December 27, 2024

Newsnap Kannada

The World at your finger tips!

Map karnataka flag

ಕರುನಾಡ ಜಿಲ್ಲೆಗಳ ಕಿರು ಪರಿಚಯ – 13 – ಹಾವೇರಿ

Spread the love

ಕಲಾವತಿ ಪ್ರಕಾಶ್
ಬೆಂಗಳೂರು

ಹಾವು+ಕೆರಿ ಹಾವಿರುವ ಕೆರಿ ಎಂಬರ್ಥದಲ್ಲಿ
ಹಾವೇರಿ ಎಂಬ ಹೆಸರು ಬಂತೆಂಬ ಮಾತಿಲ್ಲಿ
ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆ
ಏಲಕ್ಕಿ ನಾಡೆಂಬ ಕಂಪಿದೆ ಇದರ ಹೆಸರಲ್ಲೇ

ಹಾವೇರಿ ಹಾನಗಲ್ ಬ್ಯಾಡಗಿ ರಾಣೆಬೆನ್ನೂರು
ರಟ್ಟಿಹಳ್ಳಿ ಹಿರೇಕೇರೂರು ಸಿಗ್ಗಾಂವ್ ಸವಣೂರು
ಎಂಬೀ ಎಂಟು ತಾಲ್ಲೂಕುಗಳು ಈ ಜಿಲ್ಲೆಯಲ್ಲಿಹವು
ರಾಜ್ಯದ ನಡುವಿರುವ ಈ ಜಿಲ್ಲೆ ಕರುನಾಡ ಹೃದಯವು

ಕಲ್ಯಾಣ ಚಾಲುಕ್ಯರು ರಾಷ್ಟ್ರಕೂಟ ನವಾಬರಾಳಿದರು
ದೊರೆತಿವೆ ಶಿಲಾಶಾಸನಗಳು ಸಾವಿರದ ಮುನ್ನೂರು
ಹೊಯ್ಸಳರ ವಿಷ್ಣುವರ್ಧನ ಮಾಂಡಳೀಕರಾಳಿಹರು
ಜನಿಸಿಹರಿಲ್ಲಿ ಶರಣರು ಸಂತರು ವಚನಕಾರರು

ಸವಣೂರು ನವಾಬ ರಾಜರ ಸಂಸ್ಥಾನವಾಗಿತ್ತು
ಬಂಕಾಪುರವೇ ವಿಷ್ಣುವರ್ಧನನ ರಾಜಧಾನಿಯಾಗಿತ್ತು
ನವ ಶಿಲಾಯುಗದ ಜನರ ವಾಸದ ಗುರುತುಗಳಿವೆ
ಕಬ್ಬಿಣ ಯುಗದ ಮಾನವರ ನೆಲೆ ಕುರುಹು ಲಭಿಸಿವೆ

ತುಂಗಭದ್ರಾ ವರದಾ ಕುಮುದ್ವತಿ ಧರ್ಮಾ ನದಿಗಳು
ಹತ್ತಿ ಜೋಳ ಭತ್ತ ಕಬ್ಬು ಎಣ್ಣೆ ಕಾಳುಗಳು
ಕೃಷಿ ಪ್ರಧಾನ ಈ ಜಿಲ್ಲೆಯ ಪ್ರಮುಖ ಬೆಳೆಗಳು
ಏಷ್ಯಾದ ೨ನೇ ದೊಡ್ಡ ಬ್ಯಾಡಗಿಮೆಣಸಿನ ಮಾರುಕಟ್ಟೆ

ದಾಸ ಸಾಹಿತ್ಯ ವಚನ ಸಾಹಿತ್ಯ ತ್ರಿಪದಿ ತತ್ವ ಪದಗಳು
ಅಂಬಿಗರ ಚೌಡಯ್ಯ ಇದೇ ಜಿಲ್ಲೆಯ ವಚನಕಾರರು
ತತ್ವಪದಗಳ ಜನಕ ಸಂತ ಶಿಶುನಾಳ ಶರೀಫರು
ಕನ್ನಡ ಸಾಹಿತ್ಯಕ್ಕೆ ಈ ಜಿಲ್ಲೆಯ ಅಪಾರ ಕೊಡುಗೆಗಳು

ದಾಸ ಶ್ರೇಷ್ಠ ಕನಕದಾಸರು ಬಾಡ ಗ್ರಾಮದವರು
ಹೆಳವನಕಟ್ಟೆ ಗಿರಿಯಮ್ಮವರೂರು ಸವಣೂರು
ತ್ರಿಪದಿಯ ಜನಕ ಸರ್ವಜರ ಹುಟ್ಟೂರು ಅಬಲೂರು
ಶಿಶುನಾಳ ಗ್ರಾಮದಿ ಜನಿಸಿದರು ಶಿಶುನಾಳ ಶರೀಫರು

ಶಿವಕುಮಾರ ಶಿವಯೋಗಿ ವಾಗೀಶ ಪಂಡಿತಾರಾಧ್ಯರು
ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಗಳಗನಾಥರು
ಹುತಾತ್ಮ ಮೈಲಾರ ಮಹಾದೇವಪ್ಪ ಗುದ್ಲೆಪ್ಪನವರು
ಇವರುಗಳೆಲ್ಲ ಹಾವೇರಿ ಜಿಲ್ಲೆಯ ಮಹಾಪುರುಷರು

ಚಂದ್ರಶೇಖರ ಪಾಟೀಲರು ಪಾಟೀಲ್ ಪುಟ್ಟಪ್ಪನವರು
ಕನ್ನಡಕ್ಕೆ ಜ್ಞಾನ ಪೀಠ ಪ್ರಶಸ್ತಿಗೆ ಭಾಜನೃಇವರು
ವಿ ಕೃ ಗೋಕಾಕ್ ರವರ ಹುಟ್ಟೂರು ಸವಣೂರು
ನಾಡು ನುಡಿಗಾಗಿ ದುಡಿದ ಮಹನೀಯರುಗಳಿವರು

ದೇಶದ ಜಾನಪದ ವಿಶ್ವವಿದ್ಯಾಲಯ ಗೋಟುಗೋಡಿ
ಹೊನ್ನಬಿತ್ತೇವು ಹೊಲಕೆಲ್ಲ ಎಂಬ ಧ್ಯೇಯ ನುಡಿ
ಜಾನಪದದಲ್ಲಿ ಉಲ್ಲೇಖವಿದೆ ಮದಗ ಮಾಸೂರು ಕೆರೆ
ಕುರಿ ಉಣ್ಣೆ ಕಂಬಳಿ ಸಹಕಾರಿ ಸಂಘ ರಾಣೆಬೆನ್ನೂರೇ

ಐತಿಹಾಸಿಕ ಕೋಟೆಸುತ್ತಲ ಬಂಕಾಪುರ ನವಿಲು ಧಾಮ
ರಾಣೆಬೆನ್ನೂರಿನ ಕೃಷ್ಣ ಮೃಗ ವನ್ಯಜೀವಿ ಧಾಮ
ಎರಡು ಸಾವಿರ ವರ್ಷ ಪುರಾತನ ಹುಣಸೆ ಮರಗಳು
ಹಾವೇರಿ ಜಿಲ್ಲೆಯಲ್ಲಿವೆ ಈ ಎಲ್ಲ ವಿಶೇಷತೆಗಳು

ಹಾವನೂರಿನ ದ್ಯಾಮವ್ವ ರಟ್ಟಿಹಳ್ಳಿಯ ಕದಂಬೇಶ್ವರ
ಗುಡ್ಡದ ಮಾಲತೇಶ ಸ್ವಾಮಿ ಹಾನಗಲ್ ತಾರಕೇಶ್ವರ
ಎಳವಟ್ಟಿಯ ಜೈನ ಬಸದಿ ಗಳಗನಾಥೇಶ್ವರ
ಪುರಾತನ ಧಾರ್ಮಿಕ ಕೇಂದ್ರಗಳಿರುವ ಜಿಲ್ಲೆಯಿದು

Copyright © All rights reserved Newsnap | Newsever by AF themes.
error: Content is protected !!