January 4, 2025

Newsnap Kannada

The World at your finger tips!

madhuswamy

ಸಿದ್ದರಾಮಯ್ಯ ದೆಹಲಿ ರಾಜಕಾರಣಕ್ಕೆ ಹೋಗ್ಬೇಕು: ಸಚಿವ ಮಾಧುಸ್ವಾಮಿ ಬಯಕೆ-ಸ್ವಾರಸ್ಯಕರ ಚರ್ಚೆ

Spread the love

ನಾನೂ ಸಂಸತ್ತಿಗೆ ಹೋಗಲು ಯೋಚನೆ ಮಾಡಿದ್ದೆ. ಆದರೆ ಎರಡೂ ಸಲ ಸೋತೆ. ಆಗಿನಿಂದ ಮತ್ತೆ ಸಂಸತ್‌ಗೆ ಹೋಗಲು ಯೋಚನೆ ಮಾಡಿಲ್ಲ ಎಂದವರು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ.


ವಿಧಾನಸಭೆ ಕಲಾಪಗಳಲ್ಲಿ ಬಿಸಿ ಬಿಸಿ ಚರ್ಚೆ, ಮಾತಿನ ಚಕಮಕಿ, ವಾಗ್ಯುದ್ದ ಕೊನೆಗೆ ಸಭಾತ್ಯಾಗ ಇವೆಲ್ಲಾ ಇದ್ದೇ ಇರುತ್ತೆ. ಹಾಗೆಯೇ ಹಿರಿಯ ಸದಸ್ಯರು, ಸಚಿವರ ನಡುವೆ ಹಾಸ್ಯಚಟಾಕಿ, ತಮಾಷೆಯಾಗಿ ಕಾಲೆಳೆಯುವಂತಹ ಪ್ರಸಂಗಗಳು ಹಿಂದೆಲ್ಲ ನಡೆದಿವೆ. ಇಂದೂ ವಿಧಾನಸಭೆ ಸ್ವಾರಸ್ಯಕರ, ಹಾಸ್ಯಧಾಟಿಯ ಘಟನೆಗೆ ಸಾಕ್ಷಿಯಾಯಿತು. ಅದೆಂದರೆ, ಸಿದ್ದರಾಮಯ್ಯ ದೆಹಲಿ ರಾಜಕಾರಣಕ್ಕೆ ಹೋಗಬೇಕೆಂಬುದು.


ಸಚಿವ ಮಾಧುಸ್ವಾಮಿ ಮಾತನಾಡುತ್ತಾ, ಸಿದ್ದರಾಮಯ್ಯ ದೆಹಲಿ ರಾಜಕಾರಣಕ್ಕೆ ಹೋಗಬೇಕು. ಅಲ್ಲಿ ಕರ್ನಾಟಕದ ಕಹಳೆ ಮೊಳಗಿಸಬೇಕೆಂದು ಹೇಳಿದರು. ಇಂತಹ ಸನ್ನಿವೇಶಕ್ಕೆ ಸ್ಪಂದಿಸುವಂತೆ ಮಧ್ಯಪ್ರವೇಶಿಸಿದ ಕಂದಾಯ ಸಚಿವ ಆರ್. ಅಶೋಕ್, ಇಲ್ಲ, ಇಲ್ಲ, ಸಿದ್ದರಾಮಯ್ಯ ಇಲ್ಲಿಯೇ ಇರಬೇಕು. ನಮಗೆ ಮಾರ್ಗದರ್ಶನ ಕೊಡಬೇಕೆಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಶೋಕ್, ಮಾಧುಸ್ವಾಮಿ ನನ್ನ ಉತ್ತಮ ಸ್ನೇಹಿತರು ಎಂದರು.


ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸಿದ್ದರಾಮಯ್ಯ ದೆಹಲಿ ರಾಜಕಾರಣಕ್ಕೆ ತೆರಳುವ ಬಗ್ಗೆ ಈಶ್ವರಪ್ಪನವರ ಅಭಿಪ್ರಾಯ ಏನೆಂದು ಕೇಳಿದರು. ಅವರನ್ನು ಕೇಳಬೇಡಿ, ಇಲ್ಲೂ ಬೇಡ, ಅಲ್ಲೂ ಬೇಡ ಎನ್ನತ್ತಾರೆ ಎಂದು ಸಿದ್ದರಾಮಯ್ಯ ವಿನೋದವಾಗಿ ನುಡಿದರು.


ಈ ಸಂದರ್ಭದಲ್ಲಿ, ನಿಮ್ಮ ಹೃದಯ ಮುಟ್ಟಿಕೊಂಡು ಹೇಳಿ, ನಾನು ಆ ರೀತಿ ಹೇಳ್ತೀನಾ ಎಂದು ಈಶ್ವರಪ್ಪ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿಯೇಬಿಟ್ಟರು. ಇವರಿಬ್ಬರ ಮನೋಧರ್ಮ ಅರಿತವರಿಗೆ ಇದು ತಮಾಷೆಯಾಗಿಯೇ ಕಂಡಿತು.


ನಾನು ಆಂತರಿಕವಾಗಿಯೂ ಹೇಳಲ್ಲ, ಬಹಿರಂಗವಾಗಿಯೂ ಹೇಳಲ್ಲ ಎಂದು ಸಿದ್ದರಾಮಯ್ಯ ಈಶ್ವರಪ್ಪ ಅವರನ್ನುದ್ದೇಶಿಸಿ ಹೇಳಿದ ನಂತರ ವಾಸ್ತವಸ್ಥಿತಿ ವಿವರಿಸಿದರು. ನಾನು ಸಂಸತ್‌ಗೆ ಹೋಗಲೆಂದು ಎರಡು ಸಲ ಚುನಾವಣೆಯಲ್ಲಿ ಸ್ಪರ್ದಿಸಿದ್ದೆ. ಆದರೆ ಎರಡೂ ಸಲ ಸೋತೆ. ಆಗಿನಿಂದ ಸಂಸತ್‌ಗೆ ಹೋಗುವ ಯೋಚನೆ ಮಾಡಿಲ್ಲ ಎಂದು ಹೇಳುವುದರೊಂದಿಗೆ ಈ ವಿಚಾರವನ್ನು ಮುಕ್ತಾಯಗೊಳಿಸಿದರು.

Copyright © All rights reserved Newsnap | Newsever by AF themes.
error: Content is protected !!