January 7, 2025

Newsnap Kannada

The World at your finger tips!

temple

ಒಂದು ತಿಂಗಳ ಒಳಗಾಗಿ ಖಾಸಗಿ ಹಿಂದೂ ದೇವಾಲಯಗಳ ನೋಂದಣಿ ಕಡ್ಡಾಯ

Spread the love

ಖಾಸಗಿ ಹಿಂದೂ ದೇವಸ್ಥಾನಗಳು ಒಂದು ತಿಂಗಳ ಒಳಗಾಗಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು, ನೋಂದಣಿ ಮಾಡಿಸದಿದ್ದಲ್ಲಿ ಅಂತಹ ದೇವಸ್ಥಾನದ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್ ತಿಳಿಸಿದರು.

ಮಂಗಳವಾರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಧಾರ್ಮಿಕ ದತ್ತಿ ಸಮಿತಿ 2011ರ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು, ನೋಂದಣಿ ಮಾಡಿಕೊಳ್ಳುವ ದೇವಸ್ಥಾನದ ಸ್ಥಳ, ದೇವಾಲಯದ ಹೆಸರು, ಉಳಿತಾಯದ ಬ್ಯಾಂಕ್ ಖಾತೆ, ದೇವಸ್ಥಾನಕ್ಕೆ ಸಂಬಂಧಿಸಿದ ಕಟ್ಟಡಗಳು ಹಾಗೂ ಕಲ್ಯಾಣ ಮಂಟಪಗಳ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಬೇಕು ಎಂದರು.

ಧಾರ್ಮಿಕ ದತ್ತಿ ಆಯುಕ್ತರ ಸುತ್ತೋಲೆ 2005 ರಂತೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ 2011 ರನ್ನೊಳಗೊಂಡಂತೆ ಕಲಂ-53 ರ ಅಡಿಯಲ್ಲಿ ಆಯಾಯ ಸಹಾಯಕ ಆಯುಕ್ತರು ನೋಂದಣಿ ಮಾಡುವುದು ಕಡ್ಡಾಯವಾಗಿರುತ್ತದೆ ಎಂದರು.

ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳನ್ನು ಹೊರತುಪಡಿಸಿ ಪ್ರತಿಯೊಂದು ಖಾಸಗಿ ಹಿಂದೂ ದೇವಸ್ಥಾನಗಳು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡ ದೇವಸ್ಥಾನಗಳಿಗೆ ಅರ್ಚಕರನ್ನು ನೇಮಿಸಿ ಗ್ರೇಡ್‌ಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ದೇವಸ್ಥಾನದ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಸಮಿತಿಯು ನೋಂದಣಿ ಕ್ರಮ ಕೈಗೊಂಡಿದೆ. ಈ ಹಿಂದೆ 2014-15 ರಲ್ಲಿ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶ ಹೊರಡಿಸಿದ್ದರೂ ಕೂಡ ಈವರೆಗೂ ಯಾವುದೇ ದೇವಸ್ಥಾನಗಳು ನೋಂದಣಿ ಮಾಡಿಕೊಂಡಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಮುಜರಾಯಿ ಇಲಾಖಾ ವ್ಯಾಪ್ತಿಗೆ ಒಳಪಟ್ಟ ದೇವಾಲಯಗಳಲ್ಲಿನ ಆಭರಣಗಳನ್ನು ಮೌಲ್ಯಮಾಪನ ಮಾಡಲು ನೀಡಿರುವ ನಿರ್ದೇಶದಂತೆಯೇ ಖಾಸಗಿ ದೇವಾಲಯಗಳನ್ನು ನೋಂದಣಿ ಮಾಡಿಕೊಳ್ಳುವ ಸಂದರ್ಭದಲ್ಲಿ ಸದರಿ ದೇವಾಲಯಗಳು ಹೊಂದಿರುವ ಚಿನ್ನ ಮತ್ತು ಬೆಳ್ಳಿ ಆಭರಣ ಇತ್ಯಾದಿಗಳ ಮೌಲ್ಯಮಾಪನ ಮಾಡಿಸಲು ಕ್ರಮ ವಹಿಸುವ ಮೂಲಕ ಆಯಾಯ ಜಿಲ್ಲೆಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕುಗಳ ಪ್ಯಾನಲ್‌ಗಳಲ್ಲಿದ್ದ ಆಭರಣ ಮೌಲ್ಯ ಮಾಪಕರುಗಳಿಂದ ಮತ್ತು ತಹಶೀಲ್ದಾರ್ ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಸಮಕ್ಷಮದಲ್ಲಿ ಸಂಪೂರ್ಣ ವಿಡಿಯೋ ಚಿತ್ರೀಕರಣದೊಂದಿಗೆ ನಿಯಮಾನುಸಾರ ಮೌಲ್ಯ ಮಾಪನ ಮಾಡಲಾಗುತ್ತದೆ.

ಮೌಲ್ಯ ಮಾಪಾನ ಮಾಡಲಾದ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿಯನ್ನು ಉತ್ಸವ ಹಾಗೂ ಹಬ್ಬ ಹರಿದಿನಗಳಲ್ಲಿ ದೇವರುಗಳಿಗೆ ಧರಿಸಲು ಅವಕಾಶ ಇದೆ ಎಂದು ತಿಳಿಸಿದರು.

Copyright © All rights reserved Newsnap | Newsever by AF themes.
error: Content is protected !!