ನಿರಪೇಕ್ಷಂ ಮುನಿಂ ಶಾಂತಂ
ನಿವೈರ್ಯಂ ಸಮದರ್ಶಿನಃ
ಕಾವಿ ಧರಿಸಲಿಲ್ಲ, ಅಂಗಿಗೆ ಜೇಬು ಇರಲಿಲ್ಲ ಕಾಲಿನಲ್ಲಿ ಆವುಗೆ ಮೆಟ್ಟಲಿಲ್ಲ ಶುಭ್ರ ಬಿಳಿ ಬಣ್ಣದ ಉಡುಪುನ್ನು ಧರಿಸಿ ಸರಳ, ಮೃದು ಸ್ವಭಾವದ ಸಾತ್ವಿಕ ಜೀವನ ನಡೆಸಿದರು.
ಭಾಗವತದಲ್ಲಿ ತಿಳಿಸಿದ ಸಂತರ ಎಲ್ಲಾ ಲಕ್ಷಣಗಳನ್ನು ಒಳಗೊಂಡ ಮಹಾನುಭಾವ ಶತಮಾನದ ಸಂತರೆನಿಸಿಕೊಂಡ ಶರಣರೆಂದರೆ ವಿಜಯಪುರದ “ಜ್ಞಾನಯೋಗಾಶ್ರಮದ ಪರಮಪೂಜ್ಯ ಸಿದ್ದೇಶ್ವರ ಮಹಾಸ್ವಾಮೀಜಿಗಳು”.
ಸಿದ್ದೇಶ್ವರ ಶ್ರೀಗಳು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1940 ಸೆಪ್ಟೆಂಬರ್ 5ರಂದು ಜನಿಸಿ ತಮ್ಮ ಗ್ರಾಮದಲ್ಲಿ ಎರಡನೇ ವಿವೇಕಾನಂದ ಎಂದೇ ಗುರುತಿಸಿಕೊಂಡಿದ್ದಾರೆ. ವಿಜಯಪುರ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆಗಿದ್ದು ಕನ್ನಡ, ಸಂಸ್ಕೃತ,ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಷ್ಣಾತರು.
ಮಾಡುವ ಎಲ್ಲ ಕಾಯಕವನ್ನು ಭಗವಂತನ ಪ್ರೀತಿಗಾಗಿ ಮಾಡಿದರು. ಅದರಿಂದೇನು ಲಾಭ ಎಂದು ಎಂದಿಗೂ ನೋಡಲಿಲ್ಲ. ಅತ್ಯಂತ ನಿಸ್ಪೃಹರಾಗಿದ್ದರು. ಅವರೆಂದು ಅನಗತ್ಯವಾದ ಒಂದೇ ಒಂದು ಶಬ್ದವನ್ನೂ ಬಳಸಿದವರಲ್ಲ. ಪ್ರತಿಯೊಂದು ಮಾತಿನಲ್ಲಿ ಪ್ರೀತಿ, ಅಂತಃಕರಣ, ಜ್ಞಾನದ ಬೆಳಕು ಇರುತ್ತಿತ್ತು. ಅಂತರ್ಮುಖಿಯಾಗಿರುತ್ತಿದ್ದರು. ಸತತ ಅಧ್ಯಯನ ಅಧ್ಯಾಪನ, ಚಿಂತನೆಯ ಫಲವಾಗಿಯೇ ವಿಶ್ವದ ಎಲ್ಲ ಜ್ಞಾನವನ್ನು ಅರಗಿಸಿಕೊಂಡು ಭಕ್ತರಿಗೆ ಉಣಬಡಿಸುತ್ತಿದ್ದರು.
ಹಕ್ಕಿಯೊಂದು ಆಹಾರವನ್ನು ಅರಸುತ್ತಾ ಹೋಗಿ, ಯಾವುದೋ ಆಹಾರ ದೊರೆತಾಗ ಗೂಡಿಗೆ ಮರಳಿ ಬಂದು ತನ್ನ ಚೊಂಚಿನಲ್ಲಿ ನುರಿಸಿ ಮರಿಗೆ ನುಂಗಲು ಸುಲಭವಾಗುವಂತೆ ಮೆತ್ತಗೆ ಮಾಡಿ ಗುಟ್ಟಿ ಕೊಡುವಂತೆ ಶ್ರೀಗಳು ಪ್ರಪಂಚದ ಜ್ಞಾನವನ್ನು ತಮ್ಮ ಚಿಂತನೆಯಲ್ಲಿ ಮಥಿಸಿ ಸರಳ, ಸರಳಗೊಳಿಸಿ ಭಕ್ತರಿಗೆ ಅರ್ಥವಾಗುವಂತೆ ಸುಲಭವಾದ ಭಾಷೆಯಲ್ಲಿ ಬೋಧಿಸುತ್ತಿದ್ದರು. ಶ್ರೀಗಳ ಪ್ರವಚನಗಳಲ್ಲಿ ಅಡಗಿದ ಅಗಾಧ ಜ್ಞಾನ ಭಕ್ತರಿಗೆ ಸುಲಭವಾಗಿ ಪಚನವಾಗುತ್ತಿತ್ತು. ಅತ್ಯಂತ ಶಾಂತ ಮೂರ್ತಿ. ಅವರು ಸಿಟ್ಟಾಗಿದ್ದನ್ನು ನೋಡಿದವರೇ ಇಲ್ಲ. ಅತ್ಯಂತ ಶಾಂತ ಸ್ವರೂಪಿ. ಧ್ಯಾನಾಸಕ್ತ ಪರಶಿವನಂತೆ. ನಿಶ್ಚಲ, ನಿರಾತಂಕ, ನಿರಂಜನ ಮೂರ್ತಿ. ಅದೇ ಕಾರಣಕ್ಕೋ ಏನೋ ಹತ್ತು ಹಲವು ವೈರುದ್ಧಗಳಿದ್ದ ಜನರಿದ್ದರೂ ಅವರ ಬಳಿಗೆ ಬಂದಾಗ ಅವರೆಲ್ಲರೂ ಶಾಂತರಾಗುತ್ತಿದ್ದರು. ಅದು ಅವರ ಸನ್ನಿಧಿಯ ಮಹತ್ವ.
ದೇಹಭಾವವನ್ನೇ ತೊರದವರಿಗೆ ಇನ್ನೆಲ್ಲಿಯ ವೈರಿಗಳು. ಹೊಗಳಿಕೆ ತೆಗಳಿಕೆಗೆ ಹಿಗ್ಗದ ಕುಗ್ಗದ ಎಲ್ಲವೂ ಭಗವಂತನ ಇಚ್ಚೆ ಎಂದೇ ಬದುಕಿದವರು. ಸಮಭಾವದಿಂದ ಕಂಡವರು. ಸಮದರ್ಶಿತ್ವ ಅವರ ವ್ಯಕ್ತಿತ್ವಕ್ಕೆ ಕಳಸಪ್ರಾಯ. ಪರಿಪೂರ್ಣ ಜ್ಞಾನವನ್ನು ಹೊಂದಿದ್ದರೂ ಅವರ ಮನಸ್ಸು ಮಗುವಿನಂತೆ ಸರಳ ಹಾಗೂ ಮುಗ್ದ. ಮೆಚ್ಚುಗೆ ಹಾಗೂ ಖಂಡನೆ ಎರಡರಲ್ಲೂ ಸಮಚಿತ್ತವನ್ನು ಹೊಂದಿವರು. ಅವರ ಹೃದಯ ಬೆಣ್ಣೆಯಷ್ಟೇ ಮೃದು. ಯಾರಿಗಾದರೂ ಕಷ್ಟ ಎಂದು ತಿಳಿದಾಗ ಬೆಣ್ಣೆಯಂತೆ ಕರಗುತ್ತಿದ್ದರು. ಭಕ್ತರ ಕಷ್ಟಗಳನ್ನು ಸಮಚಿತ್ತದಿಂದ ಆಲಿಸಿ ಸುಲಭವಾದ ಉಪಾಯಗಳನ್ನು ಸರಳವಾಗಿ ತಿಳಿಸಿ ಅವರ ಮನಸ್ಸಿನ ಆತಂಕವನ್ನು ನಿವಾರಿಸುತ್ತಿದ್ದರು.
ಸಿದ್ದೇಶ್ವರ ಶ್ರೀಗಳು ತಮ್ಮ ಪ್ರವಚನದ ಮೂಲಕವೇ ಅದೆಷ್ಟೋ ಜನರ ಬದುಕು ಬದಲಿಸಿದ್ದಾರೆ. ಅಂತೆಯೇ ಶ್ರೀಗಳ ಪ್ರವಚನಕ್ಕೆ ಘನತೆ ಇದೆ. ಬಗೆ ಬಗೆಯ ಹೂವುಗಳಿಂದ ಮಕರಂದವನ್ನು ಹೀರಿ ಒಂದೆಡೆ ಸೇರಿಸಿ ಜೇನನ್ನು ನೀಡುವಂತೆ ವಿಶ್ವದ ವಿವಿಧ ದಾರ್ಶನಿಕರ ದರ್ಶನ, ಚಿಂತಕರ ಉದಾತ್ತ ಚಿಂತನೆಗಳನ್ನು ಸುಲಲಿತವಾಗಿ ಹೇಳುವ ಪೂಜ್ಯರು ಸಾಧಕರಿಗೆ ಸನ್ಮಾರ್ಗ ತೋರುವ ದಾರಿದೀಪ. ಮನುಕುಲದ ಉದ್ಧಾರಕ್ಕೆ ಜಾತಿ, ಮತ, ಪಂಥಗಳನ್ನು ಮೀರಿ ಅಧ್ಯಾತ್ಮ ಜೀವಿಯಾಗಿ ಬಾಳಲು ತಿಳಿಸುವ ಅವರ ಶೈಲಿಗೆ ಅವರೇ ಸಾಟಿ. ಅವರ ಉಪನ್ಯಾಸ ಸರಣಿಯ “ಬದುಕುವದು ಹೇಗೆ,” ನಾವು ಹೇಗೆ ಬದುಕಬೇಕು / ದಾರಿ ಮಾಡಿಕೊಳ್ಳಬೇಕು “ಲಕ್ಷಾಂತರ ಭಾರತೀಯರನ್ನು ಬದಲಾಯಿಸಿದೆ. ಅಪಾರ ಭಕ್ತರು, ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಶ್ರೀಗಳು ಸರಳವಾಗಿಯೇ ಬದುಕಿದವರು. ಅವರ ಸರಳತೆಯೇ ನಮಗೆಲ್ಲರಿಗೂ ಮಾದರಿ.
ಶುಭ್ರ ಬಿಳಿ ಬಣ್ಣದ ಉಡುಪು ಧರಿಸುವ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಬಟ್ಟೆಗೆ ಜೇಬು ಇರಲಿಲ್ಲ, ಹಣವನ್ನೇ ಅವರು ಮುಟ್ಟುತ್ತಿರಲಿಲ್ಲ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಜ್ಞಾನಯೋಗಾಶ್ರಮಕ್ಕೆ ನೀಡಿದ ಅನುದಾನವನ್ನು ನಿರಾಕರಿಸಿ ಆಶ್ರಮಕ್ಕೆ ಹಣ ಬೇಕಾಗಿಲ್ಲ, ಇಲ್ಲಿ ಜ್ಞಾನ ಪ್ರಸಾರ ಮಾಡುವ ಕಾರ್ಯ ನಡೆಯುತ್ತಿದೆ ಎಂದಿದ್ದರು. ದೇಶ, ವಿದೇಶದ ದಾನಿಗಳು ಆಶ್ರಮಕ್ಕೆ ನೆರವು ನೀಡಲು ಮುಂದೆ ಬಂದರೂ ಅದನ್ನು ಸ್ವೀಕರಿಸಲಿಲ್ಲ. ಭಕ್ತರೊಬ್ಬರು ಕಾರು ತಂದು ಆಶ್ರಮದಲ್ಲಿ ನಿಲ್ಲಿಸಿ, ಕೀಲಿ ಕೊಟ್ಟರು. ಶ್ರೀಗಳು ನಗುತ್ತಲೇ ಅದನ್ನು ವಾಪಸ್ ಮಾಡಿದರು. ಹಾರವನ್ನು ಹಾಕಿಸಿಕೊಳ್ಳದೇ ಮುಗುಳ್ನಗೆಯಿಂದಲೇ ಅದನ್ನು ಸ್ಪರ್ಶಿಸುವುದು ವಾಡಿಕೆ. ಸನ್ಮಾನಗಳಿಂದಲೂ ಶ್ರೀಗಳು ದೂರವೇ ಇದ್ದರು.
ಸಾಮಾನ್ಯರಲ್ಲೇ ಸಾಮಾನ್ಯರಂತೆ ಬದುಕಿದ ಸಿದ್ದೇಶ್ವರ ಶ್ರೀಗಳು ಭಕ್ತರಿಗೆ ಮಾತ್ರ ದೇವತಾ ಮನುಷ್ಯರಾಗಿದ್ದರು. ಯಾವಾಗಲೂ ಸಮ ಸಮಾಜಕ್ಕಾಗಿ ಮನ ಮಿಡಿಯುತ್ತಿದ್ದ ಶ್ರೀಗಳು ಭಕ್ತರಿಗೆ, ಸ್ವಾಮೀಜಿಗಳಾಗಿ ಸಾಕಷ್ಟು ಆದರ್ಶ ಗುಣಗಳನ್ನೇ ಬಿತ್ತಿದ್ದಾರೆ.
ಸೌಮ್ಯಾ ಸನತ್
More Stories
ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ