Editorial

ದೀಪಗಳ ಬೆಳಕಿಲ್ಲ… ಸಂಗೀತದ ದನಿಯಿಲ್ಲ.. ಹಾಡುವವರೂ ಇಲ್ಲ…. ಕೇಳುವವರೂ ಇಲ್ಲ…!!

ಅನಿಲ್ ಎಚ್.ಟಿ.

ಸ್ಥಳ – ಮಡಿಕೇರಿ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆ

ದಿನ – ನವರಾತ್ರಿಯ ಒಂಭತ್ತು ದಿವಸ .

ಸಮಯ – ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆ.

ವಷ೯ – ಕಳೆದ 7 ವಷ೯.

ಮಡಿಕೇರಿ ದಸರಾದಲ್ಲಿ ವಿಜಯದಶಮಿ ದಿನ ದಶಮಂಟಪಗಳ ಶೋಭಾಯಾತ್ರೆ ಪ್ರಮುಖ ಆಕಷ೯ಣೆ.

ರಾತ್ರಿಯಿಡೀ ಜರುಗುವ ಅತ್ಯಾಕಷ೯ಕವಾಗಿ ಅಲಂಕೖತ ದಶಮಂಟಪಗಳ ಶೋಭಾಯಾತ್ರೆಗಾಗಿ ಮಂಜಿನ ನಗರಿಯಲ್ಲಿ ಸಂಭ್ರಮವೋ ಸಂಭ್ರಮ.

ಅದಕ್ಕೂ ಮುನ್ನ 9 ದಿನಗಳು ಕೂಡ ಮಡಿಕೇರಿ ದಸರಾಕ್ಕೆ ವೈವಿಧ್ಯಮಯ ಮೆರುಗು ನೀಡುವ ಕಾಯ೯ಕ್ರಮಗಳು ಜನಾಕಷ೯ಣೆ ಪಡೆಯುತ್ತದೆ.

ಮಡಿಕೇರಿ ದಸರಾಕ್ಕೆ 10 ವಷ೯ಗಳಿಂದ ಜನೋತ್ಸವ ಎಂಬ ಹೆಸರಿದೆ. ಜನರಿಂದ ಆಯ್ಕೆಯಾದ ಸಮಿತಿಯೇ ಮಡಿಕೇರಿಯಲ್ಲಿ ದಸರಾ ಹಬ್ಬ ನಡೆಸುತ್ತದೆ. ಹೀಗಾಗಿ ಜನರಿಂದ ಜನರಿಗಾಗಿ ನಡೆಸುವ ದಸರಾ ಜನೋತ್ಸವವಾಗಿದೆ. ಅಧಿಕಾರಿಗಳ ಅಬ್ಬರವಾಗಲೀ,. ಜಂಬೂಸವಾರಿಯಾಗಲೀ ಮಡಿಕೇರಿ ದಸರಾಕ್ಕಿಲ್ಲ. ಇಲ್ಲಿ ಏನಿದ್ದರೂ ಜನರದ್ದೇ ಸಂಭ್ರಮ..

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಬೇಧಬಾವವಿಲ್ಲದೇ ಮಡಿಕೇರಿ ದಸರಾ ನಡೆಯುವುದು ಮತ್ತೊಂದು ಹೆಗ್ಗಳಿಕೆ. ಮಡಿಕೇರಿ ದಶಮಂಟಪಗಳ ಮಂಟಪ ತಯಾರಿಕೆಯಲ್ಲಿ ಮುಸ್ಲಿಮರು, ಕ್ರೈಸ್ತರು ಕೂಡ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ದೇವಾನುದೇವತೆಯರ ಉತ್ಸವ ಮೂತಿ೯ ಮೆರವಣಿಗೆಗೆ ಮಂಟಪ ಸಜ್ಜುಗೊಳಿಸುತ್ತಾರೆ. ಹಾಗೇ ದಸರಾ ಸಮಿತಿಯಲ್ಲಿಯೂ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.

ಮಡಿಕೇರಿ ದಸರಾ ಇತಿಹಾಸದಲ್ಲಿಯೇ ಧಮ೯ಬೇಧ ಕಂಡು ಬಂದ ಉದಾಹರಣೆ ಇಲ್ಲದಿರುವದು ಕೋಮುಸೌಹಾಧ೯ತೆಯ ಪ್ರತೀಕವಾಗಿಸಿದೆ. ಮಾದರಿ ದಸರಾ ಎಂಬ ಹೆಗ್ಗಳಿಕೆಗೆ ಮಡಿಕೇರಿಯನ್ನೂ ಕಾರಣವಾಗಿಸಿದೆ.

ಮಡಿಕೇರಿ ದಸರಾದ ಸಂಭ್ರಮ ಅನಾವರಣಗೊಳ್ಳುವುದೇ ಗಾಂಧಿ ಮೈದಾನದಲ್ಲಿ.. ಲಕ್ಷಾಂತರ ರು. ವೆಚ್ಚ ಮಾಡಿ ದಸರಾ ಸಮಿತಿ ನಿಮಿ೯ಸುವ ಸುಸಜ್ಜಿತ ಪೆಂಡಾಲ್ ನಲ್ಲಿ ಪ್ರೇಕ್ಷಕರು ಕುಳಿತು.9 ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾಯ೯ಕ್ರಮ ವೀಕ್ಷಿಸುತ್ತಾರೆ. ರಾಜ್ಯದ ವಿವಿದೆಡೆಗಳಿಂದ ಬರುವ ಹೆಸರಾಂತ ಕಲಾವಿದರು ಹಾಡು, ನೖತ್ಯ, ಮಿಮಿಕ್ರಿ, ಮ್ಯಾಜಿಕ್ ಸೇರಿದಂತೆ ವೈವಿಧ್ಯಮಯ ಸಾಂಸ್ದೖತಿಕ ಕಾಯ೯ಕ್ರಮ ನೀಡುತ್ತಾರೆ. ಸ್ಥಳೀಯ ಕಲಾಪ್ರತಿಭೆಗಳು ಕೂಡ ನೂರಾರು ಸಂಖ್ಯೆಯಲ್ಲಿ ಕಲಾಸಂಭ್ರಮ ವೇದಿಕೆ ಹತ್ತಿ ತಮ್ಮ ಸುಪ್ತ ಪ್ರತಿಭೆಯನ್ನು ಬೖಹತ್ ವೇದಿಕೆಯಲ್ಲಿ ಅನಾವರಣಗೊಳಿಸುವುದನ್ನು ನೋಡುವುದೇ ಸೊಗಸು.

ಪೆಂಡಾಲ್ ಹೊರಗಡೆ ಮಳೆ ಬರುತ್ತಿದ್ದರೂ, ಒಳಗಡೇ ಮೈ ಕೊರೆಯುವ ಛಳಿಯಿದ್ದರೂ ಪ್ರೇಕ್ಷಕರು ಹಾಯಾಗಿ ಕುಳಿತು ಝಗಮಗಿಸುವ ಬೆಳಕಿನ ವಿಶಾಲವಾದ ವೇದಿಕೆಯಲ್ಲಿ ನಡೆಯುವ ಕಾಯ೯ಕ್ರಮ ವೀಕ್ಷಿಸುತ್ತಿದ್ದರು. ದೂರದೂರುಗಳಿಂದಲೂ ಪ್ರೇಕ್ಷಕರು ದಸರಾ ಕಾಯ೯ಕ್ರಮ ವೀಕ್ಷಿಸಲು ಬರುತ್ತಿದ್ದರು. ಸ್ಥಳೀಯ ಚಾನಲ್ ಗಳು ಕಾಯ೯ಕ್ರಮದ ನೇರ ಪ್ರಸಾರದ ಮೂಲಕ ಜಿಲ್ಲೆಯಾದ್ಯಂತ ಮಡಿಕೇರಿ ದಸರಾ ಸಂಭ್ರಮವನ್ನು ಮನೆಮನೆಗಳಿಗೆ ತಲುಪಿಸುತ್ತಿದ್ದವು.

ಅಂತೆಯೇ, ಮಹಿಳಾ ದಸರಾ, ಮಕ್ಕಳ ದಸರಾ, ಜಾನಪದ ದಸರಾ, ಯುವದಸರಾ ಕೂಡ ಇದೇ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿಸಲ್ಪಡುತ್ತಿದ್ದವು. ನೂರಾರು ಮಕ್ಕಳು ಪಾಲ್ಗೊಳ್ಳುತ್ತಿದ್ದ ಮಕ್ಕಳ ಸಂತೆ, ಮಕ್ಕಳೇ ರಚಿಸುವ ಮಂಟಪ, ಛದ್ನವೇಶ ಸ್ಪಧೆ೯, ವಿಜ್ಞಾನ ಪ್ರಾತಕ್ಷಿಕೆಯ ಸ್ಪಧೆ೯ಗಳೂ ಕೂಡ ಮಕ್ಕಳ ದಸರಾ ವಿಶೇಷ. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮಕ್ಕಳ ದಸರಾವನ್ನು ಅಚ್ಚುಕಟ್ಟಾಗಿ ಆಯೋಜಿಸುತ್ತಾ ಬಂದಿತ್ತು.

ಮಹಿಳಾ ದಸರಾ .. ಜಿಲ್ಲೆಯ ಮಹಿಳೆಯರ ಸಂಭ್ರಮಕ್ಕೆ ಸಾಕ್ಷಿ. ಮಹಿಳಾಮಣಿಗಳು ಛದ್ನವೇಷ, ಮೆಹಂದಿ ಹಾಕುವುದು, ಮಡಕೆ ಒಡೆಯುವುದು, ಹಗ್ಗಜಗ್ಗಾಟ ಸೇರಿದಂತೆ ಹತ್ತು ಹಲವಾರು ಸ್ಪಧೆ೯ಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇಡೀ ದಿನ ಮಹಿಳೆಯರ ಸಡಗರ ಗಾಂಧಿ ಮೈದಾನದಲ್ಲಿ ಕಂಡು ಬರುತ್ತಿತ್ತು.

ಯುವದಸರಾ ಸಂಭ್ರಮ ಮತ್ತೊಂದು ಮಜಲನ್ನು ಮಡಿಕೇರಿ ದಸರಾಕ್ಕೆ ನೀಡುತ್ತಾ ಬಂದಿತ್ತು. ಯುವಕ,ಯುವತಿಯರು ಕಿವಿಗಡಚಿಕ್ಕುವ ಸಂಗೀತಕ್ಕೆ ತಕ್ಕಂತೆ ನತಿ೯ಸುತ್ತಾ ಜೋಷ್ ನಿಂದ ಸಂಭ್ರಮಿಸುವುದನ್ನು ನೋಡುವುದೇ ಸೊಗಸು. ಯುವಕ,ಯುವತಿಯರ ಸಂಭ್ರಮ ನೋಡಲು ದೊಡ್ಡವರು ಕೂಡ ಬರುತ್ತಿದ್ದರು. ಹೀಗಾಗಿ ಪೆಂಡಾಲ್ ಫುಲ್ ಜನವೋ ಜನ..!!

ಕಳೆದ ವಷ೯ದಿಂದ ಮಡಿಕೇರಿ ದಸರಾಕ್ಕೆ ಜಾನಪದ ದಸರಾ ಕೂಡ ಸೇಪ೯ಡೆಯಾಗಿತ್ತು. ಜಿಲ್ಲಾ ಜಾನಪದ ಪರಿಷತ್ ಆಯೋಜಿತ ಜಾನಪದ ದಸರಾದಲ್ಲಿ ನಾಡಿನ ಹಲವು ಜಾನಪದ ತಂಡಗಳು ಪಾಲ್ಗೊಂಡು ಜಾನಪದ ಮೆರುಗು ತೋರುತ್ತಿದ್ದವು. ಜಾನಪದ ದಸರಾಕ್ಕೆ ಸಾಕಷ್ಟು ಪ್ರಶಂಸೆಯೂ ವ್ಯಕ್ತವಾಗಿತ್ತು.

ಆಯುಧ ಪೂಜೆಯಂದು ಮಡಿಕೇರಿ ನಗರದ ವಿವಿಧ ವಾಹನಗಳು ಅಲಂಕಾರಗೊಂಡು ಸ್ಪಧೆ೯ಯಲ್ಲಿ ಪಾಲ್ಗೊಳ್ಳುತ್ತಿದ್ದವು.

ಇದೇ ಗಾಂಧಿ ಮೈದಾನದಲ್ಲಿಯೇ ದಸರಾ ಕ್ರೀಡೆಗಳು ಕೂಡ ನಡೆಯುತ್ತಿದ್ದವು. ವಿಶೇಷವಾಗಿ ದಸರಾ ಕಬ್ಬಡಿ ನೋಡಲು ಜನಸಾಗರವೇ ಬರುತ್ತಿತ್ತು. ಮ್ಯಾರಥಾನ್ ಸೇರಿದಂತೆ ವಿವಿಧ ಕ್ರೀಡಾಕೂಟಗಳು ದಸರಾ ಕ್ರೀಡಾ ಹಬ್ಬದ ಆಕಷ೯ಣೆಯಾಗಿದ್ದವು.

ದಸರಾ ಸಂದಭ೯ ಕವಿಗೋಷ್ಟಿಯಲ್ಲಿ ವಿವಿಧ ಭಾಷೆಗಳ ಹಲವಾರು ಕವಿಗಳು ಪಾಲ್ಗೊಂಡು ಸುಂದರವಾದ ಕವನ ವಾಚಿಸಿ ಸಾಹಿತಿಗಳ ಸಂಭ್ರಮಕ್ಕೆ ಕಾರಣರಾಗುತ್ತಿದ್ದರು. ಜಿಲ್ಲೆಯ ಪತ್ರಕತ೯ರೇ ಕವಿಗೋಷ್ಟಿಯನ್ನು ನಿವ೯ಹಿಸುತ್ತಿದ್ದದ್ದು ಪತ್ರಕತ೯ರಿಗೆ ದಸರಾ ಸಮಿತಿ ನೀಡಿದ ಮನ್ನಣೆಯಾಗಿತ್ತು. ಕವನ ಸಂಕಲನ ಕೂಡ ಪ್ರಕಟವಾಗುತ್ತಿತ್ತು.

ಇದು ಕಳೆದ ವಷ೯ದವರೆಗಿನ ದಸರಾ ಕಥೆ.
…….

ಈ ಬಾರಿ ಜನೋತ್ಸವ ಮಡಿಕೇರಿ ದಸರಾದ ಸಂಭ್ರಮವೇ ಕೋರೋನಾ ಪಾಲು..

ದಸರಾ ಸಂಭ್ರಮದಲ್ಲಿರಬೇಕಾಗಿದ್ದ ಗಾಂಧಿ ಮೈದಾನ ಬಿಕೋ ಎನ್ನುತ್ತಿದೆ. ಬಣ್ಣ ಬಣ್ಣದ ದೀಪಗಳಿಂದ ವಿಜೖಂಭಿಸಬೇಕಾಗಿದ್ದ ವೇದಿಕೆ ಕತ್ತಲ ಕೂಪದಲ್ಲಿದೆ. ಕಲಾ ಪ್ರದಶ೯ನವೇ ಇಲ್ಲದ ಮೇಲೆ ವೇದಿಕೆಗೆ ಇಟ್ಟಿರುವ ಕಲಾಸಂಭ್ರಮ ಹೆಸರಿಗೆ ಅಥ೯ವಾದರೂ ಎಲ್ಲಿದೆ.?!!

ವೇದಿಕೆಯ ಪಕ್ಕದಲ್ಲಿನ ನತ೯ಕಿಯರ ಶಿಲ್ಪಗಳು ಈ ವಷ೯ ನಮ್ಮನ್ನೇ ನೋಡಿ ಆನಂದಿಸಿ ಎಂದು ಅಣಕಿಸುತ್ತಿರುವಂತಿದೆ.

ವೈವಿಧ್ಯಮಯ ಸಂಗೀತದ ಇಂಪು ಕೇಳಬೇಕಾದ ಸ್ಥಳದಲ್ಲಿ ಗಾಡಮೌನ ನೆಲಸಿದೆ. ಜನರು ತುಂಬಿ ತುಳುಕುತ್ತಿದ್ದ ಸ್ಥಳ ಈಗ …ಖಾಲಿ ಖಾಲಿ..

ಎಲ್ಲಾ ಸಂಭ್ರಮ, ಸಡಗರವನ್ನೂ ಮಡಿಕೇರಿಯಲ್ಲಿಯೂ ಕೋರೋನಾ ಎಂಬ ಕಣ್ಣಿಗೆ ಕಾಣದ ಸೋಂಕು ಈ ವಷ೯ ಆಪೋಷನ ತೆಗೆದುಕೊಂಡಿದೆ…

ಹೀಗಾಗಿ, ದಸರಾದ ವಿವಿಧ ಸಮಿತಿಗಳಂತೆಯೇ ಸಾಂಸ್ಕೖತಿಕ ಸಮಿತಿಯ ಪಾಲಿಗೆ ಈ ವಷ೯ ದಸರಾ ಕಳೆಯಿಲ್ಲ. ನಮಗೆ ಮೊದಲು ಅವಕಾಶ ನೀಡಿ ಎಂದು ಜಗಳ ಆಡುವ ಕಲಾವಿದರು ಇಲ್ಲ.

( ದಸರಾ ಸಂದಭ೯ ಸಾಂಸ್ಕೖತಿಕ ಸಮಿತಿ ಅಧ್ಯಕ್ಷನಾಗಿ ನಮ್ಮ ಸಮಿತಿ ಸದಸ್ಯರು ಮತ್ತು ಕೆಲವು ಕಲಾವಿದ ಸ್ನೇಹಿತರ ನಡುವಿನ ಜಗಳ ಪ್ರಸಿದ್ದಿಯಾಗಿತ್ತು.! ವೇದಿಕೆಯಲ್ಲಿ ಜಗಳ.. ವೇದಿಕೆ ಇಳಿದ ಮೇಲೆ ಅವರಿಗೆ ಕಾಫಿ ಕುಡಿಸಿ ಕಳುಹಿಸಿ ಜಗಳ ನೆನಪಿಸಿಕೊಂಡು ಜೋರಾಗಿ ನಕ್ಕಿದ್ದೂ ಇದೆ..!ಇಂಥ ಅನೇಕ ಪ್ರಸಂಗಗಳಿಗೆ ದಸರಾ ವೇದಿಕೆಯ ತೆರೆಮರೆ ಸಾಕ್ಷಿಯಾಗಿದೆ.. ಅದೆಷ್ಟು ಜಗಳ.. ಅದೆಷ್ಟು ಸಂದಾನ.. ಅದೆಷ್ಟು ಹಠ,. ಅದೆಷ್ಟು ಮುನಿಸು,. ಅದೆಂಥಾ..ಕಿರಿಕಿರಿ.. ನಕ್ಕವರ ಜತೆ ಅತ್ತವರನ್ನೂ ನೋಡಿದ್ದೇನೆ. ಬೈಗುಳದ ಜತೆ ಶ್ಲಾಘನೆಯನ್ನೂ ನೋಡಿದ್ದೇವೆ. ಸ್ವಾಥ೯ದ ಜತೆ ತ್ಯಾಗಗುಣಕ್ಕೂ ದಸರಾ ಸಾಂಸ್ದೖತಿಕ ವೇದಿಕೆ ಸಾಕ್ಷಿಯಾಗಿದೆ…)

ಜಗಳ ಆಡೋಣ ಬನ್ನಿ ಎಂದು ಈ ಬಾರಿ ಕರೆದರೂ ಯಾರೂ ಸಿದ್ದರಿಲ್ಲ. ಯಾರಿಗೂ ಜಗಳ ಬೇಕಿಲ್ಲ. ಬೇಕಿರುವುದು ಶಾಂತಿ., ನೆಮ್ಮದಿ ಮತ್ತು ಆರೋಗ್ಯ..!!

ನೀವೇ ಮೊದಲು ವೇದಿಕೆಯಲ್ಲಿ ಪ್ರದಶ೯ನ ನೀಡಿ ಎಂದು ಹೇಳಿದರೂ ಕಲಾವಿದರೇ ಕಾಣುತ್ತಿಲ್ಲ. ನೋಡುಗರೇ ಬಾರದ ಮೇಲೆ ಪ್ರದಶ೯ನವಾದರೂ ಯಾರಿಗೆ?

ನೀವೆಲ್ಲಾ ಕುಣಿದದ್ದು ಸಾಕಿನ್ನು, ಕುಣಿಸುವವನು ನಾನಿನ್ನು… ಎಂದು ಮಾರಕ ಕೋರೋನಾ ವೈರಸ್ ಕೆಟ್ಟ ಎಚ್ಚರಿಕೆಯ ಸಂದೇಶ ನೀಡಿದಂತಿದೆ.

ದಸರಾ ದಿನಗಳಲ್ಲಿ ಮಡಿಕೇರಿಯ ರಸ್ತೆ ಬದಿಗಳಲ್ಲಿ ನೂರಾರು ಸಂಖ್ಯೆಯಲ್ಲಿ ಟ್ಯೂಬ್ ಲೈಟ್ ಗಳು ಬೆಳಕು ಬೀರುತ್ತಿದ್ದವು. ದೇವಿಯರ ಚಿತ್ರಣವಿರುವ ಬಣ್ಣದ ಲೈಟಿಂಗ್ ಗಳು ಗಮನ ಸೆಳೆಯುತ್ತಿದ್ದವು. ಕಡ್ಲೆಕಾಯಿ, ಕಡ್ಲೇಪುರಿ, ಪಾನಿಪುರಿ, ಚಿಪ್ಸ್, ಬಳೆ, ತುತ್ತೂರಿ ಸೇರಿದಂತೆ ವೈವಿಧ್ಯಮಯ ತಿಂಡಿ, ವಸ್ತುಗಳು, ಆಟಿಕೆಗಳ ಬೀದಿ ಬದಿ ವ್ಯಾಪಾರಸ್ಥರು ಅನೇಕರ ಪಾಲಿಗೆ ಮಾಲ್ ಗಳಿಗಿಂತ ಪ್ರಮುಖವಾಗಿದ್ದವು.

ಮಳೆಗಾಲ ಮುಗಿಯುತ್ತಿದ್ದಂತೇ ಕಾಲಿಡುತ್ತಿದ್ದ ನವರಾತ್ರಿಯ ಸಂದಭ೯ದಲ್ಲಿ ಮಡಿಕೇರಿಯ ವ್ಯಾಪಾರಸ್ಥರು ಮಳೆ ದಿನಗಳಲ್ಲಿನ ನಷ್ಟವನ್ನು ಒಂದಿಷ್ಟು ವ್ಯಾಪರದ ಮೂಲಕ ಸರಿದೂಗಿಸಿಕೊಳ್ಳುತ್ತಿದ್ದರು. ದಸರಾ ದಿನ ಸಾವಿರಾರು ಪ್ರವಾಸಿಗರೂ ಮಡಿಕೇರಿಗೆ ಬರುತ್ತಿದ್ದರು. ವ್ಯಾಪಾರ ವಹಿವಾಟು ಕೂಡ ಎಲ್ಲಾ ರಂಗಗಳವರಿಗೆ ಚೆನ್ನಾಗಿರುತ್ತಿತ್ತು. ಬೀದಿ ಬದಿ ಹೊಟೇಲ್ ನಿಂದ ರೆಸಾಟ್೯ನವರೆಗೂ ದುಡ್ಡು ಕಾಣುತ್ತಿದ್ದದ್ದು ದಸರಾ ದಿನಗಳಲ್ಲಿಯೇ., ಎಲ್ಲಾ ವಹಿವಾಟಿಗೂ ಸಣ್ಣ ವೈರಸ್ ದೊಡ್ಡ ಹೊಡೆತ ನೀಡಿದೆ. ದುಸ್ಥಿತಿಯತ್ತ ಮಂಜಿನ ನಗರಿ ಸಾಗುತ್ತಿದೆ.

ದಸರಾ ಹೊತ್ತಲ್ಲಿ. ಮಡಿಕೇರಿ ರಸ್ತೇಲೀ.. ಮಂಜಿನ ಹೊದಿಕೇಲಿ.. ಹೆಜ್ಜೆ ಹಾಕುತ್ತಾ.. ಹಾಕುತ್ತಾ ಸಾಗುತ್ತಿದ್ದರೆ.. ಜೀವನ ಸಡಗರದ ರಂಗೇ ಬೇರೆ..

ಈ ವಷ೯ ಆ ಸಂಭ್ರಮವೇ ಇಲ್ಲ. ವಿಷಾಧವೇ ಎಲ್ಲ..

ಕಲಾಸಂಭ್ರಮ ವೇದಿಕೆ ಮುಂಬದಿ ಕೂರುತ್ತಾ ಆಗಾಗ್ಗೆ ದೊಡ್ಡ ಹೊಟ್ಟೆ ಹಿಡಿದು ನಗುತ್ತಿದ್ದ ಎಂ.ಎ.ಉಸ್ಮಾನ್ ಭಾಯಿಯಂಥವರು ದಸರಾ ಹೋಗಲಿ.. ಲೋಕದಿಂದಲೇ ನಿಗ೯ಮಿಸಿದ್ದಾರೆ. ಆಟಿ೯ಸ್ಟ್ ಗಳಿಗೆ ಕಾಫಿ ಕಳುಹಿಸಲಾ ಎಂದು ಕೇಳುತ್ತಿದ್ದ ಉಡುಪಿ ಗಾಡ್೯ನ್ ರೆಸ್ಟೋರೆಂಟ್ ಮಣಿ ಕೂಡ ಇನ್ನು ನಾನಿಲ್ಲ ಎಂಬಂತೆ ಮರಳಿ ಬಾರದೂರಿಗೆ ಸಾಗಿಬಿಟ್ಟಿದ್ದಾರೆ. ದಸರಾ ಮುಂಚೆಯೇ ಅನೇಕರನ್ನು ಕಳೆದುಕೊಂಡು ಬಿಟ್ಟಿದ್ದೇವೆ. ಇನ್ನೆಲ್ಲಿಯ ಸಂಭ್ರಮ.?

ಮಡಿಕೇರಿಯ ಕರಗ ದೇವತೆಯರಿಗೆ ಊರ ಪ್ರಮುಖರು ಕೋರೋನಾ ಸಂಕಟದ ಮಧ್ಯೆ ಪೂಜೆ ಸಲ್ಲಿಸಿದ್ದು ಒಂದಿಷ್ಟು ನೆಮ್ಮದಿ ತರುತ್ತಿದೆ. ಕರಗ ದೇವಿಯರು ಹಿಂದಿನ ಕಾಲದಲ್ಲಿ ಮಹಾಮಾರಿಯಿಂದ ಮಡಿಕೇರಿಯನ್ನು ರಕ್ಷಿಸಿದ್ದರು. ಈಗ ಮತ್ತೊಮ್ಮೆ ನಾಲ್ಕು ಶಕ್ತಿದೇವತೆಗಳಿಗೆ ಕೋರೋನಾ ಮಹಾಮಾರಿಯಿಂದ ನಗರ ರಕ್ಷಿಸುವ ಹೊಣೆಯಿದೆ.

ಈ ವಷ೯ ಕೋರೋನಾ ಎಂಬ ವೈರಾಣು ನೂರಾರು ರಾಕ್ಷಸರ ರೂಪದಲ್ಲಿ ಜಗತ್ತಿನಲ್ಲಿ ಅವತರಿಸಿದೆ.

ನವದುಗಿ೯ಯರು, ಕರಗ ದೇವತೆಯರು ಈ ರಕ್ಕಸನನ್ನು ಸವ೯ನಾಶ ಮಾಡಬೇಕಾಗಿದೆ. ಜಗತ್ ಶಕ್ತಿ ತಾವೆಂದು ನಿರೂಪಿಸಬೇಕಾಗಿದೆ.

ವಿಜಯದಶಮಿ..ಈ ವಷ೯ ಖಂಡಿತವಾಗಿಯೂ ಕೋರೋನಾ ವಿರುದ್ದದ ಸಮರವಾಗಿದೆ.

ದೇವಾನು ದೇವತೆಯರು ಅವರ ಕಾಯ೯ ಯಶಸ್ವಿಯಾಗಿ ನಿವ೯ಹಿಸುತ್ತಾರೆ ಎಂಬ ನಂಬಿಕೆಯಿದೆ.

ಮನುಜರಾಗಿ ನಾವು ನಮ್ಮ ಹೊಣೆ ತೋರಬೇಕಾಗಿದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಸರ್ ಬಳಸುತ್ತಾ ರಕ್ಕಸೀ ಶಕ್ತಿಗಳು ನಮ್ಮ ಬಳಿ ಬಾರದಂತೆ ಗಮನ ಹರಿಸಲೇಬೇಕಾಗಿದೆ.

ಈ ವಿಜಯದಶಮಿ..ಕೋರೋನಾ ವಿರುದ್ದ ಮನುಜಕುಲ ವಿಜಯ ಸಾರುವುದರ ಪ್ರತೀಕವಾಗಲಿ….ನಿಮ್ಮ ಹಾರೈಕೆಯೂ ಇದೇ ಆಗಿರಲಿ..

Team Newsnap
Leave a Comment
Share
Published by
Team Newsnap

Recent Posts

ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿ : ಸಿ.ಎಂ.ಸಿದ್ದರಾಮಯ್ಯ

ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More

September 21, 2024

10 ವರ್ಷದ ಬಾಲಕ ಹೃದಯಘಾತದಿಂದ ಸಾವು

ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್‌… Read More

September 21, 2024

ಮೈಸೂರು ದಸರಾ ಆನೆಗಳ ನಡುವೆ ಗುದ್ದಾಟ ಆತಂಕದಲ್ಲಿ ದಿಕ್ಕಾಪಾಲಾದ ಜನರು

ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More

September 21, 2024

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024