- (ಬ್ಯಾಂಕರ್ ಡೈರಿ)
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯಲಿದೆ ಎಂದು ನಿರ್ಣಯವಾದಾಗಿನಿಂದ ಮಂಡ್ಯದ ಜನರ ಕನಸು ಗರಿಗೆದರಿತ್ತು.
ಇಂದು ನಾಳೆ ಇಂದು ನಾಳೆ ಎಂದು ತಳ್ಳಿ ಕೊನೆಗೂ ೨೦೨೪ ರ ಡಿಸೆಂಬರ್ ತಿಂಗಳಿನಲ್ಲಿ ೨೦,೨೧,೨೨ ರಂದು ಸಮ್ಮೇಳನ ನಡೆಯಿತು. ಸಮ್ಮೇಳನಕ್ಕೆ ಮುಂಚೆ ಒಂದಷ್ಟು ಕೆಸರೆರಚಾಟ; ನಂತರ ಒಂದಿಷ್ಟು..
ಇವು ಎಲ್ಲ ಕಡೆಯೂ ಇದ್ದದ್ದೇ. ಸರಿ ಸಮ್ಮೇಳನ ಮುಗಿಯಿತು. ಸಮ್ಮೇಳನದಲ್ಲಿ ನಾನೊಂದು ಪ್ರಬಂಧವನ್ನು ಮಂಡಿಸಿದೆ. ಶುಕ್ರವಾರ ಶನಿವಾರ ರಜೆ ಹಾಕಿದ್ದೆ. ಭಾನುವಾರ ರಜೆ ಇದ್ದೇ ಇತ್ತು. ಮೂರು ದಿನಗಳು ಸಮ್ಮೇಳನದ ಆವರಣದ ತುಂಬೆಲ್ಲ ನಾನು ನನ್ನ ಜೂನಿಯರ್ ನಿರೂಪಕಿ ಓಡಾಡಿದೆವು. ಸಮ್ಮೇಳನವನ್ನು ಕಿವಿ ತುಂಬ ತುಂಬಿಕೊಂಡು, ಬಂದ ಜನರನ್ನು ಕಂಡು ಕಣ್ತುಂಬಿಕೊಂಡು, ಪುಸ್ತಕ ಮಳಿಗೆಗಳಲ್ಲಿ ಕೈ ತುಂಬಾ ಪುಸ್ತಕ ಕೊಂಡು, ಮಳೆಯ ಕೆಸರಿನಲ್ಲಿ ಜನ ಒದ್ದಾಡಿದ್ದು ನೋಡಿ ಅಯ್ಯೋ ಎಂದುಕೊಂಡು, ಅಂತೂ ಸಮ್ಮೇಳನ ಮುಗಿಸಿ ಬಂದೆವು. 30 ವರ್ಷಗಳ ಹಿಂದೆ ನಾನು ಕೆಲಸಕ್ಕೆ ಸೇರಿದ ಹೊಸತರಲ್ಲಿ ನಡೆದ ಸಮ್ಮೇಳನದಲ್ಲಿ ಕೂಡ ರಜೆ ಹಾಕಿಕೊಂಡು ಸ್ಟೇಡಿಯಂ ತುಂಬಾ ಓಡಾಡಿದ್ದನ್ನು ನೆನಪು ಮಾಡಿಕೊಳ್ಳುತ್ತಲೇ ಸಮ್ಮೇಳನದ ಸಂಭ್ರಮವನ್ನು ಮನದಲ್ಲಿ ತುಂಬಿಕೊಂಡೆ.
ಸರಿ ವಿಷಯಕ್ಕೆ ಬರುತ್ತೇನೆ. ಸಮ್ಮೇಳನ ಮುಗಿದ ಮರುದಿನದಿಂದಲೇ ದಿನಕ್ಕೆ ನಾಲ್ಕಾರು ಜನರು ಬ್ಯಾಂಕಿಗೆ ಬಂದವರು ನಿಮ್ಮ ಭಾಷಣ ಚೆನ್ನಾಗಿ ಮೂಡಿ ಬಂದಿತು ಎಂದಾಗ ಇವರು ಸಹಾ ಸಮ್ಮೇಳನಕ್ಕೆ ಬಂದಿದ್ದರಾ ಎಂಬ ಅಚ್ಚರಿಯ ಜೊತೆ ಹಾಗೆ ಮಾತನಾಡಿದ್ದು ನಾನೇನಾ ಎಂಬ ಭಾವ ಮೂಡಿದ್ದು ನಿಜ. ಎಷ್ತೋಂದು ಜನ ಸಮ್ಮೇಳನಕ್ಕೆ ಹೋಗಿದ್ದೆ ಹೋಗಿದ್ದೆ ಎಂದಾಗ ಬಹಳ ಸಂತೋಷವಾಗಿದ್ದಂತೂ ಮತ್ತೂ ನಿಜ.
ಮಂಡ್ಯ ಎಂದರೆ ಇಂಡಿಯಾ ಎನ್ನುವ ಮಾತಿದೆ. ಇಲ್ಲಿ ಕನ್ನಡ ಎಂದರೆ ಎಷ್ಟು ಪ್ರೀತಿಯೋ, ಕೃಷಿ ಎಂದರೆ ಎಂಥ ಜೀವಜಾತ್ರೆಯೋ. ಅಂತೆಯೇ ರಾಜಕೀಯ ಕೂಡಾ ಜನರ ಉಸಿರು.
ಎಲ್ಲ ವಿಷಯಗಳಲ್ಲೂ ಗುಂಪು, ಕಚ್ಚಾಟ, ಪ್ರತಿಭಟನೆ, ರಾಜಕೀಯ ಇರುವಾಗ ಸಮ್ಮೇಳನದ ವಿಷಯದಲ್ಲಿ ಇರದಿರುತ್ತದೆಯೇ?
ಬ್ಯಾಂಕಿಗೆ ಬಂದು ಕೆಲಕಾಲ ಅವರ ಕೆಲಸ ಮಾಡಿಸಿಕೊಳ್ಳುವ ಸಮಯದಲ್ಲೇ ಸಮ್ಮೇಳನದ ಕುರಿತಾಗಿ ಅನೇಕ ಗ್ರಾಹಕರು ಮಾತನಾಡುತ್ತಲೇ ಇದ್ದರು. ಮಳೆ ನಿಂತರೂ ಮರದ ಹನಿ ನಿಲ್ಲದು ಎನ್ನುವ ಮಾತಿನಂತೆ.
ಒಬ್ಬೊಬ್ಬರದು ಒಂದೊಂದು ಅನುಭವ. ಅಕ್ಷರ ಜಾತ್ರೆ ಎಂಬ ಸಂಭ್ರಮ ಕೆಲವರ ಮಾತಿನಲ್ಲಿ ಕಂಡರೆ ಮತ್ತೆ ಕೆಲವರದ್ದು ಊಟದ ವಿಷಯವೇ ಪ್ರಧಾನ ಮಾತು.
ಅಲ್ಲಿ ಕೊಟ್ಟ ಮುದ್ದೆ ಉಪ್ಸಾರು ಜೋಳದ ರೊಟ್ಟಿ ಎಣ್ಣೆಗಾಯಿ ಎಲ್ಲವೂ ಚೆನ್ನಾಗಿತ್ತು ಎಂದು ಕೆಲವರು ಹೇಳಿದರೆ ಅಯ್ಯೋ ನನಗೆ ಸಿಕ್ಕಿದ್ದು ಒಣಗಿದ ಚೂರು ರೊಟ್ಟಿ ಅರ್ಧ ಬದನೆಕಾಯಿ ಅದಕ್ಕೋಸ್ಕರ ಅಷ್ಟು ದೊಡ್ಡ ಕ್ಯೂ ಎಂದವರೂ ಉಂಟು.
ಅಯ್ಯಪ್ಪ ಎಷ್ಟೊಂದು ಪುಸ್ತಕ ಮಳಿಗೆಗಳು ಆ ಜನರ ಮಧ್ಯೆ ಆ ಉರಿವ ಸಕೆಯಲ್ಲಿ ಪುಸ್ತಕ ನೋಡಿ ನೋಡಿ ಕೊಂಡು ಹೊರಗೆ ಬರುವಷ್ಟರಲ್ಲಿ ಸಾಕು ಬೇಕಾಗಿತ್ತು ಎಂದವರು ಬಹುಪಾಲು.
ಇನ್ನು ವಾಣಿಜ್ಯ ಮಳಿಗೆಗಳತ್ತ ಹೆಜ್ಜೆ ಇಟ್ಟವರು ಎಲ್ಲಿ ನೋಡಿದರೂ ತಿಂಡಿ ತಿನಿಸು ಎಂದದ್ದೂ ಉಂಟು.
ನಮ್ಮ ವಿಮಾ ವಿಭಾಗದ ಹುಡುಗನೊಬ್ಬ “ಮೇಡಂ ನನ್ನ ಮಗಳನ್ನು ಕರೆದುಕೊಂಡು ಸಮ್ಮೇಳನಕ್ಕೆ ಹೋಗಿದ್ದೆ” ಎಂದು ಹೆಮ್ಮೆಯಿಂದ ಹೇಳಿದ. ನನಗೆ ಆಶ್ಚರ್ಯ. ಏಳು ತಿಂಗಳ ಮಗುವಲ್ಲವೇ ಎಂದೇ? “ ಹೌದು ಮೇಡಂ ಮುಂದಿನ 30 ವರ್ಷದ ನಂತರ ನಡೆಯುವ ಸಮ್ಮೇಳನದಲ್ಲಿ ನಾವು ಮೂವರು ತೆಗೆದುಕೊಂಡ ಫೋಟೋವನ್ನು ನನ್ನ ಮಗಳಿಗೆ ತೋರಿಸಿದರೆ ಅದೆಷ್ಟು ಸಂಭ್ರಮವಾಗುತ್ತದೆ. ಆಗ ಅವಳು ದೊಡ್ಡವಳಾಗಿರುತ್ತಾಳೆ.. ಅವಳಿಗೂ ಮದುವೆಯಾಗಿ ಮಗು ಇರುತ್ತದೆ. ನಾನು ಮಗು ಇದ್ದಾಗ ನಾನೂ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದೆ ಎಂದು ಆಗ ಅರಿವಾಗುತ್ತದೆ ಆಗ ಅವಳಿಗೆ ಎಷ್ಟು ಸಂತೋಷ ಆಗುತ್ತೆ ಹೇಳಿ. ಅವಳ ಮಕ್ಕಳಿಗೂ ಅದನ್ನು ತೋರಿಸುತ್ತಾಳೆ. ಅದಕ್ಕಾಗಿ ಅವಳನ್ನು ಕರೆದುಕೊಂಡು ಹೋಗಿ ಫೋಟೋ ತೆಗೆಸಿದೆ” ಎಂದ.
ನಿಜ ಅಲ್ವಾ ನನಗೆ ಎರಡು ಬಾರಿ ನಮ್ಮ ಊರಿನ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಂಭ್ರಮ ಸಿಕ್ಕಿದೆ. ಮುಂದಿನ ಬಾರಿ ಸಮ್ಮೇಳನ ನಡೆಯುವಾಗ ನಾನು ಇರುತ್ತೇನೋ ಇಲ್ಲವೋ ಕಾಣೆ. ಅನುಮಾನವೇನು? ಖಂಡಿತಾ ಇರುವುದಿಲ್ಲ. ಅಕಸ್ಮಾಸ್ಮಾಸ್ಮಾತ್ ತ್ ಇದ್ದರೂ, ಅಷ್ಟೆಲ್ಲ ಓಡಾಡೋಕೆ ಆಗುತ್ತದೆಯೇ..? ? ? ಅದಕ್ಕೇ ನಮ್ಮೂರಿನ ನುಡಿ ಜಾತ್ರೆಯ ಸಂಭ್ರಮವನ್ನು ಕಾಲುಗಟ್ಟಿ ಇರುವಾಗಲೇ ಕಣ್ಣು ತುಂಬಿಕೊಂಡೆ ಎಂದು ನಾನು ಹೇಳಿದೆ.
ನಮ್ಮಿಬ್ಬರ ಮಾತು ಕೇಳುತ್ತಿದ್ದ ನನ್ನ ಗೆಳತಿಯೂ ಗ್ರಾಹಕಿಯೂ ಆದ ಶೈಲ “ಅಯ್ಯೋ ಶುಭಾ ನಾನು ಮೊದಲ ದಿನ ವಾಣಿಜ್ಯ ಮಳಿಗೆಗೆ ಹೋದಾಗ ಮಣ್ಣಿನ ಧೂಳು ಹಾರಬಾರದು ಎಂದು ಹಾಕಿದ್ದ ನೆಟ್ ಹರಿದು ನನ್ನ ಕಾಲುಂಗುರ ಅದರಡಿ ಸಿಲುಕಿ ನಾನು ಮುಗ್ಗರಿಸಿಬಿದ್ದು ಕಾಲು ಊದಿ ಮೂರು ದಿನ ಹೆಜ್ಜೆ ಊರಲು ಆಗಿರಲಿಲ್ಲ. ಆದರೂ ಮೂರನೇ ದಿನ ಮತ್ತೆ ಕುಂಟುತ್ತಾ ಬಂದಿದ್ದೆ. ನಿನ್ನ ಭಾಷಣ ಕೇಳಿದೆ. ಕೇಳಿದೆ ಅಷ್ಟೇ ಸರಿಯಾಗಿ ಕೇಳಲಿಲ್ಲ. ಎಕೋ ಆಗ್ತಿತ್ತು. ಸುಮಾರಾಗಿ ಕೇಳಿದೆ. ನಿನ್ನ ಯೂ ಟ್ಯೂಬ್ ಗೆ ಹಾಕಿದಾಗ ನನಗೂ ಕಳಿಸು. ಸರ್ಯಾಗಿ ಕೇಳ್ತೀನಿ” ಅಂದವಳು “ವಾಪಸ್ ನಾನು ಶಾಲೆಗೆ ಹೋದ ಮೇಲೆ ನನ್ನ ಕ್ಲರ್ಕ್ ಕೂಡ ಹೇಳಿದ ಅವನು ಕೂಡಾ ಬಿದ್ದ ಎಂದು. ಎಷ್ಟೋ ಜನ ಬಿದ್ದರಂತೆ ಅಲ್ಲಿ. ಅದಾದ ಮೇಲೆ ನೆಟ್ ಸರಿ ಮಾಡಿದರಂತೆ, ಸಮ್ಮೇಳನದಲ್ಲಿ ಇದೊಂದು ನೆನಪು ಉಳಿದು ಹೋಯಿತು” ಎಂದು ನಕ್ಕಳು. “ಹೋ ಹಾಗಿದೆ ಅಲ್ಲಿ ನಿನಗೆ ತುಂಬಾ ಫ಼ಾಲೋಯರ್ಸ್ ಅನ್ನು” ಎಂದು ತಮಾಷೆ ಮಾಡಿದೆ. ಅವಳು “ನೋಡು ಬೀಳೊದ್ರಲ್ಲಾದ್ರೂ ನನಗೆ ಅಷ್ಟು ಜನ ಫಾಲೋಯರ್ ಸಿಕ್ಕರ್ಲ್ಲಾ” ಎಂದು ತಾನೂ ನಗೆಗೆ ಜೊತೆಯಾದಳು.
ಮತ್ತೊಬ್ಬರು ಇದನ್ನು ಕೇಳಿ “ನಾನು ಒಂದು ದಿನ ಅಷ್ಟೇ ಸಮ್ಮೇಳನಕ್ಕೆ ಬಂದೆ. ಏಕೆಂದರೆ ಅದೇನಾಯ್ತೋ ಕಾಣೆ, ನಾನು ತಿಂದ ಜೋಳದ ರೊಟ್ಟಿ ಎಣ್ಣೆಗಾಯಿ ಇಂದ ಅನಿಸುತ್ತೆ ನನ್ನ ಬಿರಟೆ ಓಪನ್ ಆಗಿ ಹೋಯಿತು. ಒಂದನೇ ದಿನಕ್ಕೆ ನಾನು ಸಮ್ಮೇಳನ ಮುಗಿಸಿಬಿಟ್ಟೆ ಇನ್ ಎರಡು ದಿನ ರೂಮು ಹಾಲು ವಾಶ್ ರೂಮ್ ಮೂರಕ್ಕೆ ಮಾತ್ರವೇ ಓಡಾಡಿದ್ದು” ಎಂದು ಸಮ್ಮೇಳನಕ್ಕೆ ಅಂಟಿದ ಈ ನಂಟಿನ ಕಹಿ ನೆನಪನ್ನೂ ಗಂಟು ಹಾಕಿದರು.
ಬ್ಯಾಂಕಿನ ನಮ್ಮ ಸಹೋದ್ಯೋಗಿ ಒಬ್ಬರು “ಮೇಡಂ, ಅಯ್ಯೋ ಎಲ್ಲಿತ್ತೋ ಮಳೆ, ಮಂಡ್ಯದಲ್ಲಿ ಒಂದು ಹನಿಯೂ ಬೀಳ್ದೆ ಸಮ್ಮೇಳನದ ಅಂಗಳದಲ್ಲಿ ಧೋ ಅಂತ ಸುರೀತಲ್ಲಾ, ಆಗ ಆದ ಅವಾಂತ್ರ ಯಾರ್ಗೂ ಬೇಡ. ಜನಾ ಎಲ್ಲಾ ಚಲ್ಲಾ ಪಿಲ್ಲಿಯಾಗಿ ಎಲ್ಲಾ ಗೋಷ್ಷ್ಠೀಲೂ ಜನ ತುಂಬೋದ್ರು ಆಸರೆಗೋಸ್ಕರ. ಮೊದ್ಲೇ ಅದು ಗದ್ದೆ ಭೂಮಿ. ಸಮ್ಮೇಳನಕ್ಕೆ ಅಂತ ಸಮಾ ಮಾಡಿದ್ರು. ಮಳೆ ಬಂದಿದ್ದೇ ತಡ ಎಲ್ಲಾ ಕೆಸರಾಗಿ ಹೋಯ್ತು. ಪಚ ಪಚ ಅಂತ ನೆಲಕ್ಕೆ ಕಾಲು ಕಚ್ಕೋತಿದ್ವಾ? ಎಲ್ರೂ ಚಪ್ಲಿ ಬಿಟ್ ಒಂಟೋದ್ರು. ಒಂದು ಸಾವ್ರ ಚಪ್ಲಿ ಆದ್ರೂ ಅಲ್ಲಿ ಕಚ್ಕಂಡಿತ್ತು ಅಂತ ಕಾಣ್ತದೆ. ಮಾರ್ನೇ ದಿನಾನೂ ನೆಲಕ್ಕೆ ಚಪ್ಲಿ ಕಚ್ಕೋತಿದ್ವು. ಕೆಲವ್ರು ಬಿದ್ದೇ ಬಿಟ್ರು” ಅಂತ ಅಲ್ಲಿ ನಡೆದ ಘಟನೆಯನ್ನು ಕಣ್ಣಿಗೆ ಕಟ್ಟಿದ ಹಾಗೆ ಹೇಳಿದರು.
ಸುಮಾರು ಎಂಟು ದಿನಗಳಾಗಿರಬಹುದು. ಅವರು ಸರ್ಕಾರದ ದೊಡ್ಡ ಹುದ್ದೆಯಲ್ಲೇ ಇದ್ದರು. ಅವರಿಗೆ ಅತಿ ಗಣ್ಯರು ಎಂಬ ಆಹ್ವಾನ ಪತ್ರಿಕೆಯು ಇತ್ತಂತೆ. ಆದರೂ ಊಟದ ಹಾಲಿಗೆ ಹೋಗುವಲ್ಲಿ ಅವರು ಪಟ್ಟ ಪರಿತಾಪ ಯಾರಿಗೂ ಬೇಡ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. “ವಿ.ಐ.ಪಿ ಊಟದ ಹಾಲಿಗೆ ಹೋಗುವಾಗ ಅಲ್ಲಲ್ಲ ಇಲ್ಲಿ, ಇಲ್ಲಲ್ಲ ಅಲ್ಲಿ ಎಂದು ಓಡಾಡಿಸಿದರು. ಬೇಡ್ರಪ್ಪಾ ಎಕ್ಸಿಟ್ ಎಲ್ಲಿಗೆ ತೋರಿಸಿ ಹೊರಗಾದರೂ ಹೋಗುತ್ತೇನೆ ಹೋಟೆಲ್ಲಿಗೆ ಎಂದರೂ ಅದಕ್ಕೂ ಅಲ್ಲಿ ಇಲ್ಲಿ ಓಡಾಡಿಸಿದರು. ಸಾಮಾನ್ಯರ ಗ್ಯಾಲರಿಗೆ ಹೋಗಿದ್ದರೆ ಹೊರಗೆ ಹೋಗುವ ಸ್ವಾತಂತ್ರ್ಯ ಇರುತ್ತಿತ್ತು. ನನಗೆ ಅವತ್ತು ವಿ.ಐ.ಪಿ ಜೈಲ್ ಅನಿಸಿಬಿಟ್ಟಿತ್ತು ಮೇಡಂ” ಎಂದರು. “ಹೊರಗೆ ಹೋಗಲು ತಡಕಾಡುತ್ತಿದ್ದಾಗ ನನಗೆ ಪರಿಚಯದ ಪೊಲೀಸಿನವರೊಬ್ಬರು ಬಂದು ವಿಐಪಿ ಡೈನಿಂಗ್ ಹಾಲ್ ಒಳಕ್ಕೆ ಬಿಟ್ಟರು. ಬದುಕಿದೆ ಬಡ ಜೀವವೇ ಎಂದು ಅಲ್ಲಿಗೆ ಹೋಗುವಷ್ಟರಲ್ಲಿ ತಡವಾಗಿತ್ತು ಎಲ್ಲ ಐಟಂ ಗಳೂ ಮುಗಿದುಹೋಗಿದ್ದವು. ನನಗೋ ಬೆಳ್ಳುಳ್ಳಿಯ ವಾಸನೆಯೂ ಸೇರದು. ಮೊದಲಿಗೆ ಬಂದ ಅರ್ಧ ಗ್ಲಾಸ್ ಹೆಸರುಬೇಳೆ ಪಾಯಸವನ್ನು ಹೀರಿದ್ದೇ ಭಾಗ್ಯ. ಪೂರಿ ಮುಗಿದುಹೋಗಿತ್ತು. ಅದಕ್ಕೆಂದು ಮಾಡಿದ್ದಸಿದ ಪನ್ನೀರ್ ಗ್ರೇವಿಯನ್ನು ಬಡಿಸಿದರು. ವಾಸನೆಯಿಂದ ಅದನ್ನೂ ತಿನ್ನಲಾಗಲಿಲ್ಲ ಮತ್ತೂ ಕಾದರೆ ಬಂದಿದ್ದು ಹಿದುಕಿದ ಅವರೇ ಬೇಳೆಯ ಸಾರು. ಅದರ ತುಂಬಾ ಕೂಡ ಬೆಳ್ಳುಳ್ಳಿಯ ಗಮಗಮ. ಹಾಗಾಗಿ ಅದನ್ನು ಕೂಡ ಹಾಕಿಸಿಕೊಳ್ಳಲಿಲ್ಲ. ಏನಿದ್ದರೂ ಮೊಸರೋ, ಮಜ್ಜಿಗೆಯೋ ಬಂದೇ ಬರುತ್ತದಲ್ಲಾ ಅಂತ ಕಾದೆ. ತಡವಾದ್ದರಿಂದ ಅದೂ ಬರಲಿಲ್ಲ. ಕೊನೆಗೆ ಬಿಳಿಯನ್ನವನ್ನೇ ತಿಂದು ಹಸಿವು ನೀಗಿಸಿಕೊಂಡು ತೃಪ್ತಿಪಟ್ಟುಕೊಳ್ಳಬೇಕಾಯಿತು” ಎಂದರು. “ಇದು ನನ್ನ ವಿ.ಐ.ಪಿ ಊಟ ಅಂದು ಕಸಿವಿಸಿ ಆಗಿತ್ತು. ಇಂದು ನೆನೆದರೆ ನಗು ಬರುತ್ತಿದೆ” ಎಂದು ನಕ್ಕರು. “ ನಿಮ್ಮ ಆಫೀಸಿನ ಯಾರಿಗಾದರೂ ಫೋನ್ ಮಾಡೋದಲ್ವಾ? ಅವರೇ ಬಂದು ನಿಮ್ಮನ್ನು ಕರೆದೊಯ್ಯುತ್ತಿದ್ದರು” ಎಂದೆ. “ಮೊಬೈ ನೆಟ್ ವರ್ಕ್ ಜಾಮ್ ಆಗಿತ್ತಲ್ಲಾ ಮೇಡಂ’ ಎಂದರು. ನಾನು ಮನಸ್ಸಿನಲ್ಲಿಯೇ ಹೌದಲ್ವಾ ಅದು ನನ್ನ ಅನುಭವಕ್ಕೂ ಬಂದಿತ್ತು. ಮರೆತೇಬಿಟ್ಟೆನಲ್ಲಾ ಎಂದು ಬೇಸರಿಸಿಕೊಂಡೆ.
ಮರುದಿನ ಹೇಗೋ ಏನೋ ಎಂದುಕೊಂಡು ಮನೆಯಲ್ಲಿ ಮಾಡಿದ ತಿಂಡಿಯನ್ನೇ ಹಾಕಿಕೊಂಡು ಡಬ್ಬಿ ತೆಗೆದುಕೊಂಡು ಹೋದರಂತೆ. ಪುಸ್ತಕ ಮಳಿಗೆಗಳ ಸಾಲಿನಲ್ಲಿ ಖಾಲಿ ಇದ್ದ ಮಳಿಗೆ ಒಂದರಲ್ಲಿ ಕುಳಿತು ನೆಮ್ಮದಿಯಾಗಿ ತಿಂಡಿ ತಿಂದೆ ಎಂದರು.
ಇನ್ನು ಬಾಡೂಟ ಕೊಡಲೇಬೇಕೆಂದು ಕೆಲ ಮಂದಿ ಹಟ ಹಿಡಿದಿದ್ದು. ಅದಕ್ಕಾಗಿ ಪ್ರತಿಭಟಿಸಿದ್ದು ಕೊನೆಗೆ ಮೂರನೆಯ ದಿನ ಹೊರಗೆಲ್ಲೋ ಹಗ್ಗ ಜಗ್ಗಾಟದ ಹಾಗೆ ಬಾಡೂಟ ಮಾಡಿದ್ದನ್ನು ಮತ್ತು ಆಗ ನಡೆದ ಹೊಡೆದಾಟವನ್ನು ಪತ್ರಿಕೆಯಲ್ಲಿ ಓದಿದೆವು ಎಂದರು ನಮ್ಮ ಬ್ಯಾಂಕಿಗೆ ಬಂದ ಸಾಹಿತಿಯೊಬ್ಬರು. “ನಮ್ಮವರು ಊಟಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ ದೇವರೇ. ಅಲ್ಲಿ ಎಷ್ಟು ಬಗೆ ಬಗೆಯ ಪುಸ್ತಕಗಳಿದ್ದವು; ಒಂದೇ ಕಡೆ ನಮಗೆ ಬೇಕಾದದ್ದೆಲ್ಲವೂ ಸಿಗುವ ಹಾಗಿತ್ತು. ಕಂಡು, ಕೊಂಡುಕೊಂಡು ಓದಿ ಜ್ಞಾನದಾಹವನ್ನು ತೀರಿಸಿಕೊಳ್ಳುವ ಸುಯೋಗವಿದು. ಅಂಥದ್ದರಲ್ಲಿ ನನ್ನನ್ನು ವೇದಿಕೆಗೆ ಕರೆಯಲಿಲ್ಲ, ನನಗೆ ಈ ಊಟ ಸಿಗಲಿಲ್ಲ, ನನ್ನನ್ನು ಆ ಕುರ್ಚಿಯಲ್ಲಿ ಕೂರಿಸಲಿಲ್ಲ ಎಂದೆಲ್ಲ ಕಿತ್ತಾಡುವ ಮಂದಿಯ ಕಂಡು ನಗೆಯು ಬರುತಿದೆ ಎನಗೆ ನಗೆಯು ಬರುತಿದೆ ಎನ್ನುವ ದಾಸರ ಪದ ನೆನಪಿಗೆ ಬಂದಿತ್ತು ಮೇಡಂ” ಎಂದರು.
ಮತ್ತೊಂದು ದಿನ ಬಂದ ಶಾಲಾ ಶಿಕ್ಷಕರೊಬ್ಬರು “ಮೇಡಂ ಅಲ್ಲಿ ಬಂದಿದ್ದ ಹೆಸರಾಂತ ಸಾಹಿತಿಗಳನ್ನು ನೋಡಿ ಎಷ್ಟು ಸಂತೋಷವಾಯಿತು ಗೊತ್ತಾ? ಅವರೊಡನೆ ಸೆಲ್ಫಿ ತೆಗೆದುಕೊಂಡೆ” ಎಂದು ಒಂದು ನಾಲ್ಕು ಚಿತ್ರಗಳನ್ನು ತೋರಿಸಿದರು. ಅವರ ಮುಖದಲ್ಲಿ ಕಾಣುತ್ತಿದ್ದ ಸಂತೋಷವನ್ನು ನಾನು ವರ್ಣಿಸಲಾರೆ.
ಹೌದು ಸಮ್ಮೇಳನದ ಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಕ್ಕಿಂತ ಸೆಲ್ಫಿಗಳಲ್ಲೇ ಮುಳುಗಿ ಹೋಗಿದ್ದ ಜನಗಳೇ ಜಾಸ್ತಿ ಇದ್ದರು ಎಂದು ನನಗೂ ಅನಿಸಿತು. ಇರಲಿ ಇವೆಲ್ಲವೂ ಉತ್ಸವಗಳ ಭಾಗವೇ ಹೌದು.
ಮೊನ್ನೆ ಮೊನ್ನೆ ಮತ್ತೊಬ್ಬ ಸಾಹಿತಿಗಳು ಎಫ್ ಡಿ ರಿನ್ಯೂ ಮಾಡಲು ಬಂದಾಗ ನನ್ನ ಬಳಿಯೂ ಬಂದು “ಅಯ್ಯೋ ಮೇಡಂ ಸಮ್ಮೇಳನ ಮುಗಿದ ಮೇಲೆ ನಮ್ಮ ಮಂಡ್ಯ ಸಾಹಿತ್ಯ ವಲಯ ಇಬ್ಭಾಗವಾಗಿ ಹೋಯಿತು. ಸಾಹಿತ್ಯ ವಲಯದಲ್ಲಿ ರಾಜಕೀಯತೆ ಪ್ರವೇಶ ಮಾಡಬಾರದು. ಹಾಗೆ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ನಮ್ಮ ನೆಲ ಸಾಕ್ಷಿಯಾಗಿ ಹೋಯಿತಲ್ಲ” ಎಂದು ಅಲವತ್ತು ಕೊಂಡರು. ನಮ್ಮ ಜಿಲ್ಲೆಯ ಸಾಹಿತ್ಯ ವಲಯ ಒಟ್ಟಾಗಿ ಕೂಡಿ ಕೆಲಸ ಮಾಡಿ ನಾಡು ನುಡಿಗೆ ಒಂದಿಷ್ಟು ಕಾಣಿಕೆ ಕೊಡುವುದನ್ನು ತಪ್ಪಿಸುತ್ತಿದ್ದೇವೆ ಎಂಬ ನೋವು ಕೂಡ ಅವರ ಧ್ವನಿಯಲ್ಲಿ ಕಾಣಿಸಿತು.
ಮತ್ತೊಬ್ಬ ಗ್ರಾಹಕರು “ಮೇಡಂ ಆದರೂ ಲಕ್ಷಾಂತರ ಜನರಿಗೆ ಇಷ್ಟು ವ್ಯವಸ್ಥೆ ಮಾಡುವುದು ತುಂಬಾ ಕಷ್ಟವಿದೆ ಮೇಡಂ. ಎಷ್ಟೋ ತಿಂಗಳ ತಯಾರಿ ಮಾಡಿಕೊಂಡಿದ್ದರು ನಮ್ಮ ಅಧಿಕಾರಿ ವರ್ಗದವರು. ಅವರೆಲ್ಲರ ಶ್ರಮ ಸಾರ್ಥಕವಾಗಿದೆ. ಒಳಗಿನ ವೈಮನಸ್ಯ ಏನೇ ಇರಲಿ ಮಂಡ್ಯ ಜಿಲ್ಲೆಯಲ್ಲಿ ಸಮ್ಮೇಳನ ಯಶಸ್ವಿಯಾಯಿತು.
ಉದ್ಘಾಟನೆಯ ದಿನ ತುಂಬಿ ತುಳುಕುತ್ತಿದ್ದ ಜನ ಆಮೇಲೆ ಎಲ್ಲಿ ಹೋದರೋ ಕಾಣೆ. ಸಂಜೆ ಪ್ಲೇ ಬ್ಯಾಕ್ ಗಾಯಕ ಗಾಯಕಿಯರು, ತೆರೆಯ ಮೇಲಿನ ನಟ ನಟಿಯರು ಬಂದಾಗ ಅಯ್ಯೋ ಎಲ್ಲಿದ್ದರೋ ಜನ ನೂಕು ನುಗ್ಗಲಾಗಿ ಬರುತ್ತಿದ್ದರು. ಸಮಾನಾಂತರ ವೇದಿಕೆಗಳಲ್ಲಿನ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಜನಗಳೇ ಇರಲಿಲ್ಲ. ನಮ್ಮ ಜನರ ಅಭಿರುಚಿ ಎತ್ತ ಸಾಗುತ್ತಿದೆ” ಎಂದಾಗ ಅಚ್ಚರಿ ತುಂಬಿದ ಬೇಸರದ ಛಾಯೆ ಅವರ ಧ್ವನಿಯಲ್ಲಿ ಕಾಣುತ್ತಿತ್ತು.
ಎಲ್ಲೋ ಹರಟೆ ಕಟ್ಟೆಯಲ್ಲಿಯೋ, ಕಾಫಿ ಜಗಲಿಯಲ್ಲಿಯೋ, ದೇವಸ್ಥಾನದ ಮೆಟ್ಟಿಲುಗಳ ಮೇಲೆಯೋ, ಅರಳೀ ಕಟ್ಟೆಯಲ್ಲಿಯೋ ಕುಳಿತು ನಡೆದ ಪ್ರಸಂಗವನ್ನು ಪೋಸ್ಟ್ ಮಾರ್ಟಂ ಮಾಡುವ ಮಂದಿಯ ಹಾಗೆ ಬ್ಯಾಂಕಿನ ನನ್ನ ಚೇಂಬರಿನಲ್ಲಿಯೂ ಕೂಡ ಅಕ್ಷರ ಜಾತ್ರೆಯ ಅನೇಕ ವಿಷಯಗಳು ಚರ್ಚಿತವಾಗಿ ನಾನು ಕೂಡ ಹರಟೆಯ ಕಟ್ಟೆಯಲ್ಲಿ ಕುಳಿತ ಅನುಭವ, ಭಾವ ಎರಡೂ ಮೂಡಿತು.
ಇರಲಿ ನಮ್ಮ ಚೊಕ್ಕ ಕನ್ನಡದ ಈ ನೆಲದಲ್ಲಿ ಮುಂದಿನ ಸಮ್ಮೇಳನ ಇನ್ನೂ ಆಚ್ಚುಕಟ್ಟಾಗಿ ನಡೆಯಲಿ.
ಡಾ. ಶುಭಶ್ರೀ ಪ್ರಸಾದ್ ಮಂಡ್ಯ.
More Stories
ಭಾರತೀಯ ವಾಯುಪಡೆ: ಏರ್ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ
ಮದ್ಯ ಕುಡಿಸಿ ಯುವತಿಯ ಮೇಲೆ ಅತ್ಯಾಚಾರ – ಬಿಜೆಪಿ ಮುಖಂಡನ ವಿರುದ್ಧ FIR ದಾಖಲು