December 23, 2024

Newsnap Kannada

The World at your finger tips!

srirama

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ

Spread the love

ಮಾನವನ ಚರಿತ್ರೆಯಲ್ಲಿ ಶ್ರೀರಾಮನಂತ ಪಾತ್ರ ಇನ್ನೆಲ್ಲಿಯೂ ಬಿಂಬಿತವಾಗಿಲ್ಲ. ಸರ್ವಕೋನಗಳಿಂದ ಅಳೆದು-ತೂಗಿ ನೋಡಿದರೂ ಸಂಪೂರ್ಣವೆನಿಸುವ ಏಕಮಾತ್ರ ವ್ಯಕ್ತಿತ್ವ.

I) ತ್ಯಾಗದ ಪ್ರತೀಕ:

“ಕೆಲವೊಬ್ಬರು ತಮ್ಮ ಕನಸುಗಳಿಗಾಗಿ, ತಮ್ಮ ಕುಟುಂಬದವರಿಂದ ದೂರವಿರುತ್ತಾರೆ. ಇನ್ನೂ ಕೆಲವರು ಕುಟುಂಬದವರಿಗಾಗಿ, ತಮ್ಮ ಕನಸುಗಳಿಂದಲೇ ದೂರವಿರುತ್ತಾರೆ”.

ಇಲ್ಲಿ ತ್ಯಾಗ ಪ್ರಮುಖ ಪಾತ್ರವಹಿಸುತ್ತದೆ. ನೆನಪಿಡಿ, ಮಾಡಿದ ತ್ಯಾಗವನ್ನು ತನ್ನವರು ಮರೆಯಬಹುದು ಆದರೆ ಅದೃಷ್ಟವು ಎಂದೆಂದೂ ಆ ತ್ಯಾಗದ ಒಂದು ಸಣ್ಣ ಭಾಗವನ್ನೂ ವ್ಯರ್ಥವಾಗಲು, ಅರ್ಥ ಹೀನವಾಗಲು ಬಿಡದು. ತ್ಯಾಗಕ್ಕೆ ತಕ್ಕ ಪ್ರತಿಫಲ ನೀಡಿಯೇ ತೀರುತ್ತದೆ. ತ್ಯಾಗ ಚಿಕ್ಕದಾಗಿದ್ದರೆ ಪ್ರತಿಫಲವೂ ಚಿಕ್ಕದು. ತ್ಯಾಗ ದೊಡ್ಡದಾದರೆ ಪ್ರತಿಫಲವೂ ದೊಡ್ಡದು.

WhatsApp Image 2024 01 21 at 1.52.42 PM
ಡಾ. ರಾಜಶೇಖರ ನಾಗೂರ ✍️🌹

ಬೆಳಿಗ್ಗೆ ಎದ್ದರೆ ಪಟ್ಟಾಭಿಷೇಕ. ಇಡೀ ಅಯೋಧ್ಯೆ ಸಂಭ್ರಮದಲ್ಲಿ ಮುಳುಗಿದೆ. ರಾಮನ ಪಟ್ಟಾಭಿಷೇಕದ ನಿಮಿತ್ತ ಅಲಂಕೃತಗೊಂಡು ಹಬ್ಬದ ವಾತಾವರಣದಲ್ಲಿದೆ. ಬೆಳಗಿನ ಆ ಸಾರ್ಥಕ ಕ್ಷಣಗಳಿಗೆ ಕೇವಲ ಒಂದು ರಾತ್ರಿ ಮಾತ್ರ ಉರುಳ ಬೇಕಿದೆ.

ಆ ರಾತ್ರಿ ಮಂಥರೆಯು ಕೈಕೇಯಿಯ ತಲೆಯಲ್ಲಿ ವಿಷ ಬೀಜ ಬಿತ್ತುತ್ತಾಳೆ. ದಶರಥನನ್ನು ಇಕ್ಕಟ್ಟಿಗೆ ಸಿಲುಕಿಸಿ ರಾಮನನ್ನು ಕಾಡಿಗೆ ಅಟ್ಟಲು ಸೂಚಿಸುತ್ತಾಳೆ. ತಂದೆ ದಶರಥ ದಿಗ್ಬ್ರಾಂತನಾಗಿ ಕಣ್ಣೀರಲ್ಲಿ ಹಾಸಿಗೆ ಹಿಡಿಯುತ್ತಾನೆ. ರಾಮನನ್ನು ಕರೆಯಲಾಗುತ್ತದೆ. ವಿಷಯವನ್ನು ಪ್ರಸ್ತಾಪಿಸಲಾಗುತ್ತದೆ. ಶ್ರೀರಾಮ ಮಂದಹಾಸದಿ “ಇಷ್ಟು ಚಿಕ್ಕ ವಿಷಯಕ್ಕೆ ಇಷ್ಟೊಂದು ಚಿಂತೆಯೇ ಅಪ್ಪಾಜಿ” ಎನ್ನುತ್ತಾನೆ. ಮರು ಮಾತಿಲ್ಲ, ಮರು ಪ್ರಶ್ನೆಯಿಲ್ಲ. ಕೈಕೇಯಿಯ ಆಶಯದಂತೆ ತನ್ನ ತಮ್ಮ ‘ಭರತ’ನಿಗೆ ಇಡೀ ರಾಜ್ಯವನ್ನು ಬಿಟ್ಟು, ಉಟ್ಟ ಉಡುಗೆಯ ಮೇಲೆ ಕಾಡಿಗೆ ತೆರಳುತ್ತಾನೆ. ಒಂದಲ್ಲ ಎರಡಲ್ಲ ಹದಿನಾಲ್ಕು ವರ್ಷಗಳು.

ಆ ಹದಿನಾಲ್ಕು ವರ್ಷಗಳು ಹೇಗಿದ್ದವು ಎಂಬುದು ಅದೃಷ್ಟದ ಪರೀಕ್ಷೆಯಾಗಿತ್ತು. ಆ ಹದಿನಾಲ್ಕು ವರ್ಷಗಳ ಕಾಲ ರಾಮ ಅಯೋಧ್ಯೆಯಲ್ಲಿಯೇ ಇದ್ದಿದ್ದರೆ ಯುವರಾಜ ರಾಮನಾಗಿಯೇ ಉಳಿಯುತ್ತಿದ್ದ. ಆದರೆ ಹದಿನಾಲ್ಕು ವರ್ಷಗಳ ಕಠಿಣ ವನವಾಸದ ನಂತರ ಮರಳಿ ಬಂದಾಗ ‘ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀ ರಾಮಚಂದ್ರ ಪ್ರಭು’ವಾಗಿದ್ದ.

ಜೀವನದಲ್ಲಿ ಅದೃಷ್ಟದ ಪರೀಕ್ಷೆ ಎಷ್ಟು ದೊಡ್ಡದಿರುತ್ತದೋ ಪ್ರತಿಫಲವು ಅಷ್ಟೇ ದೊಡ್ಡದಿರುತ್ತದೆ. ತ್ಯಾಗವು ಅದೆಷ್ಟು ದೊಡ್ಡದಿರುತ್ತದೋ ಶ್ರೇಷ್ಠತೆಯೂ ಅಷ್ಟೇ ಹೆಚ್ಚುತ್ತದೆ.

ಇಲ್ಲಿ ಗಮನಿಸಬೇಕಾದದ್ದು ಇಷ್ಟೇ, ಎಷ್ಟೇ ಕಷ್ಟಗಳು ಬಂದರೂ ತನ್ನನ್ನು ತಾನು ತಾನಾಗಿರಿಸಿಕೊಂಡವನು ರಾಮ. ಆಸೆ-ಆಕಾಂಕ್ಷೆಗಳನ್ನು ಮೀರಿ ನಿಂತವನು ರಾಮ, ಮನಸಲ್ಲಿ ಅದೆಷ್ಟೇ ದುಃಖ-ದುಗುಡವಿದ್ದರೂ ಎಲ್ಲಿಯೂ ವಿಚಲಿತ, ಚಂಚಲಿತನಾಗದೇ ನಿಂತವನು ಇದೇ ಈ ಶ್ರೀರಾಮ.

ಇಂತಹ ಶ್ರೀರಾಮ ಇಂದಿನ ಒತ್ತಡದ, ದಾವಂತದ, ಮೋಸದ ಕಲಿಯುಗದಲ್ಲಿ ಬೇಕೆನಿಸುವುದು ಸಹಜ.

II) ಅಛಲತೆಯ ಪ್ರತೀಕ:

ಶ್ರೀರಾಮನ ಬದುಕು ಸಾಲು-ಸಾಲಿನ ದುರಂತಗಳ ಬದುಕು. ಸುಲಲಿತವಾದ ಬದುಕು ಶ್ರೀರಾಮನದಾಗಲೇ ಇಲ್ಲ. ರಾಜನಾಗಿ ಸುಖ-ಸಂಪತ್ತಿನಲ್ಲಿ, ಭೋಗಗಳ ವೈಭೋಗದಲ್ಲಿ ಶ್ರೀರಾಮ ಬದುಕು ಸವೆಸಲೇ ಇಲ್ಲಾ. ಬದುಕೇ ಒಂದು ದುರಂತಮಯ. ಆದರೂ ಎಲ್ಲಿಯೂ ತನ್ನ ಆದರ್ಶಗಳನ್ನು ಬಿಟ್ಟು ಬದುಕಲಿಲ್ಲ.

— ಪ್ರತಿ ಹೆಜ್ಜೆ ಹೆಜ್ಜೆಗೂ ಜೀವನದಲ್ಲಿ ಸರಣಿ ಆಘಾತವನನುಭವಿಸಿದ ಹೋರಾಟದ ಬದುಕು ಶ್ರೀ ರಾಮನದು. ರಾಜ್ಯಭಾರ ಮಾಡುವ ಸಂದರ್ಭದಲ್ಲಿಯೇ ತಂದೆಯ ಮಾತನ್ನು ಪಾಲಿಸಲು ವನವಾಸಕ್ಕೆ ಹೊರಟ.

— ಹೆಂಡತಿ ಸೀತಾಪಹರಣವಾದದ್ದು ಎರಡನೇ ಆಘಾತ. ಅಯೋಧ್ಯೆಯಿಂದ ಲಂಕೆಯವರೆಗೆ ಸು.3300 ಕಿ.ಮಿ ನಡೆದು ಹೋರಾಟ ಮಾಡಿದ್ದು ಹೆಂಡತಿಯ ಮೇಲಿನ ಪ್ರೀತಿಗಲ್ಲದೆ ಇನ್ನೇನು! ಸುರದ್ರೂಪಿ ರಾಜಕುಮಾರನಿಗೆ ಒಬ್ಬಳೇ ರಾಣಿಯ ಅಗತ್ಯವಿರಲಿಲ್ಲ. ಆದರೂ ರಾಮ ಸೀತೆಯನ್ನು ಪಡೆಯದೆ ಹಿಂತಿರುಗಲಿಲ್ಲ. ಆದರ್ಶ ಪುರುಷನಲ್ಲವೇ ಈ ರಾಮ.

— ವನವಾಸದ ನಂತರ ಅಯೋಧ್ಯೆಗೆ ಮರಳಿ ಬಂದಮೇಲೆ ಯಾರೋ ಒಬ್ಬನ ಚುಚ್ಚು ಮಾತು ಕೇಳಿ ತುಂಬುಗರ್ಭಿಣಿ ಹೆಂಡತಿಯನ್ನು ಮತ್ತೆ ಕಾಡಿಗೆ ಕಳುಹಿಸಿದ್ದನ್ನು ಬಹುತೇಕರು ರಾಮನನ್ನು ತೆಗಳಲು ಉಪಯೋಗಿಸುವರು. ಆದರೆ ರಾಮನು ತನ್ನ ರಾಜ ಧರ್ಮ ನಿಭಾಯಿಸಲು ಹೆಂಡತಿಯನ್ನು ಕಾಡಿಗೆ ಕಳಿಸುತ್ತಾನೆ. ಹೆಂಡತಿಗಿಂತ ಪ್ರಜೆಗಳ ಆಶಯ ರಾಮನಿಗೆ ಮುಖ್ಯವಾಗಿತ್ತೆಂಬುದು ಇಲ್ಲಿ ನಿಚ್ಚಳವಾಗುತ್ತದೆ.

— ಕೊನೆಗೆ ತನ್ನ ಮಕ್ಕಳ ಜೊತೆ ಯುದ್ಧ ಮಾಡುವ ಪರಿಸ್ಥಿತಿ ಬಂದೊದಗಿತು.

— ಹೀಗೆ ಪ್ರತಿ ಹೆಜ್ಜೆ ಹೆಜ್ಜೆಗೂ ಶ್ರೀ ರಾಮನು ಸರಣಿ ಆಘಾತ ಅನುಭವಿಸಿದರೂ ಧರ್ಮವನ್ನು ಬಿಟ್ಟು ನಡೆಯಲಿಲ್ಲ. ತನ್ನ ಆದರ್ಶಗಳಿಂದ ಹಿಂದೆ ಸರಿಯಲಿಲ್ಲ. ಹೀಗಾಗಿ ಆದರ್ಶ ಮರ್ಯಾದಾ ಪುರುಷೋತ್ತಮನಾಗಿ ಶ್ರೀರಾಮ ಎತ್ತರಕ್ಕೆ ನಿಲ್ಲುತ್ತಾನೆ.

— ಜೀವನದ ಸಣ್ಣ ಪುಟ್ಟ ಹೊಡೆತಗಳಿಂದ ಬದುಕಿನಲ್ಲಿ ನಡೆಯುವ ದಾರಿಯನ್ನೇ ಬದಲಾಯಿಸುವ, ಪ್ರಪಂಚವನ್ನು ದ್ವೇಷಿಸುವ ಬಹುತೇಕರು ನಾವು, ರಾಮನ ಆದರ್ಶಗಳಿಂದ ಕಲಿಯುವುದು ತುಂಬಾ ಇದೆ.

III) ಪ್ರೇಮದ ಪ್ರತೀಕ:

-ಕಾಡಿನಲಿ ಕಡು ಕಷ್ಟದಲಿ ಕಾಲ ಕಳೆಯುವಾಗ ರಾಕ್ಷಸ ರಾಜ ರಾವಣ ಲಂಕಾಧೀಶನ ತಂಗಿ ಸುಂದರಿಯೂ ಆದ ಶೂರ್ಪನಕಿ ರಾಮನನ್ನು ಮೋಹಿಸಿದಾಗ ರಾಮನು ಕಿಂಚಿತ್ತೂ ಬದಲಾಗದೇ ಅವಳನ್ನು ನಿರಾಕರಿಸಿದ್ದು ತನ್ನ ಹೆಂಡತಿ ಸೀತೆಯ ಮೇಲಿನ ಪ್ರೀತಿಗಾಗಿ.

-ಪ್ರಪಂಚದ ಪ್ರಾಚೀನ ಸಾಹಿತ್ಯದ ಇತಿಹಾಸವನ್ನು ಹುಡುಕಿ ನೋಡಿದರೆ, ತನ್ನ ಹೆಂಡತಿಯನ್ನು ಹುಡುಕುವ ಸಲುವಾಗಿ ಸಮುದ್ರಕ್ಕೆ ಸೇತುವೆ ಕಟ್ಟಿದ ನಿದರ್ಶನ ಎಲ್ಲಿಯೂ ಉಲ್ಲೇಖವಿಲ್ಲ. ಸಮುದ್ರಕ್ಕೆ ಸೇತುವೆ ನಿರ್ಮಿಸುತ್ತದೆ ಎಂದರೆ ಅದೆಂತಾ ಪ್ರೀತಿ ಇರಬೇಕು! ಶ್ರೀರಾಮ ಒಬ್ಬ ಯುವರಾಜನಾಗಿದ್ದ. ಬಹು ಪತ್ನಿತ್ವ ಸಾಮಾನ್ಯವಾಗಿ ಅಸ್ತಿತ್ವದಲ್ಲಿರುವ ಅಂದಿನ ರಾಜಮಹಾರಾಜರ ಕಾಲದಲ್ಲಿ ಒಬ್ಬ ಹೆಂಡತಿ ಇಲ್ಲವಾದರೆ ಏನಾದೀತು! ನೂರಾರು ಹೆಂಡತಿಯರನ್ನು ಮಾಡಿಕೊಳ್ಳುವ ಅವಕಾಶ ರಾಮನ ಮುಂದಿತ್ತು. ಅವಳಿಗಾಗಿ ಹುಡುಕುತ್ತಾ ಹೋಗುವ ಅಗತ್ಯವೇ ಇರಲಿಲ್ಲ. ಆದರೆ ಶ್ರೀರಾಮನು ತನ್ನ ಪ್ರೀತಿಯನ್ನು ಅರಸುತ್ತಾ ಸಮುದ್ರ ಅಡ್ಡವಾದರೂ ನಿಲ್ಲಲಿಲ್ಲ.

IV) ರಾಜ ಧರ್ಮದ ಪ್ರತೀಕ:

-ವನವಾಸದ ನಂತರ ಅಯೋಧ್ಯೆಗೆ ಮರಳಿ ಬಂದಮೇಲೆ ರಾಜನಾದ ರಾಮನು ಹೆಂಡತಿಯ ಪಾವಿತ್ರ್ಯತೆಯ ಬಗ್ಗೆ ಪ್ರಜೆಯೊಬ್ಬ ಪ್ರಶ್ನೆ ಮಾಡಿದಾಗ ಅವನ ತಲೆದಂಡ ಮಾಡಬಹುದಾಗಿತ್ತು. ಬದಲಾಗಿ ಆ ಪಾವಿತ್ರ್ಯತೆಯನ್ನು ಸಾಬೀತು ಮಾಡಿ ಒಳಗೆ ಬಾ ಎಂದು ಮತ್ತೆ ಹೆಂಡತಿಯನ್ನು ಕಾಡಿಗೆ ಕಳುಹಿಸಿದ್ದು ರಾಜಧರ್ಮ ನಿಭಾಯಿಸಲು. ಸಮುದ್ರಕ್ಕೆ ಸೇತುವೆ ನಿರ್ಮಿಸಿ ಲಂಕೇಯವರೆಗೆ ಹೋಗಿ ರಾವಣನೆಂಬ ಅಸುರನ್ನನ್ನು ಕೊಂದು ಸೀತೆಯನ್ನು ಮರಳಿ ಕರೆತಂದು ಮತ್ತೆ ಕಾಡಿಗೆ ಅಟ್ಟಲು ಶ್ರೀರಾಮ ಮತಿಗೇಡಿಯೇ! ಖಂಡಿತ ಅಲ್ಲಾ.

V) ನ್ಯಾಯದ ಪ್ರತೀಕ:

  • ಶೂದ್ರನೊಬ್ಬ ತಪಸ್ಸು ಮಾಡುತ್ತಿದ್ದಾನೆ. ಶೂದ್ರನಿಗೆ ತಪಸ್ಸು ಮಾಡುವ ಹಕ್ಕಿಲ್ಲ ಅದು ಮಹಾಪಾಪ ಎಂದು ರಾಜ್ಯದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ರಾಮನಿಗೆ ನ್ಯಾಯ ಕೇಳಿ ಆ ಶೂದ್ರನನ್ನು ಕೊಂದು ಧರ್ಮ ಉಳಿಸು ಎನ್ನುತ್ತಾರೆ. ಆಗ ರಾಮನು ಆಗಲಿ ಎಂದು ತನ್ನ ಬಿಲ್ಲು ಬಾಣ ತೆಗೆದು ಆ ತಪಸ್ಸು ಮಾಡುವ ಶೂದ್ರನ ಮೇಲೆ ಪ್ರಯೋಗ ಮಾಡುತ್ತಾನೆ. ಆ ಬಾಣ ನೇರವಾಗಿ ತಪಸ್ಸಿನಲ್ಲಿದ್ದ ಶೂದ್ರನ ಹತ್ತಿರ ಹೋಗಿ ಪ್ರದಕ್ಷಿಣೆ ಹಾಕಿ ಮರಳಿ ದೂರು ಕೊಟ್ಟವರ ಬೆನ್ನು ಬೀಳುತ್ತದೆ. ಆಗ ಅವರೆಲ್ಲ ಶ್ರೀರಾಮನ ಬಳಿ ಬಂದು ಕ್ಷಮೆ ಕೇಳುತ್ತಾರೆ. ಆಗ ಶ್ರೀರಾಮ ನೀವು ಕ್ಷಮೆ ಕೇಳಬೇಕಾದದ್ದು ನನ್ನದಲ್ಲ ಆ ತಪಸ್ವಿಯದು. ಅವನು ಕ್ಷಮಿಸಿದರೆ ನೀವು ಉಳಿಯುತ್ತಿರಿ ಎನ್ನುತ್ತಾನೆ. ಆಗ ದೂರುದಾರರು ಓಡಿ ಆ ಶೂದ್ರ ತಪಸ್ವಿಯಲ್ಲಿ ಕ್ಷಮೆಯಾಚಿಸಿ ಪ್ರಾಣ ಉಳಿಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಶ್ರೀರಾಮ ಜಾತಿ, ಮತ, ಪಂಥ ಎನ್ನದೆ ಎಲ್ಲರಿಗೂ ನ್ಯಾಯ ಒದಗಿಸುತ್ತಿದ್ದ. ಈ ಕಾರಣದಿಂದ ರಾಜ್ಯ “ರಾಮ ರಾಜ್ಯ”ವಾಗಬೇಕು ಎಂದು ನಾವು ಇಂದಿಗೂ ಉಲ್ಲೇಖಿಸಿ ಮಾತನಾಡುತ್ತೇವೆ.

ಇಂತಹ ಆದರ್ಶ ಪುರುಷ, ಮರ್ಯಾದಾ ಪುರುಷೋತ್ತಮನ ಮಂದಿರದ ಪ್ರಾಣ ಪ್ರತಿಷ್ಠಾಪನೆ ಎನ್ನುವುದೇ ಒಂದು ಸಡಗರ ಸಂಭ್ರಮ. ಮೈಸೂರಿನ ಐದು ತಲೆ ಮಾರಿನ ಶಿಲ್ಪಿಗಳ ಕುಟುಂಬದಿಂದ ಬಂದ ಕರ್ನಾಟಕದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ‘ರಾಮ ಲಲ್ಲಾ’ ವಿಗ್ರಹವನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಸ್ಥಾಪನೆ ಮಾಡಲಾಗುತ್ತಿದೆ ಎನ್ನುವುದು ಮತ್ತೊಂದು ಸಡಗರ ಮತ್ತು ಹೆಮ್ಮೆಯ ವಿಷಯ. ಇಂತಹ ಒಂದು ‘ನ ಭೂತೋ ನ ಭವಿಷ್ಯತಿ’ ಎನ್ನುವ ಅದ್ಭುತ ಕ್ಷಣಗಳಿಗೆ ನಾವು ನೀವೆಲ್ಲರೂ ಸಾಕ್ಷಿಯಾಗಿ ನಿಲ್ಲಲಿದ್ದೇವೆ ಎಂಬುದು ರೋಮಾಂಚನವನ್ನುಂಟು ಮಾಡದೇ ಇರದು.

ನೆನೆದರೆ ಸಾಕು ಬದುಕಿನ ಬಿರುಗಾಳಿಯಲ್ಲಿ ತಂಗಾಳಿಯಂತೆ ಸುಳಿವ ಈ ಶ್ರೀರಾಮನನ್ನು ಈ ಹೃದಯ ಭಕ್ತಿಯಿಂದ “ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ, ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ” ಎನ್ನದೇ ಇರಲಾರದೇ!

ಜೈ ಶ್ರೀರಾಮ್ 🚩

====================

Copyright © All rights reserved Newsnap | Newsever by AF themes.
error: Content is protected !!