January 10, 2025

Newsnap Kannada

The World at your finger tips!

ravindra kavan

ಸರಳ ಸಹಜ ಸುಂದರ ಲಹರಿಯ ಆದಿಯ ನೆಟ್ಟಿನ ಪಾಠ (ಪುಸ್ತಕ ಪರಿಚಯ)

Spread the love

ಮಕ್ಕಳ ಸಾಹಿತ್ಯ ಎಂದಾಕ್ಷಣ ಅದೇನೋ ಸುಲಭದ್ದು ಮತ್ತು ಮಹತ್ವದ್ದಲ್ಲ ಎನ್ನುವ ಭಾವನೆ ಸಾಮಾನ್ಯವಾಗಿ ಬೇರೂರಿದೆ. ಆದರೆ ಮಕ್ಕಳ ಸಾಹಿತ್ಯ ರಚನೆ ಅದನ್ನು ಓದುವಷ್ಟು ಸುಲಭವಲ್ಲ. ಸರಳವಾಗಿರುವುದು ಹೇಗೆ ಕಷ್ಟವೋ ಸರಳವಾಗಿ ಬರೆಯುವುದೂ ಅಷ್ಟೇ ಕಷ್ಟ.


ಶ್ರೀ ಬಿ.ಎಸ್.ರವೀಂದ್ರ 40 ವರುಷಗಳ ಸುದೀರ್ಘ ಕಾಲ ಭಾರತೀಯ ಸ್ಟೇಟ್ ಬ್ಯಾಂಕಿನ ಅಧಿಕಾರಿಯಾಗಿ, ಸಂಘಟನೆಯಲ್ಲಿ ದೊಡ್ಡ ಹುದ್ದೆಯಲ್ಲಿ ಸಕ್ಷಮವಾಗಿ ಕಾರ್ಯನಿರ್ವಹಿಸಿ ನಿವೃತ್ತರಾದವರು. ತಮ್ಮ ನಿರಂತರ ಬರವಣಿಗೆ ಮತ್ತು ಹತ್ತು ಹಲವು ವಿಶಿಷ್ಟ ಸಾಹಿತ್ತಿಕ ಕಾರ್ಯಕ್ರಮಗಳ ಆಯೋಜನೆಗಳ ಮೂಲಕ ಸಾಹಿತ್ಯ ಸೇವೆಯಲ್ಲಿ ತೊಡಗಿದ್ದಾರೆ. ಅನೇಕ ಲೇಖನ, ಕವನಗಳನ್ನು ಬರೆದಿರುವ ಇವರು ಶೂನ್ಯವಲ್ಲದೆ ಬೇರೆ ಎಂಬ ಕವನಸಂಕಲನ, ಶ್ರೀ ಆರ್.ಎನ್.ಗೊಡಬೊಲೆ ಹೋರಾಟದ ಹಾದಿ ಎಂಬ ಜೀವನ ಚರಿತ್ರೆ, ಅರಳು ಮಲ್ಲಿಗೆ ಅರಳು ಎಂಬ ಮಕ್ಕಳ ವ್ಯಕ್ತಿತವ ವಿಕಸನ ಪುಸ್ತಕಗಳನ್ನು ತಂದಿದ್ದಾರೆ. ಮೋದಕ(ಕವನ ಸಂಕಲನ) ಸರಸಮ್ಮನ ಸತ್ಕಾರ ಸರಪಳಿಗೆ ನಮಸ್ಕಾರ (ವಿವಿಧ ಕವಿಗಳ ಕವನ ಸಂಕಲನ) ಸಾಹಿತ್ಯ ಸಿರಿ, ಸಾಹಿತ್ಯ ಮಂದಾರ ಇವರ ಸಂಪಾದಿಕ ಕೃತಿಗಳು.


ಎಂ.ಎಸ್ಸಿ ಮಾಡಿದ ಉಪನ್ಯಾಸಕ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪಾಠ ಮಾಡಬಹುದು. ಆದರೆ ಅವರು ನರ್ಸರಿಯೋ ಒಂದೆರಡು ಮೂರನೇ ತರಗತಿಯಲ್ಲಿ ಓದುವ ಮಕ್ಕಳಿಗೆ ಪಾಠ ಮಾಡಲು ತಿಣುಕುತ್ತಾರೆ. ಆಂದರೆ ಮಕ್ಕಳಿಗೆ ಅರ್ಥವಾಗಲು ಅವರ ನೆಲೆಯಲ್ಲಿ ನಿಂತು ಯೋಚಿಸಬೇಕು; ಮಕ್ಕಳೇ ಆಗಿಬಿಡಬೇಕು.
ಶ್ರೀ. ಬೆಂ.ಶ್ರೀ. ರವೀಂದ್ರ ಅವರು ಮಕ್ಕಳ ಮನಸ್ಸನ್ನು ಆವಾಹಿಸಿಕೊಂಡು ಮನದಲ್ಲಿ ಅವರಂತೆಯೇ ಆಡುತ್ತ ನಲಿಯುತ್ತ ಮಕ್ಕಳಿಗೆ ಪ್ರಿಯವಾಗುವ ಹಾಗೆ ಪದ್ಯಗಳನ್ನು ರಚಿಸಿದ್ದಾರೆ.


ಹಾಗೆಂದ ಮಾತ್ರಕ್ಕೆ ಅವು ಕೇವಲ ನಲಿಯುವ ಪದ್ಯಗಳು ಮಾತ್ರವಲ್ಲ, ಮನವ ಅರಳಿಸುವ ಪದ್ಯಗಳೂ ಹೌದು. ಕೆಲವೊಮ್ಮೆ ಬದುಕಿನ ಸಂಕೀರ್ಣ ಸಂಗತಿಗಳನ್ನು ಸರಳವಾಗಿ ಕಣ್ಮುಂದೆ ಮಿಂಚಿನಂತೆ ಹೊಳೆಯಿಸುತ್ತವೆ.
ಬೆಕ್ಕಿಗೆ ಹಾಲು ಕೊಡುವೆ
ನಾಯಿಗೆ ಅನ್ನ ಇಡುವೆ
ಎನ್ನುವ ಆದಿಯ ಅಪೀಲು ಮುಗ್ದ ಮನದ ಜೀವದಯೆಯ ಚಿತ್ರಣವನ್ನೂ ಮಕ್ಕಳಿಂದ ನಿವ್ರ್ಯಾಜವಾಗಿ ಪ್ರೀತಿಸುವುದನ್ನು ದೊಡ್ಡವರು ಕಲಿಯಬೇಕೆನ್ನುವುದನ್ನು ತೋರಿದೆ.

ಹಾಗೂ ಹೀಗೂ ನಾಯಿಗೀಗ
ನೂರಾರು ಹೆಸರು
ಕುಯ್ಯಂತ ಕತ್ತಾಡಿಸೋದೆ
ಅದರ ಬೆರಗು
ಈ ಸಾಲುಗಳು ಸಾಮಾನ್ಯ ಸಂಗತಿಯಂತೆ ತೋರಿದರೂ ಯಾವ ಹೆಸರಿನಿಂದ ಕರೆದರೂ ವ್ಯಕ್ತಿತ್ವ ಬದಲಾಗದು ಎನ್ನುವ ಮಹತ್ ತತ್ತ್ವವನ್ನು ಎತ್ತಿಹಿಡಿಯುತ್ತದೆ. ”a rose by any other name would smell as sweet’. ಎನ್ನುವ ಆಂಗ್ಲ ಕವಿಯ ಸಾಲುಗಳನ್ನು ನೆನಪಿಸುತ್ತದೆ.

‘ಗುರುವಿನ ಮೇಕೆ’ ಪದ್ಯ ಪಂಚತಂತ್ರದ ಕತೆಯಾಧಾರಿತ. ಮೇಕೆ ಹೊತ್ತು ನಡೆಯುತ್ತಿದ್ದ ವ್ಯಕ್ತಿಯನ್ನು ಮೂವರು ಕಪಟಿಗಳು ಏಮಾರಿಸಿ ಮಂಕುಮಾಡಿ ಅದನ್ನು ಲಪಟಾಯಿಸಿದ ಕಥೆಯನ್ನು ಪದ್ಯವನ್ನಾಗಿಸಿ ಕೊನೆಗೆ ಜೀವನಕ್ಕೆ ಬೇಕಾದ ಸಂದೇಶವನ್ನೂ ನೀಡುತ್ತದೆ :
ನಂಬದಿರಿ ಅವರಿವರ ಮಾತು
ಪರಿಶೀಲಿಸಿ ನೀವೇ ಸತ್ಯವನು
ಮರುಳಾಗದಿರಿ ಮೋಸಗಾರರ
ಬೆರಗು ಬಿನ್ನಾಣ ಕಪಟ ನುಡಿಗೆ

‘ಹಾಳೂರ ಕೊಂಪೆ’ ಪದ್ಯದ ಕೊನೆಯ ಸಾಲುಗಳು:
ಚಿಕ್ಕವರೆಂದು ಭ್ರಮಿಸಬೇಡ
ಎಲ್ಲರಿಗುಂಟು ಅಮಿತ ಶಕ್ತಿ
ಸಮಯದಲಿ ಅರಳಿ ಬೆಳಗಿ
ಜಗಕೆ ಹಿತವನು ಮಾಳ್ಪುದು

ನೇರವಾಗಿ ಉಪದೇಶ ಎಂದು ಹೇಳಿದರೆ ಅದನ್ನು ಕೇಳಿಸಿಕೊಳ್ಳಲೇ ಹೋಗುವುದಿಲ್ಲ ಬಹುತೇಕರು. ಜಾಣತನದಿಂದ ಕಥೆಯ ಮೂಲಕವೋ, ಕವನದ ಮೂಲಕವೋ ಹೇಳಿದರೆ ಹೃದಯ ಮುಟ್ಟುತ್ತದೆ. ಅದೇ ಸಾಹಿತ್ಯದ ಆಶಯವೂ. ಬೆಂ.ಶ್ರೀ.ರವೀಂದ್ರ ಅವರೂ ಇದನ್ನೇ ‘ಕಪಟಿ ಬೆಕ್ಕು’ ‘ದೊಡ್ಡವರ ಮಾತು’ ‘ಮಾತನಾಡಿದ ಗುಹೆ’ ಕವನಗಳು ಮಾಡಿರುವುದು.

‘ಆದಿಯ ಹೋಳಿ’ ಪದ್ಯದ ಈ ಸಾಲುಗಳು ಸಾಂಸಾರಿಕ ಬದುಕಿನಲ್ಲಿ ಮಕ್ಕಳ ಪಾತ್ರ ಮತ್ತು ಆಸೆಗಳನ್ನು ಬಲು ಸೊಗಸಾಗಿ ಚಿತ್ರಿಸಿವೆ:
ಅಮ್ಮ ನೀನು ಅಪ್ಪನ ನಗಿಸು
ಅವಿತು ಬರುವೆನು ನಾನಲ್ಲಿ
ಹೊಸ ಬಟ್ಟೆಗೆ ರಂಗನು ಸುರಿದು
ಚಪ್ಪಾಳೆ ಹೊಡೆಯುತ ಓಡುವೆನು
ನಿತ್ಯ ಜಂಜಡದ ಬದುಕಿನಲ್ಲಿ ಅಮ್ಮ ಅಪ್ಪನನ್ನು ನಗಿಸಬೇಕೆಂದು ಮಕ್ಕಳು ಆಶಿಸುವುದು ಸಂಸಾರದಲ್ಲಿ ಅನ್ಯೋನ್ಯತೆಯ ಸಂಕೇತವಾಗಿ ಮಿಂಚುತ್ತದೆ.

ಬೀ.ಚಿ ಅವರಿಗೆ ತಿಂಮ ಹೇಗೋ, ಎಂ.ಎಸ್.ಎನ್ ಅವರಿಗೆ ವಿಶ್ವ ವಿಶಾಲು ಹೇಗೋ ಬೆಂ.ಶ್ರೀ ಅವರಿಗೆ ಆದಿಯೂ ಹಾಗೆ. ಅವರ ಮಕ್ಕಳು ಓದುವ ಪದ್ಯದ ಹೀರೋ. ಆದಿಯ ಬೇಸಗೆಯ ಪ್ಲಾನು, ಆದಿಯ ಹುಟ್ಟುಹಬ್ಬ, ಆದಿಯ ಪ್ರವಾಸ, ಆದಿಯೂ ನೆಟ್ಟಿನ ಪಾಠವೂ… ಹೀಗೆ ಆದಿ ಮೊದಲಾಗಿ ಬಹುಕಡೆ ಅವನೇ..
ಶೀರ್ಷಿಕೆ ಪದ್ಯ ‘ಆದಿಯೂ ನೆಟ್ಟಿನ ಪಾಠವೂ’ ದಲ್ಲಿ
ನೆಟ್ಟಿನ ಕ್ಲಾಸು ಆಗದು ನೆಟ್ಟಗೆ
ಕಾಣದ ಮಿಸ್ಸು ಗಮನ ಸೊಟ್ಟಗೆ
ಫ್ರೆಂಡಿಲ್ಲದ ಬದುಕು ಬಿಮ್ಮಗೆ
ಎನ್ನುವ ಸಾಲುಗಳು ಬದಲಾದ ಸಂದರ್ಭದಲ್ಲಿ ಮಕ್ಕಳ ಕಷ್ಟ ನಷ್ಟ ಇಷ್ಟಗಳನ್ನು ಚಿತ್ರಿಸುತ್ತದೆ. ಗುರುಗಳು ಎದುರಿಲ್ಲದ ಪಾಠ ತಲೆಗೆ ಹತ್ತುವುದು ಹೇಗೆ ಎಂಬ ಪ್ರಶ್ನೆಯನ್ನು ಎತ್ತುತ್ತದೆ. ಗೆಳೆಯರಿಲ್ಲದ ಬದುಕು ಎಷ್ಟು ನಿಸ್ಸಾರ ಎನ್ನುವುದನ್ನೂ ಸೂಕ್ಷ್ಮವಾಗಿ ಬಿಡಿಸುತ್ತದೆ. ಸರಳ ಪದಗಳಲ್ಲಿಯೇ ಗಹನ ವಿಚಾರಗಳನ್ನು ಹೇಳುವ ಶಕ್ತಿ ಬೆಂ.ಶ್ರೀ ಅವರಿಗಿದೆ ಎನ್ನುವುದನ್ನು ಈ ಪದ್ಯವೂ ಸಾಕ್ಷೀಕರಿಸುತ್ತದೆ.

‘ದೋಸೆ ದೋಸ್ತಿ’ ಓದಿದರೆ ಮಕ್ಕಳಿರಲಿ, ದೊಡ್ಡವರ ನಾಲಗೆಯಲ್ಲೂ ನೀರೂರುವುದು ಖಂಡಿತಾ. ‘ಗಾಂಧಿಯೆಂದರೆ’ ಪದ್ಯದ ಗಾಂಧಿಯೆಂದರೆ ನೀನು ನಾನಮ್ಮ ಎಂಬ ಕೊನೆಯ ಸಾಲು ಆಂತರ್ಯವ ಕಲಕಿ ನಾವು ಏನಾಗಬೇಕೆನ್ನುವುದರ ಕೈಮರದಂತಿದೆ. ಬ ಬ ಬ್ಲ್ಯಾಕ್ ಶೀಪ್ ಹ್ಯಾವ್ ಯು ಎನಿ ಊಲ್ ನಮ್ಮೆಲ್ಲರ ಬಾಲ್ಯದ ನೆಚ್ಚಿನ ಪದ್ಯ. ಅದನ್ನು ಬೆಂ.ಶ್ರೀ ಅವರು ಕನ್ನಡಕ್ಕೆ ಸುಂದರವಾಗಿ ಬ್ಯಾ ಬ್ಯಾ ಕಪ್ಪು ಕುರಿ ಅನುವಾದಿಸಿದ್ದಾರೆ.

‘ಅಮೆಜಾನ್ಗೆ ಆರ್ಡರ್’ ಪದ್ಯ ಜಾಗತೀಕರಣದ ಸಂದರ್ಭದಲ್ಲಿ ಕಳಚಿಹೋಗುತ್ತಿರುವ ಸಾಂಸ್ಕೃತಿಕ ಸಂಭ್ರಮವನ್ನು ಮತ್ತೆ ಗರಿಗೆದರಿಸಲು ಹೊರಟಂತಿದೆ.
ಮಕ್ಕಳಿಲ್ಲದ ಮನೆಯಲಿ ಬರಿ ರಾಜಾರಾಣಿ
ಅಜ್ಜ ಅಜ್ಜಿಯ ಮಾತಿಗೆ ಹಾಕಲಿ ಜಿ.ಎಸ್.ಟಿ
ಪ್ಲಾಸ್ಟಿಕ್ಕು ತೋರಣ ಹತ್ತು ಗ್ರಾಂ ಹೂರಣ
ಎಂಬೀ ಸಾಲುಗಳು ವಿಷಾದವನ್ನೂ, ವಿಡಂಬನೆಯನ್ನೂ, ನಿಟ್ಟುಸಿರನ್ನೂ, ಸದ್ಯದ ಪರಿಸ್ಥಿತಿಯನ್ನೂ ಯಥಾವತ್ತಾಗಿ ನಿರೂಪಿಸಿದೆ. ಓದಿದಷ್ಟೂ ತನ್ನನ್ನು ಮತ್ತಷ್ಟು ತೆರೆದುಕೊಳ್ಳುವ ಈ ಪದ್ಯ ಬೆಂ.ಶ್ರೀ ಅವರ ಕಾವ್ಯದ ಶಕ್ತಿಗೆ ಹಿಡಿದ ಕೈಗನ್ನಡಿ.
ಹಿರಿಯರಾದ ಬೆಂ.ಶ್ರೀ. ರವೀಂದ್ರ ಅವರ ಕನ್ನಡ ಕಟ್ಟುವ ಕೆಲಸದ ಸಾಧನೆ ಬಲು ದೊಡ್ಡದು. ಸಾಹಿತ್ಯ ರಚನೆಯಲ್ಲೂ ಎತ್ತಿದ ಕೈ. ಇದು ಬೆಂ.ಶ್ರೀ. ರವೀಂದ್ರ ಅವರ ಮಕ್ಕಳ ಪದ್ಯಗಳ ಮೊದಲ ಸಂಕಲನ. ಮೊದಲ ಪ್ರಯತ್ನದಲ್ಲೇ ಅವರು ಭರವಸೆಯನ್ನು ಮೂಡಿಸಿದ್ದಾರೆ. ಶಿಶುಸಾಹಿತ್ಯ ಕ್ಷೀಣಿಸುತ್ತಿರುವ ಕಾಲದಲ್ಲಿ ಇವರ ಪ್ರಯತ್ನ ಗಮನಾರ್ಹ.
ಬೆಂ.ಶ್ರೀ. ರವೀಂದ್ರ ಅವರ ಕನ್ನಡದ ಕೆಲಸ ಮತ್ತು ಸಾಹಿತ್ಯದ ತೇರು ಎಳೆಯುವ ಕೆಲಸ ನಿರುತವಾಗಿ ಸಾಗಲಿ ಎಂಬುದೇ ಮನದಾಳದ ಹಾರೈಕೆ.

IMG 20180306 WA0008 1 edited
ಡಾ.ಶುಭಶ್ರೀಪ್ರಸಾದ್, ಮಂಡ್ಯ
Copyright © All rights reserved Newsnap | Newsever by AF themes.
error: Content is protected !!