1950ರ ದಶಕದಿಂದ 2000ರ ದಶಕದ ವರೆಗೂ ಸಂಗೀತ ಲೋಕದ ಮೆಲೋಡಿ ಕಿಂಗ್ ಜೋಡಿ ಎನಿಸಿಕೊಂಡಿದ್ದ ರಾಜನ್-ನಾಗೇಂದ್ರ ಜೋಡಿ ಖ್ಯಾತಿಯ ರಾಜನ್(87) ಬೆಂಗಳೂರಿನ ತಮ್ಮ ಸ್ವ ಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇವರ ಸಹೋದರ ನಾಗೇಂದ್ರ 2000 ದಲ್ಲೇ ನಿಧನರಾಗಿದ್ದಾರೆ.
ರಾಜನ್ ಅನೇಕ ದಿನಗಳಿಂದ ವಯೋ ಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು. ಮೈಸೂರಿನಲ್ಲಿ 1933ರಲ್ಲಿ ಜನಿಸಿದ ರಾಜನ್ ತಮ್ಮ ಸಹೋದರ ನಾಗೇಂದ್ರ ಅವರೊಡಗೂಡಿ 1952 ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
1952 ರಿಂದ 1999ರ ವರೆಗೂ ಸುಮಾರು 375 ಸಿನಿಮಾಗಳಿಗೆ ಈ ಜೋಡಿ ಸಂಗೀತ ನಿರ್ದೇಶನ ನೀಡಿದೆ.
ಕನ್ನಡದ 200ಕ್ಕೂ ಅಧಿಕ ಸಿನಿಮಾಗಳ ಜೊತೆ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಶ್ರೀಲಂಕಾದ ಸಿಂಹಳ ಭಾಷೆಯ ಸಿನಿಮಾಗಳಿಗೂ ಸಂಗೀತ ಸಂಯೋಜಿಸಿ ಕೊಟ್ಟಿದ್ದಾರೆ. ಇವರು ಸಂಯೋಜಿಸಿದ ಸಂಗೀತವು ತೆಲುಗಿನಲ್ಲೂ ಸಹ ಟ್ರೆಂಡ್ ಸೆಟ್ ಮಾಡಿತ್ತು.
‘ಮಂತ್ರಾಲಯ ಮಹಾತ್ಮೆ’, ‘ಗಂಧದ ಗುಡಿ’, ‘ನಾ ನಿನ್ನ ಬಿಡಲಾರೆ’, ‘ಎರಡು ಕನಸು’, ‘ಕಳ್ಳ ಕುಳ್ಳ’, ‘ಬಯಲು ದಾರಿ’, ‘ನಾ ನಿನ್ನ ಮರೆಯಲಾರೆ’, ‘ಹೊಂಬಿಸಿಲು’, ‘ಆಟೋ ರಾಜ’, ‘ಗಾಳಿಮಾತು’, ‘ಚಲಿಸುವ ಮೋಡಗಳು’, ‘ಬೆಟ್ಟದ ಹೂವು’, ‘ಸುಪ್ರಭಾತ’, ‘ಮತ್ತೆ ಹಾಡಿತು ಕೋಗಿಲೆ’, ‘ಕರುಳಿನ ಕುಡಿ’, ‘ಪರಸಂಗದ ಗೆಂಡೆತಿಮ್ಮ’, ‘ಶ್ರೀನಿವಾಸ ಕಲ್ಯಾಣ’ ರಾಜನ್-ನಾಗೇಂದ್ರ ಜೋಡಿ ಸಂಗೀತ ನೀಡಿದ ಕೆಲವು ಪ್ರಮುಖ ಚಿತ್ರಗಳು.
ರಾಜನ್ ಅಂತ್ಯಕ್ರಿಯೆಯನ್ನು ಇಂದು ಹೆಬ್ಬಾಳದ ಸ್ಮಶಾನದಲ್ಲಿ ನೆರವೇರಿಸಲಾಗುವುದು. ರಾಜನ್ ಅವರು ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಸಂಗೀತ ಲೋಕದ ದಿಗ್ಗಜನಿಗೆ ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು