November 24, 2024

Newsnap Kannada

The World at your finger tips!

Spread the love

“ಬಾಂಧವ್ಯ –ಬಂಧನ ಎರಡೂ ಮರೆಯಬಾರದು. ಊರಿಗೆ ಬರುತ್ತಿರಬೇಕು. ಹುಟ್ಟಿದೂರನ್ನು ಮರೆಯಬಾರದು……..’ ಹಾಗೆಂದು ನಾಗರಾಜ ಮೇಷ್ಟ್ರು ಹೇಳಿದ ಮಾತುಗಳು ರಾಜೀವನ ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು. ಬಾಲ್ಯ ಯೌವನ ಕಳೆದ ಕನಸುಗಳು ರೂಪುಗೊಂಡ, ಪ್ರೀತಿ, ವಾತ್ಸಲ್ಯದ ಗೂಡು ತನ್ನ ಮನೆ, ಇಂದು ಪಾಳು ಬಿದ್ದು ಕೊಂಪೆಯಂತಾಗಿರುವುದು ನೋಡಿ ಮನಸ್ಸು ರಾಡಿಯಾಯಿತು. ಒಳಹೊಕ್ಕರೆ ಹರಳೆಣ್ಣೆ ಹಚ್ಚಲು ಅಮ್ಮ ಅಟ್ಟಿಸಿಕೊಂಡುಬರುತ್ತಿದ್ದುದು, ತಾನು ಓಡುತ್ತಿದ್ದುದು ಶಾನುಭೋಗರಾದ ತನ್ನ ತಂದೆಯ ಬಳಿ ಪತ್ರ ಬರೆಸಲು ಮನೆಗೆ ಬರುತ್ತಿದ್ದ ಮಂದಿ ಎಲ್ಲ ಇತ್ಯರ್ಥವಾದಾಗ ಕಲ್ಲು ಸಕ್ಕರೆ ಹಂಚುತ್ತಿದ್ದುದು, ಅದರಲ್ಲಿ ಅವನು ಸಿಂಹ ಪಾಲು ಪಡೆಯುತ್ತಿದ್ದುದು, ಹಾಳಾದ ಪೆನ್ನು ಮನೆಯ ಮುಂದೆ ಎಸೆದು, ಯಾರಾದರೂ ದಾರಿಹೋಕರು ಪೆನ್ನು ಸಿಕ್ಕಿತೆಂದು ತೆಗೆದುಕೊಂಡಾಗ ಕಿಟಕಿಯಿಂದ ನೋಡಿ ಕಿಸಕ್ಕನೆ ನಗುತ್ತಿದ್ದುದು, ನೆನಪುಗಳು ಒಂದೇ ಎರಡೇ……..
“ನಾಳೆ ವಕೀಲರು ಬರುತ್ತಾರೆ. ಅವರು ಬರುವುದರೊಳಗೆ ನಮ್ಮಲ್ಲಿ ಇತ್ಯರ್ಥವಾದರೆ ಬೇಗ ಮುಗಿಸಿ ಬಿಡಬಹುದು. …’
ಎಲ್ಲರೂ ತಲೆ ಆಡಿಸಿದರೂ ಅಮ್ಮ ಮಾತ್ರ ಮೌನಕ್ಕೆ ಶರಣಾಗಿದ್ದಳು. ಅವಳ ಒಪ್ಪಿಗೆಯನ್ನು ಪಡೆದೇ ವಕೀಲರಿಗೆ ಬರ ಹೇಳಲಾಗಿತ್ತು. ಈಗ ಈ ಮೌನ. ಅವಳ ಮೌನ ಒಂದು ರೀತಿಯ ವಿಚಿತ್ರ ಹೋರಾಟ. ಇದು ಇಂದು ನೆನ್ನೆಯದಲ್ಲ. ಅವಳಿಗೆ ಬೇಡಾ ಎನಿಸಿದರೆ ಈ ರೀತಿಯ ಮೌನ ಹೋರಾಟ ಮಾಡುತ್ತಿದ್ದಳು. ಅವಳ ದೇಹ ಬಹಳ ಬಳಲಿತ್ತು. ಆದರೂ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಒಂದು ಸ್ಪಷ್ಟತೆ ಇತ್ತು. ಹಾಳೆಗಾದರೂ ಮಾರ್ಜಿನ್ನು ಇರುತ್ತದೆ ಆದರೆ ಅವಳ ನಿರ್ಧಾರಗಳಿಗೆ ಯಾವುದೇ ಮಾರ್ಜಿನ್ನು ಇರುವುದಿಲ್ಲ. ಆ ನಿಸ್ತೇಜ ಕಣ್ಣುಗಳಲ್ಲಿ ಹೇಳಲಾರದ ನೋವಿತ್ತು.
‘ ಅಮ್ಮ ನಾಳೆ ಹೆಣ್ಣು ಮಕ್ಕಳಿಗೂ ಬರ ಹೇಳಿದ್ದೇವೆ. ಅವರೂ ಬರುತ್ತಾರೆ. ಎಲ್ಲವೊ ನಾಳೆ ಮುಗಿದು ಹೋದರೆ ನಮ್ಮ ನಮ್ಮ ಕೆಲಸಗಳಿಗೆ ನಾವು ತೆರಳಬಹುದು. ..’
………………………
‘ನೋಡಪ್ಪ ರಾಜೀವ, ಅಮ್ಮ ಏನೂ ಮಾತಾಡ್ತಾ ಇಲ್ಲ. ನೀನು ಹೇಳಿನೋಡು. …’ ರಾಜಾರಾಮ ತಮ್ಮನನ್ನು ಮಧ್ಯಸ್ಥಿಕೆಗೆ ಕರೆದ.
‘ಮಾತಾಡ್ತಾ ಇಲ್ಲ ಅಂದ್ರೆ ಬಿಡು. ನಾಳೆ ವಕೀಲರಿಗೆ ಬರೋದು ಬೇಡ ಅಂತ ಹೇಳಿಬಿಡು. ..’
‘ ಹಾಗಾಂದ್ರೆ ಹೇಗೇ. ಅಲ್ಲಪ್ಪ ಎಲ್ಲರಿಗೂ ಬರೋದಕ್ಕೆ ಹೇಳಿದೀವಿ. ಈಗ ಬರೋದು ಬೇಡ ಅಂದ್ರೆ…..’
‘ಮತ್ತೇನು ಮಾಡೋದಕ್ಕೆ ಆಗುತ್ತೆ. ಅಮ್ಮನ ಕೈಯಲ್ಲಿ ಬಲವಂತವಾಗಿ ಸೈನ್ ಹಾಕಿಸೋಕೆ ಆಗುತ್ತಾ…… ಬಿದ್ದಿರಲಿ ಬಿಡು ಯಾವಾಗ ಪಾಲು ಆಗಬೇಕೋ ಆಗ ಆದ್ರೆ ಆಯ್ತು.
‘ಅಲ್ಲಪ್ಪ ನಾಳೆ ರಾಜಿ, ರಾಗಿಣಿಗೆ ಬರೋದಕ್ಕೆ ಹೇಳಿದೀವಿ…’
‘ಬರ್ಲಿ ಬಿಡು. ಅಮ್ಮನ್ನ ಮಾತಾಡಿಸಿಕೊಂಡು ಹೋಗ್ತಾರೆ…;
ಅಣ್ಣನಿಂದ ಉತ್ತರ ಬರಲಿಲ್ಲ. ಅತ್ತಿಗೆ ಕೆರಳಿದ ಸರ್ಪವಾದಳು. ಸೀರೆಯ ಸೆರಗಿನ ತುದಿಯನ್ನು ಬೆರಳಿಗೆ ಸುತ್ತುತ್ತಾ ‘ ಸರಿ ನಡೀರಿ ನಾವು ಹೊರಡೋಣ ನಮ್ಮ ಸಮಯಕ್ಕೆ ಬೆಲೆ ಇಲ್ಲ. ಕೆಲ್ಸ ಕಾರ್ಯ ಎಲ್ಲ ಬಿಟ್ಟು ಬಂದಿದ್ದಾಯ್ತು ಈ ಸಂಪತ್ತಿಗೆ…. ‘ದುಡು ದುಡು ಎಂದು ತನ್ನ ಬ್ಯಾಗು ಸರಿ ಮಾಡಿಕೊಳ್ಳ ತೊಡಗಿದಳು.
ಅದುವರೆಗೂ ಸುಮ್ಮನೆ ಮಲಗಿದ್ದ ಅಮ್ಮ ‘ ಆಸ್ತಿ ಪಾಲಂತೆ ……ಪಾಲು ಬೇರೆ ಕೇಡು. ಕೊಟ್ಟು ಬಿಡ್ತಾರೆ ಪಾಲು. ಅತ್ತೆ ಮಾವ ಯಾರು ಬೇಡ ಪಾಲು ಮಾತ್ರ ಬೇಕು. …’
ತನ್ನಷ್ಟಕ್ಕೆ ತಾನು ಮಾತನಾಡುತ್ತಿದ್ದುದು ಅಲ್ಪ ಸ್ವಲ್ಪ ಕೇಳುತ್ತಿತ್ತು.
ಅವಳು ಏನು ಮಾತನಾಡದೇ ತನ್ನ ನಿರ್ಧಾರವನ್ನು ತಿಳಿಸಿದ್ದಳು. ಆಶಾ ಎಲ್ಲರಿಗೂ ಕಾಫಿ ಮಾಡಿ ತಂದಳು. ಎಲ್ಲರೂ ಲೋಟಗಳನ್ನು ಕೈಗೆತ್ತಿಕೊಂಡರು. ಅಮ್ಮ ಮಾತ್ರ ತನಗೆ ಬೇಡ ಎಂದು ಪಕ್ಕಕ್ಕೆ ತಳ್ಳಿದಳು. ಅವಳು ಮಾತು ಕೇಳುತ್ತಿದ್ದುದೆಂದರೆ ಅದು ರಾಜೀವನದು ಮಾತ್ರ.
‘ಅಮ್ಮ ನಿಂಗಿಷ್ಟ ಇಲ್ದೇ ಪಾಲು ಮಾಡೋದು ಬೇಡ. ರಾಜಿ ರಾಗಿಣಿ ಬರ್ಲಿ ನಾಳೆ. ನಿಂಗೆ ಸ್ವಲ್ಪ ಸಮಾಧಾನ ಆಗುತ್ತೆ. …’ ಅಲ್ಲಿಯವರಿಗೂ ತನ್ನಷ್ಟಕ್ಕೆ ಪಿಟಿ ಪಿಟಿ ಎನ್ನುತ್ತಿದ್ದವಳು ಶೂನ್ಯದತ್ತ ನೋಡುತ್ತಾ ಕುಳಿತುಬಿಟ್ಟಳು.
ರಾಜೀವ ಬಲವಂತದಿಂದ ಎರಡು ಗುಟುಕು ಕಾಫಿ ಕುಡಿಸಿದ. ಅವಳ ಕೈಗಳನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ನೇವರಿಸ ತೊಡಗಿದ.
‘ಅಮ್ಮ ನಾವು ಬರ್ತೀವಿ. ಅಣ್ಣ-ಅತ್ತಿಗೆ ನಾಮಕೇವಾಸ್ತೆ ಅವಳ ಕಾಲನ್ನು ಮುಟ್ಟಿ ಕಣ್ಣಿಗೊತ್ತಿಕೊಂಡರು. ಅವಳು ತಲೆ ಅಲ್ಲಾಡಿಸಿದಳು. ಪಾಲು ಮಾಡುವುದಿಲ್ಲ ಹೊರಡಿ ಎನ್ನುವಂತಿತ್ತು ಆ ಭಾವ. ಅವಳ ಮನದಲ್ಲಿ ಹೆಪ್ಪುಗಟ್ಟಿದ್ದ ದುಖವೆಲ್ಲ ಕಣ್ಣೀರಾಗಿ ಇಳಿಯಿತು.
ತನ್ನ ಮನೆ ತನ್ನ ರಾಜ್ಯವದು. ಆದರೆ ಅದೇ ಮನೆಯ ಮೂಲೆಯಲ್ಲಿ ಬಿದ್ದುಕೊಂಡಿರುವಂತಹ ಪರಿಸ್ಥಿತಿ. ಇಲ್ಲಾ ನಾನಿರಬೇಕು ಮನೆಯಲ್ಲಿ ಇಲ್ಲ ಅವಳಿರಬೇಕು ಎಂದು ಸವಾಲು ಹಾಕಿದ ಕಾಮಾಕ್ಷಿ ಏನೋ ನೆಪ ತೆಗೆದು ಮಗನ ಮನೆಗೆ ಹೊರಟೇಬಿಟ್ಟಳು. ರಾಜಾರಾಮನ ಪಾಡು ನಾಯಿಪಾಡಾಯಿತು. ಭಟ್ಟರ ಹೊಟೇಲಿನಲ್ಲಿ ಸಿಗುತ್ತಿದ್ದ ಎರಡು ಇಡ್ಲಿ ಅದಕ್ಕೆ ಖಾರವಾದ ಚಟ್ನಿ ತಂದು ಅವಳ ಮುಂದಿತ್ತು ತನ್ನ ಕೆಲಸವಾಯಿತೆಂದು ಹೊರಟುಬಿಡುತ್ತಿದ್ದ. ಮಕ್ಕಳನ್ನು ಸುತ್ತಲೂ ಕೊರಿಸಿಕೊಂಡು ರಸಕವಳ ಮಾಡಿ ಬಡಿಸಿದ ಕೈಗಳವು. ಅಕ್ಕರೆಯಿಂದ ಉಣಿಸಿದ ಕೈಗಳಿಂದ ಆ ಇಡ್ಲಿಯನ್ನು ತಿಂದು ನೀರು ಕುಡಿದರೆ ಮತ್ತೆ ಮಾರನೆಯ ದಿನದವರಿಗೂ ಯಾರೊ ಕೇಳುವರಿಲ್ಲ. ರಾಶಿ ರಾಶಿ ಭತ್ತದ ರಾಶಿಗೆ ಪೊಜೆ ಮಾಡಿ ಕೆಲಸಗಾರಗಿಗೆ ಉಡಿ ತುಂಬಿದ ಕೈಗಳು. ಯಾವುದನ್ನೊ ತಲೆಗೆ ಹಚ್ಚಿಕೊಳ್ಳುವವನಲ್ಲ ರಾಜಾರಾಮ. ಅವಳಿಗೆ ಏನಾದರೂ ತಿನ್ನಬೇಕು ಎಂದೆನಿಸುತ್ತಲೇ ಇರಲಿಲ್ಲ. ಪದೇ ಪದೇ ಎದ್ದು ಹೋಗಲು ಆಗದೆ ಕುಳಿತ ಜಾಗದಲ್ಲೆ ಒದ್ದೆ ಮಾಡಿಕೊಳ್ಳುವಳು. ಒದ್ದೆಯಾದ ಭಾಗವನ್ನು ಯಾರಿಗೂ ಕಾಣದಂತೆ ಹಿಂದಕ್ಕೆ ಮಡಚಿ ಉಳಿದ ಭಾಗದ ಮೇಲೆ ಕೂರುವಳು. ಪ್ರತಿ ನಿತ್ಯ ಮಕ್ಕಳ ಬೇಕು ಬೇಡಗಳನ್ನು ಗಮನಿಸುತ್ತಾ ಒಗೆದು, ಒಣಗಿಸಿ ಇಸ್ತ್ರಿ ಹಾಕಿದಂತೆ ಮಡಚಿ ದಿಂಬಿನ ಕೆಳಗಿಟ್ಟು ಶಾಲೆಗೆ ಹೋಗುವ ಮೊದಲು ಮಕ್ಕಳಿಗೆ ತೆಗೆದುಕೊಡುತ್ತಿದ್ದಳು. . ಮಕ್ಕಳು ಹಾಕಿಕೊಂಡಾಗ ಅವಳಿಗೆ ಧನ್ಯತಾ ಭಾವ.
ಹಾಸಿಗೆಯ ಹೊದಿಕೆ ತೆಗೆಯದೆ ತಿಂಗಳೇ ಕಳೆದು ಹೋಗಿತ್ತು. ಮೊದಲು ದುರ್ನಾತ ಬರುತ್ತಿದ್ದರೂ ಬರು ಬರುತ್ತಾ ಅಮ್ಮನಿಗೆ ಅಭ್ಯಾಸವಾಗಿ ಹೋಯಿತು. ಮಳೆಗಾಲ ಅಮ್ಮ ಚಳಿ ತಡೆಯಲಾರದೆ
‘ ರಾಮಾ ಒಂದು ಕಂಬಳಿನಾದ್ರೂ ತಾರೋ. ಯಾಕೋ ಬಹಳ ಚಳಿ …’ ಎಂದೂ ಏನೂ ಕೇಳದ ಅಮ್ಮ ಬಹಳ ಯೋಚಿಸಿ ಕೇಳುವುದೋ ಬೇಡವೋ ಎಂದು ಕೇಳಿದ್ದಳು. ರಾಜಾರಾಮ ತನ್ನ ರೂಮಿನಲ್ಲಿ ಹಳೆಯ ಕಂಬಳಿಯೊಂದನ್ನು ಹುಡುಕಿ ತಂದು ಹೊದಿಸಿ
‘ತೊಗೊ ಅಲ್ಲಿ ಸುಮ್ನೆ ಬಿದ್ದಿತ್ತು ತಂದೆ….’ ಎಂದ.
‘ ಅಂದ ಹಾಗೆ ರಾಜೀವ ಬರ್ತಾನಂತೆ ನಾಳೆ. ಅದೇನೋ ಬ್ಯಾಂಕ್ ಕೆಲಸವಂತೆ.’
ಅವಳ ಮುಖದಲ್ಲಿ ಕಿರು ಮಂದಹಾಸ ಕಾಣಿಸಿತು.
‘ ಆಶಾನೊ ಬರ್ತಾಳಾಂತೇನೋ?
ಗೊತ್ತಿಲ್ಲಮ್ಮ ಅವನೇನೂ ಹೇಳಲ್ಲ. ಅವಳೆಲ್ಲಿ ಬರ್ತಾಳೆ. ಮದುವೆಯಾದಾಗಿನಿಂದ ಒಂದೈದಾರು ಸರ್ತಿ ಬಂದಿದ್ರೆ ಹೆಚ್ಚು…’
‘ ಒ…… ಅವರವರ ಕೆಲ್ಸ ಅವರಿಗೆ. ಆ ಶಾಂತಮ್ಮನಿಗೆ ಹೇಳು ಎರಡು ದಿನ ಊಟ ಕಳಿಸಕ್ಕೆ…’ ಹಾಗೆ ಹೇಳುವಾಗ ದು:ಖ ಒತ್ತರಿಸಿ ಬಂದಿತ್ತು. ರಾಜೀವನಿಗೆ ಅವರೆಕಾಳಿನ ಉಪ್ಪಿಟ್ಟೆಂದರೆ ಎಲ್ಲಿಲ್ಲದ ಪ್ರೀತಿ. ಅವನು ಬರುವನೆಂದರೆ ಎಲ್ಲಿಂದಲಾದರು ಸರಿ ಅವರೆಕಾಳು ತರಿಸಿ ಉಪ್ಪಿಟ್ಟು ಮಾಡಿ ಅವನು ತೃಪ್ತಿಯಿಂದ ತಿಂದು ಎದ್ದು ಹೋದರೆ ಇವಳಿಗೆ ಮನಸ್ಸಿನಲ್ಲೇ ಖುಷಿ. ಅವನೆಂದೂ ಹೇಳಿದವನಲ್ಲ ‘ಅಮ್ಮ ತುಂಬಾ ಚೆನ್ನಾಗಿದೆ ಎಂದು. ಮೊದಲ ಸಲ ಉಪ್ಪಿಟ್ಟಿಗೆ ತುಪ್ಪ, ಎರಡನೆಯ ಸಲ ಚಟ್ಣಿಪುಡಿಯೊಂದಿಗೆ, ಮೂರನೆಯ ಸಲ ಕೆನೆ ಮೊಸರಿನೊಂದಿಗೆ ತಿಂದೆದ್ದರೆ ಅವಳಿಗೆ ತೃಪ್ತಿಯ ಭಾವ. ಈಗಿನ ಪರಿಸ್ಥಿತಿಯಲ್ಲಿ ತನ್ನ ಕೈಯಾರ ಮಾಡಿ ಬಡಿಸಲು ಸಾಧ್ಯವಿಲ್ಲ ಎಂದು ಬೇಸರ ಅವಳಿಗೆ. ರಾಜೀವನ ಗುಂಗಿನಲ್ಲಿ ಮಲಗಿದ್ದ ಅವಳಿಗೆ ನೆತ್ತಿಯ ಮೇಲೆ ಹಿತವಾದ ಸ್ಪರ್ಶವಾದಾಗ ಅದು ರಾಜೀವನದೇ ಎಂದು ತಿಳಿಯಲು ಬಹಳ ಸಮಯ ಬೇಕಾಗಲಿಲ್ಲ.
ತಾನು ಊಹಿಸಲಾರದ ಸ್ಥಿತಿಯಲ್ಲಿ ಅಮ್ಮನನ್ನು ನೋಡಿ ರಾಜೀವನ ಕಣ್ಣಾಲಿಗಳು ತೇವವಾದವು. ವಿಪರೀತ ದುರ್ನಾತ. ನಾಲ್ಕೈದು ದಿನಗಳ ಇಡ್ಲಿ ಪೊಟ್ಟಣಗಳು. ಅದರಿಂದ ಹಳಸಿದ ವಾಸನೆ. ಸೀರೆಯೆಲ್ಲಾ ಒದ್ದೆಯಾಗಿದೆ. ತಿಂಗಳಿಂದ ಸ್ನಾನವಿಲ್ಲ, ಊಟವಿಲ್ಲ ಮುಖದಲ್ಲಿ ಪ್ರೇತ ಕಳೆ. ಮೈಯೆಲ್ಲಾ ಮೂಳೆಯ ಚಕ್ಕಳ. ಅವಳ ದೇಹದಲ್ಲಿ ನಡೆಯುತ್ತಿದುದು ಉಸಿರಾಟ ಒಂದೇ.
ಮಕ್ಕಳಿಗೆ ಒಂದು ಸಣ್ಣ ಗಾಯವಾದರೂ ಅದೆಷ್ಟು ನಿದ್ರೆ ಇಲ್ಲದ ರಾತ್ರೆಗಳನ್ನು ಕಳೆದಿದ್ದಳು ಅಮ್ಮ.
‘ ರಾಮ ಬಾ ಸ್ವಲ್ಪ ಸಹಾಯ ಮಾಡು ಅಮ್ಮಂಗೆ ಸ್ನಾನ ಮಾಡಿಸೋಣ. ಹಾಗೇ ಹೊಸ ಹೊದಿಕೆ ಕೊಡು. ಇದೆಲ್ಲ ಎಸಿ… ..’
ಅಮ್ಮ ಏಳಲು ಒಪ್ಪಲೇ ಇಲ್ಲ. ಅವಳಿಗೆ ಮಗನ ಕೈಯಲ್ಲಿ ಸ್ನಾನ ಮಾಡಿಸಿಕೊಳ್ಳುವುದು ಸಂಕೋಚದ ವಿಷಯ. ಇಪ್ಪತ್ತೈದು ಕೆ. ಜಿ ಇರದ ಅವಳನ್ನು ಅನಾಮತ್ತಾಗಿ ಎತ್ತಿಬಿಟ್ಟ ರಾಜೀವ ನೋವಿನಿಂದ ಚೀರಲೂ ಆಗದಷ್ಟು ನಿಶಕ್ತಿ ಅವಳಿಗೆ. ಮೈಯಲ್ಲಾ ಗಾಯ. ಬೆನ್ನಂತೂ ಒದ್ದೆಯಲ್ಲಿ ಮಲಗಿ ಕೀವು ತುಂಬಿದ ಗಾಯಗಳು. ಮೈ ಮೇಲೆ ನೀರು ಬಿದ್ದರೆ ಕೆಂಡ ಸುರಿದಷ್ಟು ಯಾತನೆ. ಬಟ್ಟೆ ಒದ್ದೆ ಮಾಡಿಕೊಂಡು ಮೈಯೆಲ್ಲಾ ಒರೆಸಿ ಮೈತುಂಬ ಪೌಡರು ಹಾಕಿದ ಮೇಲೆ ಅವಳ ಮುಖ ಸ್ವಲ್ಪ ಅರಳಿತು. ಆ ಹೊದಿಕೆ ಹಾಸಿಗೆಯನ್ನು ಎಸಿದು ಬಂದ.
“ ರಾಮ ಮುಂದೆ ಹೇಗೆ? ಅತ್ತಿಗೆ ಯಾವಾಗ ಬರ್ತಾರೆ?
‘ಅದೇನು ನೆಚ್ಚಿಕೆ ಇಲ್ಲಾಪ್ಪ. ಅಮ್ಮನಿಗೆ ಬೇರೇನೇ ವ್ಯವಸ್ಥೆ ಮಾಡಬೇಕು. ಇಲ್ಲಿ ನಂಗೆ ನೋಡಿಕೊಳ್ಳೋದು ಬಹಳ ಕಷ್ಟ. ..’
‘ಮತ್ತೆ ನನಗೆ ಯಾಕೆ ತಿಳಿಸಲಿಲ್ಲ ನೀನು. ನೀನು ತಿಳಿಸದೆ ನನಗೆ ಹೇಗೆ ತಿಳಿಯುತ್ತದೆ?” ರಾಜೀವನ ಮಾತಿನಲ್ಲಿದ್ದ ಆಕ್ಷೇಪಣೆಯನ್ನು ಗಮನಿಸಿದ ರಾಜಾರಾಮ ಮೌನ ವಹಿಸಿದ.
‘ಅಮ್ಮ ನಡಿ ಬೆಂಗಳೂರಿಗೆ. ನಾನು ಅಂಬುಲೆನ್ಸ್ ಗೆ ಬರ ಹೇಳಿದ್ದೇನೆ. ನೀನೇನೋ ಮಾತಾಡುವಂತಿಲ್ಲ. ರಾಮ ಅಮ್ಮನ್ನ ಕರಕೊಂಡು ಹೋಗ್ತೀನಿ. …’
‘ನಾನು ಅಮ್ಮಂಗೇ ಹೇಳ್ತಾನೆ ಇದ್ದೇ. ಒಂದೆರಡು ದಿನ ರಾಜೀವನ ಮನೆಗೆ ಹೋಗಿ ಬಾ ಅಂತ. ಅಮ್ಮಂಗೇ ಇಲ್ಲಿಂದ ಎಲ್ಲಿಗೆ ಹೋಗೋಕು ಇಷ್ಟ ಇಲ್ಲಾ. ನಂಗೊ ಇಲ್ಲಿ ನೋಡಿಕೊಳ್ಳೋಕೆ ತುಂಬಾ ಕಷ್ಟ ಆಗ್ತಾ ಇದ್ಯಪ್ಪ…’
ಅಮ್ಮ ಬಂದು ಬೆಂಗಳೂರು ಸೇರಿದಳು. ಔಷಧಿ ಉಪಚಾರದ ನಂತರ ಅವಳಲ್ಲಿ ಸ್ವಲ್ಪ ಚೈತನ್ಯ ತುಂಬಿತು. ಅಲ್ಲೇ ವಾಸವಿದ್ದ ರಾಜೇಶ್ವರಿ ಮತ್ತು ರಾಗಿಣಿ ಯಾವಾಗಲಾದರೊ ಬಂದು ಹೋಗುತ್ತಿದ್ದರು. ರಾಜಾ ರಾಮ ಬಂದು ಹೋಗುತ್ತಿದ್ದ. ಎಲ್ಲರೂ ಬಂದರೂ ಕಾಮಾಕ್ಷಿ ಮತ್ತು ಮೊಮ್ಮಗ ಪ್ರಶಾಂತನ್ನು ನೋಡಲು ಅವಳ ಮನಸ್ಸು ಹಾತೊರೆಯುತ್ತಿತ್ತು. ರಾಮ ಮುಂದಿನ ಸರ್ತಿ ಬರೋವಾಗ ಕಾಮಾಕ್ಷೀನಾ ಕರಕೊಂಡು ಬಾರೋ. ಪ್ರಶಾಂತಂಗೆ ಬರೋಕ್ಕೆ ಹೇಳೋ ಎಂದು ಅವಲತ್ತುಕೊಳ್ಳುತ್ತಿದ್ದರು.
ಪ್ರಶಾಂತನ ವಿಷಯವನ್ನು ರಾಮನ ಬಾಯಲ್ಲಿ ಕೇಳಲು ಅವಳಿಗೆ ಖುಷಿ.
ಅಂತೂ ನಿನ್ನ ಮಗ ದೊಡ್ಡ ಇಂಜಿನಿಯರ್ ಆದ. ಕೆಲಸಕ್ಕೆ ಸೇರಿದ. ಒಂದು ಒಳ್ಳೆ ಹುಡುಗಿ ನೋಡಿ ಮದುವೆ ಮಾಡಿ ಬಿಡು ಎಂದು ತನ್ನ ಬೊಚ್ಚು ಬಾಯಲ್ಲಿ ನಗುವಳು.
ಅವಳಿಗೆ ಹತ್ತು ವರ್ಷವಾದಾಗ ಸಂಸಾರಕ್ಕೆ ನರಸೀಪುರಕ್ಕೆ ಬಂದವಳು. ಸುಮಾರು 75 ವರ್ಷಗಳ ಬಾಂಧವ್ಯ.
‘ರಾಮಾ ಯಾರಾದ್ರೂ ಅಡುಗೆ ಕೆಲಸದವರು ಸಿಕ್ಕಿದರೆ ನೋಡೋ. ನರಸೀಪುರಕ್ಕೆ ವಾಪ್ಸು ಬರ್ತೀನಿ. …’ ಎಂದು ತನ್ನ ಮನದಾಳದ ಇಂಗಿತವನ್ನು ದೊಡ್ಡ ಮಗ ಬಂದಾಗಲೆಲ್ಲಾ ಹೇಳಿಕೊಳ್ಳುವಳು.
‘ಎಲ್ಲಮ್ಮ ಯಾರು ಸಿಕ್ತಾರೆ. ಎಲ್ಲ ಪಟ್ಟಣ ಸೇರಿಕೊಂಡಿದಾರೆ. ಹಬ್ಬ ಕಳೀಲಿ ವಿಚಾರಿಸ್ತೀನಿ…’ ಹಬ್ಬಗಳು ಬರುತ್ತಿದ್ದವು ಹೋಗುತ್ತಿದ್ದವು. ಆದರೆ ಅಮ್ಮನನ್ನು ನರಸೀಪುರಕ್ಕೆ ಕರೆದೊಯ್ಯುವ ಯಾವ ಪ್ರಯತ್ನವನ್ನೂ ರಾಮ ಮಾಡಲಿಲ್ಲ.
ಇತ್ತೀಚೆಗೆ ರಾಮನಲ್ಲೂ ಅನೇಕ ಬದಲಾವಣೆಯಾಗಿತ್ತು. ಮಗನಿಗೆ ಬೆಂಗಳೂರಿನಲ್ಲಿ ದೊಡ್ಡ ಕಂಪನಿಯೊಂದರಲ್ಲಿ ಕೆಲಸವಾದ ಮೇಲೆ ಊರಿಗೆ ಹೋಗುವುದು ಅಪರೂಪವಾಯಿತು .ಮಗನ ಜೊತೆ ಕಾಲ ಕಳೆಯಬೇಕೆಂಬ ಬಯಕೆ. ಆಸ್ತಿ ಪಾಲು ಮಾಡಿರೆಂದು ಅಮ್ಮನಿಗೆ ದುಂಬಾಲು ಬಿದ್ದಿದ್ದ.
ಹಿರಿಯರಿಂದ ಬಂದ ಆಸ್ತಿ. ಮಕ್ಕಳ ಓದು ಮದುವೆಗಳು ಬಾಣಂತನಗಳು ಒಂದೇ ಎರಡೇ ಎಲ್ಲ ಖರ್ಚುಗಳೂ ನಿಭಾಯಿಸಿದ್ದು ಭತ್ತದಿಂದ ಬಂದ ಹಣದಿಂದ. ಹಾಗೆ ಕಾಪಾಡಿದ ತಾಯಿ ಆ ಹೊಲ ಗದ್ದೆ ತೋಟ. ಈಗ ಮಾರುವುದೆಂದರೆ ಅಮ್ಮನಿಗೆ ತನ್ನ ದೇಹದ ಒಂದು ಭಾಗವನ್ನೇ ಕಿತ್ತು ಕೊಟ್ಟಂತೆ.
‘ರಾಮಾ ಎಷ್ಟು ಮೂಟೆ ಭತ್ತ ಬಂತೋ….’
‘ಎಲ್ಲಮ್ಮ ಆ ಮನೆಹಾಳ್ ಈರಯ್ಯ ಬರಿ ಐದು ಮೂಟೆ ಕೊಟ್ಟು ಕೈ ತೊಳಕೊಂಡ. ಕಮ್ಮಿ ಅಂದ್ರು ಇಪ್ಪತ್ತೈದು ಮೂಟೆ ಸಿಕ್ತಿತ್ತು. ರಾಜೀವಂಗೆ ಒಂದು ಮೂಟೆ ತಂದು ಕೊಟ್ಟನಲ್ಲ…’
‘ಮಿಕ್ಕಿದ್ದು….’
‘ನಮ್ಮನೀಲಿ ಒಂದಿದೆ. ಮಿಕ್ಕಿದ್ದು ರಾಜಿಗೆ ರಾಗಿಣಿಗೆ ಕೊಟ್ಟೆ.. ಅಮ್ಮ ಅದಕ್ಕೆ ಹೇಳಿದ್ದು ಒಂದೈದು ಮೂಟೆ ಭತ್ತಕ್ಕೆ ಇಷ್ಟು ಕಷ್ಟ ಪಾಡಬೇಕಾ. ಆಸ್ತಿ ಮಾರಿ ಪಾಲು ಕೊಟ್ಟು ಬಿಡು. ರಾಜಿ, ರಾಗಿಣಿಗೆ ಏನು ತೊಂದ್ರೆ ಇಲ್ಲ. ಚೆನ್ನಾಗೇ ಇದಾರೆ. ನಂಗೊ ಪೆನ್ಷನ್ ಬಂದಿಲ್ಲ. ತುಂಬಾ ಕಷ್ಟ. ನೋಡು.. ಪಾಲು ಮಾಡೋಕೆ ಮನಸ್ಸು ಮಾಡು. ಅವಳು ನರಸೀಪುರಕ್ಕೆ ಕಾಲಿಡಲ್ಲ ಅಂತಾಳೆ. ಇನ್ನೂ ಊರಲ್ಲಿ ಏನಿದೆ? ನೆಂಟ್ರೇ ಇಷ್ಟರೇ. …
ಅಮ್ಮ ಆಗ ಶೂನ್ಯದತ್ತ ನೋಡುತ್ತಾ ಕುಳಿತುಬಿಡುತ್ತಾಳೆ. ರಾಮಾ ತನ್ನನ್ನು ತನ್ನ ಮನೆಗೆ ಮತ್ತೆ ಕರೆದುಕೊಂಡು ಹೋಗುತ್ತಾನೆ ಎನ್ನುವುದು ಅವಳಿಗೆ ಮರೀಚಿಕೆ ಯಾಗುತ್ತದೆ.
ರಾಜೀವ ಆಚೆ ಹೋದಾಗ ಅವಳದ್ದು ಒಂದೇ ಕೋರಿಕೆ. ‘ ರಾಮಾ ಒಂದೆರಡು ದಿನದ ಮಟ್ಟಿಗಾದರೂ ನರಸೀಪುರಕ್ಕೆ ಹೋಗಿ ಬರೋಣ….. ..’
. ಈಗ ಸ್ವಲ್ಪ ಮನೆಮಟ್ಟಿಗೆ ಓಡಾಡುವಂತಾಗಿದ್ದರು.ಈಗಲೋ ಆಗಲೋ ಎನ್ನುವಂತಿದ್ದ ಅಮ್ಮ ಓಡಾಡುವಂತಾಗಿದ್ದರೆ ಅದು ರಾಜೀವನಿಂದ ಮಾತ್ರ ಸಾಧ್ಯವಾಗಿತ್ತು. ಅವನ ಅಕ್ಕರೆ ಆರೈಕೆ ಶುಶ್ರೂಷೆಯಿಂದ ಅವಳಲ್ಲಿ ಹೊಸ ಚೈತನ್ಯ ಬಂದಿತ್ತು. ಅಮ್ಮನ ಕೊನೆಯ ಆಸೆ ಎಂಬಂತೆ ರಾಜೀವ ಬೇರೆ ವಿಧಿ ಇಲ್ಲದೆ ನರಸೀಪುರಕ್ಕೆ ಕರೆದೊಯ್ಯುವಂತೆ ಅಕ್ಕಂದಿರನ್ನು ಒಪ್ಪಿಸಿದ. ಹುಟ್ಟಿ ಬೆಳೆದ ಮನೆ ನೋಡಲು ಅವರೊ ತವಕಿಸುತ್ತಿದ್ದರು. ಹೊರಡುವ ದಿನ ಅವಳ ಸಂಭ್ರಮ ಹೇಳತೀರದು. ಮುಖದಲ್ಲಿ ನಗು. ಲವಲವಿಕೆ. ಅವಳು ಅಷ್ಟು ಸಂತೋಷವಾಗಿರುವುದನ್ನು ರಾಜೀವ ಎಂದೂ ಕಂಡಿರಲಿಲ್ಲ. ಕಾರಿನಲ್ಲಿ ಕುಳಿತು ರಾಜೀವನನ್ನು ಕೃತಜ್ಞತೆಯಿಂದ ನೋಡಿದಳು.
ಸಮಯ ನಿಷ್ಕರುಣಿ ಎಷ್ಟು ಬೇಗ ಎರಡು ದಿನ ಕಳೆಯಿತು. ಅದೇ ಕಾರು ಮನೆಯ ಮುಂದೆ ನಿಂತಾಗ ಅಮ್ಮ ತುಂಬಾ ನಿತ್ರಾಣಳಾಗಿದ್ದಳು. ಹೊರಟಾಗ ಅವಳಲ್ಲಿ ಇದ್ದ ಆ ಉಲ್ಲಾಸ ಲವಲೇಶವೊ ಈಗ ಇರಲಿಲ್ಲ. ಬಹುಶ; ಪ್ರಯಾಣದ ಆಯಾಸವಿರಬಹುದೆಂದು ಮೇಲ್ನೋಟಕ್ಕೆ ತೋರಿದರೂ ಮಾನಸಿಕವಾಗಿ ಬಹಳ ಬಳಲಿದ್ದಳು. ಅವಳ ಮೂಕ ರೋಧನ ಹಲವು ಕತೆಗಳನ್ನು ಹೇಳುತ್ತಿತ್ತು. ಕೇಳಲು ರಾಜೇವನಿಗೆ ಧೈರ್ಯವೇ ಆಗಲಿಲ್ಲ.
ಊರಿನಿಂದ ವಾಪಸ್ಸು ಬಂದ ಮೇಲೆ ಅಮ್ಮನಲ್ಲಿ ಬಹಳಷ್ಟು ಬದಲಾವಣೆ ಆಗಿತ್ತು. ಇದ್ದಕ್ಕಿದ್ದಂತೆ ಅಮ್ಮ ತನ್ನಷ್ಟಕ್ಕೆ ತಾನು ಮಾತನಾಡುವುದು, ಹೆಳೆಯದನ್ನೆಲ್ಲಾ ನೆನಪು ಮಾಡಿಕೊಳ್ಳುವುದು ಇದ್ದಕ್ಕಿದ್ದಂತೆ ಅಳುವುದು. ಅಳುತ್ತಾ ತನ್ನ ಮನೆ ಖಾಲಿ ಯಾಗಿದೆ ಇನ್ನೂ ಎಲ್ಲಿಯ ನರಸೀಪುರ ಆ ಕಾಮಾಕ್ಷಿ ನಾನಿಲ್ಲದೆ ಇದ್ದಾಗ ನನ್ನ ಮನೆಗೆ ನುಗ್ಗಿ ಎಲ್ಲವನ್ನೂ ದೋಚಿದ್ದಾಳೆ. ಇದನ್ನು ಕೇಳಿ ಅರ್ಥವಾಗಿದ್ದು ಕಾಮಾಕ್ಷಿ ತನ್ನ ತಮ್ಮನನ್ನು ಜೊತೆಯಲ್ಲಿ ಕರಿದುಕೊಂಡು ಹೋಗಿ ಮನೆಯಲ್ಲಿ ಒಂದು ಚಮಚವೊ ಬಿಡದೆ ಎಲ್ಲವನ್ನೂ ಬೆಂಗಳೊರಿಗೆ ಸಾಗಿಸಿ ಬಿಟ್ಟಿದ್ದಾಳೆಂದು. ರಾಜೀವನಿಗೆ ತುಂಬಾ ಗಾಭರಿಯಾಯಿತು. ಈ ವಿಷಯವಾಗಿ ಅಕ್ಕಂದಿರು ಚಕಾರವೆತ್ತಲಿಲ್ಲ. ಎಪ್ಪತ್ತೈದು ವರ್ಷಗಳು ಬಾಳ್ವೆ ನಡೆಸಿದ ಮನೆಯನ್ನು ಹಾಗೆ ನೋಡಲು ಅವಳ ಮನಸ್ಥಿತಿ ಏನಾಗಿರಬೇಕು. ಆದರೆ ಒಂದೇ ಒಂದು ಮಾತು ಬಾಯಿ ಬಿಡಲಿಲ್ಲ. ಇದೇ ವಿಷಯವಾಗಿ ಕೊರಗು ಹಚ್ಚಿಕೊಂಡಳು.
‘ರಾಮಾ ನರಸೀಪುರಕ್ಕೆ ಹೊರಡೋಣ….. ಎಸ್ ಆರ್ ಎಸ್ ಬಸ್ಸು ಇನ್ನೇನು ಬಂದು ಬಿಡುತ್ತೆ…..’ ಮನೆ ಸಾಮಾನೆಲ್ಲಾ ಹೋಯ್ತು. ಒಂದು ಮಾತು ನಂಗೆ ತಿಳಿಸೋದು ಬೇಡ್ವ …’
ರಾಜೀವ ಸಮಾಧಾನ ಮಾಡುತ್ತಲೇ ಇದ್ದ. ‘ ಅಮ್ಮ ಸಮಾಧಾನ ತಂದುಕೋ. ನಾವೇ ಶಾಶ್ವತವಲ್ಲ ಇನ್ನೂ ಆ ಸಾಮಾನುಗಳು ಹೋದರೆ ಹೋಗಲಿ…’
‘ ರಾಮಾ ನನಗೊಂದು ಮಾತು ಹೇಳದೆ ನಿನ್ನ ಹೆಂಡತಿ ಹೀಗೆ ಮಾಡಿದ್ದಾಳೆ, ನೀನಾದರೋ ಹೇಳಬಾರದಿತ್ತೆ?
‘ನಂಗೇನು ಗೊತ್ತಿಲ್ಲಮ್ಮ . ಅವಳು ಯಾವಾಗ ನರಸೀಪುರಕ್ಕೆ ಹೋದ್ಲು ಯಾವುದು ಗೊತ್ತಿಲ್ಲ. ..’ ರಾಮಾ ತಾನು ಅಮಾಯಕನೆಂದೇ ಸಾಬೀತು ಮಾಡಿದ. ಅವನ ಮಾತು ರಾಜೀಗು ಸರಿಯೆನಿಸಿತು.
‘ಅಮ್ಮನಿಗೆ ಅಲ್ಲಿ ಹೋಗೋಕ್ಕೆ ಆಗಲ್ಲ. ಅಂದ ಮೇಲೆ ಕಾಮಾಕ್ಷೀದೇನು ತಪ್ಪು. ಸಾಮಾನು ಹಾಳಾಗುವ ಬದಲು ಅವಳು ಉಪಯೋಗಿಸಿಕೊಂಡಳು…..’
‘ಆದ್ರೆ ಅಮ್ಮನಿಗೆ ಒಂದು ಮಾತು ಹೇಳಿದ್ದರೆ ಚೆನ್ನಾಗಿತ್ತು …’ ರಾಗಿಣಿಗೆ ಅನಿಸಿದನ್ನು ಅತ್ತಿಗೆಗೆ ಹೇಳುವಷ್ಟು ಧೈರ್ಯವಾಗಲೀ ಮನಸ್ಸಾಗಲಿ ಇಲ್ಲ.
ಅಮ್ಮ ಆ ನಂತರ ಚೇತರಿಸಲೇ ಇಲ್ಲ. ಸುಮಾರು ವರ್ಷದಿಂದ ಅವಳಿಗೆ ಮಾಡಿದ ಉಪಚಾರವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಯ್ತು.
ಪ್ರಶಾಂತನಿಗೆ ಮದುವೆ ನಿಶ್ಚಯವಾಗಿದೆಯಂತೆ. ಅವನಿಗೆ ವಿದೇಶಕ್ಕೆ ಹೋಗುವ ಅವಕಾಶ ಬಂದೊದಗಿದೆ. ಮದುವೆಯ ನಂತರ ಅವನು ವಿದೇಶಕ್ಕೆ ಹಾರುತ್ತಾನಂತೆ. ಹೆಣ್ಣು ಮಕ್ಕಳಿಂದ ಅವಳಿಗೆ ಅಲ್ಪ ಸ್ವಲ್ಪ ವಿಷಯ ತಿಳಿಯಿತು. ಅಂದಿನಿಂದ ಅವಳು ಮೌನವನ್ನೇ ತನ್ನ ಶಸ್ತ್ರವನ್ನಾಗಿಸಿಕೊಂಡಳು. ಮೌನ ಯುದ್ಧವೆಂಬುದು ಬಹಳ ಕಷ್ಟ. ಆದರೆ ನೇರ ಎದೆಗೆ ಗುರಿಯಿಟ್ಟ ಬಂದೂಕಿನಂತೆ.
ಒಮ್ಮೊಮ್ಮೆ ರಾಜೀವನೊಂದಿಗೆ ಮಾತನಾಡುತ್ತಿದ್ದಳು.
‘ನಾನೇನು ತಪ್ಪು ಮಾಡಿದೆ. ಪ್ರಶಾಂತ ನನ್ನನ್ನು ಮದುವೆಗೆ ಕರೆಯಲೇ ಇಲ್ಲ. … ರಾಜೀವ ನಾನು ದುಡ್ಡು ಕೊಡ್ತೀನಿ ಅವನಿಗೊಂದು ಒಳ್ಳೆಯ ಉಂಗುರ ತರ್ತೀಯಾ….. ಈ ಅಜ್ಜಿಯ ನೆನಪಾಗಿ ಅವನ ಬಳಿ ಇರಲಿ. ..
ಸುಖದಲ್ಲಿ ಅನುಭವಿಸಿ ಕಷ್ಟದಲ್ಲಿ ಅವಳನ್ನು ಒಬ್ಬೊಂಟಿಯಾಗಿ ಬಿಟ್ಟು ಅವಳನ್ನು ಈ ಸ್ಥಿತಿಗೆ ತಂದ ಅತ್ತಿಗೆ ಹಾಗೂ ಅಣ್ಣನ ಮಗನ ಮೇಲೆ ರಾಜೀವಣಿಗೆ ವಿಪರೀತ ಸಿಟ್ಟು ಬರುವುದು. ಆದರೆ ಅಮ್ಮನ ಆಸೆಯನ್ನು ತೀರಿಸುವುದು ಬಿಟ್ಟು ಬೇರೆ ಯಾವುದು ದೊಡ್ಡದೆನಿಸಲಿಲ್ಲ. ಹೆಂಡತಿಗೊ ಹೇಳದೇ ಅಣ್ಣ- ಅತ್ತಿಗೆ ಕಷ್ಟ ಪಡಬಾರದೆಂದು ಸದ್ದಿಲ್ಲದೇ ಅವನ ಖಾತೆಗೆ ಹಣ ತುಂಬಿಸುತ್ತಿದ್ದ . ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದೆಂದು ಪ್ರಶಾಂತನ ಓದಿನ ಖರ್ಚನ್ನು ಸದ್ದಿಲ್ಲದೇ ನೋಡಿಕೊಂಡಿದ್ದ. ಶೇಕ್ಸ್ ಪಿಯರ್ ಪ್ರಕಾರ ರಕ್ತ ಸಂಬಂಧ ನೀರಿನಂತಲ್ಲ ಬಹಳ ಗಟ್ಟಿ ಎಂದು.
‘’ರಾಜೀವ ನಿಮ್ಮಣ್ಣನಿಗೊಂದು ಜೊತೆ ಪಂಚೆ ಅತ್ತಿಗೆಗೆ ಒಂದು ರೇಷ್ಮೆ ಸೀರೆ ತಂದು ಬಿಡೋ. ನಾನು ಇನ್ನೇನು ತಾನೇ ಕೊಡಬಲ್ಲೆ. …..ಪ್ರಶಾಂತನನ್ನು ನೋಡದೆಯೆ ಕಣ್ಣು ಮುಚ್ಚಿಬಿಡುತ್ತೀನಿ ನಾನು. .. ನಮ್ಮ ವಂಶದ ಕುಡಿ …. …’
‘ನೀನು ಪಾಲು ಕೊಡ್ತೀನು ಅನ್ನು ಈಗಲೇ ಬರ್ತಾರೆ ಎಲ್ಲಾರು…….’
‘ಸರಿ ಆದ್ರೂ ಪರವಾಗಿಲ್ಲ. ಅವನನ್ನ ಒಂದು ಸರ್ತಿ ನೋಡಬೇಕು…… ಹೆಣ್ಣು ಮಕ್ಕಳ ಪಾಲು ಅವರಿಗೆ ಕೊಡಬೇಕು. ನನಗೂ ಒಂದು ಪಾಲು ಬೇಕು. ನಾನು ಅದರಲ್ಲಿ ಹೆಣ್ಣು ಮಕ್ಕಳ ಮಕ್ಕಳಿಗೆ ಏನನ್ನಾದರೂ ಕೊಡಬೇಕು.’
‘ನೀನು ನಿರ್ಧಾರ ಮಾಡು ಹೆಣ್ಣು ಮಕ್ಕಳನ್ನು ಕೇಳು. ನಿನ್ನ ಪಾಲು ನಿನಗೆ ಸಿಕ್ಕೇ ಸಿಗುತ್ತೆ. ಅದನ್ನ ನೀನು ಯಾರಿಗೆ ಬೇಕಾದರೂ ಕೊಡು. ಮತ್ತೆ ವಕೀಲರಿಗೆ ಹೇಳಿ ನೀನು ಮೌನವಾಗಿದ್ದುಬಿಟ್ಟರೆ ಕಷ್ಟ. …’
‘ಹೆಣ್ಣು ಮಕ್ಕಳ ಪಾಲು ರಾಮ ಕೊಡಬೇಕಲ್ಲ. ಅವರಿಗೇನು ಕಮ್ಮಿ ಚೆನ್ನಾಗಿದ್ದಾರೆ ಎನ್ನುತ್ತಲೇ ಇರುತ್ತಾನೆ. ….’
ಅವಳಿಗೆ ಜ್ಞಾನ ಇದ್ದಾಗ ಹೇಳಿದ ಮಾತು ರಾಜೀವನಿಗೆ ಮನಸ್ಸಿಗೆ ನಾಟಿತು.
ಹೊಲ, ಗದ್ದೇನ ಈರಣ್ಣ ಎಷ್ಟೋ ವರ್ಷದಿಂದ ಕಾಪಾಡಿದಾನೆ ಅವರಪ್ಪ ಬೋರಯ್ಯನ ಕಾಲದಿಂದಲೂ ದುಡೀತಿದಾರೆ. ಆ ಹೊಲ ಗದ್ದೆ ಈರಣ್ಣ೦ಗೆ ಬಿಟ್ಟು ಕೊಟ್ಟು ಬಿಡಿ. ಅವನು ಬದುಕಿಕೊಳ್ಳಲಿ.
‘ಸರಿ ಅಮ್ಮ. ಹೊಲ, ಗದ್ದೆ ಅವನಿಗೆ ಕೊಟ್ಟು ಬಿಡ್ತೀವಿ. ನೀನೇನೋ ಯೋಚನೆ ಮಾಡಬೇಡ. ರಾಜೀವನ ಮಾತು ಅವಳ ಮುಖದಲ್ಲಿ ಕಿರು ನಗೆ ಮೂಡಿಸಿತು.
ಇದ್ದಕ್ಕಿದ್ದಂತೆ ಅವಳಲ್ಲಿ ಬದಲಾವಣೆ. ‘ಪಾಲಂತೆ ಪಾಲು. ಮನೇಲಿ ಒಂದು ಚಮಚವು ಇಲ್ಲ ಹೇಗೆ ಕೊಡಲಿ ಪಾಲು. ಮೊದಲೇ ಗೊತ್ತಿದ್ದ್ರೆ ನನ್ನ ತವರು ಮನೆಯಿಂದ ಬಂದ ಕೊಳದಪ್ಪಲೆಗಳನ್ನು ಆ ಛತ್ರಕ್ಕಾದರೂ ಕೊಟ್ಟುಬಿಡಬಹುದಿತ್ತು….. ಎಲ್ಲ ಹೋಯ್ತು. ಇನ್ನೂ ಮುಂದೆ ನನ್ನ ಗತಿ ಏನು…… ನಾನು ಬೀದಿಗೆ ಬಿದ್ದೆ…….. ಓ ಪ್ರಶಾಂತ ಯಾವಾಗ ಬಂದೆ…. ನಿನ್ನ ಹೆಂಡ್ತಿ ಎಷ್ಟು ಚೆನ್ನಾಗಿದ್ದಾಳೆ. ಹಾಡು ಹಸೆ ಬರುತ್ತೇನಮ್ಮ ನಿನಗೆ… ಅಡುಗೆ ತಿಂಡಿ ಮಾಡ್ತೀಯಾ…? ಕ್ಷಣ ಚಿತ್ತ ಕ್ಷಣ ಪಿತ್ಥ ಎನ್ನುವಂತೆ ಒಮ್ಮೆ ಹೀಗೆ ಒಮ್ಮೆ ಹಾಗೆ. ಕೊನೆಗೊ ನರಸೀಪುರಕ್ಕೆ ಹೋಗಿ ಪ್ರಾಣ ಬಿಡುವ ಅವಳ ಆಸೆ ಫಲಿಸಲೇ ಇಲ್ಲ.
ಅಮ್ಮ ಇತಿಹಾಸವಾದಳು. ರಾಮಾ ಅಬ್ಬೇಪಾರಿಯಂತೆ ನರಸೀಪುರ ಬೆಂಗಳೊರು ಓಡಾಡಿಕೊಂಡಿದ್ದ. ಪಾಲು ಪಾಲು ಎಂದವರೆಲ್ಲಾ ತೆಪ್ಪಗಾದರು. ಆಸ್ತಿ ಪಾಲಾಗಲಿಲ್ಲ. ಮನೆ ಪಾಳುಬಿತ್ತು ಹೊಲ ಗದ್ದೆ ಹೆಚ್ಚು ಕಮ್ಮಿ ಈರಯ್ಯನ ಪಾಲಾಯ್ತು. ಪಾಲಾದದ್ದು ಮನಸುಗಳು, ಅಣ್ಣ ತಮ್ಮ ಅಕ್ಕ, ತಮ್ಮ ಎಂಬ ಭಾವನೆಗಳು.

ravi sharma
ಪ್ರೂ. ಕೆ. ರವಿಶರ್ಮ
Copyright © All rights reserved Newsnap | Newsever by AF themes.
error: Content is protected !!