ಬೆಂಗಳೂರು, ಫೆಬ್ರವರಿ 7: ನಿರೀಕ್ಷೆಯಂತೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಮಾನಿಟರಿ ಪಾಲಿಸಿ ಕಮಿಟಿ (ಎಂಪಿಸಿ) ಸಭೆಯ ನಂತರ ರಿಪೋ ದರವನ್ನು ಶೇ. 0.25 ಇಳಿಕೆ ಮಾಡಿದೆ.
ಈ ನಿರ್ಧಾರವನ್ನು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಇಂದು ಪ್ರಕಟಿಸಿದರು. ಇದರಿಂದಾಗಿ, ಈಗಿನ ಶೇ. 6.50ರ ದರ ಶೇ. 6.25ಕ್ಕೆ ಇಳಿಯಲಿದೆ. ಕಳೆದ ನಾಲ್ಕು-ಐದು ವರ್ಷಗಳ ಬಳಿಕ ಇದು ಮೊದಲ ಬಾರಿಗೆ ಆರ್‌ಬಿಐ ರಿಪೋ ದರ ಇಳಿಕೆಯಾಗಿದೆ.
ಎಂಪಿಸಿ ಸಭೆ ಮತ್ತು ನಿರ್ಧಾರ
ಮೊನ್ನೆಯಿಂದ ನಡೆಯುತ್ತಿದ್ದ ಎಂಪಿಸಿ ಸಭೆಯ ಬಳಿಕ, ಎಲ್ಲ ಆರು ಸದಸ್ಯರು ಸರ್ವಾನುಮತದಿಂದ ಶೇ. 0.25 (25 ಮೂಲಾಂಕ) ರಿಪೋ ದರ ಇಳಿಸಲು ಒಪ್ಪಿಗೆ ನೀಡಿದರು. ದೇಶದ ಆರ್ಥಿಕ ಸ್ಥಿತಿಗತಿ, ಹಣದುಬ್ಬರ ನಿಯಂತ್ರಣ, ಮತ್ತು ಸಾಲದ ಲಭ್ಯತೆ ಸುಗಮಗೊಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಾಲದ ಬಡ್ಡಿದರ ಕುಸಿತದ ಸಾಧ್ಯತೆ
ರಿಪೋ ದರ ಇಳಿಕೆಯಿಂದ ಬ್ಯಾಂಕುಗಳ ಸಾಲದ ಬಡ್ಡಿದರಗಳು ತಗ್ಗುವ ಸಾಧ್ಯತೆ ಇದೆ. ಇದು ಗೃಹ, ವಾಹನ, ಹಾಗೂ ಇತರ ವಹಿವಾಟು ಸಾಲಗಳ EMI ಮೊತ್ತವನ್ನು ಕಡಿಮೆ ಮಾಡುವ ನಿರೀಕ್ಷೆ ಮೂಡಿಸಿದೆ.
ರಿಪೋ ದರ ಎಂದರೇನು?
ರಿಪೋ (Repo) ಎಂದರೆ “ರೀ ಪರ್ಚೇಸ್ ಒಪ್ಪಂದ” ಎಂಬುದರ ಸಂಕ್ಷಿಪ್ತ ರೂಪ. ಇದು ಆರ್‌ಬಿಐನ ಬಡ್ಡಿದರ ಆಗಿದ್ದು, ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಿಂದ ಸಾಲ ಪಡೆಯುವಾಗ ವಿಧಿಸಲಾಗುವ ಬಡ್ಡಿದರ ಇದಾಗಿದೆ. ಈ ದರ ಆಧರಿಸಿ ಬ್ಯಾಂಕುಗಳು ಗ್ರಾಹಕರಿಗೆ ನೀಡುವ ಸಾಲದ ಬಡ್ಡಿದರವನ್ನು ನಿಗದಿ ಮಾಡುತ್ತವೆ.
ರಿವರ್ಸ್ ರಿಪೋ ದರ ಎಂದರೇನು?
ರಿವರ್ಸ್ ರಿಪೋ ದರವೆಂದರೆ ಬ್ಯಾಂಕುಗಳು ತಮ್ಮ ಅಧಿಕ ಪ್ರಮಾಣದ ಹಣವನ್ನು ಆರ್‌ಬಿಐನಲ್ಲಿ ಠೇವಣಿಯಾಗಿ ಇರಿಸಿದಾಗ ಆರ್‌ಬಿಐ ನೀಡುವ ಬಡ್ಡಿ. ಇದು ಬ್ಯಾಂಕುಗಳ ಠೇವಣಿ ಬಡ್ಡಿದರಗಳನ್ನು ನಿರ್ಧರಿಸಲು ಸಹಾಯಕವಾಗುತ್ತದೆ.
ಆರ್‌ಬಿಐನ ಇತ್ತೀಚಿನ ದರ ಬದಲಾವಣೆಗಳು
2023ರ ಫೆಬ್ರುವರಿಯಿಂದ ರಿಪೋ ದರ ಶೇ. 6.50 ಆಗಿತ್ತು. 2020ರ ಮೇ ಬಳಿಕ ಮೊದಲ ಬಾರಿಗೆ ಆರ್‌ಬಿಐ ತನ್ನ ದರಗಳನ್ನು ಇಳಿಸಿದೆ. ಹೀಗಾಗಿ, ಕಳೆದ ನಾಲ್ಕರಿಂದ ಐದು ವರ್ಷಗಳ ನಂತರ ಈ ಬದಲಾವಣೆ ಮಹತ್ವ ಪಡೆದಿದೆ.
ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ
ಸಂಜಯ್ ಮಲ್ಹೋತ್ರಾ ಅವರು ಕಳೆದ ತಿಂಗಳು ಆರ್‌ಬಿಐನ 26ನೇ ಗವರ್ನರ್ ಆಗಿ ನೇಮಕಗೊಂಡರು. ಶಕ್ತಿಕಾಂತ ದಾಸ್ ಅವರ ಸ್ಥಾನವನ್ನು ಅವರು ಭರಿಸಿದ್ದಾರೆ. ಎಂಪಿಸಿ ಸಮಿತಿಯ ಮುಖ್ಯಸ್ಥರಾಗಿ ಇದು ಅವರ ಮೊದಲ ಸಭೆ ಆಗಿದೆ. ಈ ಸಮಿತಿಯಲ್ಲಿ ಆರ್‌ಬಿಐನ ಮೂವರು ಹಿರಿಯ ಅಧಿಕಾರಿಗಳು ಮತ್ತು ಮೂವರು ಸ್ವತಂತ್ರ ಸದಸ್ಯರು ಸೇರಿದ್ದಾರೆ.ಇದನ್ನು ಓದಿ –ಮುಂದಿನ ಮೆಟ್ರೋ ಕಾಮಗಾರಿಯಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣ – ಡಿಕೆ ಶಿವಕುಮಾರ್ ಘೋಷಣೆ
ಈ ದರ ಇಳಿಕೆಯಿಂದ ಸಾಲದ ಬಡ್ಡಿದರ ಕಡಿಮೆ ಆಗುವುದರಿಂದ ಗ್ರಾಹಕರಿಗೆ ಅನುಕೂಲವಾಗುವ ನಿರೀಕ್ಷೆ ಇದೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು