ಆರೋಗ್ಯ ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ಗೆ ನೀಡಿರುವ ಸಿ ಎಂ ನಿರ್ಧಾರದಿಂದ ಭಾರಿ ಅಪಮಾನ ಎದುರಿಸುತ್ತಿರುವ ಶ್ರೀರಾಮುಲು ಕೊತ ಕೊತ ಕುದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳೆದುರು ಪ್ರಸ್ತಾಪ ಮಾಡಿದರೂ ಅವರು ಸೂಕ್ತ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ. ಇಂದು ಸಂಜೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿರುವ ಶ್ರೀರಾಮುಲು ಭೇಟಿಯ ವೇಳೆ ಸರ್ಕಾರಿ ವಾಹನವನ್ನು ಬಿಟ್ಟು ತಮ್ಮ ಖಾಸಗೀ ವಾಹನವನ್ನು ತಂದಿದ್ದೇ ಈಗ ಚರ್ಚೆಗೆ ಗ್ರಾಸವಾಗಿದೆ.
ತಮ್ಮ ರಾಜೀನಾಮೆಯ ಬಗ್ಗೆ ಯಾರ ಮುಂದೂ ಅಧಿಕೃತ ಹೇಳಿಕೆ ನೀಡದ ರಾಮುಲು ತಮ್ಮ ಅತ್ಯಂತ ಆಪ್ತ ರ ಬಳಿ ಮಾತ್ರ ರಾಜೀನಾಮೆಯ ಬಗ್ಗೆ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶ್ರೀರಾಮುಲು ಆರೋಗ್ಯ ಸಚಿವರಾಗಿ ಹಾಗೂ ಡಾ. ಕೆ. ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾಗ ಎರಡೂ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಎದ್ದು ಕಂಡಿತ್ತು. ಹಾಗಾಗಿಯೇ ಎರಡೂ ಇಲಾಖೆಗಳನ್ನು ಒಬ್ಬ ಮಂತ್ರಿಯ ಕೈಗೇ ನೀಡಿದ್ದು ಎನ್ನಲಾಗಿದೆ.
ಸುಧಾಕರ್ ಅವರೇ ಏಕೆ?
ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಎರಡನ್ನೂ ಶ್ರೀರಾಮುಲು ಅವರಿಗೇ ನೀಡಬಹುದಿತ್ತು. ಸುಧಾಕರ್ ಏಕೆ ಎಂಬ ಪ್ರಶ್ನೆಗೆ ಉತ್ತರ ಬಹಳ ಸರಳವಿದೆ. ವಿಧಾನ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಪ್ರತಿ ಪಕ್ಷಗಳು ಆರೋಪಿಸಿದಾಗ ಸುಧಾಕರ್ ಅವರು ತಮ್ಮ ಇಲಾಖೆಯಲ್ಲಿ ನಡೆದ ಪ್ರತಿಯೊಂದು ವ್ಯವಹಾರಗಳನ್ನು ಸೂಕ್ತ ರೀತಿಯಲ್ಲಿ ಸಮರ್ಥನೆ ಮಾಡಿಕೊಂಡಿದ್ದರು. ಆರೋಗ್ಯ ಇಲಾಖೆಯ ಬಗೆಗಿನ ಆರೋಪಗಳನ್ನು ಸಮರ್ಥನೆ ಮಾಡಿಕೊಳ್ಳುವಲ್ಲಿ ಶ್ರೀರಾಮುಲು ಎಡವಿದ್ದರು. ಹಾಗಾಗಿಯೇ ಎರಡೂ ಖಾತೆಗಳನ್ನೂ ಸುಧಾಕರ್ ಅವರಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಶ್ರೀರಾಮುಲು ತಮ್ಮ ಆಪ್ತರ ಬಳಿ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದು, ಪ್ರತಿಯೊಂದು ವಿಷಯದಲ್ಲೂ ಮೂಗು ತೂರಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ತಮ್ಮ ಗಮನಕ್ಕೆ ಬರದಂತೆ ನಿರ್ಧಾರಗಳನ್ನು ತೆಗೆದುಕೊಂಡಿದ್ದರಿಂದ ತಾವು ಇಕ್ಕಟ್ಟಿಗೆ ಸಿಕ್ಕಿಕೊಂಡೆ ಎಂದು ಹೇಳಿಕೊಂಡಿದ್ದಾರೆ ಎಂಬುದಾಗಿ ಊಹಾಪೋಹಗಳು ಎದ್ದಿವೆ.
ಈಗ ಶ್ರೀರಾಮುಲು ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿರುಸುಗೊಂಡಿರುವ ವಾಲ್ಮೀಕಿ ಸಮುದಾಯದ ಮೀಸಲಾತಿ ಚಳುವಳಿಯಲ್ಲಿ ಭಾಗವಹಿಸಿ, ಅದರ ನಾಯಕತ್ವ ವಹಿಸಲಿದ್ದಾರೆ ಎಂಬ ಸುದ್ದಿಗಳೂ ಇವೆ. ಉಪ ಚುಣಾವಣೆಯ ಈ ಸಂದರ್ಭದಲ್ಲಿ ಶ್ರೀರಾಮುಲು ಏನಾದರೂ ಚಳವಳಿಯ ನಾಯಕತ್ವ ವಹಿಸಿಕೊಂಡರೆ ಬಿಜೆಪಿಗೆ ದೊಡ್ಡ ಪೆಟ್ಟು ಬೀಳುವ ಸಾಧ್ಯತೆಗಳಿವೆ.
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು