December 29, 2024

Newsnap Kannada

The World at your finger tips!

d c rohini lasike

ಕೋವಿಡ್-19 ಲಸಿಕೆ ಪಡೆದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

Spread the love

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸೋಮವಾರ ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆಯನ್ನು ಪಡೆದರು.

ಲಸಿಕೆ ಪಡೆದ ನಂತರ ನಿಯಮದಂತೆ 30 ನಿಮಿಷಗಳ ಕಾಲ ನಿಗಾ ಕೊಠಡಿಯಲ್ಲಿ ಇದ್ದರು. ವೈದ್ಯಕೀಯ ತಪಾಸಣೆಗೆ ಸ್ಪಂದಿಸಿದರು.

ಬಳಿಕ ಮಾತನಾಡಿದ ರೋಹಿಣಿ, ದೇಶದಲ್ಲಿ ನೀಡಲಾಗುತ್ತಿರುವ ಕೋವಿಡ್ ಲಸಿಕೆ ಅತ್ಯಂತ ಸುರಕ್ಷಿತವಾಗಿದೆ. ಯಾವುದೇ ಅಡ್ಡಪರಿಣಾಮ ಇಲ್ಲ. ಹೀಗಾಗಿ ಅಧಿಕಾರಿ, ಸಿಬ್ಬಂದಿಗಳು ಭಯಪಡದೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು‌.

ಈಗ ನಾನು ಲಸಿಕೆ ಹಾಕಿಸಿಕೊಂಡಿದ್ದೇನೆ. ಯಾವುದೇ ತೊಂದರೆ ಇಲ್ಲ. ಹಾಗಾಗಿ ಲಸಿಕೆ ಪಡೆದುಕೊಳ್ಳುವರು ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ. ಅನೇಕ ದೇಶಗಳು ಭಾರತ ಸಿದ್ಧಪಡಿಸಿದ ಲಸಿಕೆ ಪಡೆಯಲು ಮನವಿ ಮಾಡಿದ್ದಾರೆ. ಹೀಗಿರುವಾಗ ನಮ್ಮ ದೇಶದಲ್ಲಿ ಸಂಶೋಧನೆ ಮಾಡಿದ ಲಸಿಕೆ ಬಗ್ಗೆ ಸಂಶಯ ಪಡಬಾರದು ಎಂದರು.

ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ ಈಗಾಗಲೇ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ ಕಂದಾಯ ಅಧಿಕಾರಿಗಳು, ಪೋಲಿಸ್ ಸಿಬ್ಬಂದಿ, ಪೌರಕಾರ್ಮಿಕರು ಸೇರಿದಂತೆ ಒಟ್ಟು 16 ಸಾವಿರ ಮುಂಚೂಣಿಯಲ್ಲಿರುವ ಸಿಬ್ಬಂದಿಗಳಿಗೆ ಇಂದಿನಿಂದಲೇ ಲಸಿಕೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸರ್ಕಾರವು ಜನರ ಆರೋಗ್ಯವನ್ನು ಗಮನದಲ್ಲಿರಿಸಿ ಲಸಿಕೆ ನೀಡುತ್ತಿದೆ. ಹಂತಹಂತವಾಗಿ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುತ್ತದೆ. ಲಸಿಕೆ ಪಡೆಯುವ ಸಂದರ್ಭ ಬಂದಾಗ ಯಾರೂ ಕೂಡ ಹಿಂಜರಿಯಬಾರದು. ಲಸಿಕೆ ಸುಲಭವಾಗಿ ಸಿಗುತ್ತಿದೆ ಎಂದು ನಿರ್ಲಕ್ಷಿಸುವುದು ಸರಿಯಲ್ಲ ಎಂದು ತಿಳಿಸಿದರು.

ಲಸಿಕೆಯನ್ನು ಪ್ರತಿಯೊಬ್ಬರಿಗೂ ನೀಡುವುದಕ್ಕೆ ತುಂಬಾ ದಿನಗಳಾಗಬಹುದು. ಅಲ್ಲಿಯವರೆಗೂ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಹಾಗೂ ದೈಹಿಕ ಅಂತರ ಕಾಪಾಡುವುದನ್ನು ಮರೆಯಬಾರದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಅಮರನಾಥ್, ಕೋವಿಡ್ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ರಾಜೇಶ್ವರಿ ಸೇರಿದಂತೆ ಇನ್ನಿತರ ವೈದ್ಯಕೀಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!