ಕರ್ನಾಟಕದಲ್ಲಿ ಮತ್ತೆ ಮಳೆಯ ಅಬ್ಬರ

Team Newsnap
1 Min Read

ಕರ್ನಾಟಕದ ಬಹುತೇಕ ಕಡೆ ನಿನ್ನೆ ಮಧ್ಯಾಹ್ನದಿಂದ ಮಳೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲೂ ಜಯನಗರ, ಬಸವನಗುಡಿ, ಎಲೆಕ್ಟ್ರಾನಿಕ್ ಸಿಟಿ, ಮೆಜೆಸ್ಟಿಕ್, ಮಲ್ಲೇಶ್ವರ, ರಾಜಾಜಿನಗರ, ಬನಶಂಕರಿ, ಪದ್ಮನಾಭನಗರ ಭಾಗಗಳಲ್ಲಿ ಭಾರೀ ಮಳೆ ಸುರಿದು, ರಸ್ತೆಗಳೆಲ್ಲ ಹಳ್ಳಗಳಂತಾಗಿವೆ.

ಕರಾವಳಿಯ ಮಂಗಳೂರು, ಉಡುಪಿ, ಉತ್ತರ ಕನ್ನಡದಲ್ಲೂ ನಿನ್ನೆ ಗುಡುಗು ಸಹಿತ ಮಳೆಯಾಗಿದೆ. ಮಲೆನಾಡಿನ ಅನೇಕ ಕಡೆಗಳಲ್ಲೂ ಮತ್ತೆ ಮಳೆಯ ದರ್ಶನವಾಗಿದೆ. ಇದೇ ರೀತಿಯ ಮಳೆ ರಾಜ್ಯಾದ್ಯಂತ ಇನ್ನೂ 3 ದಿನಗಳು ಮುಂದುವರೆಯಲಿದೆ. ಕರಾವಳಿಯಲ್ಲಿ ಇಂದು ಹಳದಿ ಅಲರ್ಟ್​ ಘೋಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ಬಹುತೇಕ ಕಡೆ ಇನ್ನೂ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಂಡಮಾನ್ ಭಾಗದಲ್ಲಿ ವಾಯುಭಾರ ಕುಸಿತ ಹೆಚ್ಚಾಗಿದೆ. ಇದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ.

ಇಂದಿನಿಂದ ಅ.13ರವರೆಗೂ ಕರ್ನಾಟಕದ ಬಹುತೇಕ ಕಡೆ ಮಳೆಯ ಅಬ್ಬರ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇನ್ನೆರಡು ದಿನ ಮಳೆ ಹೆಚ್ಚಾಗಲಿದೆ. ಈ ಮೂರು ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ರಾಜ್ಯದ ಉತ್ತರ ಒಳನಾಡಿನಲ್ಲಿ ಅ. 13ರವರೆಗೂ ಮಳೆಯಾಗುವ ಸಂಭವವಿದೆ. ಬೀದರ್, ಕಲಬುರ್ಗಿ, ಬಾಗಲಕೋಟೆ, ಯಾದಗಿರಿ, ರಾಯಚೂರು, ವಿಜಯಪುರದಲ್ಲಿ ಅ. 12ರವರೆಗೆ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ.

Share This Article
Leave a comment