December 22, 2024

Newsnap Kannada

The World at your finger tips!

kargil

ಕಾರ್ಗಿಲ್ ದಿಗ್ವಿಜಯಕ್ಕೆ ರಜತದ ಸಂಭ್ರಮ

Spread the love

25 ವರ್ಷಗಳ ಹಿಂದೆ ಭಯೋತ್ಪಾದಕರ ನೆರವು ಪಡೆದು ಭಾರತವನ್ನೇ ಕಬಳಿಸಿ, ಬೆದರಿಸಲು ಹೊರಟಿದ್ದ ಪಾಕಿಸ್ತಾನದ ಸಂಚನ್ನು ವಿಫಲಗೊಳಿಸಿ ನಮ್ಮ ಭಾರತದ ಹೆಮ್ಮೆಯ ವೀರಪುತ್ರರ  ತ್ಯಾಗ, ಬಲಿದಾನ  ಜೊತೆಗೆ ವೀರಾವೇಶದಿಂದ ಹೋರಾಡಿ, ನಮ್ಮನ್ನೆಲ್ಲ ರಕ್ಷಿಸಿದ ದಿನ.

ಅಂದಿನಿಂದ   ಇಂದಿನವರೆಗೂ ಪ್ರತಿ ವರ್ಷ ಜುಲೈ 26ನ್ನು ಕಾರ್ಗಿಲ್ ದಿವಸವನ್ನಾಗಿ ಮತ್ತು ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ನಮನ ಸಲ್ಲಿಸಲು  ವಿಜಯ ದಿವಸವಾಗಿ ಆಚರಿಸಲಾಗುತ್ತದೆ.

ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲು ಆಗ ಭಾರತದ ಅಂದಿನ ಪ್ರಧಾನಿ ವಾಜಪೇಯಿ ಯವರು ಮುಂದಾದರು, ಇದರ ಪ್ರತಿಫಲವೇ 1999ರ ಫೆಬ್ರುವರಿ 20ರಂದು ಪಾಪಿ ಪಾಕಿಸ್ತಾನದ ಜೊತೆಗೆ  ಲಾಹೋರ್ ಒಪ್ಪಂದ ಮಾಡಿಕೊಂಡರು.

ಈ ಒಪ್ಪಂದಕ್ಕಾಗಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಲಾಹೋರ್ಗೆ ಬಸ್ನಲ್ಲಿ ತೆರಳಿ ದೇಶದೊಳಗಿನ ವಿರೋಧ ಮತ್ತು ಒತ್ತಡವನ್ನೂ ಲೆಕ್ಕಿಸದ ಅವರು ಐತಿಹಾಸಿಕ ಒಪ್ಪಂದಕ್ಕಾಗಿ ದೃಢ ನಿರ್ಧಾರ ಕೈಗೊಂಡಿದ್ದರು.

ಪಾಕಿಸ್ತಾನದಲ್ಲಿ ಸ್ನೇಹಹಸ್ತ ಚಾಚಿ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದರೆ ಪಾಕಿಸ್ತಾನ ಸೇನೆ ಮಾತ್ರ ಇತ್ತ ಕಾರ್ಗಿಲ್ ಪ್ರದೇಶ ಅತಿಕ್ರಮಿಸಿಕೊಳ್ಳಲು ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿತ್ತು.

ಪಾಕಿಸ್ತಾನದ ಜತೆ ಸ್ನೇಹ ಸಾಧಿಸಿದ ಖುಷಿಯಲ್ಲಿ ವಾಜಪೇಯಿ ಭಾರತಕ್ಕೆ ವಾಪಸಾದರು. ಇದಾಗಿ ಮೂರು ತಿಂಗಳೂ ಪೂರ್ಣಗೊಂಡಿರಲಿಲ್ಲ. ಪಾಕಿಸ್ತಾನಿ ಸೈನಿಕರು ಕಾರ್ಗಿಲ್ ಪ್ರದೇಶವನ್ನು ಅತಿಕ್ರಮಿಸಿರುವ ವಿಚಾರ 1999ರ ಮೇ 3ರಂದು ಬೆಳಕಿಗೆ ಬಂತು. ಕೆಲವು ಕುರಿಗಾಹಿಗಳು ನೀಡಿದ ಮಾಹಿತಿಯಿಂದ ಭಾರತೀಯ ಸೇನೆಗೆ ಅತಿಕ್ರಮಣದ ವಿಷಯ ತಿಳಿದುಬಂದಿತ್ತು. ನಂತರ ತನ್ನ ಭೂಪ್ರದೇಶವನ್ನು ಮರುವಶಪಡಿಸಿಕೊಳ್ಳಲು ಭಾರತ ಪ್ರತಿತಂತ್ರ ಹೂಡಿತು.

‘ಆಪರೇಷನ್ ವಿಜಯ್’ ಸೇನಾ ಕಾರ್ಯಾಚರಣೆ ನಡೆದು ಭಾರತ ವಿಜಯ ಸಾಧಿಸಿ ಜಗತ್ತಿಗೆ ಭಾರತದ ಸಂಯಮ ಮತ್ತು ಶಕ್ತಿಯನ್ನು ತೋರಿಸಿಕೊಟ್ಟಿತು.

ಪಾಕಿಸ್ತಾನದ ‘ಆಪರೇಷನ್ ಬಿದ್ರ್’

ಚಳಿಗಾಲದಲ್ಲಿ ಗಡಿ ನಿಯಂತ್ರಣ ರೇಖೆಯ ಆಯಾ ಕಡೆಗಳಲ್ಲಿರುವ ಕೆಲವು ಮುಂಚೂಣಿ ಸೇನಾ ಶಿಬಿರಗಳನ್ನು ತ್ಯಜಿಸಿ ಗಸ್ತು ಚಟುವಟಿಕೆ ಕಡಿಮೆ ಮಾಡುವುದನ್ನು ಭಾರತ ಮತ್ತು ಪಾಕಿಸ್ತಾನ ಸೇನೆ ಹಿಂದಿನಿಂದಲೂ ಪಾಲಿಸುತ್ತಾ ಬಂದಿವೆ. ಚಳಿಯ ತೀವ್ರತೆ ಕಡಿಮೆಯಾದಂತೆಲ್ಲ ಆ ಮುಂಚೂಣಿ ಪ್ರದೇಶದಲ್ಲಿರುವ ಶಿಬಿರಗಳನ್ನು ಮತ್ತೆ ವಶಕ್ಕೆ ತೆಗೆದುಕೊಂಡು ಪಹರೆ ಚಟುವಟಿಕೆ ಆರಂಭಿಸಲಾಗುತ್ತದೆ.

ಈ ಪರಿಸ್ಥಿತಿಯನ್ನೇ ಬಳಸಿಕೊಂಡ ಪಾಕಿಸ್ತಾನ ಸೇನೆ ‘ಆಪರೇಷನ್ ಬಿದ್ರ’ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ಕೈಗೊಂಡಿತು.  ಉಗ್ರಗಾಮಿಗಳಿಗೆ ತರಬೇತಿ ನೀಡಿ ಮುಂದೆ ಕಳುಹಿಸಲು ಪಾಕೀ ಸೈನ್ಯ ಹಾಗೂ ಐಎಸ್ಐ ಸೇರಿಕೊಂಡು ಸಮರ್ಥ ಯೋಜನೆಗಳನ್ನು ರೂಪಿಸಿದ್ದವು. 

ಈ ಯೋಜನೆಯಂತೆ ಭಾರತದ ಸೇನೆಯ ದಿಕ್ಕು ತಪ್ಪಿಸಲು ಪಾಕ್ ಆಕ್ರಮಿತ ಜಿಲ್ಲೆಗಳಾದ ಅಜೌರಿ, ಪೂಂಚ್, ಗಂದರ್ಬಾಲ್, ಅನಂತನಾಗ್ ಗಳಲ್ಲಿ ಭಯೋತ್ಪಾದಕ ಕೃತ್ಯ ಮಿತಿ ಮೀರಿತು.

image 16

ಪಾಕಿಸ್ತಾನ ಸೇನೆ ಅತಿಕ್ರಮಣ ಮಾಡಲು ಕಾರ್ಗಿಲನ್ನೇ ಆಯ್ದುಕೊಂಡದ್ದಕ್ಕೆ ಕಾರಣವಿದೆ. ಕಾರ್ಗಿಲ್ ಪರ್ವತಶ್ರೇಣಿಗಳ ಮೇಲೆ ಅತಿಕ್ರಮಣ ನಡೆಸಿದರೆ ‘ಎನ್ಎಚ್ 1ಡಿ’ ಮೇಲೆ ಹಿಡಿತ ಸಾಧಿಸಿ ಭಾರತೀಯ ಸೇನೆ ಲೇಹ್ ಜತೆ ಸಂಪರ್ಕ ಕಡಿದುಕೊಳ್ಳುವಂತೆ ಮಾಡಬಹುದು. ತನ್ಮೂಲಕ ಸಿಯಾಚಿನ್ ನೀರ್ಗಲ್ಲು ಪ್ರದೇಶದಿಂದ ಭಾರತೀಯ ಯೋಧರು ಕಾಲ್ಕೀಳುವಂತೆ ಮಾಡಬಹುದು. ಜತೆಗೆ ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಭಾರತದ ಮೇಲೆ ಒತ್ತಡ ಹೇರಬಹುದು ಎಂಬುದೇ ಅವರ ಲೆಕ್ಕಾಚಾರವಾಗಿತ್ತು.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಫರ್ವೇಜ್ ಮುಷರ್ರಫ್ ತಡಮಾಡಲಿಲ್ಲ ‘ಆಪರೇಷನ್ ಬಿದ್ರ್’ಗೆ ಚಾಲನೆ ನೀಡಿದರು. ಶತ್ರುಗಳಿಗೆ ತಿಳಿಯುವ ಮುನ್ನ ಎತ್ತರದ ಗುಡ್ಡಗಳನ್ನು ವಶಪಡಿಸಿಕೊಳ್ಳುವುದೇ ಈ ಯೋಜನೆಯ ಗುರಿಯಾಗಿತ್ತು. ಮೇ 8ರ ಹೊತ್ತಿಗೆ ಪಾಕೀಗಳು ಗುಡ್ಡಗಳನ್ನು ಆಕ್ರಮಿಸಿ ಬಂಕರುಗಳಲ್ಲಿ ಕುಳಿತುಬಿಟ್ಟರು.ಇದನ್ನು ಕಂಡಂತಹ   ದನಗಾಯಿಗಳು ಸೇನೆಗೆ  ಸುದ್ಧಿ ಮುಟ್ಟಿಸಿದರು.

ಮರುದಿನವೇ ಸೇನೆ ಜಾಟ್ ರೆಜಿಮೆಂಟ್ ನ ಕ್ಯಾಪ್ಟನ್ ಸೌರಭ್ ಕಾಲಿಯಾರನ್ನು ಕಳುಹಿಸಿತು 6 ಜನರ ತಂಡದೊಂದಿಗೆ ‘ಬಜರಂಗ್’ ಪೋಸ್ಟಿನತ್ತ ಹೊರಟರು, ಶತ್ರುಗಳಿರುವುದು ಖಾತ್ರಿಯಾಗಿ ತಂಡ ಕದನಕ್ಕಿಳಿಯಿತು. ಶತ್ರುಗಳ ಸಂಖ್ಯೆಯನ್ನು ಅಂದಾಜಿಸಲು ಎಡವಿದ್ದ ತಂಡ ಸೆರೆ ಸಿಕ್ಕಿತು. ಅವರನ್ನು ಚಿತ್ರವಿಚಿತ್ರವಾಗಿ ಹಿಂಸಿಸಿ 22 ದಿನಗಳ ಸೆರೆಯ ನಂತರ ಕೊಲ್ಲಲಾಯಿತು.

ಮುಷರ್ರಫ್ ಮಾಸ್ಟರ್ ಮೈಂಡ್ :

ಇಂದು ದುಬೈನಲ್ಲಿ ಮಾರಣಾಂತಿಕ ಕಾಯಿಲೆಯಿಂದ ಸಾವಿನ ಅಂಚಿನಲ್ಲಿ ಇರುವ
ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಶಾಂತಿ ಮಂತ್ರದ ಪ್ರಸ್ತಾಪವನ್ನು ಧಿಕ್ಕರಿಸಿದ, ಗೋಮುಖ ವಾಘ್ರ, ಅಂದಿನ ಪಾಕಿಸ್ತಾನದ ಜನರಲ್ ಪರ್ವೇಜ್ ಮುಷರ್ರಫ್ ಕಾರ್ಗಿಲ್ ಯುದ್ಧ ಪ್ರಾರಂಭಕ್ಕೆ ಕಾರಣಕರ್ತರಾಗಿದ್ದರು. ಈ ಬಗ್ಗೆ ಕಾರ್ಗಿಲ್ ಯುದ್ಧ ‘ಮಾಸ್ಟರ್ ಮೈಂಡ್’ ಎಂದು ನಂತರ ಗೊತ್ತಾಯಿತು. ಕಾಶ್ಮಿರದಲ್ಲಿ ಒಳನುಗ್ಗುವ ಯೋಜನೆಯನ್ನು ತುಂಬ ನಾಜೂಕಾಗಿ ಮುಷರ್ರಫ್ ಯೋಜಿಸಿದ್ದರು. ವಿಶೇಷ ಎಂದರೆ ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ.

‘ಆಪರೇಷನ್ ವಿಜಯ್’

ವ್ಯವಸ್ಥಿತ ದಾಳಿ ಎಂದರಿತ ಸೇನೆ ಪ್ರಧಾನಿ, ರಕ್ಷಣಾ ಸಚಿವರು, ವಿದೇಶಾಂಗ ಸಚಿವರು, ಐಬಿ, ನಮ್ಮ ಗುಪ್ತಚರ ಇಲಾಖೆ ‘ರಾ’ ಮತ್ತು ಮೂರೂ ಸೇನೆಯ ಮುಖ್ಯಸ್ಥರುಗಳನ್ನು ಸೇರಿದ ಸಂದರ್ಭದಲ್ಲಿ ಭಾರತ ಸೇನೆಯ ಜನರಲ್ ಮಲಿಕ್ ವರು  “ಸೇನೆಯ ಮೂರೂ ವಿಭಾಗಗಳು ಜೊತೆಗೂಡಿ ದಾಳಿಗೈದರೆ ಮಾತ್ರ ಪರಿಹಾರ. ಅನುಮತಿ ಕೊಡಿ” ಎಂದು ಪ್ರಧಾನಿಗೆ ವಿನಂತಿಸಿದರು. ಅನುಮತಿ ದೊರೆತ ನಂತರ ಗೆಲುವು ನಮ್ಮದೇ ಭರವಸೆಯೊಂದಿಗೆ  ಹೋರಾಟಕ್ಕೆ ಅಣಿಯಾದರು,ಈ ಯುದ್ಧಕ್ಕೆ ‘ಆಪರೇಷನ್ ವಿಜಯ್’ ಎಂದು ಕರೆದರು.


ಕಾರ್ಗಿಲ್ ಪರ್ವತಶ್ರೇಣಿಯ ಮೇಲ್ಭಾಗದ ಬಹುತೇಕ ಪ್ರದೇಶಗಳು ಪಾಕಿಸ್ತಾನ ಸೇನೆಯ ವಶದಲ್ಲಿದ್ದುದು ಭಾರತೀಯ ಸೇನೆಗೆ ತುಸು ಹಿನ್ನಡೆಯಾಯಿತು. ದುರ್ಗಮ ಪ್ರದೇಶಗಳಾದುದರಿಂದ ಯುದ್ಧವಿಮಾನ, ಹೆಲಿಕಾಪ್ಟರ್ಗಳ ಮೂಲಕ ಮದ್ದುಗುಂಡು ಸಾಗಿಸುವುದು ಹಾಗೂ ಬಾಂಬ್ ದಾಳಿ ನಡೆಸುವುದು ಕಷ್ಟವಾಗಿತ್ತು. ಹಾಗೆಂದು ರಸ್ತೆ ಮೂಲಕ ಶಸ್ತ್ರಾಸ್ತ್ರ, ಮದ್ದುಗುಂಡು ಸಾಗಿಸಬೇಕಿದ್ದರೆ ‘ಎನ್ಎಚ್ 1ಡಿ’ಯನ್ನೇ ಬಳಸಬೇಕಿತ್ತು. ಕಾರ್ಗಿಲ್ ಪರ್ವತಗಳ ಮೇಲಿದ್ದ ಪಾಕಿಸ್ತಾನಿ ಸೈನಿಕರಿಗೆ ಈ ಹೆದ್ದಾರಿಯಲ್ಲಿನ ಪ್ರತಿಯೊಂದು ಚಲನವಲನವೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಹೀಗಾಗಿ ಪಾಕಿಸ್ತಾನಿ ಸೈನಿಕರ ದಾಳಿಗೆ ತುತ್ತಾಗಿ ಅಪಾರ ಪ್ರಮಾಣದಲ್ಲಿ ಸಾವು–ನೋವು ಸಂಭವಿಸುವ ಆತಂಕ ಭಾರತೀಯ ಸೇನೆಗಿತ್ತು. ನಂತರ, ಹಿಮಾಚಲ ಪ್ರದೇಶದ ಮೂಲಕ ಲೇಹ್ ಅನ್ನು ಸಂಪರ್ಕಿಸುವ ರಸ್ತೆಯನ್ನು ಬಳಸಿ ಶಸ್ತ್ರಾಸ್ತ್ರ ಸಾಗಾಟ ಮಾಡಲಾಯಿತು. ಈ ಎಲ್ಲ ಅಡೆತಡೆಗಳು ಭಾರತೀಯ ಸೇನೆಯ ಕಾರ್ಯಾಚರಣೆಯನ್ನು ತುಸು ನಿಧಾನಗೊಳಿಸಿದವು.

ಶ್ರೀನಗರ–ಲೇಹ್ ನಡುವಣ ಹೆದ್ದಾರಿ ಮೇಲೆ ಹೇಗಾದರೂ ಹಿಡಿತ ಸಾಧಿಸುವುದು ಭಾರತೀಯ ಸೇನೆಯ ಪ್ರಮುಖ ಗುರಿಯಾಗಿತ್ತು. ಈ ಗುರಿಯನ್ನು ಸಾಧಿಸಿದರೆ, ನಂತರ ಪಾಕಿಸ್ತಾನಿ ಪಡೆಗಳನ್ನು ಹಿಮ್ಮೆಟ್ಟಿಸುವುದು ಸುಲಭವಾಗುತ್ತಿತ್ತು. ಹೀಗಾಗಿ ಟೈಗರ್ ಹಿಲ್ ಮತ್ತು ಡ್ರಾಸ್. ನ ಟೊಲೊಲಿಂಗ್ ಮರುವಶಪಡಿಸಿಕೊಳ್ಳಲು ಮೊದಲ ಆದ್ಯತೆ ನೀಡಲಾಯಿತು. ಇದರ ಬೆನ್ನಲ್ಲೇ ಬಟಾಲಿಕ್ ಮೇಲೆ ಗುರಿಯಿರಿಸಲಾಯಿತು.

ಯುದ್ಧ ಬಹಳ ಜೋರಾಗಿಯೇ ಶುರುವಾಯಿತು, ದಾಳಿ-ಪ್ರತಿದಾಳಿಗಳು ನಡೆದವು. ವಿಮಾನಗಳ ಹಾರಾಟ, ಹೆಲಿಕಾಪ್ಟರ್ಗಳ ಸದ್ಧು, ಮದ್ದು-ಗುಂಡುಗಳ ಸಿಡಿತ, ರಾಷ್ಟ್ರಕ್ಕಾಗಿ ಪ್ರಾಣಕೊಡುವ ಸೈನಿಕನ ತುಡಿತ ಎಲ್ಲವೂ ಜೋರಾಗಿಯೇ ನಡೆದಿತ್ತು.


ಮೊದಮೊದಲು ಸ್ವಲ್ಪ ನಷ್ಟ ಅನುಭವಿಸಿದ ಭಾರತೀಯ ಸೇನೆ ಪಾಕಿಗಳನ್ನು ಬಗ್ಗುಬಡೆದು ತೋಲೋಲಿಂಗ್, ಟೈಗರ್ ಹಿಲ್, ಪಾಯಿಂಟ್ 5140, 4700, 5100, ಲೋನ್ ಹಿಲ್ ಮತ್ತು ಥ್ರೀ ಪಿಂಪಲ್ಸ್ಗಳನ್ನು ಸೇರಿದಂತೆ ಹಲವಾರು ಪ್ರದೇಶಗಳನ್ನು ಜುಲೈ 15ರ ಹೊತ್ತಿಗೆ ಅವರ ಕಪಿಮುಷ್ಠಿಯಿಂದ ವಶಪಡಿಸಿಕೊಳ್ಳಲಾಯಿತು.
1999ರ ಮೇ 26ರಂದು ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಡೆಸುವ ಮೂಲಕ ಕಾರ್ಯಾಚರಣೆಗೆ ನೆರವಾಯಿತು. ದುರದೃಷ್ಟವಶಾತ್, ಮೇ 28ರಂದು ವಾಯುಪಡೆಯ ‘ಮಿಗ್ 17’ ವಿಮಾನವನ್ನು ಪಾಕಿಸ್ತಾನ ಹೊಡೆದುರುಳಿಸಿ ನಾಲ್ವರು ಯೋಧರು ಹುತಾತ್ಮರಾದರು. ಕೊನೆಗೂ 1999ರ ಜೂನ್ 9 ಮತ್ತು 13ರಂದು ಕ್ರಮವಾಗಿ ಬಟಾಲಿಕ್ ಹಾಗೂ ಟೊಲೊಲಿಂಗ್ ಪ್ರದೇಶವನ್ನು ಮರುವಶಪಡಿಸಿಕೊಳ್ಳುವಲ್ಲಿ ಭಾರತೀಯ ಸೇನೆ ಯಶಸ್ವಿಯಾಯಿತು. ನಂತರ ಹೋರಾಟ ಸಂಪೂರ್ಣವಾಗಿ ಭಾರತದ ಪರ ವಾಲತೊಡಗಿತು. ಜುಲೈ 2ರಿಂದ ಕಾರ್ಗಿಲ್ ಬಳಿ ಭಾರಿ ಪ್ರತಿದಾಳಿ ಆರಂಭಿಸಿದ ಭಾರತೀಯ ಸೇನೆ ಜುಲೈ 4ರಂದು ಟೈಗರ್ ಹಿಲ್ ಅನ್ನೂ ತೆಕ್ಕೆಗೆ ತೆಗೆದುಕೊಂಡಿತು. ಭಾರತೀಯ ಯೋಧರ ಪ್ರತಿದಾಳಿ ತಾಳಲಾರದ ಪಾಕಿಸ್ತಾನ ಸೇನೆ ಜುಲೈ 7ರ ವೇಳೆಗೆ ಡ್ರಾಸ್ನಿಂದಲೂ ಕಾಲ್ಕಿತ್ತಿತು. ಅಂತಿಮವಾಗಿ ಜುಲೈ 14ರಂದು ‘ಆಪರೇಷನ್ ವಿಜಯ್’ ಯಶಸ್ವಿಯಾಗಿದೆ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಘೋಷಿಸಿದರು. ಜುಲೈ 26ರಂದು ಇಡೀ ಕಾರ್ಗಿಲ್ ಪ್ರದೇಶ ಮರಳಿ ಅಧಿಕೃತವಾಗಿ ಭಾರತದ ವಶವಾಯಿತು.

ಸುಮಾರು 527 ಯೋಧರ ಬಲಿದಾನದ ಬಳಿಕ 1999ರ ಜುಲೈ 26ಕ್ಕೆ ಕಾರ್ಯಾಚರಣೆ ನಿಲ್ಲಿಸಿ “ಆಪರೇಷನ್ ವಿಜಯ್”ನ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಭಾರತ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಸಾಬೀತು ಪಡಿಸಿತ್ತು. ಪಾಕಿಸ್ತಾನ ತೀವ್ರ ಮುಖಭಂಗಕ್ಕೆ ಒಳಗಾಗಿತ್ತು.

‘ಆಪರೇಷನ್ ಸೇಫ್ ಸಾಗರ್’ :

ಭಾರತಕ್ಕೆ ಕಾರ್ಗಿಲ್ ಯುದ್ಧ ಒಂದು ಅಚ್ಚರಿಯಾಗಿದ್ದರೂ, ಎತ್ತರದ ಪ್ರದೇಶದ ಅನಾನುಕೂಲ ಇದ್ದರೂ ಶೆಲ್ ದಾಳಿ ಮುಖಾಂತರ ಭಾರತ ಸೇನೆ ಪಾಕಿಸ್ತಾನ ಬಂಕರ್ಗಳ ಮೇಲೆಯೇ ಕಣ್ಣಿಟ್ಟಿತ್ತು. ಪಾಕ್ ದಾಳಿಯನ್ನು ಹುಟ್ಟಡಗಿಸುವಲ್ಲಿ ಬೋಫೋ​ರ್‍ಸ್  ಫಿರಂಗಿಗಳು ಭಾರತಕ್ಕೆ ನೆರವಾಗಿದ್ದವು. ಪಾಕ್ನ ದುಷ್ಟತನಕ್ಕೆ ಸರಿಯಾದ ಬುದ್ಧಿ ಕಲಿಸಲು ‘ಆಪರೇಷನ್ ಸೇಫ್ ಸಾಗರ್’ ಹೆಸರಿನಲ್ಲಿ ಭೂ ಸೇನೆಯೊಂದಿಗೆ ವಾಯುಪಡೆಯೂ ಕಾರಾರ‍ಯಚರಣೆ ಆರಂಭಿಸಿತು. ಈ ವೇಳೆ ವಾಯುಪಡೆಗೆ ಶಕ್ತಿಯಾಗಿದ್ದು ಮಿಗ್-27, ಮಿಗ್-29 ಯುದ್ಧ ವಿಮಾನ. ಇದರಿಂದಾಗಿ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಯಶಸ್ವಿಯಾಯಿತು. 2ನೇ ವಿಶ್ವಯುದ್ಧದ ಬಳಿಕ ಅಪಾರ ಪ್ರಮಾಣದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿದ ಮೊದಲ ಯುದ್ಧ ಇದು ಎಂಬ ಖ್ಯಾತಿ ಪಡೆಯಿತು.

ಪಾಕ್ನ ಉಸಿರುಗಟ್ಟಿಸಿದ ನೌಕಾಪಡೆ

ಪಾಕಿಸ್ತಾನದ ಬಂದರುಗಳಿಗೆ (ಮುಖ್ಯವಾಗಿ ಕರಾಚಿ ಬಂದರಿಗೆ) ತಡೆ ವಿಧಿಸುವ ಪ್ರಯತ್ನದ ಮೂಲಕ ಸರಬರಾಜು ಮಾರ್ಗಗಳನ್ನು ಕಡಿತಗೊಳಿಸಿ ಭಾರತೀಯ ನೌಕಾಪಡೆ ಕೂಡ ಯುದ್ಧ ಸಿದ್ಧತೆ ಮಾಡಿಕೊಂಡಿತು. ಬಳಿಕ, ಪೂರ್ಣ ಸ್ವರೂಪದ ಯುದ್ಧ ಭುಗಿಲೆದ್ದರೆ ಪಾಕಿಸ್ತಾನದಲ್ಲಿ ಕೇವಲ 6 ದಿನಗಳಿಗೆ ಸಾಕಾಗುವಷ್ಟುಇಂಧನ ದಾಸ್ತಾನು ಉಳಿದುಕೊಂಡಿ ದೆಯೆಂದು ಆಗಿನ ಪ್ರಧಾನಮಂತ್ರಿ ನವಾಜ್ ಷರೀಫ್ ಬಹಿರಂಗಪಡಿಸಿದ್ದರು.

ಸಾವು – ನೋವಿಗೆ ಕಾರಣ :

ಕಾರ್ಗಿಲ್ ಕದನವು ಹೆಚ್ಚಿನ ಸಂಖ್ಯೆಯ ಸಾವು–ನೋವಿಗೆ ಕಾರಣವಾಯಿತು. ಭಾರತದ ಕಡೆಯಿಂದ ಅಧಿಕೃತ ದಾಖಲೆಗಳ ಪ್ರಕಾರ, 527 ಮಂದಿ ಹುತಾತ್ಮರಾದರೆ 1,363 ಯೋಧರು ಗಾಯಗೊಂಡಿದ್ದರು. ಒಂದು ಯುದ್ಧವಿಮಾನ, ಹೆಲಿಕಾಪ್ಟರ್ ಅನ್ನು ಪಾಕಿಸ್ತಾನಿ ಸೈನಿಕರು ಹೊಡೆದುರುಳಿಸಿದ್ದರು. ಒಂದು ಯುದ್ಧವಿಮಾನ ತಾಂತ್ರಿಕ ದೋಷದಿಂದ ಪತನಗೊಂಡಿತ್ತು. ಪಾಕಿಸ್ತಾನದ ದಾಖಲೆಗಳ ಪ್ರಕಾರ ಅಲ್ಲಿನ 453 ಸೈನಿಕರು ಮೃತಪಟ್ಟಿದ್ದರು. ಆದರೆ ಈ ಲೆಕ್ಕಾಚಾರದ ಬಗ್ಗೆ ಹಲವು ಅನುಮಾನಗಳಿವೆ. 700ಕ್ಕೂ ಹೆಚ್ಚು ಪಾಕಿಸ್ತಾನೀಯರು ಯುದ್ಧದಲ್ಲಿ ಮೃತಪಟ್ಟಿದ್ದು 1,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಭಾರತ ಪ್ರತಿಪಾದಿಸಿದೆ.

ಕ್ಯಾಪ್ಟನ್ ಸೌರಭ್ ಕಾಲಿಯಾ, ಕ್ಯಾಪ್ಟನ್ ವಿಕ್ರಂ ಬಾತ್ರಾ, ಗ್ರೇನೇಡಿಯರ್ ಯೋಗೇಂದರ್ ಸಿಂಗ್ ಯಾದವ್, ಕ್ಯಾಪ್ಟನ್ ಅಮೋಲ್ ಕಾಲಿಯಾ, ರಾಜೇಶ್ ಅಧಿಕಾರಿ, ಅಜಯ್ ಅಹುಜಾ, ಮೇಜರ್ ವಿವೇಕ್ ಗುಪ್ತಾ,ಕೆಂಗುರುಸೆ,ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಸೇರಿದಂತೆ ಸಾವಿರಾರು ಯೋಧರ ಸಾಹಸ ಮತ್ತು ತ್ಯಾಗದ ಪ್ರತೀಕವಾಗಿ ಗೆಲುವು ಪ್ರಾಪ್ತವಾಯಿತು.


ಕಾರ್ಗಿಲ್ ಯುದ್ಧದ ವೆಚ್ಚ


ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ   ಸೇನಾ ಸಲಕರಣೆಗಳಿಗೆ ಹೆಚ್ಚಿದ ಬೇಡಿಕೆ ಉಂಟಾಯಿತು. ಯುದ್ಧ ನಡೆದ ವರ್ಷ ದೇಶದ ರಕ್ಷಣಾ ವೆಚ್ಚ  47,071 ಕೋಟಿ: 1999–2000ನೇ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ವೆಚ್ಚವಾಗಿತ್ತು.ಅದರೆ ಯುದ್ಧದಿಂದಾಗಿ ರಕ್ಷಣಾ ವೆಚ್ಚ ಏರಿತು. ಕಾರ್ಗಿಲ್ ಯುದ್ಧ
‘ಆಪರೇಷನ್ ವಿಜಯ್’ ಕಾರ್ಯಾಚರಣೆಗೆ ದಿನವೊಂದಕ್ಕೆ ಮಾಡಲಾಗಿದ್ದ ಅಂದಾಜು ವೆಚ್ಚ 20 ಕೋಟಿ ರೂಪಾಯಿ ಆಗಿತ್ತು,ಒಟ್ಟಾರೆ ‘ಆಪರೇಷನ್ ವಿಜಯ್’ ಕಾರ್ಯಾಚರಣೆಯ  ಅಂದಾಜು ವೆಚ್ಚ 1,800 ಕೋಟಿ ರೂಪಾಯಿ ಆಗಿತ್ತು.

ಕಾರ್ಗಿಲ್ ಯುದ್ಧವು ನಮ್ಮ ಸೈನಿಕರ ಸತ್ಯ, ಧರ್ಮ, ನಿಸ್ವಾರ್ಥ, ಕರ್ತವ್ಯ ಬದ್ಧತೆ, ತ್ಯಾಗ, ಶೌರ್ಯಗಳಲ್ಲಿ ಭಾರತೀಯ ಸೈನಿಕರಿಗೆ ಸರಿಸಮ ಯಾರು ಇಲ್ಲವೆಂದೂ ಜಗತ್ತಿಗೆ ತೋರಿಸಿ ಕೊಟ್ಟಿತು.
ಅಂತಹ ವೀರ ಯೋಧರಿಗೆ ಅಗಣಿತ ನಮನಗಳು.

image 15

ಡಾ.ಗುರುಪ್ರಸಾದ್ ರಾವ್ ಹವಾಲ್ದಾರ್ , ಪತ್ರಕರ್ತರು.

Copyright © All rights reserved Newsnap | Newsever by AF themes.
error: Content is protected !!