December 26, 2024

Newsnap Kannada

The World at your finger tips!

rcb 1

RCBಗೆ 8 ವಿಕೆಟ್‌ಗಳ ಭರ್ಜರಿ ಜಯ; ಆರ್‌ಸಿಬಿ ಪ್ಲೇ ಆಫ್ ಆಸೆ ಜೀವಂತ

Spread the love
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬ್ಯಾಟಿಂಗ್ ಆಯ್ಕೆ ಮಾಡಿದ ನಂತರ ಗುಜರಾತ್ ಟೈಟಾನ್ಸ್ ಬೋರ್ಡ್‌ನಲ್ಲಿ 168/5 ಮೊತ್ತ ಗಳಿಸಿತು. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್‌ಸಿಬಿ ಪರ ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಅಬ್ಬರಿಸಿದ ಪರಿಣಾಮ ಗುಜರಾತ್ ವಿರುದ್ಧ ಭರ್ಜರಿ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.ಇದರೊಂದಿಗೆ RCB ಪ್ಲೇ ಆಫ್ ಆಸೆ ಜೀವಂತವಾಗಿರಿಸಿದೆ.

ಇದನ್ನು ಓದಿ - ಬೆಂಗಳೂರು  ಬ್ರ್ಯಾಂಡ್ ಉಳಿಸಿಕೊಳ್ಳಿ ಸಿಎಂಗೆ SMK ಪತ್ರ 

169 ರನ್‍ಗಳ ಗುರಿ ಬೆನ್ನಟ್ಟಿದ RCBಗೆ ಮೊದಲ ವಿಕೆಟ್‍ಗೆ 115 ರನ್ (87 ಎಸೆತ)ಗಳ ಜೊತೆಯಾಟದ ಮೂಲಕ ಕೊಹ್ಲಿ ಹಾಗೂ ಡುಪ್ಲೆಸಿಸ್ ಗೆಲುವಿನ ಆಸೆ ಚಿಗುರಿಸಿದರು. ಅಂತಿಮವಾಗಿ ಮಾಕ್ಸ್‌ವೆಲ್‌ ಅಬ್ಬರದ ಅಜೇಯ 40 ರನ್ (18 ಎಸೆತ, 5 ಬೌಂಡರಿ, 2 ಸಿಕ್ಸ್) ಚಚ್ಚಿ ಇನ್ನೂ 8 ಎಸೆತ ಬಾಕಿ ಇರುವಂತೆ ಆರ್‌ಸಿಬಿಗೆ 8 ವಿಕೆಟ್‍ಗಳ ಭರ್ಜರಿ ಜಯ ತಂದುಕೊಟ್ಟರು. 
ipl 2022 rcb 3

RCB ಪ್ಲೇ-ಆಫ್‌ಗೆ ಹೇಗೆ ಅರ್ಹತೆ ಪಡೆಯುತ್ತದೆ !?

ಆರ್‌ಸಿಬಿ ಪ್ಲೇ ಆಫ್ ಕನಸು ಕಾಣುತ್ತಿದೆ. ಇದಕ್ಕಾಗಿ ಮುಂದಿನ ಪಂದ್ಯದಲ್ಲಿ ಡೆಲ್ಲಿ ಮುಂಬೈ ವಿರುದ್ಧ ಸೋಲಬೇಕಾದ ಅನಿವಾರ್ಯ RCBಗಿದೆ. ಇತ್ತ ಗುಜರಾತ್ ಪಂದ್ಯ ಸೋತರು ಪಾಯಿಂಟ್ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಮುಂದುವರಿದಿದೆ.

ಪೈಪೋಟಿಯ ಮೊತ್ತವನ್ನು ಬೆನ್ನಟ್ಟಿದ ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಫಾಪ್ ಡುಪ್ಲೆಸಿಸ್ ಭರ್ಜರಿ ಆರಂಭ ನೀಡಿದರು. ಬ್ಯಾಟಿಂಗ್ ಲಯಕ್ಕೆ ಮರಳಿದಂತೆ ಕಂಡ ಕೊಹ್ಲಿ ಬ್ಯಾಟ್ ಹೆಚ್ಚು ಸದ್ದು ಮಾಡಿತು. ಅಲ್ಲದೇ ಆರಂಭಿಕ ಜೋಡಿ ಮೊದಲ ವಿಕೆಟ್‍ಗೆ 115 ರನ್ (87 ಎಸೆತ)ಗಳ ಭದ್ರ ಬುನಾದಿ ಹಾಕಿಕೊಟ್ಟಿತು. ಡು ಪ್ಲೆಸಿಸ್ 44 ರನ್ (38 ಎಸೆತ, 5 ಬೌಂಡರಿ) ಸಿಡಿಸಿ ಔಟ್ ಆದ ಕೆಲಹೊತ್ತಿನಲ್ಲಿ ಕೊಹ್ಲಿ 73 ರನ್ (54 ಎಸೆತ, 8 ಬೌಂಡರಿ, 2 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು.

IPL 2022 RCB 2 1

ಗುಜರಾತ್ ಆರಂಭಿಕ ವೈಫಲ್ಯ

ಈ ಮೊದಲು ಟಾಸ್ ಜಯಿಸಿದ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದರು. ಆದರೆ ಪಾಂಡ್ಯ ನಿರ್ಧಾರ ಆರಂಭದಲ್ಲೇ ತಲೆಕೆಳಗಾಯಿತು. ಆರಂಭಿಕ ಆಟಗಾರ ಶುಭಮನ್ ಗಿಲ್ 1 ರನ್‍ಗಳಿಗೆ ಸುಸ್ತಾಗಿ ಪೆವಿಲಿಯನ್‍ಗೆ ಹೆಜ್ಜೆ ಹಾಕಿದರು. ಆ ಬಳಿಕ ಬಂದ ಮ್ಯಾಥ್ಯೂ ವೇಡ್ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿ 16 ರನ್ (13 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು.

ಗುಜರಾತ್ ಕ್ಯಾಪ್ಟನ್ ಕುಂಗ್ ಫೂ ಪಾಂಡ್ಯ ಶೋ

ಉತ್ತಮವಾಗಿ ಬ್ಯಾಟ್‍ಬೀಸುತ್ತಿದ್ದ ವೃದ್ಧಿಮಾನ್ ಸಹಾ 31 ರನ್ (22 ಎಸೆತ, 4 ಬೌಂಡರಿ, 1 ಸಿಕ್ಸ್) ಬಾರಿಸಿ ರನ್‍ಔಟ್ ಆದರು. ಇನ್ನೂಂದು ಕಡೆ ನಾಯಕ ಹಾರ್ದಿಕ್ ಪಾಂಡ್ಯ ಗುಜರಾತ್ ತಂಡದ ರನ್ ಏರಿಸುವ ಜವಾಬ್ದಾರಿ ಹೊತ್ತರು. ಡೇವಿಡ್ ಮಿಲ್ಲರ್ ಜೊತೆಗೂಡಿ ಭರ್ಜರಿ ಬ್ಯಾಟಿಂಗ್‍ಗೆ ಮುಂದಾದ ಪಾಂಡ್ಯ ಆರ್‌ಸಿಬಿ ಬೌಲರ್‌ಗಳಿಗೆ ಕಂಟಕವಾದರು. ಮಿಲ್ಲರ್ 34 ರನ್ (25 ಎಸೆತ, 3 ಸಿಕ್ಸ್) ಬಾರಿಸಿ ಔಟ್ ಆಗುವ ಮುನ್ನ 4ನೇ ವಿಕೆಟ್‍ಗೆ ಪಾಂಡ್ಯ ಜೊತೆ 61 ರನ್‍ಗಳ ಜೊತೆಯಾಟವಾಡಿದರು.

IPL 2022 GT

ಡೆತ್ ಓವರ್‌ಗಳಲ್ಲಿ ಇನ್ನಷ್ಟು ಬಿರುಸು ಪಡೆದುಕೊಂಡ ಪಾಂಡ್ಯ ಬ್ಯಾಟ್ ಅಜೇಯ 62 ರನ್ (47 ಎಸೆತ, 4 ಬೌಂಡರಿ, 3 ಸಿಕ್ಸ್) ಸಿಡಿಸಿ ಮೆರೆದಾಡಿತು. ಇವರಿಗೆ ಉತ್ತಮ ಸಾಥ್ ನೀಡಿದ ರಶೀದ್ ಖಾನ್ 6 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸ್ ಸಹಿತ ಅಜೇಯ 19 ರನ್ ಚಚ್ಚಿ ಗುಜರಾತ್ ಮೊತ್ತವನ್ನು 165ರ ಗಡಿದಾಟಿಸಿದರು. ಅಂತಿಮವಾಗಿ ಗುಜರಾತ್ ತಂಡ 20 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 168 ರನ್ ಒಟ್ಟು ಗೂಡಿಸಿತು.

Copyright © All rights reserved Newsnap | Newsever by AF themes.
error: Content is protected !!