ಕೆಲಸಮಾಡಿ ಸಾಯಂಕಾಲದ ಹೊತ್ತಿಗೆ ತನ್ನ ಜಮೀನಿನಿಂದ ನದಿಯವರೆಗೆ ಕಾಲುವೆ ತೋಡಿ ಮುಗಿಸಿಯೇ ಬಿಟ್ಟ. ಬಳಿಕ ಒಂದು ಕಡೆ ಕುಳಿತುಕೊಂಡು ನದಿನೀರು ತನ್ನ ಜಮೀನಿಗೆ ‘ಕಲ, ಕಲ’ ಅಂತ ಶಬ್ದಮಾಡಿಕೊಂಡು ನುಗ್ಗುತ್ತಿರುವುದನ್ನು ನೋಡಲಾರಂಭಿಸಿದ. ಆಗ ಆತನ ಮನ್ನಸು ಶಾಂತಿಯಿಂದ ಮತ್ತು ಪೂರ್ಣ ಆನಂದದಿಂದ ತುಂಬಿ ತುಳುಕಾಡಲಾರಂಭಿಸಿತು. ಬಳಿಕ ಮನೆಗೆ ಹೋಗಿ ಹೆಂಡತಿಯನ್ನು ಕರೆದು ಹೇಳಿದ: ‘ಈಗ ಎಣ್ಣೆ ತಂದುಕೊಡು; ಗುಡುಗುಡಿ ಸಿದ್ಧಪಡಿಸು.’ ನಿಶ್ಚಿಂತೆಯಿಂದ ಸ್ನಾನ, ಊಟ ಮುಗಿಸಿ ಮಲಗಿಕೊಂಡು ಮನೆ ಸೂರು ಕಿತ್ತುಹೋಗುವ ಹಾಗೆ ಗೊರಕೆ ಹೊಡೆಯಲಾರಂಭಿಸಿದ. ಈ ವಿಧದ ದೃಢಸಂಕಲ್ಪವೇ ತೀವ್ರ ವೈರಾಗ್ಯದ ಉಪಮೆ. “ಒಳ್ಳೆಯ ದೃಢ ಸಂಕಲ್ಪವಿಲ್ಲದಿದ್ದರೆ ಯಾವ ರೀತಿಯಾಗಿ ರೈತ ತನ್ನ ಜಮೀನಿಗೆ ನೀರು ತರಲಾರನೋ ಹಾಗೆಯೇ ತೀವ್ರ ವೈರಾಗ್ಯವಿಲ್ಲದಿದ್ದರೆ ಮನುಷ್ಯ ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಲಾರ.”
ಉಪ್ಪಿನಿಂದ ಮಾಡಲ್ಪಟ್ಟ ಬೊಂಬೆಯ ಕಥೆ ರಾಮಕೃಷ್ಣರು ಹೇಳುತ್ತಿದ್ದ ಕತೆಗಳಲ್ಲಿ ಪ್ರಸಿದ್ಧವಾದದ್ದು. ಒಮ್ಮೆ ಒಬ್ಬರು ಕೇಳಿದರು, “ನೀವು ದೇವರನ್ನು ನೋಡಿದ್ದರೆ ಆತನನ್ನು ನೀವು ಏಕೆ ವಿವರಿಸಬಾರದು?”. ಶ್ರೀ ರಾಮಕೃಷ್ಣರು ಉತ್ತರಿಸಿ, “ಒಮ್ಮೆ ಒಂದು ಉಪ್ಪಿನಿಂದ ಮಾಡಿದ ಬೊಂಬೆಯು ಸಮುದ್ರದ ಆಳವನ್ನು ಅಳೆಯಲು ಹೊರಟಿತು. ತಾನು ವಾಪಸಾದ ಮೇಲೆ ತನ್ನ ಅನುಭವಗಳನ್ನು ಜನರಿಗೆ ತಿಳಿಸುವುದು ಅದರ ಉದ್ದೇಶವಾಗಿತ್ತು. ಆದರೆ ಅದು ದಂಡೆಯನ್ನು ಬಿಟ್ಟು ನೀರನ್ನು ಸೇರಿದ ತಕ್ಷಣ ಕರಗಿ ಕಾಣದಾಯಿತು. ದೈವ ಸಾಕ್ಷಾತ್ಕಾರದ ಬಗ್ಗೆ ಯಾವುದೇ ವ್ಯಕ್ತಿಯ ಪ್ರಯತ್ನವೂ ಸಹ ಉಪ್ಪಿನ ಬೊಂಬೆಯ ಪ್ರಯತ್ನದಂತಾಗುತ್ತದೆ. ಆ ಅನುಭವದಲ್ಲಿ ಆತನು ಪೂರ್ಣವಾಗಿ ಐಕ್ಯನಾಗಿ ತನ್ನನ್ನು ತಾನು ಮರೆಯುತ್ತಾನೆ ಮತ್ತು ಏನೂ ಹೇಳಲಾರ.”
ಒಬ್ಬ ವ್ಯಕ್ತಿಯು ಸಂಸಾರವನ್ನು ಬಿಟ್ಟು ಸಂನ್ಯಾಸಿಯಾಗಬೇಕಿಲ್ಲ. ಸಾಂಸಾರಿಕ ಜೀವನ ಒಂದು ಕೋಟೆಯಿದ್ದಂತೆ. ಕೋಟೆಯೊಳಗಿಂದ ಶತ್ರುವನ್ನು ಎದುರಿಸುವುದು ಮತ್ತು ಜಯಿಸುವುದು ಕೋಟೆಯ ಹೊರಗಡೆಯಿಂದ ಶತ್ರುವನ್ನು ಎದುರಿಸುವುದಕ್ಕಿಂತ ಸುಲಭ. ಮೋಕ್ಷ ಸಾಧನೆಗೆ ಮೊದಲು ‘ನಾನು’ ಎಂಬುದನ್ನು ಬಿಡಬೇಕು. ದೈವ ಸಾಕ್ಷಾತ್ಕಾರವೇ ಮಾನವ ಜೀವನದ ಧ್ಯೇಯ. ‘ಭಕ್ತಿ’ ಮತ್ತು ‘ಜ್ಞಾನ’ ಒಂದೇ ಗುರಿಗೆ ನಡೆಸುತ್ತವೆ. ಆದರೆ ನಮ್ಮ ಯುಗದಲ್ಲಿ ‘ಭಕ್ತಿ’ಗೆ ಪ್ರಾಧಾನ್ಯ ನೀಡಬೇಕು. ದೈವ ಸಾಕ್ಷಾತ್ಕಾರ ಪಡೆಯಲು ದೇವಿಯನ್ನು ಪ್ರೀತಿಸಬೇಕು. ಆ ಮಾತೆಯ ಮಗುವಾಗಬೇಕು. ಪ್ರಾಮಾಣಿಕವಾಗಿ ಆಕೆಗೆ ಹಂಬಲಿಸಿದರೆ ಆಕೆ ಪ್ರಸನ್ನಳಾಗುತ್ತಾಳೆ. ಮನೆಯಲ್ಲಿ ತಾಯಿಯು ಕೆಲಸಗಳನ್ನು ಮಾಡುತ್ತಿರುತ್ತಾಳೆ. ಆದರೆ ಮಗುವು ರೋಧಿಸಿದಾಗ ತನ್ನ ಕೆಲಸವನ್ನು ಬಿಟ್ಟು ಮಗುವನ್ನು ಸಂತೈಸಲು ಬರುತ್ತಾಳೆ. ಅದೇ ರೀತಿ ಮನುಷ್ಯನ ಬಗೆಗೂ ಕೂಡ. ಅವನು ಪ್ರಾಮಾಣಿಕವಾಗಿ ಆ ತಾಯಿಗಾಗಲಿ, ದೇವರಿಗಾಗಲಿ ಕೂಗಿ ಬೇಡಿದರೆ, ದೇವರು ಅಥವಾ ಆ ಮಾತೆ ಅವನ ಬಳಿಗೆ ಆತುರದಿಂದ ಬರುತ್ತಾರೆ.
ಮಾನವ ಜೀವನದ ಮುಖ್ಯ ಉದ್ದೇಶ ದೇವರನ್ನು ಕಾಣುವುದು. ಮನುಷ್ಯನು ದೇವರನ್ನು ಅರಸಿ ಹೋಗಬೇಕಿಲ್ಲ. ದೇವರು ಸಮೀಪದಲ್ಲೇ ಇದ್ದಾನೆ. ಆತನು ಎಲ್ಲೆಲ್ಲೂ ಇದ್ದಾನೆ. ಆದರೆ ಆತನನ್ನು ಕಾಣಲು ನೀನು ಅವಶ್ಯಕವಾದ ಪ್ರಯತ್ನವನ್ನು ಮಾಡಬೇಕು. ಹಾಲಿನಲ್ಲಿ ಬೆಣ್ಣೆ ಇದೆ. ಆದರೆ ಅದನ್ನು ಪಡೆಯಲು ಸರಿಯಾದ ಪ್ರಯತ್ನ ಮಾಡಬೇಕು. ಎಲ್ಲವನ್ನೂ ಆ ಪರಮಾತ್ಮನಿಗೆ ಸಮರ್ಪಣೆ ಮಾಡು. ಪ್ರಾಮಾಣಿಕವಾಗಿ ಪ್ರಾರ್ಥಿಸು. ದೇವರು ಸಾಕಾರನೇ ಅಥವಾ ನಿರಾಕಾರನೇ ಎಂಬ ಬಗ್ಗೆ ಚರ್ಚೆ ಮತ್ತು ವಾದಗಳು ಅನುಪಯುಕ್ತ ಮಾತ್ರವೇ ಅಲ್ಲ, ಅನವಶ್ಯಕ ಕೂಡ. ಆತನು ಸಾಕಾರನೂ ಹೌದು, ನಿರಾಕಾರನೂ ಹೌದು. ನಿನಗೆ ನಿನ್ನ ನಿಜವಾದ ಸ್ವಭಾವವನ್ನು ತಿಳಿಸಲು, ಅಂಧಕಾರದಿಂದ ಬೆಳಕಿನೆಡೆಗೆ ತರಲು, ನಿನಗೆ ಸಮರ್ಥನಾದ ಗುರುವಿನ ಅವಶ್ಯಕತೆಯಿದೆ. ಈ ರೀತಿ ರಾಮಕೃಷ್ಣರು ಉಪದೇಶಿಸುತ್ತಿದ್ದರು.
ಶ್ರೀ ರಾಮಕೃಷ್ಣ ಪರಮಹಂಸರು 1886ರ ಆಗಸ್ಟ್ 16ರಂದು ಈ ಲೋಕವನ್ನಗಲಿದರು.ಇದನ್ನು ಓದಿ –ನಾಗಮಂಗಲಕ್ಕೆ ಭೇಟಿ ನೀಡಿದ ಮಂಡ್ಯ ಸಂಸದ ಕುಮಾರಸ್ವಾಮಿ
ಯಾರಾದರೂ, “ನೀವು ದೇವರನ್ನು ನೋಡಿರುವಿರಾ?” ಎಂದು ಕೇಳಿದರೆ ಶ್ರೀರಾಮಕೃಷ್ಣ ಪರಮಹಂಸರು ಪ್ರಾಮಾಣಿಕವಾಗಿ ಹೇಳುತ್ತಿದ್ದರು, “ಹೌದು, ನಾನು ಆತನನ್ನು ನೋಡಿದ್ದೇನೆ. ನೀನು ಪ್ರಯತ್ನ ಮಾಡಲು ಸಿದ್ಧನಾಗಿದ್ದಲ್ಲಿ ನೀನು ಸಹಾ ದೇವರನ್ನು ಕಾಣಬಲ್ಲೆ”. ಶ್ರೀರಾಮಕೃಷ್ಣರಿಗೆ ಭಕ್ತಿಯಿಂದ ನಮಿಸಿ ಅವರ ಆಶೀರ್ವಾದದಿಂದ ನಮಗೂ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುವ ನಮ್ಮನ್ನು ನಾವು ಅರಿತುಕೊಳ್ಳುವ, ಪ್ರಪಂಚದ ಎಲ್ಲ ದುಃಖಗಳಿಂದ ವಿಮುಕ್ತವಾಗುವ ದಿವ್ಯಜ್ಞಾನವನ್ನು ಪಡೆದುಕೊಳ್ಳುವ ಶಕ್ತಿ ದೊರಕುವಂತೆ ಪ್ರಾರ್ಥಿಸೋಣ.
ತಿರು ಶ್ರೀಧರ ✍️
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು