ಶ್ರಾವಣ ಮಾಸ ಬರುವಾಗ ತನ್ನ ಜೊತೆ ಸಾಲು ಸಾಲು ಹಬ್ಬಗಳನ್ನೂ ಹೊತ್ತು ತರುತ್ತದೆ. ವರ್ಷ ಋತುವಿನಿಂದ ತಂಪಾದ ಬುವಿಯು ಹಸಿರನ್ನು ಹೊದ್ದು ನಳನಳಿಸುತ್ತಾ ಹಬ್ಬಗಳಿಗೆ ಸ್ವಾಗತ ನೀಡುವಂತೆ ತೋರುತ್ತದೆ. ಹಬ್ಬಗಳೆಂದರೆ ನಮಗೆ ಸಂಭ್ರಮವೋ ಸಂಭ್ರಮ. ಕುಟುಂಬಗಳನ್ನು ಒಗ್ಗೂಡಿಸುವ ಶಕ್ತಿಯೇ ನಮ್ಮ ಹಬ್ಬಗಳು ಎಂದರೆ ಅತಿಶಯೋಕ್ತಿಯಲ್ಲ. ಶ್ರಾವಣ ಮಾಸದ ಆರಂಭದ ಮುನ್ನಾ ದಿನ ಭೀಮನ ಅಮಾವಾಸ್ಯೆಯಿಂದ ನಮ್ಮ ಹಬ್ಬಗಳು ಒಂದರ ಹಿಂದೊಂದು ಪೆರೇಡ್ ಹೊರಟಂತೆ ಬರುತ್ತದೆ. ಪಂಚಮಿಯ ದಿನ ಆಚರಿಸುವ ನಾಗರಪಂಚಮಿಯು ಅಣ್ಣ – ತಂಗಿಯರ ಹಬ್ಬವೆಂದೂ ಕರೆಸಿಕೊಳ್ಳುತ್ತದೆ.
ಆ ಕುರಿತಾದ ಪೌರಾಣಿಕ ಹಿನ್ನೆಲೆಯ ಕತೆಯೂ ಇದೆ. ಒಂದಾನೊಂದು ಕಾಲದಲ್ಲಿ ನಾಲ್ಕು ಅಣ್ಣಂದಿರನ್ನೂ ಒಟ್ಟಿಗೆ ಹಾವೊಂದು ಕಚ್ಚಿ ಸಾಯಿಸಿ ಬಿಟ್ಟಿತಂತೆ. ಅವರಿಗೆ ಒಬ್ಬಳೇ ತಂಗಿ. ತನ್ನ ಅಣ್ಣಂದಿರನ್ನು ಬದುಕಿಸು ಎಂದು ಅವಳು ನಾಗನಲ್ಲಿ ಹಠ ಹಿಡಿದು ಬೇಡಿಕೆ ಇಟ್ಟಳಂತೆ.
ಇವಳ ಹಟಕ್ಕೆ ಮಣಿದ ನಾಗನು ಒಬ್ಬ ಸಹೋದರನನ್ನು ಬದುಕಿಸಿದನಂತೆ. ಈ ಘಟನೆಯೇ ಕಾಲಾನುಕ್ರಮದಲ್ಲಿ ಅಣ್ಣ- ತಂಗಿಯರ ಹಬ್ಬವಾಗಿ ಆಚರಣೆ ಆರಂಭವಾಯಿತು ಎನ್ನುತ್ತದೆ ಒಂದು ನಂಬಿಕೆ. ಅಣ್ಣ ಅಥವಾ ತಮ್ಮನನ್ನು ದೇವರ ಮುಂದೆ ಕೂರಿಸಿ ಬೆನ್ನಿಗೆ ಎಣ್ಣೆ ಹಚ್ಚಿ, ಆರತಿ ಬೆಳಗಿ, ಯಥಾಶಕ್ತಿ ಉಡುಗೊರೆ ನೀಡುವ ಸಂಪ್ರದಾಯ ಅದೆಷ್ಟು ಚಂದ ಅಲ್ಲವೇ? ಅವರ ಜೀವನ ತಂಪಾಗಿರಲಿ ಎಂಬ ಆಶಯದ ಆಚರಣೆ ನಿಜಕ್ಕೂ ಅರ್ಥಪೂರ್ಣ. ಸಹೋದರರ ಶ್ರೇಯಸ್ಸೇ ,ತನ್ನ ಶ್ರೇಯಸ್ಸು ಎಂಬ ನಂಬಿಕೆಯ ಪದ್ಧತಿ ಇದರಲ್ಲಿ ಕಂಡುಬರುತ್ತದೆ.
ಭೀಮನ ಅಮಾವಾಸ್ಯೆಯಂದು ಹೊಸಿಲಿನ ಮೇಲೆ ಸಹೋದರರು ಭಂಡಾರ ಒಡೆಯುವ ಕ್ರಮವೂ ಕೆಲವೆಡೆ ಇದೆ. ಭಂಡಾರ ಒಡೆದ ಸಹೋದರರಿಗೆ ಆರತಿ ಬೆಳಗಿ , ಸಿಹಿ ತಿನ್ನಿಸುವ ಕ್ರಮ ಅಣ್ಣ,ತಮ್ಮಂದಿರಲ್ಲಿ ದೈವತ್ವವನ್ನು ಕಾಣುವುದರ ನಿದರ್ಶನ.
ಶ್ರಾವಣಮಾಸದ ಹುಣ್ಣಿಮೆಯಂದು ರಕ್ಷಾಬಂಧನ ಹಬ್ಬವನ್ನು ಎಲ್ಲೆಡೆ ಆಚರಿಸುತ್ತೇವೆ. ಈ ಹಬ್ಬದ ಕುರಿತಾದ ಪೌರಾಣಿಕ ಮತ್ತು ಚಾರಿತ್ರಿಕ ಹಿನ್ನೆಲೆಗಳೇನು ಎಂಬುದನ್ನು ಅವಲೋಕಿಸೋಣ.
ದ್ವಾಪರದಲ್ಲಿ ಶಿಶುಪಾಲನನ್ನು ಶ್ರೀ ಕೃಷ್ಣನು ತನ್ನ ಸುದರ್ಶನ ಚಕ್ರದಿಂದ ಸಂಹರಿಸಿದಾಗ ಕೃಷ್ಣನ ಬೆರಳಿಗೆ ಗಾಯವಾಗಿ ರಕ್ತ ಒಸರುತ್ತದೆ. ನೆರೆದಿದ್ದ ಎಲ್ಲರೂ ಆಚೀಚೆ ಬಟ್ಟೆಗಾಗಿ ಹುಡುಕುತ್ತಿದ್ದಾಗ , ದ್ರೌಪದಿಯು ತನ್ನ ಸೆರಗಿನ ತುದಿಯನ್ನೇ ಕತ್ತರಿಸಿ ಕೃಷ್ಣನ ಬೆರಳಿಗೆ ಕಟ್ಟಿದಳಂತೆ. ಆಕೆಯ ರಕ್ಷಣೆಗಾಗಿ ಕೃಷ್ಣನು ವಸ್ತ್ರಾಪಹರಣದ ಸಂದರ್ಭದಲ್ಲಿ ಓಡೋಡಿ ಬಂದು ಅವಳ ಋಣವನ್ನು ತೀರಿಸಿ ಅವಳ ಮಾನವನ್ನು ರಕ್ಷಿಸಿದನೆಂದು ಮಹಾಭಾರತ ಹೇಳುತ್ತದೆ. ಇದು ರಕ್ಷಾಬಂಧನವಾಗಿ ಮುಂದುವರಿಯಿತು ಎಂಬುದು ನಮ್ಮ ಪೌರಾಣಿಕ ಹಿನ್ನೆಲೆಯ ಪ್ರಸಂಗ.
ದೇವ ದಾನವರ ಯುದ್ಧದ ಸಮಯದಲ್ಲಿ, ದಾನವರು ದೇವತೆಗಳ ಮೇಲೆ ತಮ್ಮ ಹಿಡಿತ ಸಾಧಿಸುತ್ತಿದ್ದ ಸಮಯದಲ್ಲಿ ಇಂದ್ರನ ಪತ್ನಿ ಶಚೀದೇವಿಯು ಇಂದ್ರನಿಗೆ ಕಟ್ಟಿದ ಕಂಕಣವು ,ದೇವತೆಗಳ ಬಲವನ್ನು ವೃದ್ಧಿಸಿ,ದಾನವರ ಸೋಲಾಗಲು ಕಾರಣವಾಯಿತು ಎನ್ನುತ್ತದೆ ಮತ್ತೊಂದು ಪೌರಾಣಿಕ ಕಥೆ.
ಚರಿತ್ರೆಯ ಒಂದು ಕಥೆಯು, ಅಲೆಕ್ಸಾಂಡರನ ಪತ್ನಿಯು, ಪುರೂರವನಿಗೆ ರಾಖಿಯನ್ನು ಕಟ್ಟಿ ,ಸಹೋದರತ್ವದ ಹೊಣೆ ಹೊರಿಸಿ ತನ್ನ ಗಂಡನನ್ನು ಉಳಿಸಿಕೊಂಡಳು ಎಂದು ಹೇಳುತ್ತದೆ.
ರಾಖಿ ಅಥವಾ ರಕ್ಷಾಬಂಧನ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ಹುಣ್ಣಿಮೆಯನ್ನು ನೂಲು ಹುಣ್ಣಿಮೆ ಎಂದೂ ಕರೆಯಲಾಗುತ್ತದೆ. ರಕ್ಷೆ ಎಂಬ ಪದವೇ ಆಡುಮಾತಿನಲ್ಲಿ ರಾಖಿ ಆಗಿರಬಹುದು. ಮೂಲತಃ ರಾಖಿ ಹಬ್ಬವನ್ನು ಉತ್ತರ ಭಾರತದಲ್ಲಿ ಆಚರಿಸಲಾಗುತ್ತಿತ್ತು. ಈಗ ಎಲ್ಲೆಡೆಯೂ ಆಚರಿಸುತ್ತಾರೆ. ರಕ್ಷಾ ಬಂಧನ ಪದದಲ್ಲಿಯೇ ಬಾಂಧವ್ಯ, ಬಂಧ ಪದವೂ ಸೇರಿದೆ. ರಕ್ಷೆಯ ಪ್ರತೀಕವಾದ ರಾಖಿಯನ್ನು ಕಟ್ಟುವುದರ ಮೂಲಕ ಭ್ರಾತೃತ್ವದ ಬಂಧನವೂ ಗಟ್ಟಿಯಾಗಲೆಂಬ ಹಾರೈಕೆ ಅದರಲ್ಲಿದೆ.
‘ಹೆಣ್ಣಿನ ಜನುಮಕೆ ಅಣ್ಣ ತಮ್ಮರು ಬೇಕು,ಬೆನ್ನು ಕಟ್ಟುವರು ಸಭೆಯೊಳಗೆ…ಬೆನ್ನು ಕಟ್ಟುವರು ಸಭೆಯೊಳಗೆ ಸಾವಿರ ಹೊನ್ನು ಕಟ್ಟುವರು ಉಡಿಯೊಳಗೆ…ಎಂದು ನಮ್ಮ ಜನಪದರು ಹಾಡಿ ಸಹೋದರರು ತಮ್ಮ ಸಹೋದರಿಗೆ ಹೇಗೆ ಬೆಂಬಲವಾಗಿ ನಿಲ್ಲಬಲ್ಲರು ಎಂಬುದನ್ನು ತಿಳಿಸಿದರು. ಬೆನ್ನು ಕಟ್ಟುವರು ಸಭೆಯೊಳಗೆ ಎಂಬ ಸಾಲು, ಹಸ್ತಿನಾಪುರದ ಸಭೆಯಲ್ಲಿ ದುಷ್ಟ ದುಶ್ಯಾಸನನು ದ್ರೌಪದಿಯ ಸೀರೆಯನ್ನು ಸೆಳೆಯುವಾಗ, ಶ್ರೀ ಕೃಷ್ಣನು ಅಕ್ಷಯ ವಸ್ತ್ರವನ್ನು ನೀಡಿ ಅವಳ ಮಾನವನ್ನು ರಕ್ಷಿಸಿದ ಸಂದರ್ಭವನ್ನು ಹೇಳುತ್ತಿದೆ ಎನಿಸುತ್ತದೆ. ಸಹೋದರರಿದ್ದರೆ ಸಹೋದರಿಯ ರಕ್ಷಣೆಗೆ ಯಾವುದೇ ಕುಂದಿಲ್ಲ ಎಂಬುದು ಸಾರ್ವಕಾಲಿಕ ಸತ್ಯ.
ಆದ್ದರಿಂದಲೇ ಸಹೋದರರ ಒಳಿತಿಗಾಗಿ ಪ್ರಾರ್ಥಿಸಿ ,ಹಣೆಗೆ ತಿಲಕವಿಟ್ಟು, ಬಲ ಮಣಿಕಟ್ಟಿಗೆ ರಕ್ಷಾಬಂಧನವನ್ನು ಕಟ್ಟಿ ಆರತಿ ಮಾಡುವ ಪದ್ಧತಿಯಿದೆ. ಅಣ್ಣ,ತಮ್ಮಂದಿರಿಗೆ ಆಯುರಾರೋಗ್ಯವನ್ನು ಬೇಡುತ್ತಾ ಆರತಿ ಬೆಳಗುವುದು ನಮ್ಮ ಹಿಂದೂ ಧರ್ಮದ ಸತ್ಸಂಪ್ರದಾಯಗಳಲ್ಲೊಂದು.
ಅಣ್ಣ ತಮ್ಮಂದಿರು ಯಥೋಚಿತ ಕಾಣಿಕೆಯನ್ನು ಸಹೋದರಿಯರಿಗೆ ನೀಡುವುದರ ಮೂಲಕ ಸಹೋದರತ್ವದ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಂಸ್ಕೃತಿಯಾಗಿ ಈ ಹಬ್ಬವು ಶ್ರೇಷ್ಠತೆಯನ್ನು ಪಡೆದಿದೆ.ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
ಇಂದು ಶ್ರಾವಣದ ನೂಲು ಹುಣ್ಣಿಮೆ, ರಕ್ಷಾಬಂಧನ ಹಬ್ಬವನ್ನು ವಿಶ್ವಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಹೋದರರು ತಮ್ಮ ಸಹೋದರಿಯರ ರಕ್ಷಣೆಗೆ ಸದಾ ಬದ್ಧನೆಂದು ಸಾಂಕೇತಿಕವಾಗಿ ತಿಳಿಸುವ ಈ ಹಬ್ಬವು ಸಹೋದರ ಬಾಂಧವ್ಯವನ್ನು ವೃದ್ಧಿಸಲಿ. ಒಡಹುಟ್ಟಿದ ಸಹೋದರರಿಲ್ಲದವರೂ ಮಾನಸ ಸಹೋದರರನ್ನು ಪಡೆದು ಅವರ ರಕ್ಷಣೆಯಲ್ಲಿ ಸುರಕ್ಷಿತವಾಗಿರಲಿ.
ಸಹೋದರರೆಲ್ಲರಿಗೂ ರಕ್ಷಾಬಂಧನದ ಶುಭಾಶಯಗಳು 🌹💐💐
ರೂಪಶ್ರೀ ಕುಮಾರ್
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ