ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಶಯನೀ ಏಕಾದಶಿ ಎನ್ನಲಾಗುತ್ತದೆ. ಶಯನೀ ಏಕಾದಶಿಗೆ ಪದ್ಮಾ ಏಕಾದಶಿ ಎಂಬ ಹೆಸರು ಕೂಡ ಇದೆ. ವರ್ಷದ ನಾಲ್ಕನೇ ಮಾಸವೇ ಆಷಾಢ ಮಾಸ ಮಳೆಗಾಲದ ಸಮಯ ಈ ಸಮಯದಲ್ಲಿ ಮಳೆ ಮತ್ತು ವೀಪರೀತಗಾಳಿಯ ಸಮಯ ಹೊಲದಲ್ಲಿ ಕೆಲಸ ಮಾಡುವ ಅಲ್ಲ ಬಿತ್ತನೆ ಕೆಲಸ ಮಾಡಿ ಮಳೆ ಮನೆಯಲ್ಲಿಯೇ ಇರುವಂತಹ ಸಮಯ. ಇದು ಕಾಯಕವಾದರೆ ಕೇವಲ ಇಂದಿಗಷ್ಟೇ ಬದುಕಿ ಮುಂದಿನ ವಿಚಾರ ಮಾಡದೇ ಇರುವ ಆಧ್ಯಾತ್ಮಿಕ ಚಿಂತನೆ ನಮ್ಮದಲ್ಲ ಹೀಗಾಗಿ ವರ್ಷದ ಹಬ್ಬ ಹುಣ್ಣಿಮೆಗಳು ಚೈತ್ರ ಮಾಸದಿಂದಲೇ ಆರಂಭವಾದರೂ ಕೂಡ ವಿದ್ಯುಕ್ತವಾಗಿ ಹಬ್ಬಗಳ ಸರಮಾಲೆ ಶ್ರಾವಣಕ್ಕೆ ಮೊದಲು ಬರುವ ಏಕಾದಶಿಯೇ ಶಯನೀ ಏಕಾದಶಿ
ಏಕಾದಶಿ ಎಂದರೆ ತಿಂಗಳ ಹನ್ನೊಂದನೆಯ ದಿನ. ಹರಿದಿನ ಎನ್ನಲಾಗುತ್ತದೆ. ತಿಂಗಳಿನಲ್ಲಿ ಎರಡು ಏಕಾದಶಿಗಳು ಬರುತ್ತವೆ. ವರ್ಷಕ್ಕೆ 24 ಏಕಾದಶಿಗಳು. ಈ 24 ಏಕಾದಶಿಗಳಲ್ಲಿ ಎರಡು ಅತೀ ಮುಖ್ಯವಾದವು ಎಂದರೆ ಆಷಾಢದಲ್ಲಿ ಬರುವ ಶಯನೀ ಏಕದಶಿ ಮತ್ತು ಮಾರ್ಗಶಿರ/ಪುಷ್ಯದಲ್ಲಿ ಬರುವ ವೈಕುಂಠ ಏಕಾದಶಿ.
ದೇವತೆಗಳ ಮತ್ತು ಮನುಷ್ಯರ ಕಾಲಮಾನದಲ್ಲಿ ವ್ಯತ್ಯಾಸವಿದೆ. ದೇವತೆಗಳ ಒಂದು ದಿನ ಮನುಷ್ಯರ ಒಂದು ವರ್ಷ. ಭಗವಂತನಾದ ಶ್ರೀಮನ್ನಾರಾಯಣನು ಯೋಗ ನಿದ್ರೆಗೆ ಜಾರುವ ಸಮಯ ಆಷಾಢ ಮಾಸ ಎಂಬ ಪ್ರತೀತಿ ಇದೆ. ಸರ್ವಶಕ್ತ ಮತ್ತು ಸರ್ವಾಧಾರನಾದ ಪರಮಾತ್ಮನು ನಿದ್ರೆ ಮಾಡಲು ಸಾಧ್ಯವೇ ಇಲ್ಲ ಅವನು ನಿದ್ರಾವಶನಾದರೆ ಪ್ರಪಂಚ ಅಲ್ಲೋಲ ಕಲ್ಲೋಲ ಆದೀತು. ಆದರೆ ಭಗವಂತನ ಯೋಗ ನಿದ್ರೆಯ ಸಮಯ ಈ ಚಾತುರ್ಮಾಸ ಹೀಗಾಗಿ ಶಯನೀ ಏಕಾದಶಿ ಭಗವಂತನ ಯೋಗ ನಿದ್ರೆಗೆ ಜಾರುವ ಸಮಯ ಎಂದು ಹೇಳಲಾಗುತ್ತದೆ.
ಪದ್ಮಾ ಅಂದರೆ ಶಯನೀ ಏಕಾದಶಿಯ ಮಹತ್ವ ಅದನ್ನು ಆಚರಿಸಿ ಫಲ ಪಡೆದವರ ಬಗೆಗೆ ತಿಳಿಯುವುದಾದರೆ, ಭವಿಷ್ಯೋತ್ತರ ಪುರಾಣದಲ್ಲಿ ಶೌನಕಾದಿಗಳು ಯುಧಿಷ್ಠಿರನಿಗೆ ಶಯನೀ ಏಕಾದಶಿ ಮಹತ್ವವನ್ನು ಹೇಳುತ್ತಾರೆ, ಹಿಂದೆ ಮಾಂಧಾತನೆಂಬ ರಾಜನು ರಾಜ್ಯಭಾರ ನಡೆಸುತ್ತಿದ್ದನು. ಆಗ ಮೂರು ವರ್ಷಗಳು ಮಳೆಬೆಳೆ ಇಲ್ಲದೇ ಜನರು ಅನಾವೃಷ್ಠಿಯ ತಾಪಕ್ಕೆ ಗುರಿಯಾಗಿ ಬರಗಾಲದ ಸಮಯವನ್ನು ಅನುಭವಿಸುತ್ತಿದ್ದರು. ಆಗ ತನ್ನ ಪ್ರಜೆಗಳ ಸಂಕಷ್ಟಕ್ಕೆ ಮರುಗಿದ ರಾಜನು ಅಂಗೀರಸ ಋಷಿಗಳ ಬಳಿ ಹೋಗಿ ತನ್ನ ಪ್ರಜೆಗಳ ದುಃಖ ಮತ್ತು ಸಂಕಷ್ಟದ ಅಳಲನ್ನು ತೋಡಿಕೊಂಡನು, ಆಗ ಋಷಿಗಳು ನಿಮ್ಮ ರಾಜ್ಯದಲ್ಲಿ ಒಬ್ಬ ಶೂದ್ರನು ತಪಸ್ಸನ್ನು ಆಚರಿಸುತ್ತಿರುವನು ಅವನನ್ನು ಸಂಹರಿಸಿದರೆ ವೃಷ್ಟಿಯಾಗುವುದು ಎಂದು ರಾಜನಿಗೆ ಹೇಳಿದರು. ಆಗ ರಾಜನು ಅವನು ಮಾಡುತ್ತಿರುವುದು ತಪಸ್ಸು ಅಂತಹ ತಪವನ್ನು ಆಚರಿಸುತ್ತಿರುವ ಮನುಷ್ಯನನ್ನು ಸಂಹರಿಸುವುದು ಆಗದ ಕೆಲಸ ಬೇರೆ ಉಪಾಯವನ್ನು ಹೇಳಿರಿ ಎಂದು ಬೇಡಿಕೊಂಡನು. ಆಗ ಅಂಗೀರಸರು ಹಾಗಾದರೆ ಆಷಢ ಶುಕ್ಲ ಏಕಾದಶಿ ಅಂದರೆ ಶಯನೀ/ಪದ್ಮಾ ಏಕಾದಶಿ ವ್ರತವನ್ನು ಆಚರಿಸು ಎಂದು ಉಪದೇಶಿಸಿದರು. ಹಿಂದಿರುಗಿ ಅರಮನೆಗೆ ಬಂದು ಏಕಾದಶಿ ವ್ರತವನ್ನು ಆಚರಿಸಿದನು, ಆಗ ಎಲ್ಲೆಡೆಯೂ ಸಾಕಷ್ಟು ಪ್ರಮಾಣದ ಮಳೆಯಾಗಿ ರಾಜ್ಯವು ಸುಭೀಕ್ಷವಾಯಿತು. ಎಂದು ಭಾಗವತದಲ್ಲಿ ಉಲ್ಲೇಖವಿದೆ.
ಶಯನೀ ಏಕಾದಶಿ ದಿನದಿಂದಲೇ ಚಾತುರ್ಮಾಸ್ಯ ಆರಂಭವಾಗುತ್ತದೆ. ಸನ್ಯಾಸಿಗಳು ಚಾತುರ್ಮಾಸ್ಯ ವ್ರತವನ್ನು ಮಾಡುತ್ತಾರೆ. 4 ತಿಂಗಳುಗಳ ಕಾಲ ಒಂದೇ ಸ್ಥಳದಲ್ಲಿ ಇದ್ದು ನಿತ್ಯ ಕರ್ಮಗಳನ್ನು ವಿಶೇಷ ಪೂಜೆಗಳನ್ನು ಮಾಡುವ ಪದ್ಧತಿ ತಲೆತಲಾಂತರಗಳಿಂದ ನಡೆದು ಬಂದಿದೆ.
ಆಷಾಢ ಏಕಾದಶಿಯಂದು ಪಂಢರಪುರ ವಿಠ್ಠಲನ ವಾರಿ ಬಹಳ ದೊಡ್ಡ ಉತ್ಸವ. ಪಾಂಡುರಂಗನ ಭಕ್ತರು ವಾರಕರಿ ಹೋಗುತ್ತಾರೆ. ಬೇರೆ ಬೇರೆ ಊರುಗಳಿಂಧ ಆಷಾಢ ಶುದ್ಧ ಏಕಾದಶಿಯಂದು ವಿಠ್ಠಲನ ದರ್ಶನ ಮಾಡಿದರೆ ಮುಕ್ತಿಯನ್ನು ಪಡೆಯುತ್ತಾರೆಂಬ ನಂಬಿಕೆ ಜಾನಪದರಿಗೆ ಇದೆ. ಬೇರೆ ಬೇರೆ ಊರುಗಳಿಂದ ಲಕ್ಷಾನುಗಟ್ಟಲೇ ಜನರು ಬಂದು ವಿಠ್ಠಲನ ದರ್ಶನ ಪಡೆಯುತ್ತಾರೆ. ದೇವರ ದರ್ಶನ ಆಗದೇ ಹೋದರು ಗೋಪುರ ದರ್ಶನವನ್ನಾದರೂ ಏಕಾದಶಿಯಂದೇ ಮಾಡಬೇಕು ಎಂಬ ನಂಬಿಕೆ ಕೂಡ ಇದೆ.
ಹಿಂದಿನ ಕಾಲದಲ್ಲಿ ಏಲ್ಲರೂ ಅಂದರೆ ಎಲ್ಲ ಜಾತಿಯವರೂ ಕೂಡ ವ್ರತ ನೇಮ ಪೂಜೆಗಳನ್ನು ಮಾಡುತ್ತಿದ್ದರು. ಏಕಾದಶಿ, ಇಂದಿನ ಕಾಲದಲ್ಲಿ ಬ್ರಾಹ್ಮಣರೇ ಮಾಡದ ಪರಿಸ್ಥಿತಿ ಬಂದೊದಗಿದೆ.
ಏಕಾದಶಿಯನ್ನು ಹರಿದಿನ ಎಂದು ಅಂದು ದೇವರು ನಮಗೆ ಜೀವನವನ್ನು ನೀಡಿ ನಮ್ಮನ್ನು ಉದ್ಧರಿಸಿದ್ದಕ್ಕಾಗಿ ಅವನನ್ನು ಸ್ಮರಿಸುವ ಉಪಕಾರ ಸ್ಮರಣೆಯನ್ನು ಮಾಡುವ ಸಲುವಾಗಿ ಏಕಾದಶಿಯನ್ನು ಮಾಡಬೇಕು. ಏಕಾದಶಿಯ ದಿನ ನಿರಾಹಾರ ಏಕೆ ಮಾಡಬೇಕು ಎಂಬ ಆಧುನಿಕ ಜನರ ಪ್ರಶ್ನೆಗೆ ದೇಹದ ಜೀರ್ಣಕ್ರಿಯೆಯ ಕಾರ್ಯಕ್ಕೆ 15 ದಿನಕ್ಕೆ ಒಮ್ಮೆ ವಿಶ್ರಾಂತಿ ನೀಡಿದಾಗ ನಮ್ಮಲ್ಲಿ ಸೇರಿಸಿಟ್ಟ ಶಕ್ತಿಯು ಖರ್ಚಾಗುತ್ತದೆ ಮತ್ತು ಒಂದು ದಿನ ಅಂಗಾಂಗಗಳಿಗೆ ವಿಶ್ರಾಂತಿ ದೊರೆತು, ಮುಂದಿನ 15 ದಿನಗಳ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಇದಲ್ಲದೇ ಅನಾವಶ್ಯಕ ರೋಗಗಳು ಬರುವುದು ಕೂಡ ಕಡಿಮೆಯಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಹೀಗೆ ಆರೋಗ್ಯ ಮತ್ತು ಧಾರ್ಮಿಕ ಮಹತ್ವ ಹೊಂದಿರುವ ಏಕಾದಶಿಯನ್ನು ತಪ್ಪದೇ ಮಾಡಬೇಕು. 24 ಏಕಾದಶಿಗಳನ್ನು ಮಾಡುವುದು ಅಸಾಧ್ಯವೆನಿಸಿದರೆ ಕೆಲವೂ ಮುಖ್ಯವಾದ ದಿನಗಳು ಏಕಾದಶಿ ವ್ರತವನ್ನು ತಪ್ಪದೇ ಆಚರಿಸಬೇಕು. ಕಡೆಯ ಪಕ್ಷ ಶಯನಿ ಮತ್ತು ವೈಕುಂಠ ಏಕಾದಶಿಯನ್ನಾದರೂ ಮಾಡಲೇ ಬೇಕು. ನಿರಾಹಾರ ಆಗದೇ ಹೋದರೂ ಫಲಾಹಾರವನ್ನಾದರೂ ಮಾಡಬೇಕು. ಅನಾರೋಗ್ಯ ಪೀಡಿತರು, ಸಣ್ಣ ಮಕ್ಕಳು, ಗರ್ಭಿಣಿ ಸ್ತ್ರೀಯರನ್ನು ಬಿಟ್ಟು ಮಿಕ್ಕೆಲ್ಲರೂ ಏಕಾದಶಿ ವ್ರತವನ್ನು ಆಚರಿಸಬೇಕು.
ಮಾಧುರಿ ದೇಶಪಾಂಡೆ, ಬೆಂಗಳೂರು
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ