ರಸ್ತೆ ಅಪಘಾತ – ನಟ ಸಂಚಾರಿ ವಿಜಯ್ ತಲೆಗೆ ತೀವ್ರ ಪೆಟ್ಟು: ಪರಿಸ್ಥಿತಿ ತೀರಾ ಗಂಭೀರ

Team Newsnap
1 Min Read

ಕಳೆದ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಗಂಭೀರವಾಗಿ ಗಾಯ ಗೊಂಡಿದ್ದಾರೆ.

ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆಯ ಐಸಿಯುನಲ್ಲಿ ನಟ ವಿಜಯ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯ್ ಮೆದುಳಿನ ಬಲಭಾಗದಲ್ಲಿ ಹಾಗೂ ತೊಡೆಗೆ ತೀವ್ರ ಗಾಯವಾಗಿದೆ. ನಿನ್ನೆ ರಾತ್ರಿಯೇ ಶಸ್ತ್ರ ಚಿಕಿತ್ಸೆಯನ್ನು ಕೂಡ ವೈದ್ಯರು ಮಾಡಿದ್ದಾರೆ. ಚಿಕಿತ್ಸೆ ಮುಂದುವರಿದೆ.

ಸ್ನೇಹಿತನೊಂದಿಗೆ ಬೈಕ್​ನಲ್ಲಿ ಹಿಂದೆ ಕುಳಿತು ವಿಜಯ್ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಮೆದುಳಿನಲ್ಲಿ ರಕ್ತ ಸ್ರಾವವಾಗಿದೆ ಅಲ್ಲದೇ ತೊಡೆಯ ಮೂಳೆ ಕೂಡ ಮುರಿದಿದೆ ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಗೆ ತಂದಾಗಲೇ ಅವರ ಸ್ಥಿತಿ ಗಂಭೀರವಾಗಿತ್ತು. ಸ್ಕ್ಯಾನ್​ ಮಾಡಿದಾಗ ಮೆದುಳಿನ ಬಲಭಾಗದಲ್ಲಿ ರಕ್ತಸ್ರಾವವಾಗುತ್ತಿತ್ತು. ಹೀಗಾಗಿ, ಅವರಿಗೆ ಮೆದುಳಿನ ಆಪರೇಷನ್ ಅನ್ನು ನೆರವೇರಿಸಲಾಗಿದೆ. ಇದರೊಂದಿಗೆ ತೊಡೆ ಮೂಳೆಯ ಶಸ್ತ್ರ ಚಿಕಿತ್ಸೆ ಕೂಡ ನಡೆಸಬೇಕಿದೆ. ಇನ್ನು ಸಧ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ. ಮುಂದಿನ 48 ಗಂಟೆಗಳು ಅತ್ಯಂತ ಮುಖ್ಯ ಅಂತಾ ನ್ಯೂರೋ ಸರ್ಜನ್ ಡಾ. ಅರುಣ್ ನಾಯಕ್ ತಿಳಿಸಿದ್ದಾರೆ. ಅಲ್ಲದೇ ಸದ್ಯ ಅವರಿಗೆ ವೆಂಟಿಲೇಟರ್​ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಅತಿ ಚಿಕ್ಕ ವಯಸ್ಸಿನಲ್ಲಿಯೇ ನಾನವನಲ್ಲ ಅವಳು ಅನ್ನೋ ಸಿನಿಮಾದ ನಟನೆಗಾಗಿ ಶ್ರೇಷ್ಠ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ವಿಜಯ್ ಪಡೆದುಕೊಂಡಿದ್ದಾರೆ. ಅಲ್ಲದೇ ನಟ ರಂಗಾಯಣ ರಘು ಅವರ ಪತ್ನಿ ನಾಟಕಗಾರ್ತಿ ಮಂಗಳಾ ಅವರ ಸಂಚಾರಿ ತಂಡದಲ್ಲಿದ್ದರು.

Share This Article
Leave a comment