ಭವ್ಯ ಭಾರತದೇಶ ಸಂಭ್ರಮ ಪಡುವ ದಿನ.ಪ್ರತಿ ಭಾರತಿಯನು ಸಂತಸ ಸಡಗರದಿ ಭಾರತಾಂಬೆ ಮಡಿಲಲಿ ನಲಿಯುವ ಸುದಿನ.ವೈವಿಧ್ಯತೆಯಲ್ಲಿ ಏಕತೆ ಕಾಣುವ ಭರತಭೂಮಿಯಲ್ಲಿ ಸರ್ವಧರ್ಮದವರು ಬ್ರಾತೃತ್ವ ಏಕತೆ,ಮಾನವೀಯತೆ ಪಥದಲಿ ಒಂದೆಂಬ ಭಾವದಿಂದ ಒಗ್ಗಟ್ಟಾಗಿ ಹುರುಪು ಉತ್ಸಾಹದಿಂದ ಆಚರಿಸುವ ಅಮೂಲ್ಯವಾದ ದಿನವೇ ಮತ್ತೊಂದು ರಾಷ್ಟ್ರೀಯ ಹಬ್ಬವೇ ಗಣರಾಜ್ಯೋತ್ಸವ ದಿನ.
ಭಾರತದ ಸಂವಿಧಾನದ ಜಗತ್ತಿನ ಅತಿದೊಡ್ಡ ಸಂವಿಧಾನವಾಗಿದ್ದು ಜಗತ್ತಿನ ಎಲ್ಲ ದೇಶಗಳಿಗೆ ಮಾದರಿಯಾಗಿದೆ.ಭಾರತವು ಸ್ವತಂತ್ರ ಪಡೆದರೂ ಆಡಳಿತವು ಸುಗಮವಾಗಿ ಸಾಗಲು ತನ್ನದೆಯಾದ ಸಂವಿಧಾನ ಹೊಂದಿರಲಿಲ್ಲ.ಸ್ವತಂತ್ರದ ನಂತರದ ಮೂರು ವರ್ಷಗಳವರೆಗೆ ನಮ್ಮ ದೇಶವನ್ನು ಆಳುತ್ತಿದ್ದ ಬ್ರಿಟಿಷ್ ಸರ್ಕಾರವು ಜಾರಿಗೆ ತಂದಿದ್ದ 1935ರ ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್ ಮೂಲಕ ಸಾಮಾನ್ಯ ಕಾನೂನುಗಳಿಗೆ ಅನುಗುಣವಾಗಿ ಕಾನೂನುಗಳು ಮತ್ತು ನಿಬಂಧನೆಗಳ ಮೂಲಕ ದೇಶವು ಸುಭದ್ರ ,ಸುಗಮವಾದ ಆಡಳಿತ ನಡೆಸಿತು.
ತದ ನಂತರದಲ್ಲಿ ಭಾರತದ ಸ್ವಂತ ಸಂವಿಧಾನ ರಚಿಸಲು ಡಾ.ಬಿ ಆರ್ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಕರುಡು ಸಮಿತಿ ರಚಿಸಲಾಯಿತು.ಸತತ ಪರಿಶ್ರಮ ಶ್ರದ್ಧೆ ಹಲವು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಆ ಸಂವಿಧಾನಗಳಲ್ಲಿಯ ಅಂಶಗಳನ್ನು ದೇಶದ ಸಂವಿಧಾನಕ್ಕೆ ಅಳವಡಿಸಿ ಭಾರತ ದೇಶದ ಸಂವಿಧಾನದ ರೂಪುರೇಷೆಗಳನ್ನು ಸಿದ್ಧಗೊಳಿಸಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂವಿಧಾನದ ಮೂಲ ಆಶಯ ತಿಳಿಯುವಂತೆ ಪ್ರತಿ ಅಂಶಗಳು ಅನ್ವಯವಾಗುವಂತೆ 2 ವರ್ಷ 11 ತಿಂಗಳು 18 ದಿನಗಳಲ್ಲಿ ಭಾರತ ಸಂವಿಧಾನ
ಸಿದ್ಧಪಡಿಸಿ ಅಧಿಕೃತವಾಗಿ ಜನೆವರಿ 26 1950ರಂದು ಜಾರಿಗೆ ತಂದು ದೇಶದ ಆಡಳಿತವು ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಅಳವಡಿಸಿಕೊಳ್ಳಲು ಸೂಚಿಸಲಾಯಿತು.ಭಾರತ ತನ್ನನ್ನು ತಾನು ಸಮಾಜವಾದಿ,ಸಾರ್ವಭೌಮ , ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸಿತು.
ಗಣರಾಜ್ಯೋತ್ಸವವನು ಆಚರಿಸಲು ಪ್ರಮುಖ ಕಾರಣವೆಂದರೆ ಭಾರತದ ಸಂವಿಧಾನವು ಅಧಿಕೃತವಾಗಿ
ಜನೆವರಿ 26 1950ರಂದು ಅಂಗೀಕಾರವಾದ ಸವಿನೆನಪಿಗಾಗಿ ಈ ದಿನವನ್ನು ಔಪಚಾರಿಕವಾಗಿ ಗಣರಾಜ್ಯೋತ್ಸವ ದಿನವೆಂದು ಆಚರಿಸಲಾಗುವುದು.ಇಂದು ಭಾರತದ ಸಂವಿಧಾನವನ್ನು ನೆನೆದು ಭಾರತೀಯರು ಹೆಮ್ಮೆ ಪಡುವ ವಿಶೇಷದಿನ.ಅಲ್ಲದೆ ಇಂದು ಪ್ರಜಾಪ್ರಭುತ್ವ, ಏಕತೆ,ಮತ್ತು ಹಕ್ಕುಗಳಿಗೆ ಪ್ರಾಶಸ್ತ್ಯ ನೀಡುವುದರೊಂದಿಗೆ ಸಾರ್ವಭೌಮತೆ ಗಣರಾಜ್ಯವಾಗಿ ಪರಿವರ್ತನೆಯಾದದ್ದು.ರಾಷ್ಟ್ರಪ್ರೇಮ,ರಾಷ್ಟ್ರಭಕ್ತಿಯ ಜೊತೆ ಪ್ರಜಾಪ್ರಭುತ್ವದ ಮೌಲ್ಯಗಳನು ಪರಿಚಯಿಸುವುದರ ಮೂಲಕ ಪ್ರಸ್ತುತ ಯುವಜನಾಂಗಕ್ಕೆ ತಿಳಿಪಡಿಸುವುದು ಅತಿ ಅವಶ್ಯವಾಗಿದೆ.ಸಾಂಸ್ಕೃತಿಕ ಪರಂಪರೆ ಮತ್ತು ರಾಷ್ಟ್ರದ ಏಳಿಗೆ ಅಭಿವೃದ್ಧಿ, ಬೆಳವಣಿಗೆ ಪೂರಕ ತತ್ವಗಳನ್ನು
ಪ್ರತಿಬಿಂಬಿಸಲು ಇದು ಒಂದು ಅವಕಾಶ.ಸಮಾನತೆ ಏಕತೆ,ವೈವಿಧ್ಯತೆಯ ಸತತ ಅನ್ವೇಷಣೆಯ ಪ್ರಮುಖ
ಜ್ಞಾಪಣೆಯಾಗಿ ಕಾರ್ಯನಿರ್ವಹಿಸುತ್ತದೆ.
ಗಣರಾಜ್ಯೋತ್ಸವವು ಪ್ರತಿವರ್ಷ ವೈವಿಧ್ಯಮಯ ಥೀಮ್ ನೊಂದಿಗೆ ಆಚರಿಸಲ್ಪಡುತ್ತದೆ.ಈ ವರ್ಷದ ಆಚರಣೆ”ಸುವರ್ಣ ಭಾರತ ಪರಂಪರೆ ಮತ್ತು ಪ್ರಗತಿ”ಎಂಬ ಥೀಮ್ ನೊಂದಿಗೆ ಭಾರತದ ಶ್ರೀಮಂತ
ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದರ ಜೊತೆಗೆ ದೇಶವನ್ನು ಸುಭದ್ರವಾದ ಅಭಿವೃದ್ಧಿಯ ಪಥದ ಪ್ರಗತಿಯತ್ತ ಕೊಂಡ್ಯೋಯುವುದೇ ಮೂಲ ಉದ್ದೇಶವಾಗಿದೆ.
ಪ್ರತಿವರ್ಷ ಗಣರಾಜ್ಯೋತ್ಸವ ನಿಮಿತ್ಯ ಬೇರೆ ಬೇರೆ ದೇಶದ ಅಧ್ಯಕ್ಷರು ಅಥವಾ ಪ್ರಧಾನಮಂತ್ರಿಯವರನ್ನು ಮುಖ್ಯ ಅತಿಥಿಯಾಗಿ ಕರೆಸುವ ವಾಡಿಕೆ ಇರುವುದರಿಂದ ಈ ವರ್ಷದ ಗಣರಾಜ್ಯೋತ್ಸವಕ್ಕೆ ಇಂಡೋನೇಷ್ಯಾದ ಅಧ್ಯಕ್ಷರಾದ ಪ್ರಬೋವೊ ಸುಬಿಯಾಂಟೋ ಅವರನ್ನು ಆಹ್ವಾನಿಸಲಾಗಿದೆ.ದೆಹಲಿಯ ಕರ್ತವ್ಯ ಪಥದಲ್ಲಿ ರಾಷ್ಟ್ರಪತಿಗಳು ರಾಷ್ಟ್ರಧ್ವಜ ಹಾರಿಸುವರು. ರಾಜಪಥ್ ನಿಂದ ಇಂಡಿಯಾ ಗೇಟ್ ವರೆಗೆ ವಿವಿಧ ರಾಜ್ಯಗಳ ಸಾಂಸ್ಕೃತಿಕತೆ,ಇತಿಹಾಸ,ಸಾಧನೆಯನ್ನು ಬಿಂಬಿಸುವ ರೂಪಕಗಳು ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತವೆ.ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಹುತಾತ್ಮರಿಗೆ ಗೌರವ ಸಲ್ಲಿಸಲಾಗುವುದು.
ಈ ವರ್ಷ ಕರ್ನಾಟಕ ರಾಜ್ಯದಿಂದ ಇತ್ತೀಚೆಗೆ ಪ್ರಾಚ್ಯವಸ್ತು ವಿಭಾಗದಲ್ಲಿ ಸಂಚಲನ ಮೂಡಿಸಿದ ಲಕ್ಕುಂಡಿ ಗ್ರಾಮದ ಬ್ರಹ್ಮ ಜಿನಾಲಯ ಗಣರಾಜ್ಯೋತ್ಸವ ಪರೇಡಗೆ ಆಯ್ಕೆ ಆಗಿದ್ದು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ ಪ್ರಕ್ರಿಯೆಗೆ ಇದು ಬಲ ತುಂಬುವಂತಿದೆ.
ಗಣರಾಜ್ಯೋತ್ಸವವು ಸಾಂವಿಧಾನಿಕ ಮೌಲ್ಯಗಳ ಅನುಕರಣೆಗೆ ಒತ್ತು ನೀಡುವುದಲ್ಲದೆ ಪ್ರಜಾಸತ್ತಾತ್ಮಕತೆ ಏಕತೆಯನ್ನು ಸಾರುತ್ತದೆ.ಇದನ್ನು ಓದಿ –ನನಸಾದ ಕನಸು…
ಇಡೀ ಭಾರತದ ಜನತೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರರನ್ನು ನೆನೆಯುತ್ತ ಭಾರತಾಂಬೆಗೆ ನಮಿಸುತ ಸಂವಿಧಾನವು ನಮಗೆ ಬದುಕಲು ನೀಡಿದ ಹಕ್ಕುಗಳನ್ನು ಗೌರವಿಸುತ ಪ್ರತಿ ಅಂಶಗಳನ್ನು ಪಾಲಿಸುತ ದೇಶದ ಅಭಿವೃದ್ಧಿ ಬೆಳವಣಿಗೆಗೆ ಪೂರಕವಾಗಿ ಶ್ರಮಿಸುತ ಪ್ರಜಾಪ್ರಭುತ್ವದ ನೈಜಾರ್ಥ ಅರಿತರೆ ಗಣರಾಜ್ಯೋತ್ಸವ ಆಚರಣೆಗೆ ನಿಜವಾದ ಅರ್ಥ ಬರುವುದು.ಈಗಿನ ದಿನಮಾನಗಳಲ್ಲಿ ಮಕ್ಕಳಲ್ಲಿ ಯುವಜನತೆ ಗಣರಾಜ್ಯೋತ್ಸವದ ಹಿನ್ನೆಲೆ,ಇತಿಹಾಸ,ಆಚರಣೆಯ ಮೂಲ ಉದ್ದೇಶ ತಿಳಿದುಕೊಂಡರೆ ಗಣರಾಜ್ಯೋತ್ಸವ ದಿನಕ್ಕೆ ಸಾರ್ಥಕತೆ ದೊರೆವುದು.ಸಂವಿಧಾನಕ್ಕೆ ಗೌರವ ಸಲ್ಲುವುದು.ಅರಿಯಿರಿ ಪ್ರಜಾಪ್ರಭುತ್ವ ಆಗಲೇ ಈ ದಿನಕೆ ಸತ್ವ ಆಚರಣೆಗೂ ಬಲತ್ವ.
ಅವಿನಾಶ ಸೆರೆಮನಿ
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ