July 30, 2025

Newsnap Kannada

The World at your finger tips!

sonusudha

ತಾಯಿಯ ಸ್ಮರಣಾರ್ಥ ಐಎಎಸ್​ ಆಕಾಂಕ್ಷಿಗಳ ನೆರವಿಗೆ ನಿಂತ ನಟ ಸೋನು ಸೂದ್

Spread the love

ಕೊರೋನಾ ಸಂದರ್ಭದಲ್ಲಿ ಲಕ್ಷಾಂತರ ಜನರ ಕಷ್ಟಕ್ಕೆ ಸ್ಪಂದಿಸಿ, ವಲಸೆ ಕಾರ್ಮಿಕರು, ವಿದೇಶದಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ತಮ್ಮ ಊರು ಸೇರುವಂತೆ ಮಾಡಿದ್ದ ಬಾಲಿವುಡ್ ನಟ ಸೋನು ಸೂದ್ ಇದೀಗ ಮತ್ತೊಮ್ಮೆ ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ.

ಭಾರತದಲ್ಲಿ ಬಡತನದ ಕುಟುಂಬದಿಂದ ಬಂದ ವಿದ್ಯಾರ್ಥಿಗಳು ಐಎಎಸ್​ ತರಬೇತಿ ಪಡೆಯಲು ಇಚ್ಛಿಸಿದರೆ ಅವರ​ ಶಿಕ್ಷಣದ ಖರ್ಚಿನ ಸಂಪೂರ್ಣ ಜವಾಬ್ದಾರಿಯನ್ನು ಹೊರಲು ಸೋನು ಸೂದ್ ಮುಂದಾಗಿದ್ದಾರೆ.

ಸೋನು ಸೂದ್ ಅವರ ತಾಯಿ ಪ್ರೊ.. ಸರೋಜ್ ಸೂದ್ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಬಡಮಕ್ಕಳಿಗೆ ಉಚಿತವಾಗಿ ಪಾಠ ಕೇಳಿಕೊಡುತ್ತಿದ್ದರು. ಈಗ ಅವರು ಜೀವಂತವಾಗಿಲ್ಲ. ಹೀಗಾಗಿ, ತಾಯಿಯ ನೆನಪಿನಲ್ಲಿ ದೇಶದ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್​ಶಿಪ್ ನೀಡಲು ಸೋನು ಸೂದ್ ನಿರ್ಧರಿಸಿದ್ದಾರೆ.

ಸೋನು ಸೂದ್ ತಮ್ಮ ತಾಯಿಯ 13ನೇ ವರ್ಷದ ಪುಣ್ಯತಿಥಿ ಪ್ರಯುಕ್ತ ಐಎಎಸ್​ ಆಕಾಂಕ್ಷಿಗಳಿಗೆ ಸಹಾಯ ಮಾಡಲು ಪ್ರೊ. ಸರೋಜ್ ಸೂದ್ ಸ್ಕಾಲರ್​ಶಿಪ್ ಅನ್ನು ಆರಂಭಿಸಿದ್ದಾರೆ.

ಈ ಸ್ಕಾಲರ್​​ಶಿಪ್ ಮೂಲಕ ಆರ್ಥಿಕವಾಗಿ ಹಿಂದುಳಿದಿರುವ ಐಎಎಸ್​ ಆಕಾಂಕ್ಷಿಗಳು ತಮ್ಮ ಗುರಿಯನ್ನು ಮುಟ್ಟಬಹುದು. ಈ ಮೂಲಕ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮತ್ತು ಕ್ಯಾಂಪಸ್ ಕೋರ್ಸ್‌ಗಳಿಗೆ ಸ್ಕಾಲರ್​ಶಿಪ್ ಲಭ್ಯವಾಗಲಿದೆ. ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ನಟ ಸೋನು ಸೂದ್ ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 13ಕ್ಕೆ ನನ್ನ ತಾಯಿ ಸರೋಜ್ ಸೂದ್ ನಮ್ಮನ್ನು ಅಗಲಿ 13 ವರ್ಷಗಳಾಗುತ್ತದೆ. ಅವರು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಬಡ ವಿದ್ಯಾರ್ಥಿಗಳಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಐಎಎಸ್ ಆಕಾಂಕ್ಷಿಗಳು ತಮ್ಮ ಗುರಿಯನ್ನು ಮುಟ್ಟಲು ಪ್ರೊ. ಸರೋಜ್ ಸೂದ್ ಸ್ಕಾಲರ್​ಶಿಪ್ ಉಪಯೋಗವಾಗುತ್ತದೆ ಎಂಬ ನಂಬಿಕೆ ನನ್ನದು. ನನ್ನ ಈ ಹೊಸ ಹೆಜ್ಜೆಗೆ ತಾಯಿಯ ಆಶೀರ್ವಾದ ಇರುತ್ತದೆ ಎಂದು ಭಾವಿಸಿದ್ದೇನೆ. ಮಿಸ್ ಯು ಅಮ್ಮ ಎಂದು ಸೋನು ಸೂದ್ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಕೊರೋನಾದಿಂದಾಗಿ ವಿದ್ಯಾರ್ಥಿಗಳಿಗೆ ಆನ್​ಲೈನ್ ತರಗತಿ ನಡೆಸಲಾಗುತ್ತಿತ್ತು. ಆದರೆ, ಹಳ್ಳಿಗಳ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗುತ್ತಿತ್ತು. ಹೀಗಾಗಿ, ಇತ್ತೀಚೆಗಷ್ಟೇ ಸೋನು ಸೂದ್ ಹರಿಯಾಣದ ಹಳ್ಳಿಯ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಫೋನ್‌ಗಳನ್ನು ಕಳುಹಿಸುವ ಮೂಲಕ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಹಾಯ ಮಾಡಿದ್ದರು. ಹಾಗೇ, ಜೆಇಇ ಮತ್ತು ನೀಟ್ ಆಕಾಂಕ್ಷಿಗಳಿಗೆ ಕೂಡ ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಲು ಸಹಾಯ ಮಾಡಿದ್ದರು. ಈ ಮೂಲಕ ಎಲ್ಲರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು.

error: Content is protected !!