February 6, 2025

Newsnap Kannada

The World at your finger tips!

BJP , Sandalwood , Politics

ಪದ್ಮಭೂಷಣ ಪ್ರಶಸ್ತಿಗೆ ಪುರಸ್ಕೃತ ಕನ್ನಡ ನಟ ಶ್ರೀ ಅನಂತ ನಾಗ್

Spread the love

ಕನ್ನಡದ ಚಲನಚಿತ್ರಗಳಲ್ಲಿ “ಮಿಂಚಿನ ಓಟ”, “ಬೆಂಕಿಯ ಬಲೆ”, “ಚಂದನದ ಗೊಂಬೆ” ಇತ್ಯಾದಿ ಯಾರಿಗೆ ಗೊತ್ತಿಲ್ಲ. ಹಾಗೆಯೇ ದೂರದರ್ಶನದಲ್ಲಿ ಬಿತ್ತರಗೊಂಡ ಮಾಲ್ಗುಡಿ ಡೇಸ್ ನ ದೇಸೀ ಛಾಯೆಯ ಕತೆಗಳು ಕೂಡ ಲೋಕಮಾನ್ಯ.

ಇಂದಿಗೂ ಯೂಟ್ಯೂಬ್ ನಲ್ಲಿ ಅಥವಾ ದೂರದರ್ಶನದಲ್ಲಿ ಅಥವಾ ಅಂತರ್ಜಾಲದಲ್ಲಿ ಇದನ್ನು ಇನ್ನೂ ನೋಡುವ ಅನೇಕ ವೀಕ್ಷಕರಿದ್ದಾರೆ. ಹೀಗೆ ವಿವಿಧ ಛಾಯೆಯ ನಟನೆಗೆ ಅವಕಾಶವಿದ್ದ ಹಾಗೂ ಎಲ್ಲದರಲ್ಲೂ ಸೈ ಎನಿಸಿಕೊಂಡ ಕನ್ನಡ ಚಲನಚಿತ್ರರಂಗದ ನಟರಾದ ಶ್ರೀ ಅನಂತ ನಾಗರಕಟ್ಟೆ ಅಥವಾ ಅನಂತ ನಾಗ್ ಅವರಿಗೆ ಭಾರತ ಸರ್ಕಾರದ ನೀಡುವ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.

ಸಾರ್ವಜನಿಕ ಜೀವನದಲ್ಲಿ ನೀಡುವ ಮೂರನೆಯ ಅತ್ಯುನ್ನತ ಪ್ರಶಸ್ತಿ ಇದಾಗಿದೆ. ಈಗ ಕನ್ನಡದ ಹಿರಿಯ ನಟರಾದ ಅನಂತ್ ನಾಗ್, ವಿವಿಧ ಪಾತ್ರಗಳಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ. ಚಲನಚಿತ್ರ ಜಗತ್ತಿಗೆ ಅವರ ಕೊಡುಗೆ ಅಪಾರ. ಕನ್ನಡ ಚಲನಚಿತ್ರರಂಗವನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದವರಲ್ಲಿ ಒಬ್ಬರು.


ಐವತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲದ ವೃತ್ತಿಜೀವನದೊಂದಿಗೆ, ಅವರು ಅಂಕುರ್, ಕನ್ನೇಶ್ವರ ರಾಮ ಮತ್ತು ನಾ ನಿನ್ನ ಬಿಡಲಾರೆ ಸೇರಿದಂತೆ, ಪ್ರಶಂಸೆಗೆ ಒಳಗಾದ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮ್ಮ ವೃತ್ತಿಜೀವನದುದ್ದಕ್ಕೂ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ತಮ್ಮ ಅಭಿನಯ ಪ್ರತಿಭೆಯ ಜೊತೆಗೆ, ಇವರು ತಮ್ಮ ಸಾರ್ವಜನಿಕ ಚಟುವಟಿಕೆಗಳು ಮತ್ತು ಕನ್ನಡ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ನಿಷ್ಠೆಗಾಗಿ ಹೆಸರುವಾಸಿಯಾಗಿದ್ದಾರೆ.


ಅನಂತ ನಾಗ್ ಅವರು ನಾಲ್ಕು ಸೆಪ್ಟೆಂಬರ್ 1948ರಂದು ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಜನಿಸಿದರು. ಇವರ ತಾಯಿ ಆನಂದಿ ಹಾಗೂ ತಂದೆ ಸದಾನಂದ ನಾಗರಕಟ್ಟೆ. ಅವರಿಗೆ ಒಬ್ಬ ಅಕ್ಕ ಹಾಗೂ ಒಬ್ಬ ತಮ್ಮ. ತಮ್ಮನ ಹೆಸರು ಎಲ್ಲರಿಗೂ ಗೊತ್ತೇ ಇದೆ, ಅವರೇ ಶಂಕರ್ ನಾಗ್. ಅಕ್ಕನ ಹೆಸರು ಶ್ಯಾಮಲ. ಅನಂತ್ ನಾಗ್ ಅವರು ತಮ್ಮ ವಿದ್ಯಾಭ್ಯಾಸವನ್ನು ಉಡುಪಿಯ ಕ್ಯಾತೋಲಿಕ್ ಶಾಲೆಯಲ್ಲಿ, ದಕ್ಷಿಣ ಕನ್ನಡದ ಆನಂದಾಶ್ರಮದಲ್ಲಿ ಹಾಗೂ ಚಿತ್ರಾಪುರ ಮಠದಲ್ಲಿ ನಡೆಸಿದರು. ತನ್ನ ಒಂಬತ್ತನೆಯ ತರಗತಿಗೆ ಅವರು ಮುಂಬೈಗೆ ತೆರಳಿದರು. ಅಲ್ಲಿ ಅವರಿಗೆ ನಾಟಕಗಳ ಗೀಳು ಹತ್ತಿತು. ಕೊಂಕಣಿ, ಕನ್ನಡ ಹಾಗೂ ಮರಾಠಿ ನಾಟಕಗಳಲ್ಲಿ ಅವರು ತಮ್ಮ 22ನೆಯ ವಯಸ್ಸಿನವರೆಗೆ ಅಭಿನಯಿಸಿದರು. ಮುಂದೆ ಅವರು ನಿರ್ದೇಶಕ ಹಾಗೂ ಚಲನಚಿತ್ರದ ನಿರ್ಮಾಪಕರಾದ ಶ್ಯಾಮ್ ಬೆನಗಲ್ ಅವರ ಪರಿಧಿಗೆ ಬಂದು ಅವರ ಹಲವಾರು ಚಿತ್ರಗಳಲ್ಲಿ ನಟಿಸಿದರು.


ವೈಮಾನಿಕ ಸೇವೆಗೆ ಸೇರಬೇಕೆಂದು ಅವರ ಇಚ್ಛೆಯಾಗಿತ್ತು. ಆದರೆ ದೈಹಿಕ ಮತ್ತು ದೃಷ್ಟಿಯ ಸಮಸ್ಯೆಯಿಂದಾಗಿ ಅವರಿಗೆ ಅಲ್ಲಿ ಸ್ಥಾನ ಸಿಗಲಿಲ್ಲ. ಆದರೆ ಅದೇ ಕಣ್ಣು ತನ್ನ ಭಾವನಾತ್ಮಕ ಅಭಿನಯದಿಂದ, ಕನ್ನಡದ ಹಲವು ಚಲನಚಿತ್ರಗಳಿಗೆ ಉತ್ತಮ ನಟನನ್ನು ನೀಡಿತು. 1975ರಲ್ಲಿ ಜಿವಿ ಅಯ್ಯರ್ ಅವರು ಅನಂತನಾಗ್ ರವರನ್ನು ಕನ್ನಡ ಚಲನಚಿತ್ರ ರಂಗಕ್ಕೆ ಪರಿಚಯಿಸಿದರು. ಅದುವೇ ಸಂಗೀತ ಮುಖ್ಯ ಭೂಮಿಕೆಯಲ್ಲಿ ಇರುವ ಹಂಸಗೀತೆ. ಚಲನಚಿತ್ರವು ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಶಂಕರ್ ನಾಗ್ ನಿರ್ದೇಶಿಸಿದ ಮಾಲ್ಗುಡಿ ಡೇಸ್ ಎಂಬ ಧಾರವಾಹಿಯಲ್ಲಿ 13 ಕಂತುಗಳಲ್ಲಿ ಅಭಿನಯಿಸಿದರು. ಇತ್ತೀಚಿನ ದಿನಗಳಲ್ಲಿ ಬಂದಂತಹ ಗಾಳಿಪಟ, ಮುಂಗಾರು ಮಳೆ, ಗೋಧಿ ಮೈಬಣ್ಣ ಸಾಧಾರಣ ಮೈಕಟ್ಟು, ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಮುಂತಾದ ಚಲನಚಿತ್ರಗಳಲ್ಲಿ ಮನೋಜ್ಞ ಅಭಿನಯವನ್ನು ನೀಡಿ, ಈ ಕಾಲದ ವೀಕ್ಷಕರು ಹೃದಯವನ್ನು ಗೆದ್ದರು. ತಮ್ಮ ವೃತ್ತಿ ಜೀವನದ ನಡುವೆ ರಾಜಕೀಯದ ರುಚಿಯನ್ನು ಕೂಡ ಹತ್ತಿಸಿಕೊಂಡು ಎಂಎಲ್ಸಿ ಹಾಗೂ ಎಮ್ಮೆಲ್ಲೆ ಆಗಿ ಚುನಾಯಿತರಾಗಿದ್ದರು. ಕ್ರಮೇಣ ಅವರು ರಾಜಕೀಯದಿಂದ ಹಿಂದೆ ಸರಿದರು. ವೀಕೆಂಡ್ ವಿತ್ ರಮೇಶ್ ಸರಣಿಯಲ್ಲಿ ಕೂಡ ಅನಂತ್ ಭಾಗಹಿಸಿದ್ದು, ಅಲ್ಲಿ ತಮ್ಮ ಕಂಠಸಿರಿಯೂ ಕೂಡ ಅಮೋಘವಾಗಿದೆ ಎಂದು ತೋರಿಸಿಕೊಟ್ಟರು.


ಭಾರತದ ರಾಷ್ಟ್ರಪತಿಯಿಂದ, ರಾಷ್ಟ್ರಕ್ಕೆ ಅತ್ಯುನ್ನತ ಸೇವೆಯನ್ನು ಗುರುತಿಸಲು ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಗುರುತಿಸುವಿಕೆಯು ಅನಂತ್ ನಾಗ್ ಅವರ ಅಸಾಧಾರಣ ಪ್ರತಿಭೆ, ತಮ್ಮ ವೃತ್ತಿಗೆ ಅವರ ಅರ್ಪಣೆ ಮತ್ತು ಭಾರತೀಯ ಚಲನಚಿತ್ರರಂಗಕ್ಕೆ ಅವರ ಗಮನಾರ್ಹ ಕೊಡುಗೆಗಳಿಗೆ ಸಾಕ್ಷಿಯಾಗಿದೆ.
ಶ್ರೀ ಅನಂತನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯು ಕನ್ನಡ ಚಲನಚಿತ್ರರಂಗಕ್ಕೆ ಒಂದು ಮಹತ್ವದ ಸಂದರ್ಭವಾಗಿದೆ ಮತ್ತು ಒಟ್ಟಾರೆ ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಇದು ಆಕಾಂಕ್ಷಿ ನಟರು ಮತ್ತು ಚಲನಚಿತ್ರ ನಿರ್ಮಾಪಕರಿಗೆ ಸ್ಫೂರ್ತಿಯಾಗಿದೆ ಮತ್ತು ಕನ್ನಡ ಚಲನಚಿತ್ರದ ಶ್ರೀಮಂತ ಪರಂಪರೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

image 9

ಬರೆದವರು – ಸಚಿನ್ ಮುಂಗಿಲ, ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಬೆಂಗಳೂರು ಉತ್ತರ ಜಿಲ್ಲಾ ಸಂಯೋಜಕರು.

Copyright © All rights reserved Newsnap | Newsever by AF themes.
error: Content is protected !!