ಈ ಹಿಂದೆ, 2022ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದ ಬಳಿಕ ಪಾಫ್ ಡು ಪ್ಲೆಸಿಸ್ ತಂಡದ ನಾಯಕನಾಗಿದ್ದರು. ಆದರೆ, 42 ವರ್ಷದ ಡು ಪ್ಲೆಸಿಸ್ ಅವರನ್ನು ಮುಂದುವರಿಸಲು ತಂಡ ಇಚ್ಛಿಸದ ಕಾರಣ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿತ್ತು. ಇದರಿಂದ ಆರ್‌ಸಿಬಿ ಅಭಿಮಾನಿಗಳು ಹೊಸ ನಾಯಕ ಯಾರು ಎಂಬ ಕುತೂಹಲದಲ್ಲಿದ್ದರು. ಕೊನೆಗೂ ಈ ನಿರ್ಧಾರ ಕೈಗೊಳ್ಳಲಾಗಿದೆ.
ಆರ್‌ಸಿಬಿಯ ಅಧಿಕೃತ ಪ್ರಕಟಣೆ
ಆರ್‌ಸಿಬಿ ಫ್ರಾಂಚೈಸಿಯು ತಮ್ಮ ಎಕ್ಸ್ (ಹಳೆ ಟ್ವಿಟ್ಟರ್) ಖಾತೆ ಯಲ್ಲಿ ಈ ಘೋಷಣೆಯನ್ನು ಅಧಿಕೃತವಾಗಿ ಪ್ರಕಟಿಸಿದ್ದು, “ನಮ್ಮ ಹೊಸ ಅಧ್ಯಾಯಕ್ಕೆ ನಾಂದಿ ಹಾಡುತ್ತಿದ್ದೇವೆ. ಹೊಸ ನಾಯಕನ ನೇಮಕ ಪ್ರಕ್ರಿಯೆಯಲ್ಲಿ ತೂಗಿ-ಅಳೆಯಲು ಸಾಕಷ್ಟು ಸಮಯ ತೆಗೆದುಕೊಂಡು, ರಜತ್ ಪಾಟೀದಾರ್ ಅವರನ್ನು ಆಯ್ಕೆ ಮಾಡಿದ್ದೇವೆ” ಎಂದು ಹೇಳಿದೆ.
2021ರಲ್ಲಿ ಆರ್‌ಸಿಬಿಗೆ ಸೇರ್ಪಡೆಗೊಂಡ ಪಾಟೀದಾರ್, ಈವರೆಗೆ 27 ಐಪಿಎಲ್ ಪಂದ್ಯಗಳಲ್ಲಿ 34.73 ಸರಾಸರಿಯಲ್ಲಿ 799 ರನ್ ಕಲೆ ಹಾಕಿದ್ದಾರೆ. 2023ರ ಸೀಸನ್‌ನಲ್ಲಿ ಗಾಯದ ಸಮಸ್ಯೆಯಿಂದ ಅವರು ಆಡಲು ಸಾಧ್ಯವಾಗಿರಲಿಲ್ಲ. ಆದರೆ 2024ರ ಐಪಿಎಲ್‌ನಲ್ಲಿ 15 ಪಂದ್ಯಗಳ 13 ಇನ್ನಿಂಗ್ಸ್‌ಗಳಲ್ಲಿ 30.38 ಸರಾಸರಿಯಲ್ಲಿ 395 ರನ್ ಗಳಿಸಿದರು. ಇದರಲ್ಲಿ 5 ಅರ್ಧಶತಕಗಳು ಸೇರಿವೆ. ಈ ಸಾಧನೆ ಅವರನ್ನು ನಾಯಕನ ಪಟ್ಟಕ್ಕೆ ತಲುಪಿಸಿದೆ.
ವಿರಾಟ್ ಕೊಹ್ಲಿ ಪ್ರತಿಕ್ರಿಯೆ
ನಾಯಕನ ಆಯ್ಕೆ ಕುರಿತು ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದು, “ರಜತ್, ಮೊದಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಫ್ರಾಂಚೈಸಿಯ ಬೆಂಬಲದಿಂದ ನೀವು ಉತ್ತಮವಾಗಿ ಬೆಳೆಯುತ್ತಿದ್ದೀರಾ. ನಿಮ್ಮ ಆಟವನ್ನು ನೋಡಲು ಆರ್‌ಸಿಬಿ ಅಭಿಮಾನಿಗಳು ತೀವ್ರ ಉತ್ಸುಕರಾಗಿದ್ದಾರೆ. ಈ ಸ್ಥಾನಕ್ಕೆ ನೀವು ಅರ್ಹ ಆಯ್ಕೆಯಾಗಿದ್ದೀರಿ. ನಾನು ಮತ್ತು ನಮ್ಮ ತಂಡದ ಎಲ್ಲ ಸದಸ್ಯರೂ ನಿಮ್ಮ ಹಿಂದಿದ್ದೇವೆ” ಎಂದಿದ್ದಾರೆ.
ಆರ್‌ಸಿಬಿ ಪ್ರಧಾನ ಕೋಚ್ ಆ್ಯಂಡಿ ಫ್ಲವರ್ ಕೂಡ ಪಾಟೀದಾರ್ ಅವರನ್ನು ಅಭಿನಂದಿಸಿದ್ದು, “ರಜತ್ ಬಹಳ ಸರಳ ವ್ಯಕ್ತಿಯಾಗಿದ್ದು, ತಮ್ಮ ಸುತ್ತಲಿನ ಜನರ ಬಗ್ಗೆ ಕಾಳಜಿ ವಹಿಸುತ್ತಾರೆ. ಮಧ್ಯಪ್ರದೇಶ ತಂಡವನ್ನು ಅವರು ಮುನ್ನಡೆಸಿದ ರೀತಿ ನಮಗೆ ತುಂಬಾ ಇಷ್ಟವಾಯಿತು. ಅವರ ನಾಯಕತ್ವ ಗುಣಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.ಇದನ್ನು ಓದಿ –ಮೈಸೂರಿನಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ಹೀಗಾಗಿ, ಐಪಿಎಲ್ 2025ರ ಸೀಸನ್‌ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ನಾಯಕನ ಪಟ್ಟ ಪಾಟೀದಾರ್‌ಗೆ ಸೇರಿದಂತಾಗಿದೆ. ಅಭಿಮಾನಿಗಳು ಈ ಹೊಸ ಅಧ್ಯಾಯವನ್ನು ಹೇಗೆ ಸ್ವೀಕರಿಸುತ್ತಾರೋ ನೋಡಬೇಕಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು